ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಆಗಸ್ಟ್ 22ರವರೆಗೆ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸುವುದಕ್ಕೆ ಅಭಿಯಾನವನ್ನು ಆರಂಭಿಸಿತ್ತು.ಆದರೆ, ಈ ವೇಳೆ ಹೆಚ್ಚಿನ ಫಲಿತಾಂಶವೇನೂ ಲಭ್ಯವಾಗಿಲ್ಲ. ಕೇವಲ ಶೇ.20ರಷ್ಟು ನಿವೇಶನಗಳ ಮಾಲೀಕರು ಮಾತ್ರ ಸ್ವಚ್ಛ ಮಾಡಿದ್ದು, ಉಳಿದವರಿಗೆ ಇದೀಗ ನೊಟೀಸ್ ಜಾರಿ ಮಾಡುವಂತೆ ನಗರಾಭಿವೃದ್ಧಿ ಸಚಿವರು ಆದೇಶಿಸಿದ್ದಾರೆ.

ಬೆಂಗಳೂರು (ಆ.24): ಗ್ರೇಟರ್ ಬೆಂಗಳೂರು ಪ್ರಾಧಿಕಾರ (GREATER BENGALURU AUTHORITY- GBA) ವ್ಯಾಪ್ತಿಯಲ್ಲಿ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಡದೆ ಸಾರ್ವಜನಿಕರ ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಧಕ್ಕೆ ತರುತ್ತಿರುವ ಮಾಲೀಕರಿಗೆ ತಕ್ಷಣವೇ ನೋಟಿಸ್ ಅಂಟಿಸಲಾಗುತ್ತದೆ. ಇದಕ್ಕೆ ಉತ್ತರ ಬರದಿದ್ದರೆ ಪಾಲಿಕೆಯ ವತಿಯಿಂದಲೇ ಸ್ವಚ್ಛತಾ ಕಾರ್ಯಾಚರಣೆ ನಡೆಸಿ, ಅದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ಮಾಲೀಕರ ಆಸ್ತಿ ತೆರಿಗೆಯಲ್ಲೇ (Property Tax) ವಸೂಲಿ ಮಾಡುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸ್ಪಷ್ಟ ಆದೇಶ ನೀಡಿದ್ದಾರೆ.

ಗಡುವು ಮುಗಿದರೂ ಶೇ.20 ರಷ್ಟು ಮಾತ್ರ ಸ್ವಚ್ಛತೆ!

ಖಾಲಿ ನಿವೇಶನಗಳ ಸ್ವಚ್ಛತಾ ಕಾರ್ಯ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ನಡೆದ ಮಹತ್ವದ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಸಚಿವರು, 'ಖಾಲಿ ನಿವೇಶನಗಳ ಮಾಲೀಕರು ತಮ್ಮ ಜಾಗವನ್ನು ತಾವೇ ಸ್ವಚ್ಛಗೊಳಿಸಿಕೊಳ್ಳಲು ಆಗಸ್ಟ್ 22ರವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೆ ಕೇವಲ ಶೇ. 20ರಷ್ಟು ನಿವೇಶನಗಳ ಮಾಲೀಕರು ಮಾತ್ರ ಸ್ವಯಂಪ್ರೇರಿತರಾಗಿ ಸ್ವಚ್ಛತೆ ಮಾಡಿದ್ದಾರೆ. ಹೀಗಾಗಿ ಇನ್ನು ಮುಂದೆ ಐದೂ ನಗರ ಪಾಲಿಕೆಗಳೇ ನೇರವಾಗಿ ಅಖಾಡಕ್ಕಿಳಿದು ಸ್ವಚ್ಛತಾ ಕಾರ್ಯ ಕೈಗೊಳ್ಳಲಿವೆ' ಎಂದು ತಿಳಿಸಿದರು.

ಮಾರ್ಷಲ್‌ಗಳು, ಆರೋಗ್ಯ ಪರಿವೀಕ್ಷಕರಿಂದ ನೋಟಿಸ್ ಜಾರಿ

ಸಚಿವರ ನಿರ್ದೇಶನದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಲಿದೆ:

  • ಕಂದಾಯ ಅಧಿಕಾರಿಗಳಿಂದ ಪಟ್ಟಿ: ಕಂದಾಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ಗಿಡಗಂಟಿ, ಕಸ ತುಂಬಿರುವ ಖಾಲಿ ನಿವೇಶನಗಳನ್ನು ಗುರುತಿಸಿ ಪಟ್ಟಿ ಮಾಡಲಿದ್ದಾರೆ.
  • ನೋಟಿಸ್ ಅಂಟಿಸುವುದು: ಪಟ್ಟಿ ಮಾಡಿದ ನಿವೇಶನಗಳಿಗೆ ಮಾರ್ಷಲ್‌ಗಳು ಹಾಗೂ ಕಿರಿಯ ಆರೋಗ್ಯ ಪರಿವೀಕ್ಷಕರು ಸ್ಥಳದಲ್ಲೇ ನೋಟಿಸ್ ಅಂಟಿಸಲಿದ್ದಾರೆ.
  • ಗುರುವಾರದಿಂದಲೇ ಕಾರ್ಯಾಚರಣೆ ಶುರು: ಇದೇ ಗುರುವಾರದಿಂದಲೇ ಐದೂ ನಗರ ಪಾಲಿಕೆಗಳಲ್ಲಿ ಜೆಸಿಬಿ, ಟಿಪ್ಪರ್, ಟ್ರ್ಯಾಕ್ಟರ್ ಬಳಸಿ ಸ್ವಚ್ಛತಾ ಕಾರ್ಯ ಆರಂಭವಾಗಲಿದ್ದು, ಮುಂದಿನ ಸೋಮವಾರದಿಂದ ಈ ಕಾರ್ಯವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು.
  • ಆಸ್ತಿ ತೆರಿಗೆಯಲ್ಲಿ ವೆಚ್ಚ ವಸೂಲಿ: ಸ್ವಚ್ಛತಾ ಕಾರ್ಯಕ್ಕೆ ತಗುಲಿದ ಸಂಪೂರ್ಣ ವೆಚ್ಚವನ್ನು ನಿವೇಶನದ ಖಾತಾಗೆ ಸೇರಿಸಿ, ಮುಂಬರುವ ಆಸ್ತಿ ತೆರಿಗೆಯ ಜೊತೆಯಲ್ಲಿ ಕಡ್ಡಾಯವಾಗಿ ವಸೂಲಿ ಮಾಡಲಾಗುತ್ತದೆ.
  • ಜಿಯೋ-ಟ್ಯಾಗ್ ವಿಡಿಯೋ ಕಡ್ಡಾಯ: ಪಾರದರ್ಶಕತೆಗೆ ಒತ್ತು

ಸ್ವಚ್ಛತಾ ಕಾಮಗಾರಿಯಲ್ಲಿ ಲೋಪವಾಗಬಾರದು:

ನಿವೇಶನ ಸ್ವಚ್ಛಗೊಳಿಸುವ ಮೊದಲು ಮತ್ತು ನಂತರದ ಸ್ಥಿತಿಯನ್ನು ಜಿಯೋ-ಲೊಕೇಶನ್ (Geo-Location) ಸಹಿತ ಕಡ್ಡಾಯವಾಗಿ ವಿಡಿಯೋ ರೆಕಾರ್ಡ್ ಮಾಡಬೇಕು. ಈ ಅಧಿಕೃತ ವಿಡಿಯೋ ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಗುತ್ತಿಗೆದಾರ ಏಜೆನ್ಸಿಗಳಿಗೆ ಬಿಲ್ ಪಾವತಿಸಲಾಗುತ್ತದೆ. ಸಂಗ್ರಹವಾಗುವ ತ್ಯಾಜ್ಯ ಹಾಗೂ ಕಟ್ಟಡ ಭಗ್ನಾವಶೇಷಗಳನ್ನು ಎಲ್ಲೆಂದರಲ್ಲಿ ಸುರಿಯದೆ, ನಗರ ಪಾಲಿಕೆಗಳು ನಿಗದಿಪಡಿಸಿದ ಅಧಿಕೃತ ತ್ಯಾಜ್ಯ ಸಂಸ್ಕರಣಾ ಸ್ಥಳಗಳಿಗೇ ಸಾಗಿಸಬೇಕು.

‘Clear it’ ಆ್ಯಪ್‌ನಲ್ಲಿ ನಾಗರಿಕರಿಗೂ ದೂರು ನೀಡಲು ಅವಕಾಶ!

ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ ಅಭಿವೃದ್ಧಿಪಡಿಸಿರುವ ‘Clear it’ ಮೊಬೈಲ್ ತಂತ್ರಾಂಶದಲ್ಲಿ ಖಾಲಿ ನಿವೇಶನಗಳ ಸ್ವಚ್ಛತಾ ಕಾರ್ಯದ ಸಂಪೂರ್ಣ ಎಂಡ್-ಟು-ಎಂಡ್ ಮಾಹಿತಿ ದಾಖಲಾಗಲಿದೆ. ಸಾರ್ವಜನಿಕರು ತಮ್ಮ ಏರಿಯಾದಲ್ಲಿ ಕಸ-ಕಂಟಕವಾಗಿರುವ ಖಾಲಿ ನಿವೇಶನಗಳ ಬಗ್ಗೆ ನೇರವಾಗಿ ‘Clear it’ ಆ್ಯಪ್ ಮೂಲಕ ಫೋಟೋ ಸಮೇತ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಈ ಸಭೆಯಲ್ಲಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ಐದೂ ನಗರ ಪಾಲಿಕೆಗಳ ಆಯುಕ್ತರಾದ ರಮೇಶ್ ಡಿ.ಎಸ್., ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಕೆ.ಎನ್., ಜಿ. ಜಗದೀಶ್, ಡಾ. ರಾಜೇಂದ್ರ ಕೆ.ವಿ., ಘನತ್ಯಾಜ್ಯ ನಿರ್ವಹಣಾ ನಿಯಮಿತದ ಸಿಇಒ ಕರೀಗೌಡ ಹಾಗೂ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.