ಬಿಎಂಆರ್‌ಸಿಎಲ್ ಸರ್ಜಾಪುರದಿಂದ ಹೆಬ್ಬಾಳವನ್ನು ಸಂಪರ್ಕಿಸುವ ನಮ್ಮ ಮೆಟ್ರೋ 3ಎ 'ರೆಡ್ ಲೈನ್' ಮಾರ್ಗದ ಪ್ರಾಥಮಿಕ ಭೂತಂತ್ರಜ್ಞಾನ ಪರೀಕ್ಷೆಗಳನ್ನು ಆರಂಭಿಸಿದೆ. ಈ ಯೋಜನೆಗೆ ಕೇಂದ್ರ ಸರ್ಕಾರದ ಅಂತಿಮ ಅನುಮೋದನೆ ಬಾಕಿ ಇದ್ದು, ವೆಚ್ಚ ಕಡಿತಕ್ಕೆ ಬಿಎಂಆರ್‌ಸಿಎಲ್ ಹಲವು ಕ್ರಮಗಳನ್ನು ಕೈಗೊಂಡಿದೆ.

ಬೆಂಗಳೂರು (ಅ.15): ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (BMRCL) ನಗರದ ಸುದೀರ್ಘ ಹಾಗೂ ಬಹುನಿರೀಕ್ಷಿತ 'ನಮ್ಮ ಮೆಟ್ರೋ' ಹಂತ 3ಎ 'ರೆಡ್ ಲೈನ್' ಕಾರಿಡಾರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಭೂತಂತ್ರಜ್ಞಾನದ ಪರೀಕ್ಷೆಗಳನ್ನು (Geotechnical Investigations) ಸರ್ಜಾಪುರ ರಸ್ತೆಯಲ್ಲಿ ಅಧಿಕೃತವಾಗಿ ಆರಂಭಿಸಿದೆ. ಆಗ್ನೇಯ ಬೆಂಗಳೂರಿನ ಸರ್ಜಾಪುರವನ್ನು ಉತ್ತರ ಬೆಂಗಳೂರಿನ ಹೆಬ್ಬಾಳದೊಂದಿಗೆ ಜೋಡಿಸುವ 37.8 ಕಿಲೋಮೀಟರ್ ಉದ್ದದ ಈ ಪ್ರಸ್ತಾವಿತ ರೆಡ್ ಲೈನ್ ಕಾರಿಡಾರ್‌ನ ಕಾಮಗಾರಿ ಆರಂಭಿಸುವ ಮುನ್ನ, ಮಾರ್ಗದುದ್ದಕ್ಕೂ ಇರುವ ಮಣ್ಣಿನ ಗುಣಲಕ್ಷಣಗಳು ಹಾಗೂ ಅಡಿಪಾಯದಲ್ಲಿರುವ ಬಂಡೆಕಲ್ಲುಗಳ ಸ್ಥಿತಿಗತಿಯನ್ನು ಈ ಪರಿಶೀಲನೆಯ ಮೂಲಕ ವಿಶ್ಲೇಷಿಸಲಾಗುತ್ತಿದೆ.

ಈ ಕುರಿತು ಮಾತನಾಡಿದ ಬಿಎಮ್‌ಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು, "ಈ ತಾಂತ್ರಿಕ ಅಧ್ಯಯನವು ಮಾರ್ಗದ ಮಣ್ಣಿನ ಸ್ಥಿರತೆ, ಭೂವೈಜ್ಞಾನಿಕ ರಚನೆಗಳು ಹಾಗೂ ಭೂಮಿಯ ಆಂತರಿಕ ಸ್ಥಿತಿಗತಿಯ ಕುರಿತು ಅತ್ಯಗತ್ಯ ಮಾಹಿತಿ ನೀಡಲಿದೆ. ಈ ವರದಿಯ ಆಧಾರದ ಮೇಲೆಯೇ ಮೆಟ್ರೋ ಪಿಲ್ಲರ್‌ಗಳ ಅಡಿಪಾಯದ ಆಳ, ರಚನಾತ್ಮಕ ವಿನ್ಯಾಸ ಹಾಗೂ ಸುರಂಗ ಮತ್ತು ಎಲಿವೇಟೆಡ್ ವಿಭಾಗಗಳ ನಿರ್ಮಾಣ ವಿಧಾನಗಳನ್ನು ಎಂಜಿನಿಯರ್‌ಗಳು ಅಂತಿಮ ಮಾಡಲಿದ್ದಾರೆ. ಇದು ಮೆಟ್ರೋ ಮೂಲಸೌಕರ್ಯದ ಸುರಕ್ಷತೆ ಮತ್ತು ಸ್ಥಿರತೆಯನ್ನು ಖಚಿತಪಡಿಸಲಿದೆ" ಎಂದು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಅನುಮೋದನೆ ನಿರೀಕ್ಷೆಯಲ್ಲಿ ಯೋಜನೆ

ಮತ್ತೊಂದೆಡೆ, ಈ ಯೋಜನೆಯು ಕೇಂದ್ರ ಸರ್ಕಾರದ ಅಂತಿಮ ಅನುಮೋದನೆಗಾಗಿ ಕಾಯುತ್ತಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ರಾಜ್ಯ ಸರ್ಕಾರವು ಈ ಕಾರಿಡಾರ್‌ನ ವಿಸ್ತೃತ ಯೋಜನಾ ವರದಿಯನ್ನು (DPR) ಕೇಂದ್ರಕ್ಕೆ ಸಲ್ಲಿಸಿದೆಯಾದರೂ, ಕೇಂದ್ರ ಸರ್ಕಾರವು ಯೋಜನೆಯ ಮಂಜೂರಾತಿಗೆ ಯಾವುದೇ ನಿರ್ದಿಷ್ಟ ಕಾಲಮಿತಿಯನ್ನು ಇನ್ನು ನಿಗದಿಪಡಿಸಿಲ್ಲ.

ರಾಜ್ಯಸಭೆಯಲ್ಲಿ ಸಂಸದ ಅಜಯ್ ಮಾಕನ್ ಕೇಳಿದ ಪ್ರಶ್ನೆಗೆ ಆಗಸ್ಟ್ ತಿಂಗಳಿನಲ್ಲಿ ಲಿಖಿತ ಉತ್ತರ ನೀಡಿದ್ದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು (MoHUA), ಯೋಜನೆಯು ಪ್ರಸ್ತುತ ಕಠಿಣ ತಾಂತ್ರಿಕ ಮತ್ತು ಹಣಕಾಸಿನ ಪರಿಶೀಲನೆಯಲ್ಲಿದೆ ಎಂದು ತಿಳಿಸಿತ್ತು. 'ಮೆಟ್ರೋ ರೈಲು ನೀತಿ 2017' ರ ನಿಯಮಾವಳಿಗಳ ಪ್ರಕಾರ, ಬೃಹತ್ ಬಂಡವಾಳ ಹೂಡಿಕೆಯ ಅಗತ್ಯವಿರುವ ಇಂತಹ ಯೋಜನೆಗಳಿಗೆ ಅನುಮೋದನೆ ನೀಡುವ ಮುನ್ನ ಸಮಗ್ರ ಮೌಲ್ಯಮಾಪನ ಮತ್ತು ಆರ್ಥಿಕ ಲಭ್ಯತೆಯನ್ನು ಪರಿಶೀಲಿಸುವುದು ಕಡ್ಡಾಯವಾಗಿದೆ, ಹೀಗಾಗಿ ನಿರ್ದಿಷ್ಟ ಸಮಯದ ಗಡುವನ್ನು ನೀಡಲು ಸಾಧ್ಯವಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿತ್ತು.

ವೆಚ್ಚ ಕಡಿತಕ್ಕೆ BMRCL ಕಸರತ್ತು

ಈ ಯೋಜನೆಯ ಅಂದಾಜು ವೆಚ್ಚ, ವಿಶೇಷವಾಗಿ ಸುರಂಗ ಮಾರ್ಗ (Underground Section) ನಿರ್ಮಾಣಕ್ಕೆ ತಗುಲುವ ಭಾರಿ ವೆಚ್ಚದ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸುದೀರ್ಘ ಚರ್ಚೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಬಿಎಮ್‌ಆರ್‌ಸಿಎಲ್ ವೆಚ್ಚ ಕಡಿತ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿದೆ.

ಸುರಂಗ ಮೆಟ್ರೋ ನಿಲ್ದಾಣಗಳ ಉದ್ದವನ್ನು ತಗ್ಗಿಸುವುದು, ಮಾರ್ಗದ ಜೋಡಣೆಯಲ್ಲಿ (Alignment) ಸಣ್ಣಪುಟ್ಟ ಬದಲಾವಣೆ ಮಾಡುವುದು ಹಾಗೂ ನಿಲ್ದಾಣಗಳ ಸ್ಥಳಗಳನ್ನು ಪರಿಷ್ಕರಿಸುವ ಮೂಲಕ ಯೋಜನೆ ವೆಚ್ಚವನ್ನು ಗಣನೀಯವಾಗಿ ಇಳಿಸಲಾಗಿದೆ. ಅಷ್ಟೇ ಅಲ್ಲದೆ, ಪ್ರಸ್ತಾವಿತ ಅಂದಾಜು ವೆಚ್ಚವನ್ನು ಮರುಪರಿಶೀಲಿಸಿ, ಕಾರ್ಯಾಚರಣೆಯ ಅಗತ್ಯಗಳಿಗೆ ಧಕ್ಕೆಯಾಗದಂತೆ ವೆಚ್ಚ ತಗ್ಗಿಸಲು ಎಂಜಿನಿಯರಿಂಗ್ ಸಲಹಾ ಸಂಸ್ಥೆಯೊಂದನ್ನು ಸಹ ನೇಮಿಸಿಕೊಳ್ಳಲಾಗಿತ್ತು. ಇದೀಗ ಪರಿಷ್ಕೃತ ವೆಚ್ಚದ ವರದಿಯನ್ನು ಕೇಂದ್ರದ ಪರಿಶೀಲನೆಗೆ ಸಲ್ಲಿಸಲಾಗಿದೆ.

ಸಂಚಾರ ಕ್ರಾಂತಿಗೆ ನಾಂದಿ ಹಾಡಲಿರುವ ರೆಡ್ ಲೈನ್

ಈ ರೆಡ್ ಲೈನ್ ಯೋಜನೆ ಪೂರ್ಣಗೊಂಡಲ್ಲಿ ಹೆಬ್ಬಾಳ ಮತ್ತು ಸರ್ಜಾಪುರ ರಸ್ತೆ ನಡುವಿನ ಸಂಚಾರ ವ್ಯವಸ್ಥೆಯಲ್ಲಿ ಭಾರಿ ಕ್ರಾಂತಿಯಾಗಲಿದೆ. ಇದು ಕೋರಮಂಗಲ, ಬೆಂಗಳೂರಿನ ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್ (CBD) ಹಾಗೂ ನಗರದ ಪ್ರಮುಖ ಐಟಿ ಕಾರಿಡಾರ್‌ಗಳನ್ನು ನೇರವಾಗಿ ಸಂಪರ್ಕಿಸಲಿದ್ದು, ನಿತ್ಯ ಲಕ್ಷಾಂತರ ವಾಹನ ಸವಾರರಿಗೆ ಹಾಗೂ ಉದ್ಯೋಗಿಗಳಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದೆ.