ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಯನ್ನು ಗುರಿಯಾಗಿಸಿಕೊಂಡಿದ್ದ ಡ್ರಗ್ ಪೆಡ್ಲರ್‌ಗಳ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ, ಒಟ್ಟು 28 ಕೋಟಿ ರೂಪಾಯಿ ಮೌಲ್ಯದ ಎಂಡಿಎಂಎ ಮತ್ತು ಹೈಡ್ರೋ ಗಾಂಜಾವನ್ನು ವಶಪಡಿಸಿಕೊಂಡು, ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ.
ಬೆಂಗಳೂರು (ಡಿ.3): ಹೊಸ ವರ್ಷಾಚರಣೆಯ ನೆಪದಲ್ಲಿ ಯುವ ಜನತೆಗೆ 'ಕಿಕ್' ಏರಿಸಲು ಸಿದ್ಧರಾಗಿದ್ದ ಡ್ರಗ್ ಪೆಡ್ಲರ್‌ಗಳಿಗೆ ಸಿಸಿಬಿ (CCB) ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ. ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಬರೋಬ್ಬರಿ 28 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೋಟಿ ಮೌಲ್ಯದ MDMA ಸೀಜ್:
ಖಚಿತ ಮಾಹಿತಿಯೊಂದಿಗೆ ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 20 ಕೋಟಿ ರೂ. ಮೌಲ್ಯದ 10 ಕೆಜಿ ಎಂಡಿಎಂಎ (MDMA) ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ. ಈ ಕಾರ್ಯಾಚರಣೆ ವೇಳೆ ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ.
ಟೂರಿಸ್ಟ್ ವೀಸಾದಡಿ ಭಾರತಕ್ಕೆ ಬಂದು ಡ್ರಗ್ಸ್ ಮಾರಾಟ:
ನ್ಯಾನ್ಸಿ ತಾಂಜೇನಿಯಾ ಮೂಲದ ಮಹಿಳೆ ಕಳೆದ ಮೂರು ವರ್ಷಗಳ ಹಿಂದೆ ಟೂರಿಸ್ಟ್ ವೀಸಾದಡಿ ಭಾರತಕ್ಕೆ ಬಂದಿದ್ದವಳು ವಾಪಸ್ ಹೋಗದೇ ಸಂಪಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದುಕೊಂಡು ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದಳು. ಈಕೆಗೆ ಸಾಥ್ ಕೊಡುತ್ತಿದ್ದ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.
ಇನ್ನೋರ್ವ ನೈಜೀರಿಯಾ ಪ್ರಜೆ ಎಮುನಲ್ ಅರೆಂಜಿ ಇಡಿಕೋ ನಾಲ್ಕು ವರ್ಷದ ಹಿಂದೆ ಬ್ಯುಸಿನೆಸ್ ವಿಸಾದಡಿಯಲ್ಲಿ ಬಂದಿದ್ದವವನು ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉಳಿದುಕೊಂಡು ಪಕ್ಕ ಕಾರ್ಯತಂತ್ರದ ಮೂಲಕ ಡ್ರಗ್ಸ್ ಮಾರುತ್ತಿದ್ದ.
ಈ ಇಬ್ಬರು ಆರೋಪಿಗಳು ದೆಹಲಿಯಿಂದ ಡ್ರಗ್‌ಗಳನ್ನು ತರಿಸಿ ಬೆಂಗಳೂರಿನ ತಮ್ಮ ಮನೆಗಳಲ್ಲಿ ಶೇಖರಿಸಿಟ್ಟಿದ್ದರು. ಹೊಸ ವರ್ಷದ ಸಂದರ್ಭದಲ್ಲಿ ಸ್ಥಳೀಯರು, ವಿದ್ಯಾರ್ಥಿಗಳು ಹಾಗೂ ಐಟಿ-ಬಿಟಿ ಉದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಇವರು ಯೋಜನೆ ರೂಪಿಸಿದ್ದರು. ಆದರೆ ಸಿಸಿಬಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಒಟ್ಟು 28 ಕೋಟಿ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ಇದರ ಜೊತೆಗೆ, ಚಾಮರಾಜಪೇಟೆಯ ಪೋಸ್ಟ್ ಆಫೀಸ್‌ನಲ್ಲಿ ಪರಿಶೀಲನೆ ನಡೆಸುವ ವೇಳೆ ವಿದೇಶದಿಂದ ಬಂದಿದ್ದ 8 ಕೋಟಿ ಮೌಲ್ಯದ 8 ಕೆಜಿ ಹೈಡ್ರೋ ಗಾಂಜಾ ಸಹ ಪತ್ತೆಯಾಗಿದ್ದು ತನಿಖೆ ಮುಂದುವರಿದಿದೆ.


