2017ರಲ್ಲಿ ಅಮೆರಿಕದಿಂದ ಮುಂಬೈಗೆ ಹೊರಟಿದ್ದ ವಿಮಾನದಲ್ಲಿ ತಾಯಿ ಮತ್ತು ಮಗುವನ್ನು 10 ಗಂಟೆಗಳ ಕಾಲ ಆಹಾರ, ನೀರು ನೀಡದೆ ಕೂಡಿಹಾಕಲಾಗಿತ್ತು. ಈ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ದೆಹಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮಹತ್ವದ ತೀರ್ಪು ನೀಡಿದೆ. ಏನದು ಸ್ಟೋರಿ ಓದಿ..
ನವದೆಹಲಿ: ವಿಮಾನದಲ್ಲಿ 10 ಗಂಟೆ ಕಾಲ ತಾಯಿ ಮಗುವನ್ನು ಕೂಡಿ ಹಾಕಿ ನರಕ ದರ್ಶನ ನೀಡಿದ್ದ ಪ್ರಕರಣದಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮಹತ್ವದ ತೀರ್ಪು ನೀಡಿದೆ. ವಿಮಾನ ಪ್ರಯಾಣಿಕರ ಹಕ್ಕುಗಳು ಮತ್ತು ಸುರಕ್ಷತೆಯ ದೃಷ್ಟಿಯಿಂದ ಕಠಿಣ ನಿರ್ಧಾರ ತೆಗೆದುಕೊಂಡು ತಪ್ಪಿತಸ್ಥ ಸಂಸ್ಥೆಗೆ ಎಚ್ಚರಿಕೆ ನೀಡಿದೆ.
ಪ್ರಕರಣ ಏನು?
ಘಟನೆ ನಡೆದಿರೋದು 2017ರಲ್ಲಿ. ಮಹಿಳೆಯೊಬ್ಬರು ಅಮೆರಿಕದ ಲಾಸ್ ಏಂಜಲೀಸ್‌ನಿಂದ ಬೀಜಿಂಗ್ ಮಾರ್ಗವಾಗಿ ಮುಂಬೈಗೆ ಬರಲು ಬಿಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಮಾಡಿದ್ದರು. ಜುಲೈ 19 ರಂದು ಲಾಸ್ ಏಂಜಲೀಸ್ ವಿಮಾನ ನಿಲ್ದಾಣಕ್ಕೆ ಬಂದಾಗ ಬೋರ್ಡಿಂಗ್ ಪ್ರಕ್ರಿಯೆ 2 ಗಂಟೆ ತಡವಾಗಲಿದೆ ಎಂದು ತಿಳಿಸಲಾಗಿತ್ತು. ಬಳಿಕ ವಿಮಾನದೊಳಗೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗಿತ್ತು. ಆದರೆ ಪ್ರಯಾಣಿಕರು ವಿಮಾನ ಏರಿದರೂ ಟೇಕ್ ಆಫ್ ಆಗಲಿಲ್ಲ. ರನ್‌ವೇಯಲ್ಲೇ ಸುಮಾರು 10 ಗಂಟೆಗಳ ಕಾಲ ನಿಲ್ಲಿಸಲಾಗಿತ್ತು. ಪ್ರಯಾಣಿಕರಿಗೆ ಕನಿಷ್ಠ ಕುಡಿಯುವ ನೀರು ಅಥವಾ ಆಹಾರ ಕೂಡ ಸರಿಯಾಗಿ ನೀಡಲಿಲ್ಲ ಎಂಬ ಆರೋಪ ಕೇಳಿಬಂದಿತ್ತು.
ಅಷ್ಟೇ ಅಲ್ಲದೇ ಮಹಿಳೆಯ ಜತೆಗಿದ್ದ ಪುಟ್ಟ ಕಂದಮ್ಮನಿಗೆ ಹಾಲಿನ ಪುಡಿ ಮಿಕ್ಸ್ ಮಾಡಲು ಸ್ವಲ್ಪ ಬಿಸಿನೀರು ಕೊಡಿ ಎಂದು ತಾಯಿ ಕೇಳಿಕೊಂಡರೂ ವಿಮಾನದ ಸಿಬ್ಬಂದಿ ನೀರು ಕೊಟ್ಟಿರಲಿಲ್ಲ ಎನ್ನಲಾಗಿದೆ. ಹಸುಗೂಸು ಹಸಿವು-ಬಾಯಾರಿಕೆಯಿಂದ ಅಳುತ್ತಿದ್ದರೂ ಸಿಬ್ಬಂದಿ ಕರುಣೆ ತೋರಲಿಲ್ಲ. ಕೊನೆಗೆ 10 ಗಂಟೆಗಳ ನಂತರ ವಿಮಾನ ರದ್ದಾಗಿದೆ ಎಂದು ಘೋಷಿಸಿ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು.
ಪ್ರಕರಣ ಇಷ್ಟಕ್ಕೆ ನಿಲ್ಲಲಿಲ್ಲ. ವಿಮಾನ ರದ್ದಾದ ಮೇಲಾದರೂ ಸಂಸ್ಥೆಯು ನೆರವಿಗೆ ಬರಲಿಲ್ಲ. ವಿಮಾನ ನಿಲ್ದಾಣದಲ್ಲೂ ತಾಯಿ ಮತ್ತು ಮಗುವಿಗೆ ತಂಗಲು ಯಾವುದೇ ವಸತಿ ವ್ಯವಸ್ಥೆ ಮಾಡಲಿಲ್ಲ. ಸರಿಯಾದ ಆಹಾರ ಅಥವಾ ನೆರವು ನೀಡದೆ ಮತ್ತೆ ಹಲವು ಗಂಟೆಗಳ ಕಾಲ ಅವರನ್ನು ವಿಮಾನ ನಿಲ್ದಾಣದಲ್ಲೇ ಕಾಯುವಂತೆ ಮಾಡಲಾಯಿತು. ಇದರಿಂದ ತೀವ್ರ ನೊಂದ ಮಹಿಳೆ ವಿಮಾನಯಾನ ಸಂಸ್ಥೆಯ ವಿರುದ್ಧ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು.
ಪ್ರಕರಣದ ವಿಚಾರಣೆ ವೇಳೆ ವಿಮಾನ ಸಂಸ್ಥೆಯು ತನ್ನ ತಪ್ಪನ್ನು ತಿದ್ದಿಕೊಳ್ಳಲು ಪ್ರಯತ್ನಿಸಿತ್ತು. ಆ ದಿನ ಮಳೆ ಮತ್ತು ಕೆಟ್ಟ ಹವಾಮಾನ ಇತ್ತು. ಇದು ನಮ್ಮ ಕೈ ಮೀರಿದ ಪರಿಸ್ಥಿತಿಯಾಗಿದ್ದರಿಂದ ಪ್ರಯಾಣಿಕರಿಗೆ ಪರಿಹಾರ ನೀಡಲು ಬರುವುದಿಲ್ಲ ಎಂದು ಸಂಸ್ಥೆ ವಿಚಾರಣೆ ವೇಳೆ ವಾದಿಸಿತ್ತು. ಪ್ರಕರಣವನ್ನು ಆಲಿಸಿದ ದೆಹಲಿ ಗ್ರಾಹಕರ ಆಯೋಗವು.. ಆ ದಿನದ ಹವಾಮಾನ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿದೆ. ಆ ವರದಿಯ ಪ್ರಕಾರ.. ವಿಮಾನವನ್ನು ದಿಢೀರನೆ ರದ್ದುಪಡಿಸುವಂತಹ ಅಥವಾ ಪ್ರಯಾಣಿಕರನ್ನು 10 ಗಂಟೆಗಳ ಕಾಲ ಕೂಡಿಹಾಕುವಂತಹ ಯಾವುದೇ ಹವಾಮಾನ ಇರಲಿಲ್ಲ ಎಂಬುದು ಗೊತ್ತಾಗಿದೆ.
ಸಂಸ್ಥೆಯ ಬೇಜವಾಬ್ದಾರಿ ಮತ್ತು ಕಳಪೆ ಸೇವೆಯಿಂದ ತಾಯಿ ಹಾಗೂ ಹಸುಗೂಸು ಸಂಕಷ್ಟ ಅನುಭವಿಸಿದ್ದಾರೆ ಎಂದು ಆಯೋಗ ತೀರ್ಮಾನಿಸಿತು. ಅಂತಿಮವಾಗಿ ಪರಿಹಾರವಾಗಿ ₹1 ಲಕ್ಷ ಹಾಗೂ ಕಾನೂನು ಹೋರಾಟದ ವೆಚ್ಚವಾಗಿ ₹50,000 ಸೇರಿದಂತೆ ಒಟ್ಟು ₹1.5 ಲಕ್ಷ ರೂಪಾಯಿಯನ್ನು ನಾಲ್ಕು ವಾರಗಳ ಒಳಗಾಗಿ ನೀಡುವಂತೆ ವಿಮಾನಯಾನ ಸಂಸ್ಥೆಗೆ ಆದೇಶಿಸಿದೆ.


