ಬೆಂಗಳೂರಿನಲ್ಲಿ ತ್ಯಾಜ್ಯ ವಿಲೇವಾರಿಯನ್ನು ಪಾರದರ್ಶಕಗೊಳಿಸಲು ₹620 ಕೋಟಿ ವೆಚ್ಚದಲ್ಲಿ 33 ಪ್ಯಾಕೇಜ್‌ಗಳ ಹೊಸ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ. ಹಳೆಯ ಆಟೋ ಟಿಪ್ಪರ್‌ಗಳ ಬದಲಿಗೆ ಜಿಪಿಎಸ್ ಅಳವಡಿಸಿದ ಹೊಸ ದೊಡ್ಡ ವಾಹನಗಳನ್ನು ಬಳಸಲಾಗುವುದು. ಮನೆ ಬಾಗಿಲಲ್ಲೇ ಕಸ ಸಂಗ್ರಹಿಸಲಾಗುತ್ತದೆ.

ಬೆಂಗಳೂರು (ಅ.28): ಬೆಂಗಳೂರು ನಗರದಾದ್ಯಂತ ತ್ಯಾಜ್ಯ ವಿಲೇವಾರಿಯನ್ನು ಪಾರದರ್ಶಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ₹620 ಕೋಟಿ ವೆಚ್ಚದಲ್ಲಿ, ಒಟ್ಟು 27 ವಿಧಾನಸಭಾ ಕ್ಷೇತ್ರಗಳನ್ನು 33 ಪ್ಯಾಕೇಜ್‌ಗಳನ್ನಾಗಿ ವಿಭಾಗಿಸಿ ಹೊಸ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಬುಧವಾರ ಜಿಬಿಎ (GBA) ಕಚೇರಿಯಲ್ಲಿ ನಡೆದ ಮಹತ್ವದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ನೈರ್ಮಲ್ಯ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಲು ಸರ್ಕಾರ ರೂಪಿಸಿರುವ ಸಮಗ್ರ ನೀಲನಕ್ಷೆಯನ್ನು ಬಿಚ್ಚಿಟ್ಟರು.

33 ಪ್ಯಾಕೇಜ್‌ಗಳು: ಟೆಂಡರ್ ಪ್ರಕ್ರಿಯೆಯ ಪ್ರಮುಖ ಹಂತಗಳು

ನೂತನ ಟೆಂಡರ್ ನಿಯಮಾವಳಿಗಳ ಪ್ರಕಾರ, ಪ್ರತಿಯೊಂದು ಪ್ಯಾಕೇಜ್‌ನ ನಿರ್ವಹಣೆಗೆ ಗುತ್ತಿಗೆದಾರರು ಕನಿಷ್ಠ ₹10 ಕೋಟಿ ಬಂಡವಾಳ ಹೂಡಬೇಕಾಗುತ್ತದೆ.

5 ಪ್ಯಾಕೇಜ್‌ಗಳಿಗೆ ಗ್ರೀನ್ ಸಿಗ್ನಲ್: ಈಗಾಗಲೇ 5 ಕ್ಷೇತ್ರಗಳಲ್ಲಿ ಟೆಂಡರ್ ಕಾರ್ಯಾದೇಶ (Work Order) ನೀಡಲಾಗಿದ್ದು, ನವೆಂಬರ್‌ನಿಂದಲೇ ಕಾಮಗಾರಿ ಆರಂಭವಾಗಲಿದೆ.

3 ಪ್ಯಾಕೇಜ್‌ಗಳಿಗೆ ಒಪ್ಪಿಗೆ ಪತ್ರ (LOI): ಮೂರು ಪ್ಯಾಕೇಜ್‌ಗಳಿಗೆ ಒಪ್ಪಿಗೆ ಪತ್ರ ರವಾನಿಸಲಾಗಿದೆ.

10 ಪ್ಯಾಕೇಜ್‌ಗಳು ಅನುಮೋದನೆ ಹಂತದಲ್ಲಿ: 10 ಪ್ಯಾಕೇಜ್‌ಗಳ ಪ್ರಕ್ರಿಯೆ ಮುಗಿದು ಸರ್ಕಾರದ ಆಡಳಿತಾತ್ಮಕ ಅನುಮೋದನೆಗೆ ಸಲ್ಲಿಕೆಯಾಗಿದ್ದು, ಮುಂದಿನ 10-15 ದಿನಗಳಲ್ಲಿ ಕಾರ್ಯಾದೇಶ ಸಿಗಲಿದೆ.

ಉಳಿದ ಪ್ಯಾಕೇಜ್‌ಗಳು: 10 ಪ್ಯಾಕೇಜ್‌ಗಳು ಬಿಡ್ಡಿಂಗ್ ಹಂತದಲ್ಲಿದ್ದು, ಕೋರ್ಟ್‌ನಲ್ಲಿದ್ದ 3 ಪ್ಯಾಕೇಜ್‌ಗಳಿಗೆ ಗ್ರೀನ್ ಸಿಗ್ನಲ್ ದೊರೆತ ತಕ್ಷಣವೇ ಟೆಂಡರ್ ಕರೆಯಲಾಗುತ್ತದೆ.

15 ವರ್ಷ ಹಳೆಯ ಆಟೋ ಟಿಪ್ಪರ್‌ಗಳು ಔಟ್!

ಪ್ರಸ್ತುತ ನಗರದಲ್ಲಿ ಬಳಕೆಯಲ್ಲಿರುವ ಕಸದ ವಾಹನಗಳು 15 ವರ್ಷಗಳಿಗಿಂತಲೂ ಹಳೆಯದಾಗಿದ್ದು, ಪದೇ ಪದೇ ಕೈಕೊಡುತ್ತಿವೆ. ಇದರಿಂದಾಗಿ ಕಸ ಸಂಗ್ರಹದಲ್ಲಿ ವ್ಯತ್ಯಯ ಉಂಟಾಗುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. 500 ಕೆಜಿ ಹೊರುವ ಸಣ್ಣ ಆಟೋ ಟಿಪ್ಪರ್‌ಗಳನ್ನು ಹಂತ ಹಂತವಾಗಿ ಕಡಿಮೆ ಮಾಡಿ, 3 ರಿಂದ 5 ಟನ್ ಸಾಮರ್ಥ್ಯದ 4 ಚಕ್ರದ ದೊಡ್ಡ ಸುಸಜ್ಜಿತ ವಾಹನಗಳನ್ನು ರಸ್ತೆಗಿಳಿಸಲಾಗುತ್ತಿದೆ. ಕಿರಿದಾದ ಸಂದಿ-ಗೊಂದಿಗಳಲ್ಲಿ ಮಾತ್ರ 3 ಚಕ್ರದ ವಾಹನ ಬಳಸಲಾಗುತ್ತದೆ. ಇದರಿಂದಾಗಿ ಪ್ರಸ್ತುತ ಪ್ರತಿದಿನ ಇರುವ 5,200 ಟನ್ ತ್ಯಾಜ್ಯ ಸಂಗ್ರಹಣಾ ಸಾಮರ್ಥ್ಯ ಬರೋಬ್ಬರಿ 9,000 ಟನ್‌ಗೆ ಹೆಚ್ಚಳವಾಗಲಿದೆ. ವಾಹನಗಳು ಸರಿಯಾದ ಮಾರ್ಗದಲ್ಲಿ (Routes) ಸಂಚರಿಸುವುದನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಂದು ವಾಹನಕ್ಕೂ GPS ಕಡ್ಡಾಯ. ಸಿಬ್ಬಂದಿಯ ಹಾಜರಾತಿಗೆ ಮುಖಚಹರೆ (Face Recognition) ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ.

ಮನೆ ಬಾಗಿಲಲ್ಲೇ ಕಸ ಸಂಗ್ರಹ

ನಗರವನ್ನು ಸಂಪೂರ್ಣ ಸ್ವಚ್ಛವಾಗಿಡಲು ಕೇವಲ ಸರ್ಕಾರದಿಂದ ಸಾಧ್ಯವಿಲ್ಲ, ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ. ಸಾರ್ವಜನಿಕರು ಮನೆಯ ಕಸವನ್ನು ಬಕೆಟ್‌ಗಳಲ್ಲಿ ಹಾಕಿ ಕಾಂಪೌಂಡ್, ಗೇಟ್ ಅಥವಾ ಗೋಡೆಗೆ ನೇತುಹಾಕಿದರೆ, ಪಾಲಿಕೆ ಸಿಬ್ಬಂದಿಯೇ ಬಂದು ಕಸ ಸಂಗ್ರಹಿಸಿ ಬಕೆಟ್ ಅನ್ನು ಯಥಾಸ್ಥಿತಿಯಲ್ಲಿ ಅಲ್ಲೇ ಇಟ್ಟು ಹೋಗುತ್ತಾರೆ. ಇದರಿಂದ ರಸ್ತೆಬದಿಯಲ್ಲಿ ಬ್ಲ್ಯಾಕ್ ಸ್ಪಾಟ್‌ಗಳು (ಕಸದ ರಾಶಿ) ನಿರ್ಮಾಣವಾಗುವುದು ಸಂಪೂರ್ಣ ತಪ್ಪುತ್ತದೆ ಎಂದು ತಿಳಿಸಿದರು.

ಆರೋಪಗಳಲ್ಲಿ ಹುರುಳಿಲ್ಲ: ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ

ಹೊಸ ಟೆಂಡರ್ ಪ್ರಕ್ರಿಯೆಯ ಬಗ್ಗೆ ಕೇಳಿಬರುತ್ತಿರುವ ಆರೋಪಗಳನ್ನು ಸಚಿವರು ತಳ್ಳಿಹಾಕಿದರು. 'ಪ್ರಸ್ತುತ ತ್ಯಾಜ್ಯ ನಿರ್ವಹಣೆಗೆ ವಾರ್ಷಿಕ ₹597 ಕೋಟಿ ವೆಚ್ಚವಾಗುತ್ತಿದ್ದು, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಹೊಸ ವಾಹನಗಳನ್ನು ಸೇರ್ಪಡೆ ಮಾಡಿದ್ದರಿಂದ ಅಂದಾಜು ₹620 ಕೋಟಿಗೆ ತಲುಪಬಹುದು. ಶೇ. 5 ರಿಂದ 6 ರಷ್ಟು ಅಂದಾಜು ದರ ನಿಗದಿಪಡಿಸಿ ಅರ್ಹ ಗುತ್ತಿಗೆದಾರರಿಗೆ ಪಾರದರ್ಶಕವಾಗಿ ಟೆಂಡರ್ ನೀಡಲಾಗಿದೆ. ಟೆಂಡರ್ ಸಿಗದ ಕೆಲವರು ಹತಾಶೆಯಿಂದ ಆಧಾರರಹಿತ ಆರೋಪ ಮಾಡುತ್ತಿದ್ದಾರೆ' ಎಂದು ಉತ್ತರಿಸಿದರು.