ಸದ್ಯ ಸ್ಮೃತಿ ಮಂದಾನಾ ಅವರು ಧರಿಸಿರುವ ಜರ್ಸಿ ನೋಡಲು ಅಚ್ಚಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಜರ್ಸಿಯಂತೆಯೇ ಇದೆ. ಇದನ್ನು ನೋಡಿದ ಅಭಿಮಾನಿಗಳು, ನಮ್ಮ ಕ್ವೀನ್ ಆರ್‌ಸಿಬಿಗೆ ಕೈಕೊಟ್ಟು ಎಲ್‌ಎಸ್‌ಜಿ ಸೇರಿಬಿಟ್ರಾ? ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರು: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಮತ್ತು ಆರ್‌ಸಿಬಿ (RCB) ತಂಡದ ನಾಯಕಿ ಸ್ಮೃತಿ ಮಂದಾನಾ ಅವರ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸ್ಮೃತಿ ಮಂದಾನಾ ಧರಿಸಿರುವ ಹೊಸ ಜರ್ಸಿ ನೋಡಿದ ಆರ್‌ಸಿಬಿ ಅಭಿಮಾನಿಗಳು ಒಂದು ಕ್ಷಣ ಶಾಕ್ ಆಗಿದ್ದಾರೆ. ಅದಕ್ಕೆ ಕಾರಣ ಆ ಜರ್ಸಿಯ ವಿನ್ಯಾಸ ಮತ್ತು ಬಣ್ಣ!

ಎಲ್‌ಎಸ್‌ಜಿ ಜರ್ಸಿಯಲ್ಲಿ ಸ್ಮೃತಿ?

ಸದ್ಯ ಸ್ಮೃತಿ ಮಂದಾನಾ ಅವರು ಧರಿಸಿರುವ ಜರ್ಸಿ ನೋಡಲು ಅಚ್ಚಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಜರ್ಸಿಯಂತೆಯೇ ಇದೆ. ಇದನ್ನು ನೋಡಿದ ಅಭಿಮಾನಿಗಳು, ನಮ್ಮ ಕ್ವೀನ್ ಆರ್‌ಸಿಬಿಗೆ ಕೈಕೊಟ್ಟು ಎಲ್‌ಎಸ್‌ಜಿ ಸೇರಿಬಿಟ್ರಾ? ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಅಭಿಮಾನಿಗಳೇ ನೆಮ್ಮದಿಯಿಂದಿರಿ, ಸ್ಮೃತಿ ಮಂದಾನಾ ಆರ್‌ಸಿಬಿ ಬಿಟ್ಟಿಲ್ಲ. ಅವರು ಈ ಜರ್ಸಿ ಧರಿಸಿರುವುದು ಇಂಗ್ಲೆಂಡ್‌ನಲ್ಲಿ ನಡೆಯಲಿರುವ 'ದಿ ಹಂಡ್ರೆಡ್' (The Hundred) ಟೂರ್ನಿಗಾಗಿ! The Hundred ಟೂರ್ನಿಯಲ್ಲಿ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಒಂದು ಫ್ರಾಂಚೈಸಿ ಆಗಿದೆ. ಈ ಫ್ರಾಂಚೈಸಿಯ ಮಾಲೀಕ ಸಂಜೀವ್ ಗೋಯೆಂಕಾ ಅವರೇ ಆಗಿದ್ದಾರೆ. ಎಲ್‌ಎಸ್‌ಜಿ ಫ್ರಾಂಚೈಸಿಯ ಸಹೋದರ ಫ್ರಾಂಚೈಸಿ ಆಗಿದೆ.

ಏನಿದು ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್?

ಇಂಗ್ಲೆಂಡ್‌ನ ಪ್ರತಿಷ್ಠಿತ 100 ಎಸೆತಗಳ ಈ ಟೂರ್ನಿಯಲ್ಲಿ ಸ್ಮೃತಿ ಮಂದಾನಾ ಈ ಬಾರಿ 'ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್' (Manchester Super Giants) ತಂಡದ ಪರ ಆಡಲಿದ್ದಾರೆ. ಈ ಹಿಂದೆ ಈ ತಂಡದ ಹೆಸರು ಮ್ಯಾಂಚೆಸ್ಟರ್ ಒರಿಜಿನಲ್ಸ್ ಎಂದಿತ್ತು. ಆದರೆ 2025ರ ನಂತರ ಭಾರತದ ಸಂಜೀವ್ ಗೋಯೆಂಕಾ ಗ್ರೂಪ್ (ಲಕ್ನೋ ಸೂಪರ್ ಜೈಂಟ್ಸ್ ಮಾಲೀಕರು) ಈ ತಂಡದ ಪ್ರಮುಖ ಪಾಲುದಾರಿಕೆಯನ್ನು ಖರೀದಿಸಿದೆ.

ಈ ತಂಡವು ಈಗ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡರ್ಬನ್ ಸೂಪರ್ ಜೈಂಟ್ಸ್ ಕುಟುಂಬದ ಭಾಗವಾಗಿದೆ. ಮಾಲೀಕರು ಒಬ್ಬರೇ ಆಗಿರುವುದರಿಂದ ಮ್ಯಾಂಚೆಸ್ಟರ್ ತಂಡದ ಜರ್ಸಿಯೂ ಕೂಡ ಎಲ್‌ಎಸ್‌ಜಿ ಜರ್ಸಿಯನ್ನೇ ಹೋಲುತ್ತಿದೆ. ಇದೇ ಕಾರಣಕ್ಕೆ ಆರ್‌ಸಿಬಿ ಅಭಿಮಾನಿಗಳು ಗೊಂದಲಕ್ಕೀಡಾಗಿದ್ದರು. ಈ ಟೂರ್ನಿಯಲ್ಲಿ ಸ್ಮೃತಿ ಮಂದಾನಾ ಕೇವಲ ಆಟಗಾರ್ತಿಯಾಗಿ ಮಾತ್ರವಲ್ಲದೆ, ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡದ ಉಪನಾಯಕಿಯಾಗಿಯೂ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕಿ ಮೆಗ್ ಲ್ಯಾನಿಂಗ್ ಅವರೊಂದಿಗೆ ಮಂದಾನಾ ಇನ್ನಿಂಗ್ಸ್ ಆರಂಭಿಸಲಿದ್ದು, ಈ ಜೋಡಿಯ ಮೇಲೆ ತಂಡವು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.

ಲಾರ್ಡ್ಸ್‌ನಲ್ಲಿ ಮಿಂಚಿದ್ದ ಸ್ಮೃತಿ

ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಮೈದಾನದಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಸ್ಮೃತಿ ಮಂದಾನಾ ಅದ್ಭುತ ಫಾರ್ಮ್ ಪ್ರದರ್ಶಿಸಿದ್ದರು. ಎರಡೂ ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದ ಅವರು, ಈಗ ಅದೇ ಲಯವನ್ನು 100 ಎಸೆತಗಳ ಟೂರ್ನಿಯಲ್ಲೂ ಮುಂದುವರಿಸಲು ಸಜ್ಜಾಗಿದ್ದಾರೆ. ಒಟ್ಟಿನಲ್ಲಿ, ಸ್ಮೃತಿ ಮಂದಾನಾ ಲಕ್ನೋ ಜರ್ಸಿಯಂತಹ ಬಟ್ಟೆ ಧರಿಸಿರುವುದು ಇಂಗ್ಲೆಂಡ್‌ನಲ್ಲಿ ಆಡಲು ಮಾತ್ರ. ಐಪಿಎಲ್ ಅಥವಾ ಡಬ್ಲ್ಯೂಪಿಎಲ್‌ನಲ್ಲಿ ಅವರು ಎಂದಿಗೂ ಆರ್‌ಸಿಬಿಯ 'ರಾಣಿ'ಯಾಗಿಯೇ ಮುಂದುವರಿಯಲಿದ್ದಾರೆ!

Scroll to load tweet…