ಬೆಂಗಳೂರಿನ ಐಷಾರಾಮಿ ಚರ್ಚ್ ಸ್ಟ್ರೀಟ್‌ನ ಟೆಂಡರ್‌ಶ್ಯೂರ್ ರಸ್ತೆ ದಿಢೀರ್ ಕುಸಿದು ಬಿಬಿಎಂಪಿ ಕಸದ ಟ್ರಕ್ ಸಿಲುಕಿಕೊಂಡಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ರಸ್ತೆಯ ದುರಾವಸ್ಥೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಅ.12): ಸಿಲಿಕಾನ್ ಸಿಟಿಯ ಅತ್ಯಂತ ಪ್ರಸಿದ್ಧ ಹಾಗೂ ಐಷಾರಾಮಿ ವಾಣಿಜ್ಯ ಪ್ರದೇಶವಾದ 'ಚರ್ಚ್ ಸ್ಟ್ರೀಟ್'ನ (Church Street) ಗ್ರಾನೈಟ್ ಕಲ್ಲುಗಳ 'ಟೆಂಡರ್‌ಶ್ಯೂರ್' (TenderSURE) ರಸ್ತೆ ದಿಢೀರನೆ ಕುಸಿದು ಬಿದ್ದಿದ್ದು, ಕಸ ಸಾಗಿಸುತ್ತಿದ್ದ ಬೃಹತ್ ಟ್ರಕ್‌ನ ಚಕ್ರಗಳು ಗುಂಡಿಯಲ್ಲೇ ಸಿಲುಕಿಕೊಂಡು ರಸ್ತೆ ಮಧ್ಯದಲ್ಲೇ ನಿಂತುಹೋಗಿರುವ ಭಾರಿ ಅನಾಹುತ ಸಂಭವಿಸಿದೆ. ಇಂದು (ಅ.12) ಬೆಳಿಗ್ಗೆ ಮ್ಯೂಸಿಯಂ ರಸ್ತೆ ಜಂಕ್ಷನ್ ಕಡೆಯಿಂದ ಕಸ ಸಂಗ್ರಹಿಸಿಕೊಂಡು ಚರ್ಚ್ ಸ್ಟ್ರೀಟ್ ಮೂಲಕ ಸಾಗುತ್ತಿದ್ದ ಬಿಬಿಎಂಪಿ ಕಸದ ಟ್ರಕ್ ರಸ್ತೆಯ ಮೇಲೆ ಚಲಿಸುತ್ತಿದ್ದಂತೆಯೇ, ನೆಲದಡಿಯಲ್ಲಿದ್ದ ವೈಟ್‌ಟಾಪಿಂಗ್ ಕಾಂಕ್ರೀಟ್ ಹಾಗೂ ಗ್ರಾನೈಟ್ ಕಲ್ಲುಗಳ ಪದರ ಒಮ್ಮೆಲೆ ಕುಸಿದಿದೆ. ಪರಿಣಾಮವಾಗಿ ಟ್ರಕ್‌ನ ಹಿಂಭಾಗದ ಭಾರಿ ಚಕ್ರಗಳು ಭೂಮಿಯೊಳಗೆ ಸಿಲುಕಿಕೊಂಡಿದ್ದು, ಮುಂದೆ ಸಾಗಲಾಗದೆ ವಾಹನ ಸ್ಥಗಿತಗೊಂಡಿದೆ.

ಕೋಟ್ಯಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣ ವೆಚ್ಚ ಮಾಡಿ ನಿರ್ಮಿಸಲಾದ ಹೈಪ್ರೊಫೈಲ್ ರಸ್ತೆಯ ಈ ದುರಾವಸ್ಥೆಗೆ ಬಿಬಿಎಂಪಿ (BBMP) ಹಾಗೂ ಟೆಂಡರ್‌ಶ್ಯೂರ್ ಯೋಜನೆಯ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಸಾರ್ವಜನಿಕರು ಹಾಗೂ ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಜಾಗತಿಕ ಗುರುತನ್ನು ಹೆಚ್ಚಿಸುವ ಉದ್ದೇಶದಿಂದ ಸುಮಾರು 712 ರಿಂದ 750 ಮೀಟರ್ ಉದ್ದದ ಈ ಚರ್ಚ್ ಸ್ಟ್ರೀಟ್ ಅನ್ನು 'ಟೆಂಡರ್‌ಶ್ಯೂರ್' (Specifications for Urban Road Execution) ಮಾದರಿಯಡಿ ಸುಮಾರು ₹9 ರಿಂದ ₹11 ಕೋಟಿ (ಒಟ್ಟು ಸೌಲಭ್ಯಗಳ ಪರಿಷ್ಕೃತ ಯೋಜನಾ ವೆಚ್ಚ ಸುಮಾರು ₹17 ಕೋಟಿ) ವೆಚ್ಚದಲ್ಲಿ ಸಂಪೂರ್ಣ ಮರುವಿನ್ಯಾಸಗೊಳಿಸಿ 2018 ರ ಮಾರ್ಚ್ ತಿಂಗಳಿನಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು.

ಪಾದಚಾರಿಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ 5 ರಿಂದ 5.5 ಮೀಟರ್‌ ಅಗಲದ ಕಿರಿದಾದ ವಾಹನ ರಸ್ತೆ ಹಾಗೂ ಎರಡೂ ಬದಿಗಳಲ್ಲಿ ವಿಶಾಲವಾದ ಪ್ರೀಮಿಯಂ ಗ್ರಾನೈಟ್ ಕಲ್ಲುಗಳ (Granite Cobblestones) ಪಾದಚಾರಿ ಮಾರ್ಗ, ಅಂಧರಿಗಾಗಿ 'ಟ್ಯಾಕ್ಟೈಲ್ ಟೈಲ್ಸ್'ಗಳನ್ನು ಅಳವಡಿಸಲಾಗಿತ್ತು. ಪದೇ ಪದೇ ರಸ್ತೆ ಅಗೆಯುವುದನ್ನು ತಡೆಯಲು ನೀರು, ವಿದ್ಯುತ್, ಒಳಚರಂಡಿ ಹಾಗೂ ಟೆಲಿಕಾಂ ಕೇಬಲ್‌ಗಳಿಗಾಗಿ ರಸ್ತೆಯ ಅಡಿಯಲ್ಲೇ ಪ್ರತ್ಯೇಕ ಯುಟಿಲಿಟಿ ಡಕ್ಟ್‌ಗಳನ್ನು ನಿರ್ಮಿಸಲಾಗಿತ್ತು. 40 ಎಲ್ಇಡಿ ದೀಪಗಳು, ನೀರು ನಿಲ್ಲದಂತೆ ಅತ್ಯಾಧುನಿಕ ಚರಂಡಿ ಜಾಲಿಗಳು (Gratings), ಕುಳಿತುಕೊಳ್ಳಲು ಬೆಂಚ್‌ಗಳು ಹಾಗೂ ಸೌಂಡ್ ಸಿಸ್ಟಮ್‌ಗಳನ್ನು ಒದಗಿಸಲಾಗಿತ್ತು.

ಗ್ಯಾರಂಟಿ ಅವಧಿ ಮುಗಿಯುತ್ತಿದ್ದಂತೆ ಅನಾಥವಾಯ್ತಾ ಚರ್ಚ್ ಸ್ಟ್ರೀಟ್?

ಆರಂಭಿಕ ಐದು ವರ್ಷಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಮೆರೆದ ಈ ರಸ್ತೆ, ಪ್ರಸ್ತುತ ಐದು ವರ್ಷಗಳ ಉಸ್ತುವಾರಿ ಗ್ಯಾರಂಟಿ ಅವಧಿ ಮುಗಿಯುತ್ತಿದ್ದಂತೆಯೇ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಂಪೂರ್ಣ ಅನಾಥವಾಗಿತ್ತು.ಟೆಂಡರ್‌ಶ್ಯೂರ್ ಯೋಜನೆಯ ನಿಯಮಾವಳಿಯಂತೆ 5 ವರ್ಷಗಳ ಕಾಲ ಯೋಜನೆ ನಿರ್ವಹಿಸಿದ ಎಂಜಿನಿಯರ್‌ಗಳು, 5 ವರ್ಷ ಮುಗಿದ ತಕ್ಷಣವೇ ರಸ್ತೆಯನ್ನು ಸಂಬಂಧಪಟ್ಟ 'ಸ್ಥಳೀಯ ಬಿಬಿಎಂಪಿ ವಾರ್ಡ್ ಎಂಜಿನಿಯರ್'ಗೆ ಹಸ್ತಾಂತರಿಸಬೇಕು. ಆದರೆ, ಪ್ರಸ್ತುತ ಟೆಂಡರ್‌ಶ್ಯೂರ್ ಎಂಜಿನಿಯರ್‌ಗಳು "ನಾವು ವಾರ್ಡ್ ಎಂಜಿನಿಯರ್‌ಗೆ ಹಸ್ತಾಂತರಿಸಿದ್ದೇವೆ" ಎಂದರೆ, ಇತ್ತ ವಾರ್ಡ್ ಎಂಜಿನಿಯರ್ "ನಮಗೆ ಈ ರಸ್ತೆಯ ಉಸ್ತುವಾರಿ ಬಗ್ಗೆ ಯಾವುದೇ ಮಾಹಿತಿಯಿಲ್ಲ" ಎಂದು ಜಾರಿಕೊಳ್ಳುತ್ತಿದ್ದಾರೆ. ಇಂದಿಗೂ ಕೂಡ ಈ ರಸ್ತೆಯ ನಿರ್ವಹಣೆ ಯಾರು ಮಾಡುತ್ತಿದ್ದಾರೆ ಅನ್ನೋ ವಿವರಗಳಿಲ್ಲ.

Scroll to load tweet…