ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (BWSSB) ಕಾವೇರಿ ನೀರು ಸರಬರಾಜು ಯೋಜನೆಯ ತುರ್ತು ದುರಸ್ತಿ ಕಾಮಗಾರಿ ಕೈಗೊಂಡಿರುವುದರಿಂದ, ದಿನಾಂಕ 16-07-2026ರ ಗುರುವಾರ, ನಗರದ ಹಲವು ಪ್ರದೇಶಗಳಲ್ಲಿ 12 ಗಂಟೆಗಳ ಕಾಲ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ನಾಗರಿಕರು ನೀರನ್ನು ಶೇಖರಿಸಿಟ್ಟುಕೊಳ್ಳುವಂತೆ ಮಂಡಳಿ ಮನವಿ ಮಾಡಿದೆ.
ಬೆಂಗಳೂರು (ಜು.14): ಸಿಲಿಕಾನ್ ಸಿಟಿ ಬೆಂಗಳೂರಿನ ಜನರೇ ಗಮನಿಸಿ, ನಗರದ ಹಲವು ಭಾಗಗಳಲ್ಲಿ ಗುರುವಾರ (ದಿನಾಂಕ: 16-07-2026) ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ನಗರದ ಹಲವು ಪ್ರಮುಖ ಬಡಾವಣೆಗಳಲ್ಲಿ ಸತತ 12 ಗಂಟೆಗಳ ಕಾಲ ನೀರು ಇರುವುದಿಲ್ಲ.
ನೀರು ಪೂರೈಕೆ ಸ್ಥಗಿತಕ್ಕೆ ಕಾರಣವೇನು?
ಕಾವೇರಿ ನೀರು ಸರಬರಾಜು ಯೋಜನೆ 4ನೇ ಹಂತದ 2ನೇ ಘಟ್ಟದ ಅಡಿಯಲ್ಲಿ ಬರುವ 2700 ಮೀ.ಮೀ. ವ್ಯಾಸದ ಬೃಹತ್ ಕೊಳವೆ ಮಾರ್ಗದಲ್ಲಿನ ‘ಸ್ಕೌರ್ ವಾಲ್ವ್’ (Scour Valve) ಸೋರಿಕೆಯಾಗುತ್ತಿದೆ. ಈ ಸೋರಿಕೆಯನ್ನು ತಡೆಗಟ್ಟಲು ಮತ್ತು ನೀರಿನ ಪೋಲಾಗುವಿಕೆಯನ್ನು ನಿಯಂತ್ರಿಸಲು ಮಂಡಳಿಯು ತುರ್ತು ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜಲರೇಚಕ ಯಂತ್ರಗಾರಗಳನ್ನು ಸ್ಥಗಿತಗೊಳಿಸಲಾಗುತ್ತಿದೆ.
ಸಮಯ ಮತ್ತು ದಿನಾಂಕ:
ದಿನಾಂಕ 16-07-2026ರ ಗುರುವಾರ ಬೆಳಿಗ್ಗೆ 06-00 ಗಂಟೆಯಿಂದ ಸಂಜೆ 06-00 ಗಂಟೆಯವರೆಗೆ ಒಟ್ಟು 12 ಗಂಟೆಗಳ ಕಾಲ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ. ಕಾಮಗಾರಿ ಮುಗಿದ ನಂತರ ನೀರು ಪೂರೈಕೆ ಹಂತ ಹಂತವಾಗಿ ಸಹಜ ಸ್ಥಿತಿಗೆ ಮರಳಲಿದೆ ಎಂದು ಮಂಡಳಿ ತಿಳಿಸಿದೆ.
ಸಾರ್ವಜನಿಕರಿಗೆ ಮನವಿ:
ನೀರಿನ ವ್ಯತ್ಯಯದಿಂದ ಸಾರ್ವಜನಿಕರಿಗೆ ಆಗುವ ಅನಾನುಕೂಲವನ್ನು ತಪ್ಪಿಸಲು, ಮುಂಜಾಗ್ರತಾ ಕ್ರಮವಾಗಿ ಅಂದು ಬೇಕಾಗುವ ಅಗತ್ಯವಿರುವ ನೀರನ್ನು ಮೊದಲೇ ಶೇಖರಿಸಿಟ್ಟುಕೊಳ್ಳುವಂತೆ ಮಂಡಳಿಯು ಮನವಿ ಮಾಡಿದೆ. ಮಂಡಳಿಯ ಈ ತುರ್ತು ಕಾಮಗಾರಿಗೆ ನಾಗರಿಕರು ಸಹಕರಿಸಬೇಕೆಂದು ಕೋರಲಾಗಿದೆ.
ನೀರು ವ್ಯತ್ಯಯವಾಗುವ ಪ್ರದೇಶಗಳ ಪಟ್ಟಿ:
ಕಾವೇರಿ 4ನೇ ಹಂತ 2ನೇ ಘಟ್ಟದ ವ್ಯಾಪ್ತಿಗೆ ಬರುವ ಈ ಕೆಳಗಿನ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಇರಲಿದೆ:
ನಂದಿನಿ ಲೇಔಟ್ 4ನೇ ಬ್ಲಾಕ್, ಬಿ.ಹೆಚ್.ಇ.ಎಲ್ ಲೇಔಟ್, ಶ್ರೀನಿವಾಸ ನಗರ, ಜೈಮಾರುತಿ ನಗರ, ಸಾಕುಮ್ಮ ಲೇಔಟ್, ನರಸಿಂಹಸ್ವಾಮಿ ಲೇಔಟ್, ಮುನೇಶ್ವರನಗರ, ಜ್ಞಾನಜ್ಯೋತಿನಗರ, ಜ್ಞಾನಗಂಗಾನಗರ, ಮಲ್ಲತ್ತಹಳ್ಳಿ, ಎನ್.ಟಿ.ಇ.ಎಫ್ ಲೇಔಟ್, ರೈಲ್ವೆ ಲೇಔಟ್ 1ನೇ ಮತ್ತು 2ನೇ ಹಂತ, ಆರ್.ಹೆಚ್.ಬಿ.ಸಿ.ಎಸ್ ಲೇಔಟ್ 1ನೇ ಮತ್ತು 2ನೇ ಸ್ಟೇಜ್, ಭೈರವೇಶ್ವರನಗರ, ಸುಂಕದಕಟ್ಟೆ, ಜಯಲಕ್ಷ್ಮಿ ಲೇಔಟ್, ಚಂದನ ಲೇಔಟ್, ಚಂದ್ರಲೇಔಟ್, ಗೆಳೆಯರ ಬಳಗ, ಬಿಲೆಕಹಳ್ಳಿ, ಭದ್ರಪ್ಪ ಲೇಔಟ್, ಉಪಕಾರ್ ಲೇಔಟ್, ಉಲ್ಲಾಳ, ಬಾಲಾಜಿ ಲೇಔಟ್, ವಿಶ್ವೇಶ್ವರಯ್ಯ ಲೇಔಟ್ (1 ರಿಂದ 9ನೇ ಬ್ಲಾಕ್), ಪ್ರಕೃತಿನಗರ, ಇನ್ಕಮ್ ಟ್ಯಾಕ್ಸ್ ಲೇಔಟ್, ದಾಸರಹಳ್ಳಿ ವಾರ್ಡ್-15, ಜಾಲಹಳ್ಳಿ ವಾರ್ಡ್-16, ಹೆಚ್.ಎಂ.ಟಿ ವಾರ್ಡ್-38, ಪೀಣ್ಯ ಇಂಡಸ್ಟ್ರಿಯಲ್ ಏರಿಯಾ, ಲಗ್ಗರೆಯಲ್ಲಿ ನೀರು ಪೂರೈಕೆ ವ್ಯತ್ಯಯವಾಗಲಿದೆ.
ಮುಂದುವರೆದು…,
ರಾಜಗೋಪಾಲನಗರ ವಾರ್ಡ್-70, ಹೆಗ್ಗನಹಳ್ಳಿ ವಾರ್ಡ್-71, ಹಿರೋಹಳ್ಳಿ ವಾರ್ಡ್-72, ಉಲ್ಲಾಳ ಲೇಔಟ್, ಕೆಂಗೇರಿ ಉಪನಗರ, ವಿದ್ಯಾಪೀಠ ರಸ್ತೆ, ಜ್ಞಾನಭಾರತಿ, ಆರ್.ಆರ್. ನಗರ, ಜ್ಯೋತಿ ಲೇಔಟ್, ಮೈಸೂರು ರಸ್ತೆ, ಶಿರ್ಕೆ, ಮರಿಯಪ್ಪನಪಾಳ್ಯ, ವಿನಾಯಕ ಲೇಔಟ್, ನಾಗರಬಾವಿ, ಹುಳ್ಳಾಳು, ಸುವರ್ಣ ಲೇಔಟ್, ನಾಯಂಡಹಳ್ಳಿ, ರಂಗನಾಥ ಕಾಲೋನಿ, ಕಾವೇರಿ ನಗರ, ಪಾಪರೆಡ್ಡಿಪಾಳ್ಯ, ಅನ್ನಪೂರ್ಣೇಶ್ವರಿ ನಗರ, ಪಂಚಶೀಲನಗರ, ಅಮೃತಹಳ್ಳಿ, ಜಕ್ಕೂರು, ಯಲಹಂಕ ನ್ಯೂ ಟೌನ್, ವಿದ್ಯಾರಣ್ಯಪುರ, ಸಹಕಾರನಗರ, ಡಿಫೆನ್ಸ್ ಕಾಲೋನಿ, ಚನ್ನಸಂದ್ರ, ನಾಗವಾರ, ಹೆಬ್ಬಾಳ, ಆರ್.ಟಿ ನಗರ, ಮಣಿಪಾಲ್ ಕೌಂಟಿ ರೋಡ್, ಸಿಂಗಸಂದ್ರ, ಕೋನಪ್ಪನ ಅಗ್ರಹಾರ, ಅಂಬೇಡ್ಕರ್ ಕಾಲೋನಿ, ಹೊಸೂರು ರಸ್ತೆ ಸುತ್ತಮುತ್ತಲಿನ ಪ್ರದೇಶಗಳು, ಬೊಮ್ಮನಹಳ್ಳಿ, ಅರೆಕೆರೆ, ಬಿ.ಟಿ.ಎಂ ಲೇಔಟ್, ಜೆ.ಪಿ ನಗರ ಮತ್ತು ಸುತ್ತಮುತ್ತಲಿನ ಬಹುತೇಕ ಬಡಾವಣೆಗಳು.


