2 ಬೆಡ್ ರೂಂ ಮನೆ, ಆದರೆ ಮನೆ ಮಾಲೀಕನ ಬೇಡಿಕೆಯಿಂದ ಮನೆ ಹುಡುಕುತ್ತಿದ್ದ ವ್ಯಕ್ತಿ ನೇರವಾಗಿ ಹೊರನಡೆದ ಘಟನೆ ನಡೆದಿದೆ. 70 ಸಾವಿರ ತಿಂಗಳ ಬಾಡಿಗೆ, 4 ಲಕ್ಷ ರೂಪಾಯಿ ಡೆಪಾಸಿಟ್ ನೀಡುವಂತೆ ಕೇಳಿದ್ದಾನೆ. ಏನಿದು ಬಾಡಿಗೆ ಕತೆ?

ಬೆಂಗಳೂರು (ಅ.02) ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವುದು ಜೀವನ ಅತ್ಯಂತ ದೊಡ್ಡ ಸವಾಲು ಹಾಗೂ ತಲೆನೋವಿನ ಕೆಲಸ. ನಮ್ಮ ಬಜೆಟ್‌ನಲ್ಲಿ ಮನೆ ಸಿಗಲ್ಲ, ಸಿಕ್ಕರೂ ಚೆನ್ನಾಗಿರಲ್ಲ, ನಮ್ಮ ಅವಶ್ಯಕತೆ, ಆರ್ಥಿಕ ಸ್ಥಿತಿಗೆ ತಕ್ಕಂತೆ ಮನೆ ಹುಡುಕುತ್ತೇವೆ. ಆದರೆ ಕೊನೆಗೆ ನಾವೇ ಕಾಂಪ್ರೈಮೈಸ್ ಮಾಡಿಕೊಳ್ಳಬೇಕಾದ ಪರಿಸ್ಥಿತಿ, ಅನಿವಾರ್ಯವಾಗಿ, ಬೇರೆ ದಾರಿಯಿಲ್ಲದೆ ಬಾಡಿಗೆ ಮನೆ ಪಡೆಯಬೇಕಾದ ಸ್ಥಿತಿ ಬಹುತೇಕರದ್ದು. ಹೀಗೆ ಮನೆ ಹುಡುಕಾಟದಲ್ಲಿ ಸುಸ್ತಾದ ವ್ಯಕ್ತಿ ಕೊನೆಗೆ ಆಕ್ರೋಶದೊಂದಿದೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾನೆ. ಕಾರಣ 2 ಬೆಡ್ ರೂಂ ಮನೆ. ಆದರೆ ಬಾಡಿಗೆ ತಿಂಗಳಿಗೆ 70 ಸಾವಿರ ರೂಪಾಯಿ, ಡೆಪಾಸಿಟ್ 4 ಲಕ್ಷ ರೂಪಾಯಿ. ಈ ಮಾತು ಕೇಳಿ ಏನೂ ಚರ್ಚಿಸಿದ ಮನೆ ಹುಡುಕುತ್ತಿದ್ದ ವ್ಯಕ್ತಿ ಹೊರನಡೆದಿದ್ದಾನೆ.

ಏನಿದು ಬಾಡಿಗೆ ಮನೆ ಕತೆ

ಐಟಿ ಕೆಲಸದಲ್ಲಿರುವ ಬೆಂಗಳೂರಿನ ವ್ಯಕ್ತಿ ತನ್ನ ಕಚೇರಿ ಪಕ್ಕದಲ್ಲೇ ಮನೆ ಹುಡುಕಾಟಕ್ಕೆ ಇಳಿದಿದ್ದಾನೆ. ಬೆಂಗಳೂರಿನ ಟ್ರಾಫಿಕ್ ಕಾರಣ ದೂರ ಸರಿದರೆ ಸಮಯ ವ್ಯರ್ಥವಾಗಲಿದೆ ಅನ್ನೋ ಕಾರಣಕ್ಕೆ ಕಚೇರಿ ಪಕ್ಕದಲ್ಲಿ ಮನೆ ಹುಡುಕಾಟ ಆರಂಭಿಸಿದ್ದಾನೆ. 2 ಬೆಡ್ ರೂಂ ಮನೆ ಖಾಲಿ ಇದೆ ಅನ್ನೋ ಮಾಹಿತಿ ಪಡೆದು ಮಾಲೀಕನಿಗೆ ಕರೆ ಮಾಡಿ ಆಗಮಿಸಿದ್ದಾನೆ. ಮನೆ 2 ಬೆಡ್ ರೂಂ ಹೊಂದಿದೆ. ಎರಡೂ ಬೆಡ್ ರೂಂ ಸ್ಥಳವಕಾಶ ಹೆಚ್ಚಿಲ್ಲ. ಒಂದು ಬೆಡ್ ರೂಂನಲ್ಲಿ ಸಣ್ಣ ಬೆಡ್ ಇದೆ, ಮತ್ತೊಂದರಲ್ಲಿ ಇಲ್ಲ. ಸೋಫಾ ಇದೆ. ಇನ್ನು ಫ್ರಿಡ್ಜ್ ಇಲ್ಲ, ವಾಶಿಂಗ್‌ಮಶೀನ್ ಇಲ್ಲ, ಡೈನಿಂಗ್ ಟೇಬಲ್ ಇಲ್ಲ. ಫುಲ್ ಫರ್ನೀಶ್ಡ್ ಅಲ್ಲ.

ತಿಂಗಳಿಗೆ 70 ಸಾವಿರ ಬೇಕೆ ಬೇಕು

ತಿಂಗಳ ಬಾಡಿಗೆ 70 ಸಾವಿರ ಬೇಕೇ ಬೇಕು, 3 ರಿಂದ 4 ಲಕ್ಷ ರೂಪಾಯಿ ಡೆಪಾಸಿಟ್ ನೀಡಬೇಕು. ಇನ್ನು ವಾರ್ಷಿಕವಾಗಿ ಶೇಕಡಾ 7 ರಿಂದ 8ರಷ್ಟು ಬಾಡಿಗೆ ಹೆಚ್ಚಳ ಇರಲಿದೆ. ನಾನು ಅತೀ ಕಡಿಮೆ ಕೇಳುತ್ತಿದ್ದೇನೆ, ಹೊರಗಡೆ ಶೇಕಡಾ 10ರಷ್ಟು ಬಾಡಿಗೆ ಹೆಚ್ಚಳ ಮಾಡುತ್ತಾರೆ. ನಿಮಗಾಗಿ ನಾನು ಗರಿಷ್ಠ ಶೇಕಡಾ 8ರಷ್ಟು ಮಾತ್ರ ಎಂದು ಮಾಲೀಕ ಹೇಳಿದ್ದಾನೆ.

ಮಾಲೀಕನ ಮಾತು ಕೇಳಿ ಚರ್ಚಿಸುವ ಅಗತ್ಯವಿಲ್ಲ ಎಂದ ವ್ಯಕ್ತಿ

ಮಾಲೀಕನ ಮಾತು ಕೇಳಿಸಿಕೊಂಡ ಮನೆ ಹುಡುಕುತ್ತಿದ್ದ ವ್ಯಕ್ತಿಗೆ ಚರ್ಚಿಸಲು ಏನು ಉಳಿದಿರಲಿಲ್ಲ. ಡೆಪಾಸಿಟ್‌ನಲ್ಲಿ ಸ್ವಲ್ಪ ಕಡಿಮೆ ಮಾಡಬಹುದು ಎಂದು ಮಾಲೀಕ ಹೇಳಿದ್ದ. ಬಾಡಿಗೆಯಲ್ಲಿ ಇತರ ನೀತಿಗಳಲ್ಲಿ ಯಾವುದೇ ರಾಜೀ ಇಲ್ಲ ಎಂದಿದ್ದ. 8 ರಿಂದ 10 ಸಾವಿರ ರೂಪಾಯಿ ಪಿಜಿಗಳಲ್ಲಿ ಇದಕ್ಕಿಂತ ಚೆನ್ನಾಗಿರುವ ಕೊಠಡಿ ಇರುತ್ತೆ. ಆದರೆ ಈತನ ಮನೆಗೂ ಬಾಡಿಗೆಗೂ ಸಂಬಂಧವಿಲ್ಲ, ಹೀಗಾಗಿ ಮನೆ ಮಾಲೀಕನ ಬಳಿಕ ಯಾವ ಚರ್ಚೆ ನಡೆಸದೇ ಏನೂ ಹೇಳದೆ ಮನೆಯೊಂದ ಹೊರಬಂದೆ ಎಂದು ವ್ಯಕ್ತಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾನೆ. ನಾನು ಪ್ರೀಮಿಯಂ ಮನೆ ಹುಡುಕುತ್ತಿದ್ದೆ, ಬಾಡಿಗೆ ತುಸು ಹೆಚ್ಚಿರುತ್ತೆ ಅನ್ನೋದು ಗೊತ್ತಿದೆ. ಆದರೆ 70 ಸಾವಿರ ರೂಪಾಯಿ ಅಲ್ಲ, ಜೊತೆಗೆ ಈ ಮನೆ ಅಷ್ಟು ಬಾಡಿಗೆಗೆ ಯೋಗ್ಯವಲ್ಲ ಎಂದು ಅಭಿಪ್ರಾಯಪಟ್ಟಿದ್ದಾನೆ.

ಈ ಘಟನೆ ಕುರಿತು ಹಲವರು ಪ್ರತಿಕ್ರಿಯಿಸಿದ್ದಾರೆ, ತಮಗೂ ಈ ರೀತಿಯ ಅನುಭವವಾಗಿದೆ ಎಂದು ಹೇಳಿಕೊಂಡಿದ್ದಾರೆ. ಬೆಂಗಳೂರಿನಲ್ಲಿರುವ ಎಲ್ಲರೂ ತಿಂಗಳಿಗೆ 4 ಲಕ್ಷ ರೂಪಾಯಿ ವೇತನದಲ್ಲಿದ್ದಾರೆ ಎಂದು ಮನೆ ಮಾಲೀಕರು ಭಾವಿಸುತ್ತಾರೆ. ಅವರ ಮನೆಯ ಬಾಡಿಗೆ ಮೌಲ್ಯ 20 ಸಾವಿರ ರೂಪಾಯಿ ದಾಟಲ್ಲ, ಆದರೆ ತಮಗೆ 50 ಸಾವಿರ, 70 ಸಾವಿರವೇ ಬೇಕು ಅಂತಾರೆ, ಮನೆ ಖಾಲಿ ಬಿದ್ದರೂ ಬಾಡಿಗೆ ಮಾತ್ರ ಕಡಿಮೆ ಮಾಡಲ್ಲ ಎಂದು ಹಲವರು ಟೀಕಿಸಿದ್ದಾರೆ.