ಬೆಂಗಳೂರಿನ ದಕ್ಷಿಣ ಭಾಗದಲ್ಲಿ 3BHK ಮನೆಗೆ ಶಿಫ್ಟ್ ಆದ ಕಂಟೆಂಟ್ ಕ್ರಿಯೇಟರ್ ದಂಪತಿಯ ಖರ್ಚಿನ ಲೆಕ್ಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಹೊಸ ಮನೆಗೆ ಶಿಫ್ಟ್ ಆಗಲು ಒಟ್ಟು ₹2,53,500 ಖರ್ಚು ಮಾಡಿರುವುದಾಗಿ ಅನಾ ಮಿಶ್ರಾ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರು: ಹೊಸ ಮನೆಗೆ ಶಿಫ್ಟ್ ಆಗುವುದು ಅಂದರೆ ಖುಷಿಯ ಜೊತೆಗೆ ಸಾಕಷ್ಟು ಖರ್ಚು ಕೂಡ ಇರುತ್ತದೆ. ಮನೆ ಅಡ್ವಾನ್ಸ್, ಬ್ರೋಕರ್ ಕಮಿಷನ್, ಫರ್ನಿಚರ್ ಸಾಗಣೆ, ಅಗತ್ಯ ವಸ್ತುಗಳ ಖರೀದಿ ಹೀಗೆ ಒಂದೊಂದೇ ಖರ್ಚು ಸೇರಿ ದೊಡ್ಡ ಮೊತ್ತವಾಗುತ್ತದೆ. ಇದೀಗ ಬೆಂಗಳೂರಿನ ದಕ್ಷಿಣ ಭಾಗದಲ್ಲಿ 3BHK ಮನೆಗೆ ಶಿಫ್ಟ್ ಆದ ಕಂಟೆಂಟ್ ಕ್ರಿಯೇಟರ್ ದಂಪತಿಯ ಖರ್ಚಿನ ಲೆಕ್ಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಕಂಟೆಂಟ್ ಕ್ರಿಯೇಟರ್ ಅನಾ ಮಿಶ್ರಾ ಅವರು ತಮ್ಮ ಸಂಗಾತಿ ಇಶಾನ್ ಜೊತೆ ಹೊಸ ಮನೆಗೆ ಶಿಫ್ಟ್ ಆಗಲು ಒಟ್ಟು ₹2,53,500 ಖರ್ಚು ಮಾಡಿರುವುದಾಗಿ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
ಯಾಕೆ ಅಷ್ಟು ಹಣ ಖರ್ಚು ಮಾಡಿದರು?
ಅನಾ ಸಂಗಾತಿ ಇಶಾನ್ ಕೋಲ್ಕತ್ತಾದಿಂದ ಬೆಂಗಳೂರಿಗೆ ಶಿಫ್ಟ್ ಆಗಿದ್ದರೆ.. ಅನಾ ಅವರು ಬೆಂಗಳೂರಿನಲ್ಲಿದ್ದ ತಮ್ಮ ಹಳೆಯ ಮನೆಯಿಂದ ಹೊಸ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಈ ವೇಳೆ ಅವರಿಬ್ಬರು ಸೇರಿ ಮಾಡಿದ ಖರ್ಚುಗಳ ವಿವರವನ್ನು ತಿಳಿಸಿದ್ದಾರೆ. ಹೊಸ 3BHK ಮನೆಯ ಸೆಕ್ಯುರಿಟಿ ಡೆಪಾಸಿಟ್ ಆಗಿ ₹1.5 ಲಕ್ಷ ಪಾವತಿಸಿದ್ದಾರೆ. ಬ್ರೋಕರ್ಗೆ ಒಂದು ತಿಂಗಳ ಬಾಡಿಗೆಗೆ ಸಮನಾದ ₹37,000 ಕಮಿಷನ್ ನೀಡಿದ್ದಾರೆ.
ಕೋಲ್ಕತ್ತಾದಿಂದ ಬೆಂಗಳೂರಿಗೆ ಫರ್ನಿಚರ್ ಸಾಗಿಸಲು ₹60,000 ಖರ್ಚು ಮಾಡಿದ್ದಾರೆ. ಬೆಡ್, ಶೂ ರ್ಯಾಕ್, ಡೈನಿಂಗ್ ಟೇಬಲ್ ಮತ್ತು ಕಿಂಗ್ ಸೈಜ್ ಸೋಫಾವನ್ನು No Brokerage Packers and Movers ಮೂಲಕ ಸಾಗಿಸಿದ್ದಾರೆ. ಸಾಗಣೆ ವೇಳೆ ಯಾವುದೇ ವಸ್ತುಗಳಿಗೆ ಹಾನಿ ಆಗದೆ ಎಲ್ಲವೂ ಸುರಕ್ಷಿತವಾಗಿ ತಲುಪಿದೆ ಎಂದು ತಿಳಿಸಿದ್ದಾರೆ.
ಇತರ ಖರ್ಚುಗಳ ವಿವರ
ಬೆಂಗಳೂರಿನ ಹಳೆಯ ಮನೆಯಿಂದ ತಮ್ಮ ವೈಯಕ್ತಿಕ ವಸ್ತುಗಳನ್ನು ಹೊಸ ಮನೆಗೆ ಸಾಗಿಸಲು ಪೋರ್ಟರ್ ಸೇವೆ ಬಳಸಿದ್ದಾರೆ. ಇದಕ್ಕೆ ₹3,000 ಖರ್ಚಾಗಿದೆ. ಇನ್ನು ವಾಷಿಂಗ್ ಮೆಷಿನ್, ಫ್ರಿಜ್ ಮತ್ತು ವಾಟರ್ ಪ್ಯೂರಿಫೈಯರ್ಗಳನ್ನು Furlenco ಮೂಲಕ ಬಾಡಿಗೆಗೆ ಪಡೆದಿದ್ದಾರೆ. ಒಂದು ತಿಂಗಳ ಬಾಡಿಗೆಗೆ ₹2,800 ಪಾವತಿಸಿದ್ದಾರೆ. ಹಳೆಯ ವೈ-ಫೈ ಸಂಪರ್ಕವನ್ನು ಹೊಸ ಮನೆಗೆ ಸ್ಥಳಾಂತರಿಸಲು ₹700 ಖರ್ಚಾಗಿದೆ. ಈ ಎಲ್ಲಾ ಖರ್ಚುಗಳನ್ನು ಸೇರಿಸಿದಾಗ ಹೊಸ ಮನೆಗೆ ಶಿಫ್ಟ್ ಆಗಲು ದಂಪತಿ ಒಟ್ಟು ₹2,53,500 ವ್ಯಯಿಸಿದ್ದಾರೆ.
ಆದರೆ ಈ ಮೊತ್ತದಲ್ಲಿ ಮನೆ ಅಲಂಕಾರಕ್ಕೆ ಸಂಬಂಧಿಸಿದ ವಸ್ತುಗಳ ಖರೀದಿ ಹಾಗೂ ಇತರ ಸಣ್ಣಪುಟ್ಟ ಖರ್ಚುಗಳು ಸೇರಿಲ್ಲ ಎಂದು ಅನಾ ತಿಳಿಸಿದ್ದಾರೆ. ಅನಾ ಹಂಚಿಕೊಂಡ ವಿಡಿಯೋಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಈ ಮಾಹಿತಿ ತುಂಬಾ ಉಪಯುಕ್ತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೊಸ ಮನೆಗೆ ಶಿಫ್ಟ್ ಆಗುವವರಿಗೆ ಈ ಖರ್ಚಿನ ಲೆಕ್ಕ ಒಂದು ಅಂದಾಜು ನೀಡಿದ್ದು, ಬೆಂಗಳೂರಿನಲ್ಲಿ ಮನೆ ಬದಲಾಯಿಸುವಾಗ ಎಷ್ಟು ಹಣ ಬೇಕಾಗಬಹುದು ಎಂಬ ಚರ್ಚೆಗೆ ಕಾರಣವಾಗಿದೆ.
















