ಜಿಬಿಎ 'ಬಯಸಿದಂತೆ ಬಯಲು' ಉಪಕ್ರಮದ ಅಡಿಯಲ್ಲಿ ಬೆಂಗಳೂರಿನಲ್ಲಿ ಬಳಕೆಯಾಗದ 194 ಸಾರ್ವಜನಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ನಾಗರಿಕರು, ಸಂಘಸಂಸ್ಥೆಗಳು ಹಾಗೂ ಸರ್ಕಾರದ ಸಹಯೋಗದೊಂದಿಗೆ ಈ ಸ್ಥಳಗಳನ್ನು ಆಕರ್ಷಕ ತಾಣಗಳಾಗಿ ಪರಿವರ್ತಿಸಿ, ನಗರದ ಸೌಂದರ್ಯವನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ.

ಬೆಂಗಳೂರು: ನಗರದ ವಿವಿಧ ಕಡೆ ಇರುವ ಬಳಸದ ಸಾರ್ವಜನಿಕ ಸ್ಥಳಗಳನ್ನು ‘ಬಯಸಿದಂತೆ ಬಯಲು’ ಉಪಕ್ರಮದಡಿ 194 ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.

ಶುಕ್ರವಾರ ನಗರದ ಪುರಭವನದಲ್ಲಿ ಸಾರ್ವಜನಿಕ ಸ್ಥಳಗಳ ಪುನರುಜ್ಜೀವನಕ್ಕಾಗಿ ನಾಗರಿಕರಿಗೆ ಮುಕ್ತ ಅವಕಾಶ ಕಲ್ಪಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ ವರ್ಷ ಜಿಬಿಎ ಮನವಿಯಂತೆ ಸ್ಥಳೀಯರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ನಗರ ವಿನ್ಯಾಸಕಾರರು, ವಾಸ್ತು ಶಿಲ್ಪಿಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳು 250ಕ್ಕೂ ಅಧಿಕ ಸ್ಥಳಗಳನ್ನು ಗುರುತಿಸಿದ್ದಾರೆ. 

ಆಕರ್ಷಕ ಸಾರ್ವಜನಿಕ ಸ್ಥಳಗಳಾಗಿ ಪರಿವರ್ತಿಸುವ ಕೆಲಸ

ಪ್ರಾಥಮಿಕ ಪರಿಶೀಲನೆಯ ನಂತರ 194 ಸ್ಥಳಗಳನ್ನು ಕಾರ್ಯಗತಗೊಳಿಸಬಹುದೆಂದು ಗುರುತಿಸಲಾಗಿದೆ. ಸರ್ಕಾರ, ಸಿಎಸ್ಆರ್, ಎನ್‌ಜಿಎ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಅವುಗಳನ್ನು ಹೇಗೆ ಅಭಿವೃದ್ಧಿಪಡಿಸಬೇಕು ಎಂಬುದರ ಬಗ್ಗೆ ಯೋಜನೆ ರೂಪಿಸಬೇಕಿದೆ. ನಂತರ ಸ್ಥಳೀಯರೊಂದಿಗೆ ಸೇರಿ ಆ ಜಾಗಗಳನ್ನು ಆಕರ್ಷಕ ಸಾರ್ವಜನಿಕ ಸ್ಥಳಗಳಾಗಿ ಪರಿವರ್ತಿಸುವ ಕೆಲಸ ಆಗಲಿದೆ ಎಂದು ಆಯುಕ್ತರು ಹೇಳಿದರು.

ನಗರದ ಸೌಂದರ್ಯವನ್ನು ಹೆಚ್ಚಿಸುವ ಭಾಗವಾಗಿ ‘ಸುರಕ್ಷಾ–75’ ಅಡಿ ಜಂಕ್ಷನ್ ಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಇದೀಗ ಬಳಸದ ಸ್ಥಳಗಳಿಗೆ ಮರುಜೀವ ನೀಡುವ ಕೆಲಸ ನಡೆಯುತ್ತಿದೆ. ಇದರಿಂದ ಸ್ಥಳೀಯರು ಆ ಸ್ಥಳಗಳಿಗೆ ಭೇಟಿ ನೀಡಿ ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತದೆ ಎಂದರು.

ಇದನ್ನೂ ಓದಿ: ಟ್ರಾಫಿಕ್ ನಿಯಂತ್ರಣಕ್ಕೆ ಬೆಂಗಳೂರಿನಲ್ಲಿ ಮತ್ತೊಂದು 800 ಮೀ. ಉದ್ದದ ಮೇಲ್ಸೇತುವೆ: ತ್ವರಿತವಾಗಿ ಭೂಸ್ವಾಧೀನಕ್ಕೆ ಸೂಚನೆ

ರಾಜ್ಯ ಸರ್ಕಾರದಿಂದ ಪಿಪಿಪಿ ಸೆಲ್ ಆರಂಭ

ಜಿಬಿಎ ಪ್ರಧಾನ ಎಂಜಿನಿಯರ್ ಡಾ. ಬಿ.ಎಸ್. ಪ್ರಹ್ಲಾದ್ ಮಾತನಾಡಿ, ಸಾರ್ವಜನಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಲು, ವೇಗವಾಗಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ‘ಪಿಪಿಪಿ ಸೆಲ್’ ಸ್ಥಾಪಿಸಿದೆ ಎಂದು ತಿಳಿಸಿದರು.

ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಸ್ಥಳಗಳನ್ನು https://www.blrpublicspace-revival.in/repository ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ತಿಳಿದುಕೊಳ್ಳಬಹುದು ಎಂದು ಜಿಬಿಎ ತಿಳಿಸಿದೆ.

ಇದನ್ನೂ ಓದಿ: Bengaluru: ಮಾಗಡಿ ರಸ್ತೆಯಲ್ಲಿರುವ ಟ್ರಸ್ಟ್‌ಗೆ ಸೇರಿದ 172 ಎಕರೆ ಸರ್ಕಾರದ ವಶಕ್ಕೆ