ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ವೈಟ್‌ಟಾಪಿಂಗ್ ಮತ್ತು ಇತರ ಮೂಲಸೌಕರ್ಯ ಕಾಮಗಾರಿಗಳಿಗಾಗಿ ಆಗಸ್ಟ್ 24ರಿಂದ 60 ದಿನಗಳ ಕಾಲ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸಂಚಾರ ದಟ್ಟಣೆ ತಪ್ಪಿಸಲು, ಬೆಂಗಳೂರು ಸಂಚಾರ ಪೊಲೀಸರು ಎರಡು ಹಂತಗಳಲ್ಲಿ ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ.

ಬೆಂಗಳೂರು (ಆ.24): ರಾಜಧಾನಿ ಬೆಂಗಳೂರಿನ ಮೌರ್ಯ ಹೋಟೆಲ್ ಜಂಕ್ಷನ್ ಮತ್ತು ಹರೇ ಕೃಷ್ಣ ರಸ್ತೆ ಜಂಕ್ಷನ್ ನಡುವಿನ ರೇಸ್ ಕೋರ್ಸ್ ರಸ್ತೆಯ ಒಂದು ಭಾಗದಲ್ಲಿ ವೈಟ್‌ಟಾಪಿಂಗ್ ಹಾಗೂ ಇತರ ಕಾಮಗಾರಿಗಳು ಕೈಗೆತ್ತಿಕೊಳ್ಳುತ್ತಿರುವುದರಿಂದ ಆಗಸ್ಟ್ 24ರಿಂದ ಮುಂದಿನ 60 ದಿನಗಳ ಕಾಲ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ (BTP) ತಿಳಿಸಿದೆ. ಈ ಕಾಮಗಾರಿಯನ್ನು ತಲಾ 15 ದಿನಗಳ ನಾಲ್ಕು ಹಂತಗಳಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ. ಈ ಅವಧಿಯಲ್ಲಿ ಹೊಸ ರಾಜಕಾಲುವೆ (Stormwater Drain) ನಿರ್ಮಾಣ, ಯುಜಿಡಿ ಚರಂಡಿ ಮಾರ್ಗ (Sewage Line) ಹಾಗೂ ಇತರ ಮೂಲಸೌಕರ್ಯ ಕಾಮಗಾರಿಗಳು ನಡೆಯಲಿವೆ. ಮೊದಲ ಎರಡು ಹಂತದ ಕೆಲಸಗಳನ್ನು 30 ದಿನಗಳ ಒಳಗಾಗಿ ಪೂರ್ಣಗೊಳಿಸುವ ನಿರೀಕ್ಷೆಯಿದೆ.

ಕಾಮಗಾರಿ ನಡೆಯುವ ಸಮಯದಲ್ಲಿ ಈ ರಸ್ತೆಯಲ್ಲಿ ಬಿಎಂಟಿಸಿ (BMTC) ಬಸ್‌ಗಳು, ಸರಕು ವಾಹನಗಳು ಹಾಗೂ ಇತರ ವಾಹನಗಳ ಸಂಚಾರವನ್ನು ಸೀಮಿತಗೊಳಿಸಲಾಗಿದ್ದು, ಲೂಪ್ ರಸ್ತೆ ಸೇರಿದಂತೆ ನಿಗದಿಪಡಿಸಿದ ಪರ್ಯಾಯ ಮಾರ್ಗಗಳ ಮೂಲಕ ವಾಹನಗಳನ್ನು ಡೈವರ್ಟ್ ಮಾಡಲಾಗುತ್ತದೆ.

ಹಂತ-1: ಸಂಚಾರ ಬದಲಾವಣೆ ವಿವರ

ಮೊದಲ ಹಂತದಲ್ಲಿ ರೇಸ್‌ ವ್ಯೂ ಜಂಕ್ಷನ್‌ನಿಂದ ಟ್ರೈಲೈಟ್ ಜಂಕ್ಷನ್‌ವರೆಗಿನ ರೇಸ್ ಕೋರ್ಸ್ ರಸ್ತೆಯ ಎಡಭಾಗದಲ್ಲಿ ಕಾಮಗಾರಿ ನಡೆಯಲಿದೆ.ರೇಸ್‌ ವ್ಯೂ ಜಂಕ್ಷನ್‌ನಿಂದ ಟ್ರೈಲೈಟ್ ಜಂಕ್ಷನ್ ಕಡೆಗೆ ಚಲಿಸುವ ವಾಹನಗಳು ರಸ್ತೆಯ ಬಲಭಾಗವನ್ನು ಬಳಸಬೇಕಾಗುತ್ತದೆ. ಟ್ರೈಲೈಟ್ ಜಂಕ್ಷನ್‌ನಿಂದ ರೇಸ್‌ ವ್ಯೂ ಜಂಕ್ಷನ್ ಕಡೆಗೆ ಬರುವ ವಾಹನಗಳಿಗೆ ಎಡಕ್ಕೆ ತಿರುಗಲು ಅನುಮತಿ ಇರುವುದಿಲ್ಲ. ಈ ವಾಹನಗಳು ಹರೇ ಕೃಷ್ಣ ರಸ್ತೆ, ಗುರುರಾಜ ಜಂಕ್ಷನ್ ಮತ್ತು ಶಿವಾನಂದ ಜಂಕ್ಷನ್ ಮೂಲಕ ಸಾಗಿ, ಕುಮಾರ ಕೃಪಾ ರಸ್ತೆಯನ್ನು ಹಿಡಿದು ರೇಸ್ ಕೋರ್ಸ್ ರಸ್ತೆಯನ್ನು ತಲುಪಬೇಕಾಗುತ್ತದೆ. ಮೆಜೆಸ್ಟಿಕ್ ಕಡೆಗೆ ಹೋಗುವ ವಾಹನಗಳು ಹರೇ ಕೃಷ್ಣ ರಸ್ತೆ, ಎಸ್‌ಸಿ ರಸ್ತೆ ಮತ್ತು ಶಿವಾನಂದ ಫ್ಲೈಓವರ್ ಮೂಲಕ ಸಂಚರಿಸಬೇಕು.

ಹಂತ-2: ಸಂಚಾರ ಬದಲಾವಣೆ ವಿವರ

ಎರಡನೇ ಹಂತದಲ್ಲಿ ಮೌರ್ಯ ಹೋಟೆಲ್ ಜಂಕ್ಷನ್‌ನಿಂದ ಹಳೆಯ ಜೆಡಿಎಸ್ ಕಚೇರಿ ಜಂಕ್ಷನ್‌ವರೆಗಿನ ರಸ್ತೆಯ ಎಡಭಾಗವನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ. ಈ ಹಂತದಲ್ಲಿ ಸಂಚರಿಸುವ ವಾಹನಗಳನ್ನು ಆನಂದ್ ರಾವ್ ಸರ್ಕಲ್ ಮತ್ತು ಲೂಪ್ ರಸ್ತೆ ಮೂಲಕ ರೇಸ್ ಕೋರ್ಸ್ ರಸ್ತೆಗೆ ತಲುಪುವಂತೆ ಮಾರ್ಗ ಬದಲಾವಣೆ ಮಾಡಲಾಗುತ್ತದೆ. ಸಂಚಾರ ದಟ್ಟಣೆ ತಪ್ಪಿಸಲು ವಾಹನ ಸವಾರರು ಪೊಲೀಸರು ಅಳವಡಿಸಿರುವ ಮಾರ್ಗಸೂಚಿ ಫಲಕಗಳನ್ನು ಗಮನಿಸಿ, ಮುಂಚಿತವಾಗಿಯೇ ಪ್ರಯಾಣ ಯೋಜನೆ ರೂಪಿಸಿಕೊಳ್ಳುವಂತೆ ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.