ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಿ ಬದಲಾಗಿದ್ದು, ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ್ದಾರೆ. ಈ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿದ್ದ ನಟ ದರ್ಶನ್ ತಲೆ ಮೇಲೆ ಕೈಹೊತ್ತು ಕುಳಿತಿದ್ದ ಫೋಟೋ ವೈರಲ್ ಆಗಿದೆ. ಪ್ರದೋಷ್ ಹೇಳಿಕೆ ಮುಂದೂಡಲು ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.
ನಟ ದರ್ಶನ್, ಅಭಿಮಾನಿಗಳ ಪಾಲಿನ 'ಡಿ-ಬಾಸ್', ಚಿತ್ರರಂಗದ ಸುಲ್ತಾನ್ ಎಂದೇ ಮೆರೆದಿದ್ದ ನಟ ದರ್ಶನ್ ಇಂದು ವಿಡಿಯೋ ಕಾನ್ಫರೆನ್ಸ್ ಪರದೆಯ ಮುಂದೆ ಅಕ್ಷರಶಃ ಮೌನಿಯಾಗಿದ್ದರು. ತನ್ನದೇ ನೆರಳಿನಂತಿದ್ದ ಆಪ್ತ ಗೆಳೆಯ ಪ್ರದೋಷ್, ಕೋರ್ಟ್‌ನಲ್ಲಿ ಮಾಫಿ ಸಾಕ್ಷಿಯಾಗಿ (ಅಪ್ರೂವರ್) ಬದಲಾಗಿ ತನಗೆದುರಾಗಿ ನಿಲ್ಲುತ್ತಿದ್ದಂತೆ ದರ್ಶನ್ ಆಘಾತಕ್ಕೆ ಒಳಗಾದರಾ ಎನ್ನುವ ಮಾತುಗಳನ್ನು ಅವರ ಪೋಟೋ ಸೃಷ್ಟಿಸಿದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಹಣೆಬರಹದ ಹಾಸ್ಯಕ್ಕೆ ಬೆಚ್ಚಿದ ದರ್ಶನ!
ನ್ಯಾಯಾಲಯದ ಸುದೀರ್ಘ ಪ್ರಕ್ರಿಯೆಗಳು ಸಾಗುತ್ತಿದ್ದಾಗ, ಹಣೆಬರಹದ ಕ್ರೂರ ಹಾಸ್ಯಕ್ಕೆ ಬೆಚ್ಚಿಬಿದ್ದವರಂತೆ ದರ್ಶನ್ ಕೈಗಳನ್ನು ತಲೆಯ ಮೇಲಿಟ್ಟುಕೊಂಡು ನಿರಾಶೆಯ ಕಡಲಲ್ಲಿ ಮುಳುಗಿದ್ದರು. ಕಾಲದ ಚಕ್ರ ಉರುಳಿ, ವೈಭವದ ದಿನಗಳೆಲ್ಲ ಕರಗಿಹೋಗಿ, ಕೇವಲ ಏಕಾಂಗಿತನ ಮತ್ತು ತೀವ್ರ ಹತಾಶೆ ಮಾತ್ರ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು.ಬೆಟ್ಟದಷ್ಟು ಆತ್ಮವಿಶ್ವಾಸ ಹೊತ್ತು ತಿರುಗುತ್ತಿದ್ದ ನಾಯಕ, ಇಂದು ವಿಧಿಯ ಆಟಕ್ಕೆ ಶರಣಾಗಿ ಅಸಹಾಯಕತೆಯಿಂದ ತಲೆ ತಗ್ಗಿಸಿ ಕುಳಿತಿದ್ದ ಆ ಒಂದು ದೃಶ್ಯದ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಕಣ್ಣಾಲಿಗಳು ಒದ್ದೆಯಾಗಿವೆ.
ಪ್ರಮುಖ ಬೆಳವಣಿಗೆ!
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಪ್ರದೋಷ್ ಅವರ ಕಾನೂನು ಪ್ರಕ್ರಿಯೆಯಲ್ಲಿ ಇಂದು ಅತ್ಯಂತ ಪ್ರಮುಖ ಬೆಳವಣಿಗೆಯಾಗಿದೆ. ಅಲ್ಲದೇ ಹಲವು ಬೆಳವಣಿಗೆಗಳು ಹಾಗೂ ವೈರಲ್ ಆದ ಪೋಟೋಗಳು ಅಭಿಮಾನಿಗಳಲ್ಲಿ ಹಾಗೂ ಚಿತ್ರ ರಂಗದಲ್ಲಿ ಆತಂಕ ಸೃಷ್ಟಿಸುವ ವಾತಾವರಣವನ್ನು ಸೃಷ್ಟಿಸಿವೆ. ಅದೇನು ಎನ್ನುವುದನ್ನು ನೋಡಿಕೊಂಡು ಬರೋಣ ಬನ್ನಿ.
ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲು!
ಈ ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿದ್ದ ಪ್ರದೋಷ್, ಸರ್ಕಾರಿ ಸಾಕ್ಷಿಯಾಗಿ (ಮಾಫಿ ಸಾಕ್ಷಿ) ಬದಲಾಗಲು ನ್ಯಾಯಾಲಯ ಅನುಮತಿ ನೀಡಿತ್ತು. ಅದರಂತೆ ಇಂದು ಬೆಂಗಳೂರಿನ ಸಿಸಿಎಚ್ 59ನೇ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ಆತನ ಅಧಿಕೃತ ಹೇಳಿಕೆ ದಾಖಲಿಸಿಕೊಳ್ಳುವ ಪ್ರಕ್ರಿಯೆ ನಿಗದಿಯಾಗಿದೆ.
ದರ್ಶನ್ ಅರ್ಜಿಗೆ ಹಿನ್ನಡೆ!
ಪ್ರದೋಷ್ ಹೇಳಿಕೆ ದಾಖಲಿಸುವುದನ್ನು ಒಂದು ವಾರ ಮುಂದೂಡಬೇಕೆಂದು ಕೋರಿ ನಟ ದರ್ಶನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ. ಈ ಪ್ರಕ್ರಿಯೆಯನ್ನು ತಡೆಯಲು ದರ್ಶನ್ ತಂಡ ನಡೆಸಿದ ಪ್ರಯತ್ನಗಳು ಯಶಸ್ವಿಯಾಗಿಲ್ಲ.ದರ್ಶನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರು: ಇಂದು ಪ್ರದೋಷ್‌ನನ್ನು ಜೈಲಿನಿಂದ ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆತರಲಾಗಿದ್ದು, ನಟ ದರ್ಶನ್ ಮತ್ತು ಪವಿತ್ರಾ ಗೌಡ ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ (VC) ಮೂಲಕ ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ.ಪ್ರದೋಷ್ ನೀಡುವ ಈ ಮಾಫಿ ಸಾಕ್ಷಿ ಹೇಳಿಕೆಯು ನಟ ದರ್ಶನ್ ಹಾಗೂ ಪವಿತ್ರಾ ಗೌಡ ಅವರಿಗೆ ಕಾನೂನಾತ್ಮಕವಾಗಿ ಮತ್ತಷ್ಟು ಸಂಕಷ್ಟ ತಂದಿಡಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.


