ಸಚಿವ ಕೃಷ್ಣ ಬೈರೇಗೌಡ ಅವರು ಬೆಂಗಳೂರು ಪೂರ್ವ ಭಾಗದ ರಸ್ತೆ ಮತ್ತು ಮೂಲಸೌಕರ್ಯ ಕಾಮಗಾರಿಗಳನ್ನು ಪರಿಶೀಲಿಸಿದರು. ರಸ್ತೆ ಒತ್ತುವರಿ ತೆರವುಗೊಳಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಸೂಚಿಸಿದರು. ಲಭ್ಯವಿರುವ ಜಾಗದಲ್ಲಾದರೂ ರಸ್ತೆ ನಿರ್ಮಿಸುವಂತೆ ಅಧಿಕಾರಿಗಳಿಗೆ ಕೈಮುಗಿದು ಮನವಿ ಮಾಡಿದರು.

ಬೆಂಗಳೂರು ಅ.01: ನಗರದ ಪೂರ್ವ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ರಸ್ತೆ ಹಾಗೂ ಮೂಲಸೌಕರ್ಯ ಪ್ರಗತಿಯನ್ನು ಮಂಗಳವಾರ ಅಧಿಕಾರಿಗಳ ತಂಡದೊಂದಿಗೆ ಪರಿಶೀಲಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, ಗುಂಜೂರಿನಿಂದ ದೊಮ್ಮಸಂದ್ರದವರೆಗೆ ಅಂಗಡಿಯವರು ರಸ್ತೆ ಒತ್ತುವರಿ ಮಾಡಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪೂರ್ವ ವಿಭಾಗದಲ್ಲಿ ಕೃಷ್ಣ ಬೈರೇಗೌಡ ರೌಂಡ್ಸ್

ಬುಧವಾರ ನಗರದ ಸರ್ಜಾಪುರ ರಸ್ತೆ, ದೊಮ್ಮಸಂದ್ರ, ಗುಂಜೂರು, ವರ್ತೂರು, ಬಳಗೆರೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ರಸ್ತೆ, ಒಳಚರಂಡಿ, ಸಂಚಾರ ವ್ಯವಸ್ಥೆ, ಭೂ ಸ್ವಾಧೀನ, ವಿದ್ಯುತ್ ಮೂಲಸೌಕರ್ಯ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಿತಿಗತಿ ಪರಿಶೀಲಿಸಿದರು. ವಾಹನ ಸಂಚಾರ, ರಸ್ತೆ ಗುಂಡಿ ಸೇರಿದಂತೆ ಇತರೆ ಸಮಸ್ಯೆಗಳನ್ನು ತಕ್ಷಣ ಪರಿಹರಿಸಲು ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ರಸ್ತೆ ಒತ್ತುವರಿ ಕುರಿತು ಅಧಿಕಾರಿಗಳಿಗೆ ತರಾಟೆ

ವರ್ತೂರು ಕೆರೆ ಸಮೀಪ ಪರಿಶೀಲಿಸಿದ ಸಚಿವ ಕೃಷ್ಣ ಬೈರೇಗೌಡ, ಕೆರೆ ಏರಿ ಮೇಲೆ ರಸ್ತೆ ನಿರ್ಮಿಸಲು ಸಾಕಷ್ಟು ಸ್ಥಳಾವಕಾಶ ಇದ್ದರೂ ಸಹ ಭೂ ಸ್ವಾಧೀನ ಏಕೆ ಮಾಡಬೇಕು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಅವರು, ಗುಂಜೂರಿನಿಂದ ದೊಮ್ಮಸಂದ್ರ ವರೆಗೆ ಸಾಕಷ್ಟು ಅಂಗಡಿಯವರು ಎಂಟು ಅಡಿಗಿಂತ ಅಧಿಕ ಜಾಗವನ್ನು ಒತ್ತುವರಿ ಮಾಡಿದ್ದಾರೆ. ಒತ್ತುವರಿ ಆಗುವವರೆಗೆ ಅಧಿಕಾರಿಗಳು ಏನು ಮಾಡುತ್ತಿದ್ದಿರಿ? ಈಗ ಒತ್ತುವರಿಯಿಂದ ಇಷ್ಟು ಟ್ರಾಫಿಕ್ ಸಮಸ್ಯೆ ಉಲ್ಬಣಿಸಿದ್ದರೂ ಸಹ ಒತ್ತುವರಿ ತೆರವಿಗೆ ಏಕೆ ಮುಂದಾಗಿಲ್ಲ. ನಿಮ್ಮ ತಪ್ಪಿನಿಂದ ಜನ ಸಾಮಾನ್ಯರು ಇನ್ನೆಷ್ಟು ದಿನ ಸಂಕಷ್ಟ ಅನುಭವಿಸಬೇಕು ತರಾಟೆಗೆ ತೆಗೆದುಕೊಂಡರು. ರಸ್ತೆ ತಿರುವಿನಲ್ಲಿರುವ ಟ್ರಾನ್ಸ್ ಫಾರ್ಮರ್ ಗಳನ್ನೂ ಬೇರೆಡೆ ಸ್ಥಳಾಂತರಿಸಲು ಸೂಚಿಸಿದರು.

ರಸ್ತೆ ಗುಂಡಿ, ಟ್ರಾಫಿಕ್ ತಪ್ಪಿಸಲು ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳಿಗೆ ತಾಕೀತು

ಸರ್ಜಾಪುರ ರಸ್ತೆಯಲ್ಲಿ ಮಳೆ ನೀರು ನಿಲ್ಲುತ್ತಿರುವ ಸಮಸ್ಯೆ ಕೂಡಲೆ ಪರಿಹರಿಸಬೇಕು. ರಸ್ತೆ ಗುಂಡಿ, ನೀರು ನಿಲುಗಡೆ, ಸಂಚಾರ ಅಡಚಣೆ ಹಾಗೂ ಸಮಸ್ಯೆ ಗುರುತಿಸಿ, ಅವುಗಳಿಗೆ ಮೊದಲ ಆದ್ಯತೆಯಲ್ಲಿ ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ದೀರ್ಘಾವಧಿ ಕಾಮಗಾರಿ ಅಗತ್ಯವಿರುವ ಕಡೆಗಳಲ್ಲಿ ಸಮಗ್ರ ಯೋಜನೆ ರೂಪಿಸಿ ಶಾಶ್ವತ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮುಖ್ಯ ಒಳಚರಂಡಿ ಸಂಪರ್ಕ ಹಾಗೂ ಪೈಪ್‌ಲೈನ್ ಅಳವಡಿಕೆಗೆ ಸಾಧ್ಯವಿರುವ ಮಾರ್ಗಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ಎಂಡ್ ಪಾಯಿಂಟ್‌ನಿಂದ ಪೈಪ್‌ಲೈನ್ ಮೂಲಕ ನೀರನ್ನು ಸೂಕ್ತ ಚೇಂಬರ್‌ಗಳಿಗೆ ಸಂಪರ್ಕಿಸುವ ಕುರಿತು ಯೋಜನೆ ರೂಪಿಸುವಂತೆ ತಿಳಿಸಿದರು.

ಎಲಿವೇಟೆಡ್ ರಸ್ತೆ ಹಾಗೂ ಮೆಟ್ರೋ ಸೇರಿದಂತೆ ಭವಿಷ್ಯದಲ್ಲಿ ಕೈಗೆತ್ತಿಕೊಳ್ಳಲಿರುವ ಪ್ರಮುಖ ಸಾರಿಗೆ ಯೋಜನೆಗಳನ್ನು ಗಮನದಲ್ಲಿಟ್ಟು ಪ್ರಸ್ತುತ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಯೋಜಿಸುವಂತೆ ಸೂಚಿಸಿದರು. ಒಂದು ಯೋಜನೆಯ ಕಾಮಗಾರಿಯಿಂದ ಮತ್ತೊಂದು ಯೋಜನೆಗೆ ಅಡಚಣೆಯಾಗದಂತೆ ಕೆಆರ್ ಡಿಸಿಎಲ್, ಮೆಟ್ರೋ ಹಾಗೂ ಸಂಬಂಧಪಟ್ಟ ಇಲಾಖೆಗಳು ಪರಸ್ಪರ ಸಮನ್ವಯ ಸಾಧಿಸಬೇಕು ಎಂದು ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ, ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್.ರಮೇಶ್, ಹೆಚ್ಚುವರಿ ಆಯುಕ್ತ (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್, ಜಂಟಿ ಆಯುಕ್ತೆ ಡಾ.ದಾಕ್ಷಾಯಿಣಿ ಕೆ., ಮುಖ್ಯ ಎಂಜಿನಿಯರ್ ಲೋಕೇಶ್, ಕೆ.ಆರ್.ಡಿ.ಸಿ.ಎಲ್, ಬೆಸ್ಕಾಂ, ಮೆಟ್ರೋ, ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳು ಉಪಸ್ಥಿತರಿದ್ದರು.

ಕೈಮುಗಿದು ಕೇಳ್ತೇನೆ ರಸ್ತೆ ನಿರ್ಮಿಸಿ ಎಂದ ಕೃಷ್ಣ

ಪರಿಶೀಲನೆ ವೇಳೆ ‘ಕೈ ಮುಗಿದು ಕೇಳ್ತೇನೆ ಇರುವ ಜಾಗದಲ್ಲಾದರೂ ಕನಿಷ್ಠ ಜಲ್ಲಿಯಾದರೂ ಹಾಕಿ ರಸ್ತೆ ನಿರ್ಮಿಸಿ’ ಎಂದು ಕೆಆರ್ ಡಿಸಿಎಲ್ ಅಧಿಕಾರಿಗಳಿಗೆ ಹೇಳಿದ ಪ್ರಸಂಗ ನಡೆಯಿತು.

ದೊಮ್ಮಸಂದ್ರ ಸರ್ಕಲ್ ನಿಂದ ವರ್ತೂರು ರಸ್ತೆ ಮಾರ್ಗದಲ್ಲಿ ಸಾಕಷ್ಟು ಟ್ರಾಫಿಕ್ ಸಮಸ್ಯೆ ಇದೆ. ಆದರೆ, ಪರಿಶೀಲನೆ ವೇಳೆ ಅಧಿಕಾರಿಗಳು ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನಕ್ಕೆ ಸಂಬಂಧಿಸಿ ಪ್ರಸ್ತಾಪ ಮುಂದಿಟ್ಟರು. ಈ ವೇಳೆ ಅಸಮಾಧಾನಗೊಂಡ ಸಚಿವ ಕೃಷ್ಣ ಬೈರೇಗೌಡ ಅವರು, ‘ಭೂ ಸ್ವಾಧೀನ ಆಮೇಲಿರಲಿ, ನಿಮಗೆ ಕೈಮುಗಿದು ಕೇಳುವೆ ಮೊದಲು ಲಭ್ಯವಿರುವ ಜಾಗದಲ್ಲಿ ತ್ಯಾಜ್ಯ ತೆಗೆಸಿ ಕನಿಷ್ಠ ಜಲ್ಲಿಕಲ್ಲು ಹಾಕಿ ರಸ್ತೆ ನಿರ್ಮಿಸಿ’ ಎಂದರು.