ನಾನೇ 24 ಲಕ್ಷ ರೂ ಕೊಟ್ಟು ಖರೀದಿಸಿದ್ದೇನೆ, ದುಬಾರಿ ಕಾರ್ಟಿಯರ್ ವಾಚ್ ಟೀಕೆಗೆ ಡಿಕೆಶಿ ಸ್ಪಷ್ಟನೆ , ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರು ಸೇಮ್ ಟು ಸೇಮ್ 43 ಲಕ್ಷ ರೂಪಾಯಿ ವಾಚ್ ಕಟ್ಟಿದ್ದಾರೆ ಅನ್ನೋ ಟೀಕೆಗೆ ಡಿಸಿಎಂ ಉತ್ತರಿಸಿದ್ದಾರೆ.
ಬೆಂಗಳೂರು (ಡಿ.03) ಕರ್ನಾಟಕ ರಾಜಕೀಯದಲ್ಲಿ ಕುರ್ಚಿ ಗುದ್ದಾಟಕ್ಕೆ ಒಂದು ಹಂತದ ಬ್ರೇಕ್ ಬಿದ್ದರೂ ತೆರೆ ಮರೆ ಕಸರತ್ತು ನಡೆಯುತ್ತಿದೆ. ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪ್ರಮುಖ ನಾಯಕ ಕೆಸಿ ವೇಣುಗೋಪಾಲ್ ಜೊತೆ ಮಂಗಳೂರಿನಲ್ಲಿ ಸಭೆ ನಡೆಸಿದರೆ, ಇತ್ತ ಡಿಕೆ ಶಿವಕುಮಾರ್ ಇದೀಗ ದೆಹಲಿಗೆ ತೆರಳಿದ್ದಾರೆ. ಇದರ ನಡುವೆ ರಾಜ್ಯದಲ್ಲಿ ಹೊಸದಾಗಿ ಹುಟ್ಟಿಕೊಂಡ ದುಬಾರಿ ವಾಚ್ ಟೀಕೆಗೆ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಡಿಕೆ ಶಿವಕುಮಾರ್ ನಿವಾಸದಲ್ಲಿ ಡಿಸೆಂಬರ್ 2ರಂದು ನಡೆದ ಬ್ರೇಕ್ ಫಾಸ್ಟ್ ಮೀಟಿಂಗ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸೇಟ್ ಟು ಸೇಮ್ ವಾಚ್ ಕಟ್ಟಿ ಗಮನಸೆಳೆದಿದ್ದರು. ಕಾರ್ಟಿಯರ್ ಬ್ರ್ಯಾಂಡ್ ವಾಚ್ ಬೆಲೆ 43 ಲಕ್ಷ ರೂಪಾಯಿ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಇಂದು ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ನಾನೇ 24 ಲಕ್ಷ ರೂಪಾಯಿ ಕೊಟ್ಟು ಖರೀದಿಸಿದ ವಾಚ್ ಇದು ಎಂದಿದ್ದಾರೆ.
ನನ್ನದೇ ಕ್ರೆಡಿಟ್ ಕಾರ್ಡ್ ಕೊಟ್ಟು ಖರೀದಿಸಿದ್ದೇನೆ
ದುಬಾರಿ ವಾಚ್ ಕುರಿತು ಬಿಜೆಪಿ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಈ ಕುರಿತು ಮಾತನಾಡಿದ ಡಿಕೆ ಶಿವಕುಮಾರ್ ಇದು ನನ್ನ ಗಡಿಯಾರ. ನಾನೇ ಖರೀದಿ ಮಾಡಿದ್ದೇನೆ. ನನ್ನ ಕ್ರೆಡಿಟ್ ಕಾರ್ಡ್ ನೀಡಿ 24 ಲಕ್ಷ ರೂಪಾಯಿ ಮೌಲ್ಯದ ವಾಚ್ ಖರೀದಿಸಿದ್ದೇನೆ. ಇದರಲ್ಲಿ ಮುಚ್ಚು ಮರೆ ಏನೂ ಇಲ್ಲ. ನನ್ನ ಚುನಾವಣೆ ಅಫಿಡವಿಟ್‌ನಲ್ಲೂ ಇದನ್ನು ತೋರಿಸಿದ್ದೇನೆ. ನೀವು ಬೇಕಾದರೆ ಪರಿಶೀಲೆನೆ ಮಾಡಬಹುದು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸಿದ್ದರಾಮಯ್ಯಗೆ ವಾಚ್ ಖರೀದಿ ಮಾಡುವ ತಾಖತ್ತು ಇದೆ
ದುಬಾರಿ ವಾಚ್ ಕುರಿತು ಸಿದ್ದರಾಮಯ್ಯನವರನ್ನೂ ಟೀಕಿಸಲಾಗುತ್ತಿದೆ ಎಂಬ ಆರೋಪಗಳಿಗೆ ಉತ್ತರಿಸಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯರನ್ನು ಬಿಜೆಪಿ ಗುರಿಯಾಗಿಸಿರುವ ವಿಚಾರ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯನವರಿಗೆ ವಾಚ್ ಹಾಕಿಕೊಳ್ಳುವ ಅಧಿಕಾರ ಇದೆ, ಇಷ್ಟೇ ಅಲ್ಲ ವಾಚ್ ಖರೀದಿಸುವ ತಾಖತ್ತು ಕೂಡ ಇದೆ ಎಂದಿದ್ದಾರೆ.
ನನ್ನ ತಂದೆ ಬಿಟ್ಟು ಹೋದ 7 ವಾಚ್
ನನ್ನ ತಂದೆ 7 ವಾಚ್ ಬಿಟ್ಟು ಹೋಗಿದ್ದಾರೆ. ಈ ವಾಚ್‌ಗಳನ್ನು ನಾನು ಅಥವಾ ನನ್ನ ಸಹೋದರ ಹಾಕಿಕೊಳ್ಳಬೇಕು. ಇದರ ಜೊತೆಗೆ ನಾನು ಖರೀದಿಸಿದ ವಾಚ್‌ಗಳಿವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಖಾಸಗಿ ಕಾರ್ಯಕ್ರಮದ ನಿಮಿತ್ತ ದೆಹಲಿಗೆ
ದೆಹಲಿಯಲ್ಲಿ ಖಾಸಗಿ ಕಾರ್ಯಕ್ರಮದ ನಿಮಿತ್ತ ತೆರಳುತ್ತಿದ್ದೇನೆ. ಡಿಸೆಂಬರ್ 14ರಂದು ವೋಟ್ ಚೋರಿ ವಿರುದ್ಧ ಪ್ರತಿಭಟನೆ ಇದೆ. ಪ್ರತಿ ಜಿಲ್ಲೆಯಿಂದ 300ಜನರನ್ನ ಕರೆದುಕೊಂಡು ಹೋಗೇಕಿದೆ. ಸದ್ಯ ದೆಹಲಿ ಪ್ರವಾಸಸಂಪೂರ್ಣ ಖಾಸಗಿ ಬೇಟಿಯಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಇದೇ ವೇಳೆ ಮಂಗಳೂರಿನಲ್ಲಿ ಕೆಸಿ ವೇಣುಗೋಪಾಲ್ ಹಾಗೂ ಸಿದ್ದರಾಮಯ್ಯ ಭೇಟಿ ಕುರಿತು ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ವೇಣುಗೋಪಾಲ್ ಭೇಟಿ ಮಾಡಿದ್ರೆ ತಪ್ಪೇನು, ವೇಣುಗೋಪಾಲ್ ಅವರನ್ನು ಭೇಟಿ ಮಾಡಲಿ,ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿ. ಇದರ ನಡುವೆ ಅಭಿಮಾನಿಗಳು ಘೋಷಣೆ ಕೂಗಿರಬಬಹುದು. ಕೆಲವರು ಮೋದಿ ಅಂತಾರೆ, ಕೆಲವರು ಡಿಕೆ ಎನ್ನುತ್ತಾರೆ, ಕೆಲವರು ರಾಹುಲ್ ಅಂತಾರೆ ,ಕೆಲವರು ಸಿದ್ದು ಎನ್ನುತ್ತಾರೆ. ಅದರಲ್ಲಿ ತಪ್ಪೇನು..? ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.


