ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಿಜೆಪಿ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶಕ್ಕೆ ತೀರಾ ಕಡಿಮೆ ಜನ ಸೇರಿದ್ದು, ಧ್ರುವ್ ರಾಠಿ ಮತ್ತು ಪ್ರಕಾಶ್ ರಾಜ್‌ಗೆ ಮುಖಭಂಗವಾಗಿದೆ. ನಟಿ ರಚಿತಾ ರಾಮ್ ಹುಟ್ಟುಹಬ್ಬಕ್ಕೆ ಸೇರಿದಷ್ಟು ಜನ ಕೂಡ ಇಲ್ಲಿರಲಿಲ್ಲ ಟ್ರೋಲ್ ಮಾಡುತ್ತಿದ್ದಾರೆ.
ಬೆಂಗಳೂರು (ಅ.9): ಚುನಾವಣಾ ಆಯೋಗದ SIR ಪ್ರಕ್ರಿಯೆ ವಿರುದ್ಧ 'ಸಿಜೆಪಿ' (CJP) ಸಂಘಟನೆಯು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿದ್ದ 'ಪೀಪಲ್ಸ್ ಟ್ರಿಬ್ಯೂನಲ್' ಪ್ರತಿಭಟನಾ ಸಮಾವೇಶಕ್ಕೆ ನಿರೀಕ್ಷಿತ ಮಟ್ಟದ ಜನಬೆಂಬಲ ಸಿಗದೆ ಸಂಪೂರ್ಣ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಾಗತಿಕ ಮಟ್ಟದ ಪ್ರಸಿದ್ದ ಯೂಟ್ಯೂಬರ್ ಧ್ರುವ್ ರಾಠಿ, ನಟ-ಹೋರಾಟಗಾರ ಪ್ರಕಾಶ್ ರಾಜ್, ಸೌರವ್ ಘೋಷ್ ಹಾಗೂ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರಂತಹ ಪ್ರಮುಖ ಮುಖಗಳು ವೇದಿಕೆಯಲ್ಲಿದ್ದರೂ ಸಹ, ಪ್ರತಿಭಟನೆಯಲ್ಲಿ ಜನಸಂಖ್ಯೆ ತೀರಾ ವಿರಳವಾಗಿತ್ತು. ಇದೀಗ ಈ ವಿಚಾರವೇ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ನೆಟ್ಟಿಗರು ಪ್ರತಿಭಟನೆಯನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.
ಫ್ರೀಡಂ ಪಾರ್ಕ್‌ನಲ್ಲಿ ಸೇರಿದ ಜನರಿಗಿಂತ ಸ್ಯಾಂಡಲ್‌ವುಡ್ ನಟಿ, 'ಡಿಂಪಲ್ ಕ್ವೀನ್' ರಚಿತಾ ರಾಮ್ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಆರ್ ಆರ್ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಟ್ರೋಲ್ ಕಾಮೆಂಟ್‌ಗಳು
'ಬೆಂಗಳೂರಿನಲ್ಲಿ ಇಷ್ಟೆಲ್ಲ ಬಿಲ್ಡಪ್ ಕೊಟ್ಟು ಮಾಡಿದ ಈ ಪ್ರತಿಭಟನೆಗಿಂತ ನಮ್ಮ ನಟಿ ರಚಿತಾ ರಾಮ್ ಅವರ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಆರ್‌ಆರ್ ನಗರದಲ್ಲಿ (RR Nagar) ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಇಡೀ ಆರ್‌ಆರ್ ನಗರ ತುಂಬ ರಚಿತಾ ರಾಮ್ ಬ್ಯಾನರ್‌ಗಳೇ ರಾರಾಜಿಸಿದ್ದವು, ಅವರ ಕ್ರೇಜ್ ಮುಂದೆ ಈ ಪ್ರೊಟೆಸ್ಟ್ ಏನೂ ಅಲ್ಲ' ಎಂದು ರಚಿತಾ ರಾಮ್ ಅಭಿಮಾನಿಯೊಬ್ಬರು ಪ್ರತಿಭಟನೆಯನ್ನು ಟ್ರೋಲ್ ಮಾಡಿದ್ದಾರೆ.
'ಬೆಂಗಳೂರು ಹುಡುಗನಾಗಿ ನಾನು ಪಕ್ಕಾ ಬೆಟ್ ಕಟ್ಟಿ ಹೇಳ್ತೀನಿ, ಈ ಪ್ರತಿಭಟನೆಯಲ್ಲಿದ್ದ ಶೇ. 95 ರಷ್ಟು ಜನರು ಬೆಂಗಳೂರಿನವರೇ ಅಲ್ಲ. ಹೊರಗಡೆಯಿಂದ ಕರೆದುಕೊಂಡು ಬಂದಂತಿದ್ದಾರೆ. ಕೆಲವರಂತೂ 'ಫ್ರೀ ಪ್ಯಾಲೆಸ್ಟೈನ್' ಟೀ ಶರ್ಟ್ ಧರಿಸಿಕೊಂಡು ಬಂದಿದ್ದರು. ಇಲ್ಲಿನ ಜನ ಸಾಮಾನ್ಯರಿಗೆ ಈ ಹೋರಾಟದ ಬಗ್ಗೆ ಆಸಕ್ತಿಯೇ ಇಲ್ಲ' ಎಂದು ಸ್ಥಳೀಯರು ಕಮೆಂಟ್ ಮಾಡಿದ್ದಾರೆ.
'ವಾರದ ಸಾಮಾನ್ಯ ದಿನದಂದು (Week day) ಬೆಂಗಳೂರಿನಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿದ್ದೇ ಇವರ ಪ್ಲಾನಿಂಗ್ ಮತ್ತು ರಿಸರ್ಚ್ ಎಷ್ಟರ ಮಟ್ಟಿಗಿದೆ ಎಂಬುದನ್ನು ತೋರಿಸುತ್ತದೆ. ಜನರೇಕೆ ಕೆಲಸ ಬಿಟ್ಟು ಪ್ರತಿಭಟನೆಗೆ ಬರುತ್ತಾರೆ?' ಎಂದು ಆಯೋಜಕರ ತಂತ್ರಗಾರಿಕೆಯನ್ನು ಲೇವಡಿ ಮಾಡಿದ್ದಾರೆ.
'ಬಿಗ್‌ಬಾಸ್ ಮುಗಿದ ಬಳಿಕ ಗಿಲ್ಲಿ, ಕಾವ್ಯ ಒಟ್ಟಾಗಿ ಇವೆಂಟ್‌ಗೆ ಹೋದಾಗ ಅಥವಾ ರಾಮೇಶ್ವರಂ ಕೆಫೆ ಉದ್ಘಾಟನೆಯಾದಾಗ ಬಂದಿದ್ದ ಜನರಲ್ಲಿ ಕಾಲು ಭಾಗದಷ್ಟು ಜನವೂ ಈ ಧ್ರುವ್ ರಾಠಿ, ಪ್ರಕಾಶ್ ರಾಜ್ ಅವರ ಪ್ರತಿಭಟನೆಗೆ ಬಂದಿಲ್' ಎಂದು ಭಾರಿ ಟ್ರೋಲ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ರಸ್ತೆ ಗುಂಡಿ ಹಾಗೂ ಟ್ರಾಫಿಕ್ ಸಮಸ್ಯೆ ಬಗ್ಗೆ ಮಾತ್ರ ಜನ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಮಾಡ್ತಾರೆ. ಅದನ್ನ ಬಿಟ್ಟ ಮತ್ಯಾವ ವಿಚಾರಕ್ಕೂ ಇಲ್ಲಿನ ಜನರು ತಲೆಕೆಡಿಸಿಕೊಳ್ಳೋದಿಲ್ಲ. ಇಲ್ಲಿನ ಜನ ಅಷ್ಟು ಫ್ರೀಯಾಗಿ ಇರೋದೂ ಇಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಒಟ್ಟಿನಲ್ಲಿ ಧ್ರುವ್ ರಾಠಿ ಅವರ ವೀಸಾ ಮತ್ತು ರಾಜಕೀಯ ಭಾಗವಹಿಸುವಿಕೆ ಕಾನೂನಾತ್ಮಕವಾಗಿ ವಿವಾದಕ್ಕೀಡಾಗಿದ್ದರೆ, ಮತ್ತೊಂದೆಡೆ ಫ್ರೀಡಂ ಪಾರ್ಕ್‌ನಲ್ಲಿ ಜೂಮ್ ಮಾಡಿ ನೋಡುವಷ್ಟು ಜನ ಸೇರದಿದ್ದದ್ದು, ಈ ಪ್ರತಿಭಟನೆಯನ್ನು ಸೋಶಿಯಲ್ ಮೀಡಿಯಾದಲ್ಲಿ ತಮಾಷೆಯ ವಸ್ತುವನ್ನಾಗಿ ಮಾಡಿದೆ.



