ಬೆಂಗಳೂರಿನಲ್ಲಿ ನಡೆದ ಮದುವೆಯೊಂದರಲ್ಲಿ ವರ ಕುಡಿದು ಅನುಚಿತವಾಗಿ ವರ್ತಿಸಿದ್ದರಿಂದ ತಾಯಿ ಮದುವೆ ರದ್ದುಗೊಳಿಸಿದ್ದಾರೆ. ವರನ ಕಡೆಯವರ ಗಲಾಟೆ, ಮರ್ಯಾದೆಗೆಟ್ಟ ವರ್ತನೆ ಕಂಡು ಮಗಳ ಭವಿಷ್ಯದ ಚಿಂತೆಯಿಂದ ತಾಯಿ ದಿಟ್ಟ ನಿರ್ಧಾರ ಕೈಗೊಂಡರು. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ತಾಯಿಯ ಧೈರ್ಯವನ್ನು ಶ್ಲಾಘಿಸಿದ್ದಾರೆ.
ಮದುವೆ (Marriage) ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆ ಮೇಲೆ ನಿಂತಿರುತ್ತದೆ. ದಂಪತಿ ಜೀವನ (life) ಪರ್ಯಂತ ಖುಷಿಯಾಗಿರಲಿ ಎಂಬ ಹಾರೈಕೆಯೊಂದಿಗೆ ಪಾಲಕರು ಮಕ್ಕಳ ಮದುವೆ ಮಾಡಿಸ್ತಾರೆ. ಮಕ್ಕಳಿಗೆ ಸೂಕ್ತ ಸಂಗಾತಿ (partner)ಯನ್ನು ಹುಡುಕಿ, ಕೂಡಿಟ್ಟ ಹಣವನ್ನೆಲ್ಲ ಮದುವೆಗೆ ಖರ್ಚು ಮಾಡಿ, ಮಕ್ಕಳ ಸುಖಕ್ಕಾಗಿ ತಮ್ಮ ಸರ್ವಸ್ವವನ್ನೇ ಪಾಲಕರು ತ್ಯಾಗ ಮಾಡ್ತಾರೆ. ಆದ್ರೆ ಮರ್ಯಾದೆ, ಹಣ ಖರ್ಚು ಮಾಡಿದ್ದೇವೆ ಎಂಬ ಕಾರಣಕ್ಕೆ ಮಗಳನ್ನು ಕಟುಕನ ಕೈಗೆ ನೀಡಲು ಯಾವುದೇ ಪಾಲಕರು ಸಿದ್ಧ ಇರೋದಿಲ್ಲ. ಅದೆಷ್ಟೇ ಕಷ್ಟ ಬಂದ್ರೂ ಮಗಳ ಜೊತೆಗಿರುವ ತಂದೆ – ತಾಯಿ, ಮಕ್ಕಳ ಭವಿಷ್ಯಕ್ಕೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ತಾರೆ. ಮದುವೆ ಸಮಯದಲ್ಲಿ ತಾಯಿಯೊಬ್ಬಳು ತೆಗೆದುಕೊಂಡ ದಿಟ್ಟ ನಿರ್ಧಾರ ಇದಕ್ಕೆ ಉತ್ತಮ ನಿದರ್ಶನ.
ಸೋಶಿಯಲ್ ಮೀಡಿಯಾ (social media) ದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಮದುವೆಯೊಂದರ ವಿಡಿಯೋ ಇದು. ಮಗಳ ಮದುವೆಗೆ ಎಲ್ಲ ತಯಾರಿ ನಡೆಸಿದ್ದ ಪಾಲಕರು, ಮಗಳ ಕೈ ಹಿಡಿಯುವ ವರನ ವರ್ತನೆಗೆ ಬೇಸತ್ತು, ಮದುವೆ ದಿನವೇ ಮದುವೆ ಮುರಿದುಕೊಂಡಿದ್ದಾರೆ. ಕುಡಿದು ಬಂದು ರಂಪ ಮಾಡಿದ್ದ ವರನ ಕಡೆಯವರಿಗೆ ಸರಿಯಾಗಿ ಬುದ್ಧಿ ಕಲಿಸಿದ್ದಾಳೆ.
ಒಬ್ಬಂಟಿ ಪುರುಷರಿಗೆ ಗುಡ್ ನ್ಯೂಸ್; ಮಾರುಕಟ್ಟೆಗೆ ಬಂದ ರೊಮ್ಯಾಂಟಿಕ್ ಆಗಿ ವರ್ತಿಸುವ ಎಐ ಪ್ರೇಯಸಿ!
ಮದುವೆ ದಿನ ಖುಷಿ, ಸಂಭ್ರಮಾಚರಣೆ ಸಹಜ. ಆದ್ರೆ ಸಂತೋಷದ ನೆಪದಲ್ಲಿ ವರ ಕಂಠಪೂರ್ತಿ ಕುಡಿದ್ರೆ ಮುಂದೆ ಮಗಳ ಭವಿಷ್ಯ ಏನಾಗ್ಬೇಡ?. ಇದೇ ಪ್ರಶ್ನೆಯನ್ನು ತಾಯಿ ಗೆಸ್ಟ್ ಮುಂದಿಟ್ಟಿದ್ದಾಳೆ. ಮದುವೆ ದಿನ ವರ ಹಾಗೂ ವರನ ಸ್ನೇಹಿತರ ಗಲಾಟೆ ಎಲ್ಲೆ ಮೀರಿದೆ. ಕುಡಿದು ಬಂದಿದ್ದ ವರ ಹಾಗೂ ವರನ ಸ್ನೇಹಿತರು, ಮದುವೆ ಕೆಲಸಕ್ಕೆ ಅಡ್ಡಿ ಮಾಡಿದ್ದಾರೆ. ಆರತಿಯನ್ನು ವರ ತಳ್ಳಿದ್ದಾನೆ. ಅಲ್ಲಿಯವರೆಗೆ ಉಸಿರು ಬಿಗಿಹಿಡಿದು ಎಲ್ಲವನ್ನೂ ಸಹಿಸಿಕೊಂಡಿದ್ದ ವಧು ತಾಯಿ ತಾಳ್ಮೆ ಕಳೆದುಕೊಂಡಿದ್ದಾಳೆ. ತಮ್ಮ ಮಗಳ ಮುಂದಿನ ಜೀವನಕ್ಕಾಗಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾಳೆ. ಮದುವೆ ಮಂಟಪಕ್ಕೆ ಬಂದ ಮದುವೆ ನಿಂತ್ರೆ ಮಗಳ ಭವಿಷ್ಯ ಹಾಳಾಗುತ್ತೆ ಎಂಬ ಭಯದಲ್ಲಿ, ಎಲ್ಲವನ್ನೂ ಸಹಿಸಿಕೊಂಡು, ಮಗಳ ಮದುವೆ ಮಾಡುವ ಪಾಲಕರ ಮಧ್ಯೆ ಈ ಅಮ್ಮನ ಧೈರ್ಯ ಮೆಚ್ಚುವಂತಿದೆ.
ವೈರಲ್ ವಿಡಿಯೋದಲ್ಲಿ ತಾಯಿ ಎಲ್ಲರ ಮುಂದೆ ಕೈಜೋಡಿಸಿ ವಿನಂತಿ ಮಾಡ್ತಿರೋದನ್ನು ನೀವು ನೋಡ್ಬಹುದು. ದಯವಿಟ್ಟು ಕ್ಷಮಿಸಿ, ಎಲ್ಲರೂ ವಾಪಸ್ ಹೋಗಿ ಎಂದು ವಧು ಅಮ್ಮ ಹೇಳ್ತಿದ್ದಾರೆ. ಕೆಲವರು ಆಕೆಯನ್ನು ಮನವೊಲಿಸುವ ಪ್ರಯತ್ನ ನಡೆಸುತ್ತಾರೆ. ಕುಳಿತು ಮಾತನಾಡುವಂತೆ ಕೇಳಿಕೊಳ್ತಾರೆ. ಈಗ್ಲೇ ಹೀಗೆ ಅಂದ್ಮೇಲೆ ಮುಂದಿನ ಸ್ಥಿತಿ ಹೇಗಿರಬೇಡ. ನಿಮ್ಮ ಮೇಲೆ ತುಂಬಾ ವಿಶ್ವಾಸವಿತ್ತು. ಆದ್ರೆ ನಮ್ಮ ಒಂದು ಪೈಸೆಗೂ ನೀವು ಬೆಲೆ ನೀಡಲಿಲ್ಲ. ಮಗಳ ಜೀವನ ನಮಗೆ ಬಹಳ ಮುಖ್ಯ. ಮದುವೆ ಸಾಧ್ಯವೇ ಇಲ್ಲ ಎಂದು ತಾಯಿ ಹೇಳ್ತಿದ್ದಾಳೆ.
ಗಂಡ ಹೆಂಡತಿ ಮಧ್ಯೆ ಜಗಳವೇ ಆಗಬಾರದೆಂದರೆ ಇಷ್ಟು ಮಾಡಿ ಸಾಕು!
ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಬಳಕೆದಾರರು ಮಹಿಳೆಯ ಬೆಂಬಲಕ್ಕೆ ನಿಂತಿದ್ದಾರೆ. ಮಗಳ ಜೀವವನ್ನು ತಾಯಿ ಉಳಿಸಿದ್ದಾಳೆ, ಇಂಥ ಸಮಯದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳುವುದು ಸುಲಭವಲ್ಲ, ಮಾರ್ವಾಡಿ ಕುಟುಂಬದ ಮಹಿಳೆಯರು ತಮ್ಮ ನಿರ್ಧಾರವನ್ನು ತಾವೇ ತೆಗೆದುಕೊಳ್ಳುವಂತಾಗಿದ್ದಾರೆ. ಇದು ಖುಷಿ ನೀಡಿದೆ, ಬೇರೆಯವರು ಏನು ಯೋಚನೆ ಮಾಡ್ತಾರೆ ಎಂಬುದಕ್ಕಿಂತ ತಮ್ಮ ಮಗಳ ಭವಿಷ್ಯ ಏನಾಗ್ಬಹುದು ಎಂಬುದನ್ನು ಆಲೋಚನೆ ಮಾಡಿ ಇಂಥ ತೀರ್ಮಾನಕ್ಕೆ ಬಂದ ತಾಯಿಗೊಂದು ಸಲಾಂ, ಇಂಥ ತಾಯಂದಿರು ಇನ್ನೊಂದಿಷ್ಟು ಮಂದಿ ಬೇಕು ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ.
