ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಪ್ರದೂಷ್ ಅವರ ಮಾಫಿ ಸಾಕ್ಷಿ ಹೇಳಿಕೆ ದಾಖಲಾತಿ ಪ್ರಕ್ರಿಯೆ ಆರಂಭವಾಗಿದೆ. ಇದನ್ನು ತಡೆಯಲು ನಟ ದರ್ಶನ್ ಪರ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ರಜೆ ಅರ್ಜಿ ಸಲ್ಲಿಸಿದ್ದಾರೆ. ಕ್ರಾಸ್ ಎಕ್ಸಾಮಿನೇಷನ್ ವೇಳೆ ದರ್ಶನ್ ಖುದ್ದು ಹಾಜರಾಗಲು ಹೈಕೋರ್ಟ್ ಅವಕಾಶ ನೀಡಿದೆ.

ಬೆಂಗಳೂರು: ರೇಣುಕಾಸ್ವಾಮಿ ಕೊ*ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪ್ರದೂಷ್ ಅವರ 'ಮಾಫಿ ಸಾಕ್ಷಿ' ಹೇಳಿಕೆ ದಾಖಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಇಂದಿನ ಪ್ರಕ್ರಿಯೆ ಪೂರ್ಣಗೊಂಡು ಬಾಕಿ ವಿಚಾರಣೆಯನ್ನು ನಾಳೆಗೆ (ಮಂಗಳವಾರ) ಮುಂದೂಡಲಾಗಿದೆ. ಇದೇ ವೇಳೆ, ಪ್ರದೂಷ್ ಹೇಳಿಕೆ ದಾಖಲಾತಿಗೆ ತಡೆ ನೀಡುವಂತೆ ಕೋರಿ ನಟ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ರಜೆ ಅರ್ಜಿ (SLP) ಸಲ್ಲಿಸಿದ್ದಾರೆ.

ಇಂದು ಅರ್ಧ ಹೇಳಿಕೆ ದಾಖಲು

ಪ್ರಕರಣದ ಬೆಳವಣಿಗೆಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ, "ಇಂದು ನ್ಯಾಯಾಲಯದಲ್ಲಿ ಪ್ರದೂಷ್ ಅವರ ಮಾಫಿ ಸಾಕ್ಷಿ ಹೇಳಿಕೆಯ ಅರ್ಧ ಭಾಗವನ್ನು ದಾಖಲಿಸಿಕೊಳ್ಳಲಾಗಿದೆ. ವಿಶೇಷ ಸರ್ಕಾರಿ ಅಭಿಯೋಜಕರು (SPP) ಮುಖ್ಯ ವಿಚಾರಣೆ ನಡೆಸಿದ್ದಾರೆ. ಉಳಿದ ಹೇಳಿಕೆ ದಾಖಲಾತಿ ಪ್ರಕ್ರಿಯೆ ನಾಳೆ ಮುಂದುವರೆಯಲಿದೆ ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದರ್ಶನ್ ಪಡೆ

ಪ್ರದೂಷ್ ಹೇಳಿಕೆ ದಾಖಲಿಸುವುದನ್ನು ತಡೆಯಲು ವಿಚಾರಣಾ ನ್ಯಾಯಾಲಯ ಹಾಗೂ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತಾದರೂ, ನ್ಯಾಯಾಲಯಗಳು ಅದನ್ನು ಪುರಸ್ಕರಿಸಿರಲಿಲ್ಲ. ಹೀಗಾಗಿ ದರ್ಶನ್ ಪರ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಎಲ್‌ಪಿ (SLP) ಸಲ್ಲಿಕೆ ಮಾಡಿದ್ದಾರೆ.

"ನಾವು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಆದರೆ, ಇನ್ನು ಲಿಸ್ಟ್ ಆಗದಿರುವುದರಿಂದ ವಿಚಾರಣೆಗೆ ಬಂದಿಲ್ಲ. ಒಂದು ವೇಳೆ ಸುಪ್ರೀಂ ಕೋರ್ಟ್‌ನಲ್ಲಿ ನಮ್ಮ ಪರವಾಗಿ ಆದೇಶ ಅಥವಾ ತಡೆಯಾಜ್ಞೆ ಬಂದರೆ, ಅದು ಕೆಳಹಂತದ ನ್ಯಾಯಾಲಯದಲ್ಲಿ ದಾಖಲಾಗುತ್ತಿರುವ ಈ ಹೇಳಿಕೆಯ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಹಷ್ಮತ್ ಪಾಷಾ ವಿವರಣೆ ನೀಡಿದ್ದಾರೆ.

ಕ್ರಾಸ್ ಎಕ್ಸಾಮಿನೇಷನ್‌ಗೆ ದರ್ಶನ್ ಖುದ್ದು ಹಾಜರಿಗೆ ಅವಕಾಶ

ತಮ್ಮ ಕಕ್ಷಿದಾರರಾದ ನಟ ದರ್ಶನ್ ಅವರ ಕಾನೂನುಬದ್ಧ ರಕ್ಷಣೆಗೆ ಅಗತ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವುದಾಗಿ ತಿಳಿಸಿದ ವಕೀಲರು, ಪ್ರದೂಷ್ ಅವರ ವಿಚಾರಣೆ ಮತ್ತು ಕ್ರಾಸ್ ಎಕ್ಸಾಮಿನೇಷನ್ ಸಮಯದಲ್ಲಿ ದರ್ಶನ್ ಅವರು ಖುದ್ದು ಕೋರ್ಟ್‌ಗೆ ಹಾಜರಾಗಲು ಹೈಕೋರ್ಟ್ ಅವಕಾಶ ಕಲ್ಪಿಸಿದೆ ಎಂದು ಹೇಳಿದರು.

ಇನ್ನು ಇಂದು ಮಾಫಿ ಸಾಕ್ಷಿ ಹೇಳಿಕೆಯಲ್ಲಿ ಪ್ರದೂಷ್ ತಮ್ಮಿಬ್ಬರ ನಡುವೆ ಪರಿಚಯ ಹೇಗೆ? ಗೆಳೆತನ ಬೆಳೆದಿದ್ದು ಹೇಗೆ? ಎಷ್ಟು ವರ್ಷದ ಗೆಳೆತನ? ಎಂಬೆಲ್ಲಾ ವಿಚಾರವನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ.