ಬೆಂಗಳೂರಿನ ಹೊರವರ್ತುಲ ರಸ್ತೆಯ ಸಮಗ್ರ ಅಭಿವೃದ್ಧಿ ಟೆಂಡರ್‌ ರದ್ದುಗೊಂಡಿದ್ದು, ಮೊದಲು ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲು ಜಿಬಿಎ ಸಿದ್ಧತೆ ನಡೆಸಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಉಂಟಾದ ಟ್ರಾಫಿಕ್ ಜಾಮ್ ಮತ್ತು ಪ್ರವಾಹಕ್ಕೆ ಕಾರಣವಾದ ರಸ್ತೆ ಹಾಗೂ ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸಿದ ನಂತರವೇ ಹೊಸ ಯೋಜನೆ ರೂಪಿಸಲು ನಿರ್ಧರಿಸಲಾಗಿದೆ.

ಬೆಂಗಳೂರು: ಹಲವು ಟೆಕ್‌ಪಾರ್ಕ್‌ಗಳು, ಸಾವಿರಾರು ಐಟಿ-ಬಿಟಿ ಕಂಪನಿಗಳು ಇರುವ ಹೊರವರ್ತುಲ ರಸ್ತೆಯನ್ನು ಮಾದರಿ ಹಾಗೂ ಸಮಗ್ರವಾಗಿ ಅಭಿವೃದ್ಧಿಪಡಿಸುವ ಮುನ್ನ ಒತ್ತುವರಿ ತೆರವು ಕಾರ್ಯಾಚರಣೆಗೆ ಜಿಬಿಎ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಇತ್ತೀಚೆಗೆ ಸಚಿವ ಕೃಷ್ಣ ಬೈರೇಗೌಡ ಅವರು ಈ ರಸ್ತೆಯಲ್ಲಿ ಪರಿಶೀಲನೆಗೆ ತೆರಳಿದ್ದ ವೇಳೆ ರಸ್ತೆ ಒತ್ತುವರಿ ವಿಚಾರ ಚರ್ಚೆಯಾಗಿತ್ತು. ಸಾರ್ವಜನಿಕರು ಕೂಡ ಅನೇಕ ಕಡೆ ರಸ್ತೆ, ರಾಜಕಾಲುವೆ ಅತಿಕ್ರಮಣ ಮತ್ತು ಒತ್ತುವರಿಯಾಗಿರುವ ಕುರಿತು ಮಾಹಿತಿ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಒತ್ತುವರಿ ತೆರವಿನ ನಂತರವೇ ರಸ್ತೆ ಅಭಿವೃದ್ಧಿಪಡಿಸಬೇಕು ಎಂದು ಹೊರವರ್ತುಲ ರಸ್ತೆ ಸಮಗ್ರ ಅಭಿವೃದ್ಧಿಗೆ ಕರೆಯಲಾಗಿದ್ದ ಟೆಂಡರ್‌ನ್ನು ಬೆಂಗಳೂರು ಸ್ಮಾರ್ಟ್‌ ಇನ್‌ಫ್ರಾಸ್ಟ್ರಕ್ಚರ್‌ ಲಿ. (ಬಿ-ಸ್ಮೈಲ್‌) ರದ್ದುಪಡಿಸಿದೆ. ಒತ್ತುವರಿ ತೆರವಿನ ನಂತರ ಈ ಪ್ರದೇಶಗಳ ನಿವಾಸಿಗಳು, ಸಾರ್ವಜನಿಕರಿಂದ ಸಲಹೆ, ಸೂಚನೆಗಳನ್ನು ಸ್ವೀಕರಿಸಿದ ನಂತರವೇ ಹೊಸದಾಗಿ ಯೋಜನೆ ರೂಪಿಸಿ ಹೊಸ ಟೆಂಡರ್ ಕರೆಯಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಕಾಡುಬೀಸನಹಳ್ಳಿ, ದೇವರಬೀಸನಹಳ್ಳಿ ವ್ಯಾಪ್ತಿಯಲ್ಲಿ ಅನೇಕ ಅಂಗಡಿ, ಕಚೇರಿಗಳು ಹೊರ ವರ್ತುಲ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿವೆ. ಇದರಿಂದಾಗಿ ಅನೇಕ ಕಡೆಗಳಲ್ಲಿ ರಸ್ತೆಯ ವಿಸ್ತೀರ್ಣ ಹೆಚ್ಚು ಕಮ್ಮಿಯಾಗಿದೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಕಾರ್ಯಾಚರಣೆ ನಡೆಸಲು ಜಿಬಿಎ ಯೋಜಿಸಿದೆ.

ಸುಳಿವು ಕೊಟ್ಟ ಮಳೆ ನೀರು:

ಜೂನ್ ಮೊದಲ ವಾರದಲ್ಲಿ ನಗರದಲ್ಲಿ ಸುರಿದ ಭಾರಿ ಮಳೆಯಿಂದ ರಿಂಗ್ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆ ರಾಜಕಾಲುವೆ ತುಂಬಿ ಹರಿದಿರುವುದು, ರಾಜಕಾಲುವೆಯಿಂದ ನೀರು ರಸ್ತೆಗೆ ವಾಪಸ್ ಹರಿದಿರುವ ಘಟನೆಗಳು ವರದಿಯಾಗಿದ್ದವು. ಅದರಲ್ಲೂ ಕೆ.ಆರ್. ಪುರ ಮತ್ತು ಇಬ್ಬಲೂರು ಜಂಕ್ಷನ್ ನಡುವಿನ ಮಾರತ್ತಹಳ್ಳಿ ಸುತ್ತಲಿನ ಪ್ರದೇಶಗಳಲ್ಲಿ ಹೆಚ್ಚು ಒತ್ತುವರಿಯಾಗಿದೆ. ಈ ಪ್ರದೇಶದಲ್ಲಿನ ರಸ್ತೆಗಳು ಮಳೆಗಾಲದಲ್ಲಿ ಜಲಾವೃತವಾಗುತ್ತಿರುವುದಕ್ಕೆ ಕಾರಣವನ್ನು ಪತ್ತೆ ಹಚ್ಚಲಾಗಿದ್ದು, ಕ್ರಮ ಕೈಗೊಳ್ಳುವುದು ಬಾಕಿ ಇದೆ ಎಂದು ಜಿಬಿಎ ಅಧಿಕಾರಿಗಳು ಹೇಳಿದ್ದಾರೆ.

ಫುಟ್ಪಾತಲ್ಲಿ ನಿರ್ಮಿಸಿರುವ ಅಕ್ರಮ ಮಳಿಗೆ 2 ವಾರದಲ್ಲಿ ಖಾಲಿ ಮಾಡದಿದ್ರೆ ನೆಲಸಮ

ನಗರದ ಕೆ.ಆರ್.ಮಾರುಕಟ್ಟೆ ಪ್ರದೇಶದ ಪಾದಚಾರಿ ಮಾರ್ಗಗಳಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮಳಿಗೆಗಳ ಜಾಗವನ್ನು ಸ್ವಯಂ ಪ್ರೇರಿತವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ನೀಡಲು ಮಳಿಗೆಗಳ ಮಾಲೀಕರಿಗೆ 2 ವಾರ ಕಾಲಾವಕಾಶ ನೀಡಿರುವ ಹೈಕೋರ್ಟ್, ನಿಗದಿಪಡಿಸಿರುವ ಸಮಯದಲ್ಲಿ ಜಾಗವನ್ನು ಬಿಟ್ಟುಕೊಡದೇ ಹೋದರೆ, ಜಿಬಿಎ ನೋಟಿಸ್ ನೀಡದೆಯೇ ಮಳಿಗೆಗಳನ್ನು ನೆಲಸಮಗೊಳಿಸಬಹುದು ಎಂದು ಸ್ಪಷ್ಟಪಡಿಸಿದೆ.

ನಗರದ ಕೆ.ಆರ್.ಮಾರುಕಟ್ಟೆಯ ಮೇಲ್ಸೇತುವೆ ಕೆಳಭಾಗದ ಪಾದಚಾರಿ ಮಾರ್ಗದಲ್ಲಿ ಅಕ್ರಮವಾಗಿ ನಿರ್ಮಿಸಿದ ಮಳಿಗೆಗಳ ತೆರವು ಕಾರ್ಯಾಚರಣೆ ಕೈಗೊಂಡ ಜಿಬಿಎ ಕ್ರಮ ಪ್ರಶ್ನಿಸಿ ಸ್ಯಾಮ್ಯುಯಲ್ ಮತ್ತಿತರ ಮಳಿಗೆ ಮಾಲೀಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್‌ಪ್ರಸಾದ್‌ ಅವರ ನ್ಯಾಯಪೀಠ ಈ ಸೂಚನೆ ನೀಡಿದೆ.

ವಿಚಾರಣೆ ವೇಳೆ ಜಿಬಿಎ ಪ್ರಮಾಣಪತ್ರ ಸಲ್ಲಿಸಿ, ಮಳಿಗೆಗಳಿಗೆ ಹಿಂದಿನ ಬಿಬಿಎಂಪಿ ಪರವಾನಗಿ ‌ನೀಡಿದೆ. ಬೆಸ್ಕಾಂ ಸಹ ವಿದ್ಯುತ್ ಸಂಪರ್ಕ‌ ಕಲ್ಪಿಸಲಾಗಿದೆ ಎಂದು ಅರ್ಜಿದಾರರು ಹೇಳುತ್ತಿದ್ದಾರೆ. ಆದರೆ‌, ಪರವಾನಿಗೆಯಲ್ಲಿರುವ ಸಹಿ ಸಂಬಂಧಪಟ್ಟ ಕಂದಾಯ ಅಧಿಕಾರಿಯ ಸಹಿ ಅಲ್ಲ, ಕಂದಾಯ ಅಧಿಕಾರಿ ಪರವಾನಿಗೆಗಳಿಗೆ ಸಹಿ ಮಾಡಿಲ್ಲ ಎಂದು ತಿಳಿಸಿತು.

ಅರ್ಜಿದಾರರ ಪರ ವಕೀಲರು‌ ಅಂಗಡಿ ಜಾಗವನ್ನು ಜಿಬಿಎಗೆ ಬಿಟ್ಟು ಕೊಡಲಾಗುವುದು, ಮಳಿಗೆಗೆ ಅಳವಡಿಸಲಾಗಿರುವ ವಿದ್ಯುತ್ ಮೀಟರ್ ಅನ್ನು ಬೆಸ್ಕಾಂಗೆ ಹಿಂದಿರುಗಿಸಿ ಠೇವಣಿ ಹಣ ಹಿಂಪಡೆಯಲಾಗುವುದು. ಮಳಿಗೆಗಳಿಗೆ ಬದಲಿ ಜಾಗ ಕಲ್ಪಿಸಲು ಕೋರಿ ಜಿಬಿಎಗೆ ಮನವಿ ಪತ್ರ ಸಲ್ಲಿಸಲಾಗುವುದು.‌ ಅದಕ್ಕೆ ಎರಡು ವಾರ ಕಾಲಾವಕಾಶ ನೀಡಬೇಕು ಎಂದು‌ ನ್ಯಾಯಪೀಠವನ್ನು ಕೋರಿದರು.

ರಾಜ್ಯ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಹಾಜರಾಗಿ,‌ಅರ್ಜಿದಾರರು ಮಳಿಗೆಗಳಿಗೆ ಬದಲಿ ಜಾಗ ಕೋರಿ ಮನವಿ ಪತ್ರ ಸಲ್ಲಿಸಿದರೆ, ಅದನ್ನು ಕಾನೂನು ಪ್ರಕಾರ ಪರಿಗಣಿಸಲಾಗುವುದು ಎಂದು ನ್ಯಾಯಪೀಠ ತಿಳಿಸಿದರು. ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರು ತಮ್ಮ ಮಳಿಗೆಗಳಿಗೆ ಬೀಗ ಹಾಕಿ, ಜಾಗದ ಸ್ವಾಧೀನವನ್ನು ಎರಡು ವಾರದಲ್ಲಿ ಜಿಬಿಎಗೆ ಬಿಟ್ಟುಕೊಡಬೇಕು. ಎರಡು ವಾರದಲ್ಲಿ ಜಾಗದ ಸ್ವಾಧೀನ ಬಿಟ್ಟುಕೊಡದೇ ಹೋದರೆ, ಅರ್ಜಿದಾರರಿಗೆ ಯಾವುದೇ ನೋಟಿಸ್ ನೀಡದೆಯೇ ಅವರ ಮಳಿಗೆಗಳನ್ನು ನೆಲಸಮಗೊಳಿಸಲು ಜಿಬಿಎ ಮುಕ್ತವಾಗಿದೆ.‌ ಮಳಿಗೆಗಳಿಗೆ ಬದಲಿ ಜಾಗ ಒದಗಿಸಲು ಕೋರಿ ಅರ್ಜಿದಾರರು 4 ವಾರದಲ್ಲಿ ಜಿಬಿಎ ಟೌನ್ ವೆಂಡಿಂಗ್ ಕಮಿಟಿಗೆ ಮನವಿ ಪತ್ರ ಸಲ್ಲಿಸಬಹುದು. ಆ ಮನವಿಯನ್ನು ಜಿಬಿಎ ಕಾನೂನು ಪ್ರಕಾರ ಪರಿಗಣಿಸಬೇಕು ಎಂದು ನಿರ್ದೇಶಿಸಿ ಅರ್ಜಿ ಇತ್ಯರ್ಥ ಮಾಡಿದೆ.