ಕನ್ನಡ ರಾಜ್ಯೋತ್ಸವದಂದು ಬಿಲಿಯನ್ ರೀಡರ್ಸ್ (BIRD) ಸಂಸ್ಥೆಯು 'ಸೇಮ್ ಲ್ಯಾಂಗ್ವೇಜ್ ಸಬ್ಟೈಟ್ಲಿಂಗ್' (SLS) ತಂತ್ರಜ್ಞಾನವನ್ನು ಪ್ರಸ್ತುತಪಡಿಸಿದೆ. ಪ್ರಸಾರ ಭಾರತಿ ಹಾಗೂ BIRD ನಡುವೆ ಉತ್ತಮ ಗುಣಮಟ್ಟದ SLS ಒದಗಿಸಲು ಮಹತ್ವದ ಒಪ್ಪಂದವಾಗಿದೆ.

ಬೆಂಗಳೂರು (ನ.13): ಕನ್ನಡ ರಾಜ್ಯೋತ್ಸವದ ಅಂಗವಾಗಿ, ದೂರದರ್ಶನ ಚಂದನ ವಾಹಿನಿಯು ನವೆಂಬರ್ 8 ರಂದು ಸಂಜೆ 7:30 ಕ್ಕೆ ಪ್ರಸಾರವಾದ 'ನುಡಿ ಹಬ್ಬ, ಸಿರಿಗನ್ನಡ ಸನ್ನಿಧಿ' ಎಂಬ ಕಾರ್ಯಕ್ರಮದಲ್ಲಿ, 'ಬಿಲಿಯನ್ ರೀಡರ್ಸ್ (BIRD)' ಸಂಸ್ಥೆಯನ್ನು ಆಹ್ವಾನಿಸಿತ್ತು. ಈ ಸಂಸ್ಥೆಯು ಕನ್ನಡ 'ಸೇಮ್ ಲ್ಯಾಂಗ್ವೇಜ್ ಸಬ್ಟೈಟ್ಲಿಂಗ್' (SLS ಅಥವಾ ಅದೇ ಭಾಷೆಯ ಉಪಶೀರ್ಷಿಕೆಗಳು) ಕುರಿತಾದ ತಮ್ಮ ಕಾರ್ಯಗಳನ್ನು ಈ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಿತು. ಕನ್ನಡ ಕವಿ ಮತ್ತು ಲೇಖಕಿ ಪ್ರತಿಭಾ ನಂದಕುಮಾರ್ ಅವರು ಈ ವಿಶೇಷ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಕರ್ನಾಟಕದ ಶ್ರೀಮಂತ ಪರಂಪರೆ, ಸಂಸ್ಕೃತಿ ಮತ್ತು ಭಾಷೆಯನ್ನು ಬಿಂಬಿಸುವ ಸಂಗೀತ ಪ್ರದರ್ಶನಗಳು ಹಾಗೂ ಬಾಲ ಕಲಾವಿದರ ಭಾಷಣಗಳು ನಡೆದವು. ಇದೇ ವೇಳೆ, ಪ್ರಸಾರ ಭಾರತಿಯ 'WAVES' OTT ಪ್ಲಾಟ್‌ಫಾರ್ಮ್‌ನಲ್ಲಿ ಕನ್ನಡ SLS ಅನ್ನು ಅಳವಡಿಸಿರುವ ಕುರಿತು BIRD ಸಂಸ್ಥೆಯು ಪ್ರಸ್ತುತಿಯನ್ನು ನೀಡಿತು. ಇದು ಕನ್ನಡ ಕಾರ್ಯಕ್ರಮಗಳನ್ನು (content) ಹೆಚ್ಚು ಸುಲಭವಾಗಿ ಗ್ರಹಿಸಲು ಮತ್ತು ವೀಕ್ಷಕರು ಕನ್ನಡವನ್ನು ಇನ್ನಷ್ಟು ನಿರರ್ಗಳವಾಗಿ ಓದಲು ಸಹಕಾರಿಯಾಗಿದೆ.

‘ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ, 2016’ ರ (RPwD Act, 2016) ಅನುಗುಣವಾಗಿ, ಪ್ರಸಾರ ಭಾರತಿಯ ಕಾರ್ಯಕ್ರಮಗಳಿಗೆ ಉತ್ತಮ ಗುಣಮಟ್ಟದ SLS ಅನ್ನು ಅಳವಡಿಸುವ ಪ್ರಕ್ರಿಯೆಯನ್ನು ವೇಗಗೊಳಿಸಲು, ಪ್ರಸಾರ ಭಾರತಿ ಮತ್ತು BIRD ಸಂಸ್ಥೆಗಳ ನಡುವೆ ಒಂದು ಮಹತ್ವದ ಒಪ್ಪಂದ (Memorandum of Understanding) ಏರ್ಪಟ್ಟಿದೆ. ಇದರ ಭಾಗವಾಗಿ, ಭಾರತದಾದ್ಯಂತ ಇರುವ ಎಂಟು ದೂರದರ್ಶನ ಕೇಂದ್ರಗಳು (ಅವುಗಳಲ್ಲಿ 'ದೂರದರ್ಶನ ಚಂದನ'ವೂ ಒಂದು) BIRD ಸಂಸ್ಥೆಯೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿವೆ.

ಈ ಉಪಕ್ರಮವು ಮಾಧ್ಯಮ ಪ್ರವೇಶಸಾಧ್ಯತೆಗೆ (media accessibility) ಒಂದು ಸಾರ್ವಜನಿಕ ಹಿತಾಸಕ್ತಿ ಮಾನದಂಡವನ್ನು ಸ್ಥಾಪಿಸುವ ಮೂಲಕ, ದೇಶದಾದ್ಯಂತ ಲಕ್ಷಾಂತರ ವೀಕ್ಷಕರಲ್ಲಿ ಸಾಕ್ಷರತೆಯನ್ನು ಉತ್ತೇಜಿಸುತ್ತದೆ. ಅಲ್ಲದೆ, SLS ಮೂಲಕ ಮಾಹಿತಿ ನೀಡುವುದು, ಶಿಕ್ಷಣ ಒದಗಿಸುವುದು ಮತ್ತು ಮನರಂಜನೆ ನೀಡುವ ಪ್ರಸಾರ ಭಾರತಿಯ 'ಪ್ರವೇಶಸಾಧ್ಯತಾ ಧ್ಯೇಯ'ವನ್ನು (accessibility mission) ಕಾರ್ಯರೂಪಕ್ಕೆ ತರುತ್ತದೆ.

ಐ. ಐ. ಟಿ. (IIT) ದೆಹಲಿಯ ಅಡ್ಜಂಕ್ಟ್ ಪ್ರೊಫೆಸರ್ ಮತ್ತು BIRD ಸಂಸ್ಥಾಪಕರಾದ ಡಾ. ಬ್ರಿಜ್ ಕೊಠಾರಿ ಅವರು ಮಾತನಾಡುತ್ತಾ, 'ಈ ಒಪ್ಪಂದವು SLS ಅನ್ನು ಕೇವಲ ಒಂದು 'ಉತ್ತಮ ಅಭ್ಯಾಸ'ದಿಂದ (good practice) ನೀತಿ ಅನುಷ್ಠಾನದ ಹಂತಕ್ಕೆ ಮತ್ತು ಅಂತಿಮವಾಗಿ ವ್ಯವಸ್ಥಿತ ಬದಲಾವಣೆಯತ್ತ ಕೊಂಡೊಯ್ಯಲು ನಮಗೆ ಅವಕಾಶ ನೀಡುತ್ತದೆ. ಜನರು ತಮಗೆ ಇಷ್ಟವಾದ ಕಾರ್ಯಕ್ರಮಗಳನ್ನು ಅದೇ ಭಾಷೆಯಲ್ಲಿ ವೀಕ್ಷಿಸುವಾಗ, ಕೇಳುವಾಗ ಮತ್ತು ಓದುವಾಗ, ಅವರ ಮೆದುಳು ಶಬ್ದ ಮತ್ತು ಪಠ್ಯವನ್ನು ಅತ್ಯಂತ ಸುಲಭವಾಗಿ ಜೋಡಿಸುತ್ತದೆ. ಈಗ ಕರ್ನಾಟಕಕ್ಕೆ, ಪ್ರವೇಶಸಾಧ್ಯ ಮಾಧ್ಯಮ (accessible media) ಮತ್ತು ಜೀವನಪರ್ಯಂತ ಓದುವ ಕೌಶಲ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಮಾದರಿಯಾಗುವ ಅವಕಾಶ ಲಭಿಸಿದೆ' ಎಂದರು.

ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಈ ಸಂವಾದಕ್ಕೆ ವೇದಿಕೆ ಕಲ್ಪಿಸುವ ಮೂಲಕ, ಕನ್ನಡ ಮಾಧ್ಯಮ ಕಾರ್ಯಕ್ರಮಗಳಲ್ಲಿ (media content) ಕನ್ನಡ ಉಪಶೀರ್ಷಿಕೆಗಳನ್ನು (subtitles) ಬಳಸುವಿಕೆಯತ್ತ ಗಮನ ಸೆಳೆಯಲು BIRD ಉದ್ದೇಶಿಸಿದೆ. ಇದು ರಾಜ್ಯದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಮತ್ತು ಹಿಂದೆ ಜನಪ್ರಿಯವಾಗಿದ್ದ ಹಳೆಯ ಕಾರ್ಯಕ್ರಮಗಳನ್ನು (archival content) ಮರುಜೀವಗೊಳಿಸಲು ಸಹಾಯ ಮಾಡುವುದಲ್ಲದೆ, ವೀಕ್ಷಕರು ತಮಗೆ ಇಷ್ಟವಾದ ಕಾರ್ಯಕ್ರಮಗಳನ್ನು ನೋಡುವಾಗ ಕನ್ನಡದಲ್ಲಿ ಓದುವ ಪ್ರಾವೀಣ್ಯತೆಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ.

SLS ಮತ್ತು ಬಿಲಿಯನ್ ರೀಡರ್ಸ್ (BIRD) ಉಪಕ್ರಮದ ಬಗ್ಗೆ

SLS ಜನಪ್ರಿಯ ಹಾಡುಗಳು, ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳಿಗೆ ಆಡಿಯೊದಂತೆಯೇ ಅದೇ ಭಾಷೆಯಲ್ಲಿ ಉಪಶೀರ್ಷಿಕೆಗಳನ್ನು ಸೇರಿಸುತ್ತದೆ, ದೈನಂದಿನ ಮನರಂಜನೆಯನ್ನು ಸುಲಭ, ಪುನರಾವರ್ತಿತ ಓದುವ ಅಭ್ಯಾಸವಾಗಿ ಪರಿವರ್ತಿಸುತ್ತದೆ. ಇದು ಶ್ರವಣದೋಷವುಳ್ಳ (DHH ಅಥವಾ ಡೆಫ್ ಅಂಡ್ ಹಾರ್ಡ್-ಆಫ್-ಹಿಯರಿಂಗ್) ವೀಕ್ಷಕರಿಗೆ ಮಾಧ್ಯಮ ಪ್ರವೇಶವನ್ನು ಹೆಚ್ಚಿಸುತ್ತದೆ. 1996 ರಲ್ಲಿ ಪ್ಲಾನೆಟ್ ರೀಡ್ ನಿಂದ ಪ್ರಾರಂಭವಾದ SLS, "ಪ್ರತಿಯೊಬ್ಬ ಭಾರತೀಯ, ನಿರರ್ಗಳ ಓದುಗ" ಎಂಬ ಕಲ್ಪನೆಯನ್ನು ಹೊಂದಿರುವ ರಾಷ್ಟ್ರವ್ಯಾಪಿ BIRD ಉಪಕ್ರಮವಾಗಿ ಬೆಳೆದಿದೆ.

ಸಾಕ್ಷರರು ಎಂದು ವರ್ಗೀಕರಿಸಲಾದ ಭಾರತದ ಒಂದು ಶತಕೋಟಿ ಜನರಲ್ಲಿ, ಅಂದಾಜು 60 ಕೋಟಿ ಜನರು ದುರ್ಬಲ ಓದುಗರು: ಅವರು ಕೆಲವು ಅಕ್ಷರಗಳು ಮತ್ತು ಪದಗಳನ್ನು ಗುರುತಿಸಬಲ್ಲರು, ಆದರೆ 2 ನೇ ತರಗತಿ ಮಟ್ಟದಲ್ಲಿರುವ ಸರಳ ಪಠ್ಯಗಳನ್ನು ಓದಲು ಅವರಿಗೆ ಸಾಧ್ಯವಿಲ್ಲ (ASER ವರದಿ, 2022). ದುರ್ಬಲ ಓದುಗರಲ್ಲಿ ಮಹಿಳೆಯರು ಮತ್ತು ಹುಡುಗಿಯರು 60% ರಷ್ಟಿದ್ದಾರೆ.

ಅಸ್ತಿತ್ವದಲ್ಲಿರುವ ಎಲ್ಲಾ ಮುಖ್ಯವಾಹಿನಿಯ ದೃಶ್ಯ ಮಾಧ್ಯಮಗಳಲ್ಲಿ SLS ಅನ್ನು ಅಳವಡಿಸುವುದು BIRD ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಭಾರತದಲ್ಲಿ ಒಂದು ಶತಕೋಟಿಗೂ ಹೆಚ್ಚು ಗ್ರಾಹಕರಿಗೆ ಅವರ ಆದ್ಯತೆಯ ವೀಕ್ಷಣಾ ಭಾಷೆಯಲ್ಲಿ ದೈನಂದಿನ, ದೀರ್ಘಾವಧಿಯ ಓದುವ ಅಭ್ಯಾಸವನ್ನು ಒದಗಿಸುತ್ತದೆ. ಬಿಲಿಯನ್ ರೀಡರ್ಸ್ ಇನಿಶಿಯೇಟಿವ್ ವೆಬ್‌ಸೈಟ್: https://billionreaders.org/