ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿವಾರಿಸಲು ನಮ್ಮ ಮೆಟ್ರೋದ 'ಗುಲಾಬಿ ಮಾರ್ಗ'ದ ಮೊದಲ ಹಂತ ನವೆಂಬರ್ 13ರಂದು ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಇದರೊಂದಿಗೆ ಬೆಂಗಳೂರು ಮೆಟ್ರೋ ಸಂಪರ್ಕ ಜಾಲವು 100 ಕಿ.ಮೀ ಗಡಿ ದಾಟಿ ಹೊಸ ಇತಿಹಾಸ ಬರೆಯಲಿದೆ.

ಬೆಂಗಳೂರು (ನ.04): ಬೆಂಗಳೂರಿನ ಟ್ರಾಫಿಕ್ ಕಿರಕಿರಿಗೆ ಮುಕ್ತಿ ನೀಡುವ ನಿಟ್ಟಿನಲ್ಲಿ 'ನಮ್ಮ ಮೆಟ್ರೋ' ಮತ್ತೊಂದು ಐತಿಹಾಸಿಕ ಮೈಲಿಗಲ್ಲು ತಲುಪಿದೆ. ನಗರದ ಬಹುನಿರೀಕ್ಷಿತ ‘ಗುಲಾಬಿ ಮಾರ್ಗ’ದ (Pink Line) ಮೊದಲ ಹಂತದ ಸಂಚಾರ ನವೆಂಬರ್ 13ರಂದು ಆರಂಭವಾಗಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಮಾರ್ಗವನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಅಧಿಕೃತವಾಗಿ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, 'ಸಂಚಾರ ದಟ್ಟಣೆ ಕಡಿಮೆ ಮಾಡಿ ಜನರಿಗೆ ಸುಲಭ ಪ್ರಯಾಣ ಕಲ್ಪಿಸುವ ನಮ್ಮ ಸಂಕಲ್ಪ ಸಾಕಾರಗೊಳ್ಳುತ್ತಿದೆ. ಈ ನೂತನ ಮಾರ್ಗ ಆರಂಭದೊಂದಿಗೆ ಬೆಂಗಳೂರು ಮೆಟ್ರೋ ಸಂಪರ್ಕ ಜಾಲವು ಬರೊಬ್ಬರಿ 100 ಕಿಲೋಮೀಟರ್ ಗಡಿ ದಾಟಿ ಇತಿಹಾಸ ಬರೆಯಲಿದೆ. 2027ರ ವೇಳೆಗೆ ಮೆಟ್ರೋ ಜಾಲವನ್ನು 170 ಕಿ.ಮೀ.ಗೆ ವಿಸ್ತರಿಸುವ ಬೃಹತ್ ಗುರಿಯಿದೆ' ಎಂದಿದ್ದಾರೆ.

ಯಾವೆಲ್ಲಾ ನಿಲ್ದಾಣಗಳು ಆರಂಭ?

ಒಟ್ಟು 21.26 ಕಿ.ಮೀ ಉದ್ದದ ಗುಲಾಬಿ ಮಾರ್ಗದಲ್ಲಿ ಸದ್ಯ ಕಾಮಗಾರಿ ಪೂರ್ಣಗೊಂಡಿರುವ ಕಾಳೇನ ಅಗ್ರಹಾರದಿಂದ ತಾವರೆಕೆರೆ ನಡುವಿನ 7.5 ಕಿ.ಮೀ ಎತ್ತರಿಸಿದ ಮಾರ್ಗ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ.

  • ಕಾಳೇನ ಅಗ್ರಹಾರ
  • ಹುಳಿಮಾವು
  • ಐಐಎಂ-ಬಿ (ಬಿಳೇಕಹಳ್ಳಿ)
  • ಜೆ.ಪಿ. ನಗರ 4ನೇ ಹಂತ
  • ಜಯದೇವ ಆಸ್ಪತ್ರೆ

ತಾವರೆಕೆರೆ ನಿಲ್ದಾಣಗಳು ಈ ಹಂತದಲ್ಲಿ ಕಾರ್ಯಾರಂಭ ಮಾಡಲಿವೆ.

ಜಯದೇವ ನಿಲ್ದಾಣವೇ ‘ಮಹಾ ಜಂಕ್ಷನ್’:

ಈ ಮಾರ್ಗದ ಪ್ರಮುಖ ಆಕರ್ಷಣೆಯೆಂದರೆ ಜಯದೇವ ಆಸ್ಪತ್ರೆ ನಿಲ್ದಾಣ. ಇದು ಹಳದಿ ಮಾರ್ಗದೊಂದಿಗೆ (Yellow Line) ಸಂಪರ್ಕ ಸಾಧಿಸುವ ಪ್ರಮುಖ ಇಂಟರ್‌ಚೇಂಜ್ ನಿಲ್ದಾಣವಾಗಲಿದೆ. ಹಳದಿ ಮಾರ್ಗವು ಆರ್.ವಿ. ರಸ್ತೆಯಲ್ಲಿ ಹಸಿರು ಮಾರ್ಗಕ್ಕೂ ಕನೆಕ್ಟ್ ಆಗುವುದರಿಂದ, ಗುಲಾಬಿ ಮಾರ್ಗದಲ್ಲಿ ಹತ್ತುವ ಪ್ರಯಾಣಿಕರು ಇಡೀ ಬೆಂಗಳೂರಿನ ಯಾವುದೇ ಮೂಲೆಗೂ ಮೆಟ್ರೋ ಮೂಲಕವೇ ಸುಲಭವಾಗಿ ತಲುಪಬಹುದಾಗಿದೆ.

ಉದ್ಘಾಟನೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಮೆಟ್ರೋ ರೈಲಿನಲ್ಲಿ ಸಂಚರಿಸಿ, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಮೊದಲೆರಡು ಸ್ಥಾನಗಳು ಯಾವುವು?

ನಮ್ಮ ದೇಶದಲ್ಲಿ ದೆಹಲಿಯ ಮೆಟ್ರೋ ಬರೋಬ್ಬರಿ 410 ಕಿ.ಮೀ ಉದ್ದದ ಮಾರ್ಗವನ್ನು ಹೊಂದಿದೆ. ಈ ಮೂಲಕ ದೇಶದ ಅತ್ಯಂತ ದೊಡ್ಡ ಮೆಟ್ರೋ ಮಾರ್ಗವೆಂಬ ಖ್ಯಾತಿಯನ್ನು ಪಡೆದಿದೆ. ಇನ್ನು ದಶಕಗಳು ಕಳೆದರೂ ಯಾವುದೇಬ ನಗರಗಳು ದೆಹಲಿಯನ್ನು ಹಿಂದಿಕ್ಕಲು ಸಾಧ್ಯವಿಲ್ಲ. ಇನ್ನು ಮುಂಬೈ ಇದೀಗ 102 ಕಿ.ಮೀ ಮೆಟ್ರೋ ಮಾರ್ಗವನ್ನು ಹೊಂದಿದ್ದು, 2ನೇ ಸ್ಥಾನದಲ್ಲಿದೆ. ಬೆಂಗಳೂರು ಇದೇ ನ.13ರಂದು ಗುಲಾಬಿ ಮೆಟ್ರೋ ಮಾರ್ಗ ಉದ್ಘಾಟನೆ ಬಳಿಕ 100 ಕಿ.ಮೀ ಗಡಿಗೆ ತಲುಪಲಿದೆ. ಈ ಮೂಲಕ 3ನೇ ಸ್ಥಾನಕ್ಕೆ ಬರಲಿದೆ. ಜೊತೆಗೆ, 2027ಕ್ಕೆ 170 ಕಿ.ಮೀ. ತಲುಪುವ ಗುರಿಯನ್ನು ಹೊಂದಿದೆ. ಆಗ ಮುಂಬೈ ಹಿಂದಿಕ್ಕಿ ಬೆಂಗಳೂರು ಮೆಟ್ರೋ 2ನೇ ಸ್ಥಾನಕ್ಕೆ ಬರಲಿದೆ.