ಬೆಂಗಳೂರಿನ ನಮ್ಮ ಮೆಟ್ರೋ ಪಿಂಕ್ ಲೈನ್ ಮಾರ್ಗದಲ್ಲಿ ನಿರ್ಮಾಣವಾಗುತ್ತಿರುವ 'IIM-B ಮೆಟ್ರೋ ನಿಲ್ದಾಣ'ದ ಹೆಸರನ್ನು ಬದಲಾಯಿಸಲು ಆದೇಶಿಸಲಾಗಿದೆ. ಸ್ಥಳೀಯರ ಮನವಿಯ ಮೇರೆಗೆ ಈ ನಿಲ್ದಾಣವನ್ನು 'ಬಿಳೇಕಹಳ್ಳಿ IIM-B ಮೆಟ್ರೋ ನಿಲ್ದಾಣ' ಎಂದು ಮರುನಾಮಕರಣ ಮಾಡಲು ಸಿಎಂ ಡಿ.ಕೆ. ಶಿವಕುಮಾರ್ ಬಿಎಂಆರ್‌ಸಿಎಲ್‌ಗೆ ಸೂಚನೆ ನೀಡಿದ್ದಾರೆ.

ಬೆಂಗಳೂರು (ಅ.02): ಬೆಂಗಳೂರಿನ ನಮ್ಮ ಮೆಟ್ರೋ 2ನೇ ಹಂತದ ಪಿಂಕ್ ಲೈನ್ (Pink Line) ಕಾಮಗಾರಿ ಭರದಿಂದ ಸಾಗುತ್ತಿರುವ ಬೆನ್ನಲ್ಲೇ, ಈ ಮಾರ್ಗದ ಪ್ರಮುಖ ಮೆಟ್ರೋ ನಿಲ್ದಾಣವೊಂದರ ಹೆಸರು ಬದಲಾವಣೆಗೆ ಮಹತ್ವದ ಆದೇಶ ಹೊರಬಿದ್ದಿದೆ. ಬನ್ನೇರುಘಟ್ಟ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಪ್ರಸ್ತಾವಿತ 'IIM-B ಮೆಟ್ರೋ ನಿಲ್ದಾಣ'ದ ಹೆಸರನ್ನು 'ಬಿಳೇಕಹಳ್ಳಿ IIM-B ಮೆಟ್ರೋ ನಿಲ್ದಾಣ' (Bilekahalli IIM-B Metro Station) ಎಂದು ಮರುನಾಮಕರಣ ಮಾಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಅಧಿಕೃತ ಟಿಪ್ಪಣಿ ಮೂಲಕ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸ್ಥಳೀಯರ ಮನವಿಗೆ ಸಿಎಂ ಸ್ಪಂದನೆ:

ಕಾಳೇನ ಅಗ್ರಹಾರದಿಂದ ತಾವರೆಕೆರೆ ಮಾರ್ಗವಾಗಿ ನಾಗವಾರ ಸಂಪರ್ಕಿಸುವ ಪಿಂಕ್ ಲೈನ್ ಕಾಮಗಾರಿಯಲ್ಲಿ ಈ ನಿಲ್ದಾಣವು ಬಿಳೇಕಹಳ್ಳಿ ಗ್ರಾಮದ ವ್ಯಾಪ್ತಿಯಲ್ಲೇ ನಿರ್ಮಾಣವಾಗುತ್ತಿದೆ. ಇತ್ತೀಚೆಗಷ್ಟೇ ಬಿಳೇಕಹಳ್ಳಿಯ ಸ್ಥಳೀಯ ಮುಖಂಡರು ಹಾಗೂ ನಿವಾಸಿಗಳ ನಿಯೋಗವು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಖುದ್ದು ಭೇಟಿಯಾಗಿ ಮನವಿ ಸಲ್ಲಿಸಿತ್ತು. 'ಬಿಳೇಕಹಳ್ಳಿ ಎಂಬುದು ಐತಿಹಾಸಿಕ ಹಿನ್ನೆಲೆಯುಳ್ಳ ಸುಪ್ರಸಿದ್ಧ ಗ್ರಾಮವಾಗಿದ್ದು, ಸ್ಥಳೀಯರಿಗೆ ಚಿರಪರಿಚಿತವಾಗಿದೆ. ಆದರೆ ಮೆಟ್ರೋ ನಿಲ್ದಾಣಕ್ಕೆ ಕೇವಲ IIM-B ಎಂದು ನಾಮಕರಣ ಮಾಡಿರುವುದರಿಂದ ಸ್ಥಳೀಯ ಅಸ್ಮಿತೆಗೆ ಧಕ್ಕೆಯಾಗಿದೆ. ಹೀಗಾಗಿ ನಿಲ್ದಾಣಕ್ಕೆ ಬಿಳೇಕಹಳ್ಳಿ ಹೆಸರು ಸೇರಿಸಬೇಕು' ಎಂದು ಕೋರಿದ್ದರು.

ಬಿಎಂಆರ್‌ಸಿಎಲ್ ಎಂಡಿಗೆ ಅಧಿಕೃತ ಸೂಚನೆ:

ಸ್ಥಳೀಯರ ಈ ನ್ಯಾಯಯುತ ಬೇಡಿಕೆಗೆ ತಕ್ಷಣವೇ ಸ್ಪಂದಿಸಿರುವ ಮುಖ್ಯಮಂತ್ರಿಗಳು, ಬಿಎಂಆರ್‌ಸಿಎಲ್ (BMRCL) ವ್ಯವಸ್ಥಾಪಕ ನಿರ್ದೇಶಕ ಪಿ.ಸಿ. ಜಾಫರ್ ಅವರಿಗೆ ಅಧಿಕೃತ ಟಿಪ್ಪಣಿ ರವಾನಿಸಿದ್ದಾರೆ.

'ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ರವರು ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ಪಿಂಕ್ ಲೈನ್ ಮೆಟ್ರೋ ಬಿಳೇಕಹಳ್ಳಿ ಮಾರ್ಗವಾಗಿ ನಿರ್ಮಿಸುತ್ತಿದ್ದು, ಬಿಳೇಕಹಳ್ಳಿ ಗ್ರಾಮವು ಐತಿಹಾಸಿಕವಾಗಿ ಸುಪ್ರಸಿದ್ಧವಾಗಿದ್ದು, ಸ್ಥಳೀಯರಲ್ಲಿ ಗ್ರಾಮದ ಹೆಸರು ಚಿರಪರಿಚಿತವಾಗಿರುವುದರಿಂದ ಪ್ರಸ್ತಾವಿತ ‘IIM-B Metro Station’ ಹೆಸರಿನ ಬದಲಾಗಿ ‘Bilekahalli IIM-B Metro Station’ ಎಂದು ಮರುನಾಮಕರಣಗೊಳಿಸುವಂತೆ ಸೂಚಿಸಿದೆ' ಎಂದು ಸಿಎಂ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ಸರ್ಕಾರದ ಈ ತ್ವರಿತ ತೀರ್ಮಾನದಿಂದ ಬಿಳೇಕಹಳ್ಳಿ ವ್ಯಾಪ್ತಿಯ ಸಾರ್ವಜನಿಕರು ಹಾಗೂ ಕನ್ನಡ ಪರ ಸಂಘಟನೆಗಳು ಸಂತಸ ವ್ಯಕ್ತಪಡಿಸಿದ್ದು, ಸ್ಥಳೀಯ ಗ್ರಾಮದ ಹೆಸರನ್ನು ಉಳಿಸಿಕೊಂಡಿದ್ದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.