ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಬೃಹತ್ ಡ್ರಗ್ಸ್ ಜಾಲವನ್ನು ಭೇದಿಸಿದ್ದಾರೆ. ಮಹಿಳೆಯರ ಚೂಡಿದಾರ್‌ಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಎಂಡಿಎಂಎ ಡ್ರಗ್ಸ್ ಅಡಗಿಸಿಟ್ಟು ಸಾಗಿಸುತ್ತಿದ್ದ ಜಾಲವನ್ನು ಪತ್ತೆಹಚ್ಚಿ, ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ನೈಜೀರಿಯಾ ಮೂಲದ ವ್ಯಕ್ತಿಯ ಕೈವಾಡವೂ ಬೆಳಕಿಗೆ ಬಂದಿದೆ.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಡ್ರಗ್ಸ್ ಜಾಲವನ್ನು ಬೇರುಸಹಿತ ಕಿತ್ತೆಸೆಯಲು ಸಿಸಿಬಿ ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಭಾರೀ ಯಶಸ್ಸು ಸಿಕ್ಕಿದೆ. ಮಾದಕ ವಸ್ತುಗಳನ್ನು ಸಾಗಿಸಲು ಈ ಕಿಲಾಡಿಗಳು ಕಂಡುಕೊಂಡ ಹೊಸ ದಾರಿ ನೋಡಿ ಪೊಲೀಸರೇ ದಂಗಾಗಿದ್ದಾರೆ. ಈ ಬಾರಿ ಡ್ರಗ್ಸ್ ವ್ಯಸನಿಗಳಿಗೆ ಮಾದಕ ವಸ್ತುಗಳನ್ನು ತಲುಪಿಸಲು 'ಚೂಡಿದಾರ್' ಸೇತುವೆಯಾಗಿ ಬಳಕೆಯಾಗಿದೆ!
ಸಾಮಾನ್ಯವಾಗಿ ಬಟ್ಟೆಗಳನ್ನು ಸಾಗಿಸುವಂತೆ ಚೂಡಿದಾರ್‌ಗಳ ನಡುವೆ ಎಂಡಿಎಂಎ (MDMA) ಕ್ರಿಸ್ಟಲ್‌ಗಳನ್ನು ಅಡಗಿಸಿಟ್ಟು ಈ ಗ್ಯಾಂಗ್ ಬೆಂಗಳೂರಿಗೆ ಸಾಗಿಸುತ್ತಿತ್ತು. ಯಾರಿಗೂ ಸಂಶಯ ಬಾರದಿರಲಿ ಎಂದು ಮಹಿಳೆಯರ ಉಡುಪುಗಳನ್ನು ಬಳಸಿಕೊಂಡು ಈ ಅಕ್ರಮ ದಂಧೆ ನಡೆಸಲಾಗುತ್ತಿತ್ತು. ದೆಹಲಿಯಿಂದ ಸರಬರಾಜಾಗುತ್ತಿದ್ದ ಈ ಮಾದಕ ವಸ್ತುಗಳನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದಾರೆ.
ನೈಜೀರಿಯಾ ಟು ಬೆಂಗಳೂರು ಲಿಂಕ್
ಈ ಜಾಲದ ಹಿಂದೆ ನೈಜೀರಿಯಾ ಮೂಲದ ವ್ಯಕ್ತಿಯೊಬ್ಬನ ಕೈವಾಡವಿರುವುದು ಪತ್ತೆಯಾಗಿದೆ. ಆತ ದೆಹಲಿಯಿಂದ ಮಾದಕ ವಸ್ತುಗಳನ್ನು ಸಪ್ಲೈ ಮಾಡುತ್ತಿದ್ದ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಹೀಲ್ ಕುಮಾರ್, ಸತ್ಯಂ, ಕಲೀಮ್ ಮತ್ತು ಕನ್ನಯ್ಯ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಸಾಹೀಲ್ ಕುಮಾರ್‌ಗೆ ತಲುಪಿಸಲು ಸತ್ಯಂ, ಕಲೀಮ್ ಮತ್ತು ಕನ್ನಯ್ಯ ಪ್ರಯತ್ನಿಸುತ್ತಿದ್ದಾಗ ಸಿಸಿಬಿ ಬಲೆ ಬೀಸಿದೆ.
ಕೆಲ ದಿನಗಳ ಹಿಂದೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಕ್ಟರ್ ಎಂಬಾತನನ್ನು ಬಂಧಿಸಲಾಗಿತ್ತು. ಆತನ ಬೆನ್ನಲ್ಲೇ ಮೋಸಸ್ ಎಂಬ ಆರೋಪಿಯನ್ನೂ ವಿಚಾರಣೆ ನಡೆಸಿದಾಗ ಈ ಬೃಹತ್ ಜಾಲದ ಮಾಹಿತಿ ಹೊರಬಿದ್ದಿದೆ. ಬಂಧಿತರಿಂದ ಬರೋಬ್ಬರಿ 26.60 ಕೋಟಿ ರೂಪಾಯಿ ಮೌಲ್ಯದ 12 ಕೆಜಿ 925 ಗ್ರಾಂ ಎಂಡಿಎಂಎ ಹಾಗೂ 60 ಗ್ರಾಂ ಕೊಕೇನ್ ಸೀಜ್ ಮಾಡಲಾಗಿದೆ. ಇದೇ ವೇಳೆ ಸಿಸಿಬಿ ಪೊಲೀಸರು ಮತ್ತೊಂದು ಕಾರ್ಯಾಚರಣೆ ನಡೆಸಿದ್ದು, ರಾಜಸ್ಥಾನದಿಂದ ಡ್ರಗ್ಸ್ ತರಿಸುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಲುಂಬುರಾಮ್ ಮತ್ತು ಅನುಪ್ ರಾಮ್ ಬಂಧಿತ ಆರೋಪಿಗಳು. ಇವರಿಂದ 7 ಕೆಜಿ ಆಫೀಮು ಹಾಗೂ 225 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.
ಒಟ್ಟಾರೆಯಾಗಿ ಬೆಂಗಳೂರನ್ನು ಡ್ರಗ್ಸ್ ಮುಕ್ತವಾಗಿಸಲು ಸಿಸಿಬಿ ಪೊಲೀಸರು ಹಗಲಿರುಳು ಕಾರ್ಯಾಚರಣೆ ನಡೆಸುತ್ತಿದ್ದು, ಚೂಡಿದಾರ್ ಮೂಲಕ ಡ್ರಗ್ಸ್ ಸಾಗಿಸುತ್ತಿದ್ದ ಈ ಹೊಸ ಐಡಿಯಾವನ್ನು ಈಗ ಬಟಾಬಯಲು ಮಾಡಿದ್ದಾರೆ.


