ಸ್ವಚ್ಛ ಸರ್ವೇಕ್ಷಣ್ 2025-26ರ ಶ್ರೇಯಾಂಕಕ್ಕಾಗಿ ಬೆಂಗಳೂರು ನಗರ ಕೇಂದ್ರ ಪಾಲಿಕೆಯು ಪ್ರಮುಖ ನಾಲ್ಕು ಕೆರೆಗಳ ಸುತ್ತ ವಿಶೇಷ ಸ್ವಚ್ಛತಾ ಅಭಿಯಾನ ನಡೆಸಿದೆ. ಈ ಕಾರ್ಯಾಚರಣೆಯಲ್ಲಿ 69 ಕೆ.ಜಿ ಪ್ಲಾಸ್ಟಿಕ್ ಮತ್ತು ಘನತ್ಯಾಜ್ಯವನ್ನು ತೆರವುಗೊಳಿಸಲಾಗಿದೆ. ಕೆರೆಗಳ ನೈರ್ಮಲ್ಯ ಕಾಪಾಡಲು ಸಾರ್ವಜನಿಕರು ಸಹಕಾರ ನೀಡಬೇಕೆಂದು ಆಯುಕ್ತರು ಮನವಿ ಮಾಡಿದ್ದಾರೆ.
ಬೆಂಗಳೂರು (ಅ.21): ಬೆಂಗಳೂರು ನಗರ ಕೇಂದ್ರ ಪಾಲಿಕೆಯು 'ಸ್ವಚ್ಛ ಸರ್ವೇಕ್ಷಣ್ 2025-26' ರಾಷ್ಟ್ರೀಯ ಶ್ರೇಯಾಂಕ ಪಟ್ಟಿಯಲ್ಲಿ ಉತ್ತಮ ಸ್ಥಾನ ಗಳಿಸುವ ಗುರಿಯೊಂದಿಗೆ, ಪ್ರಮುಖ ಕೆರೆಗಳ ಸುತ್ತಮುತ್ತ 4ನೇ ಹಂತದ ವಿಶೇಷ ಸ್ವಚ್ಛತಾ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಕೆರೆಗಳ ಸ್ವಚ್ಛತೆಗೆ ಸಾರ್ವಜನಿಕರೂ ಸಹಕಾರ ನೀಡಬೇಕು ಎಂದು ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ಜಿ. ಮನವಿ ಮಾಡಿದ್ದಾರೆ.
4 ಪ್ರಮುಖ ಕೆರೆಗಳಲ್ಲಿ ಕಾರ್ಯಾಚರಣೆ:
ಸಿಲಿಕಾನ್ ಸಿಟಿಯನ್ನು ತ್ಯಾಜ್ಯಮುಕ್ತ ಹಾಗೂ ಸುಂದರ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಬೆಂಗಳೂರು ಕೇಂದ್ರ ನಗರ ಪಾಲಿಕೆ ಮಹತ್ವದ ಹೆಜ್ಜೆಯಿಟ್ಟಿದೆ. ಈ ನಿಟ್ಟಿನಲ್ಲಿ ಪಾಲಿಕೆಯು ರೂಪಿಸಿರುವ ಪೂರ್ವ ನಿಯೋಜಿತ ಕಾರ್ಯಸೂಚಿಯಂತೆ (Action Plan) ಈ ಕೆಳಗಿನ ನಾಲ್ಕು ಪ್ರಮುಖ ಕೆರೆಗಳ ಅಂಗಳ, ನಡಿಗೆ ಪಥ (Walking tracks) ಹಾಗೂ ಸುತ್ತಮುತ್ತಲಿನ ರಸ್ತೆ ಬದಿಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿದೆ.
- ಹಲಸೂರು ಕೆರೆ
- ಜಿ.ಎಂ. ಪಾಳ್ಯ ಭೈರಸಂದ್ರ ಕೆರೆ
- ಕಸ್ತೂರಿ ನಗರ ಕೆರೆ
- ಕಗ್ಗದಾಸಪುರ ಕೆರೆ
69 ಕೆ.ಜಿ ಪ್ಲಾಸ್ಟಿಕ್ ಹಾಗೂ ಘನತ್ಯಾಜ್ಯ ತೆರವು:
ಈ ವಿಶೇಷ ಕಾರ್ಯಾಚರಣೆಯಲ್ಲಿ ಕೆರೆ ಅಂಗಳ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಎಸೆಯಲಾಗಿದ್ದ ಪ್ಲಾಸ್ಟಿಕ್ ಕವರ್ಗಳು, ನೀರಿನ ಬಾಟಲಿಗಳು, ಕಾಗದ, ಆಹಾರ ತ್ಯಾಜ್ಯ ಹಾಗೂ ಒಣ ಎಲೆಗಳನ್ನು ಸಿಬ್ಬಂದಿ ತೆರವುಗೊಳಿಸಿದರು. ಒಟ್ಟು 69 ಕೆ.ಜಿ. ಪ್ಲಾಸ್ಟಿಕ್ ಘನತ್ಯಾಜ್ಯವನ್ನು ಸಂಗ್ರಹಿಸಿ, ವೈಜ್ಞಾನಿಕ ವಿಲೇವಾರಿಗಾಗಿ ಸೂಕ್ತ ಸಂಸ್ಕರಣಾ ಘಟಕಗಳಿಗೆ ರವಾನಿಸಲಾಗಿದೆ.
ಶ್ರಮಿಸಿದ ಪೌರಕಾರ್ಮಿಕರು:
ಕೆರೆಗಳ ನೈರ್ಮಲ್ಯ ಕಾಪಾಡುವ ಈ ಮಹತ್ಕಾರ್ಯದಲ್ಲಿ ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿ ಬೆವರು ಹರಿಸಿ ಕೆಲಸ ಮಾಡಿದ್ದಾರೆ. ನಗರದ ಪರಿಸರ ಸಮತೋಲನ ಕಾಯ್ದುಕೊಳ್ಳಲು ಮತ್ತು ಅಂತರ್ಜಲ ಮಟ್ಟ ವೃದ್ಧಿಸಲು ಕೆರೆಗಳು ಜೀವನಾಡಿಗಳಾಗಿದ್ದು, ಇವುಗಳ ಶುಚಿತ್ವ ಕಾಪಾಡುವುದು ಪಾಲಿಕೆಯ ಪ್ರಮುಖ ಆದ್ಯತೆಯಾಗಿದೆ ಎಂದು ಆಯುಕ್ತರು ವಿವರಿಸಿದ್ದಾರೆ.
ಸಾರ್ವಜನಿಕರಿಗೆ ಆಯುಕ್ತರ ಕಳಕಳಿಯ ಮನವಿ:
'ಪಾಲಿಕೆ ಮತ್ತು ಪೌರಕಾರ್ಮಿಕರು ಎಷ್ಟೇ ಶ್ರಮಿಸಿದರೂ, ಸಾರ್ವಜನಿಕರ ಸಹಕಾರವಿಲ್ಲದೆ ಸಂಪೂರ್ಣ ಸ್ವಚ್ಛತೆ ಅಸಾಧ್ಯ. ವಾಯುವಿಹಾರಕ್ಕೆ ಬರುವ ನಾಗರಿಕರು ಹಾಗೂ ಸ್ಥಳೀಯರು ಕೆರೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸ ಎಸೆಯಬಾರದು. ನಗರದ ಸೌಂದರ್ಯ ಹಾಗೂ ಪರಿಸರ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಕೆರೆಗಳ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು' ಎಂದು ಆಯುಕ್ತ ಜಗದೀಶ್ ಜಿ. ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.


