- Home
- Karnataka Districts
- ಖಾಕಿ ಏನು ಬೇಕಾದ್ರೂ ಮಾಡಬಹುದಾ? ಸೈಟ್, ಮನೆ, ಹಣ ಕೊಟ್ಟಿಲ್ಲ ನಿಮ್ಮಪ್ಪ ಎಂದು ಪತ್ನಿ ಮೇಲೆ Bengaluru PSI ಹಲ್ಲೆ
ಖಾಕಿ ಏನು ಬೇಕಾದ್ರೂ ಮಾಡಬಹುದಾ? ಸೈಟ್, ಮನೆ, ಹಣ ಕೊಟ್ಟಿಲ್ಲ ನಿಮ್ಮಪ್ಪ ಎಂದು ಪತ್ನಿ ಮೇಲೆ Bengaluru PSI ಹಲ್ಲೆ
ಬೆಂಗಳೂರಿನ ಪಿಎಸ್‌ಐ ಭೈರಪ್ಪ, ತಮ್ಮ ಪತ್ನಿ ಮತ್ತು ಮಾವನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ, ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ಅವರ ಪತ್ನಿಯೇ ಆರೋಪಿಸಿದ್ದಾರೆ. ಇನ್‌ಸ್ಟಾಗ್ರಾಮ್ ಯುವತಿಯರಿಗೆ ಗಾಳ ಹಾಕುವುದು ಸೇರಿದಂತೆ ಹಲವು ಗಂಭೀರ ಆರೋಪ ಮಾಡಿದ್ದು, ಆಯುಕ್ತರ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಕಾನೂನು ಪಾಲಕನಾಗಬೇಕಾದವನು ಮಗು ಪತ್ನಿ ಪಾಲಿಗೆ ವಿಲನ್
ಬೆಂಗಳೂರು: ರಕ್ಷಣೆ ನೀಡಬೇಕಾದ ಕಾನೂನು ಪಾಲಕನೇ ಭಕ್ಷಕನಾದರೇ ಹೇಗೆ? ಇಂತಹದ್ದೊಂದು ಆಘಾತಕಾರಿ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಸದಾ ಸಾರ್ವಜನಿಕರ ಹಿತ ಕಾಯಬೇಕಾದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ಭೈರಪ್ಪ ತಮ್ಮ ಸ್ವಂತ ಪತ್ನಿ ಹಾಗೂ ಮಾವನ ಮೇಲೆಯೇ ಮಚ್ಚು ಬೀಸಿ, ಮಾರಣಾಂತಿಕ ಹಲ್ಲೆ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ. ಸದ್ಯ ಇನ್ಫ್ಯಾಂಟ್ರಿ ರಸ್ತೆಯಲ್ಲಿರುವ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್‌ಐ ಭೈರಪ್ಪ ಅವರ ಕರಾಳ ಮುಖವನ್ನು ನೊಂದ ಪತ್ನಿಯೇ ಈಗ ಬಯಲು ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೂಡ ಒದಗಿಸಿದ್ದಾರೆ.
ಶಿರಡಿ ಪ್ರವಾಸಕ್ಕೆ ಅಡ್ಡಿ, ಕಾಲಿನಿಂದ ಒದ್ದು ದರ್ಪ
ಐದು ವರ್ಷಗಳ ಹಿಂದೆ ವಿವಾಹವಾಗಿದ್ದ ಪಿಎಸ್‌ಐ ಭೈರಪ್ಪ ಹಾಗೂ ಅವರ ಪತ್ನಿಗೆ ಮೂರು ವರ್ಷದ ಹೆಣ್ಣು ಮಗುವಿದೆ. ಮದುವೆಯಾದ ಮೊದಲ ಮೂರು ವರ್ಷಗಳ ಕಾಲ ಸಂಸಾರ ಚೆನ್ನಾಗಿಯೇ ಇತ್ತು. ಆದರೆ ಈ ಬೈರಪ್ಪ ಕಂಡ ಕಂಡ ಹೆಣ್ಣು ಮಕ್ಕಳಿಗೆ ವಾಟ್ಸಾಪ್ ನಲ್ಲಿ ಚಾಚ್ ಮಾಡಿದ್ದು, ಈ ಬಗ್ಗೆ ಸ್ಕ್ರೀನ್ ಚಾಟ್ ಕೂಡ ಲಭ್ಯವಾಗಿದೆ. ಇತ್ತೀಚೆಗೆ ಪತ್ನಿ ಶಿರಡಿ ಪ್ರವಾಸಕ್ಕೆ ಹೋಗಲು ಸಿದ್ಧತೆ ನಡೆಸಿದ್ದಾಗ, ಅದನ್ನು ತಡೆದ ಭೈರಪ್ಪ ಪತ್ನಿಯ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಾಲಿನಿಂದ ಒದ್ದು ದರ್ಪ ಮೆರೆದಿದ್ದಾರೆ ಎನ್ನಲಾಗಿದೆ.
ವರದಕ್ಷಿಣೆ ಕಿರುಕುಳದ ಆರೋಪ:
ಮದುವೆಯಾದಾಗಿನಿಂದ ನಿಮ್ಮ ಮನೆಯವರು ನನಗೇನೂ ಕೊಟ್ಟಿಲ್ಲ. ಒಂದು ಸೈಟ್ ಕೊಟ್ಟಿಲ್ಲ, ಮನೆ ಕಟ್ಟಿಸಿಕೊಟ್ಟಿಲ್ಲ, ಹಣವನ್ನೂ ಕೊಟ್ಟಿಲ್ಲ ಎಂದು ನಿತ್ಯ ಪತ್ನಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ. ಗಲಾಟೆಯಾದಾಗಲೆಲ್ಲಾ ಹೆಂಡತಿ-ಮಗುವನ್ನು ಮನೆಯಿಂದ ಹೊರಗಟ್ಟಿ ಶೋಕಿ ಮಾಡುತ್ತಿದ್ದ ಈ ಪಿಎಸ್‌ಐ, ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಚೀಲದಲ್ಲಿ ಬಟ್ಟೆ ತುಂಬಿಕೊಂಡು ಮನೆಯಿಂದ ಹೊರಹೋಗಿ ಶೋಕಿ ಮಾಡುತ್ತಿದ್ದನಂತೆ.
ಬುದ್ಧಿ ಹೇಳಲು ಬಂದ ಮಾವನ ಮೇಲೆಯೇ ಮಚ್ಚು ಹಿಡಿದು ಹಲ್ಲೆ ಯತ್ನ!
ಇದೇ ಜುಲೈ 12 ರಂದು ಮನೆಯಲ್ಲಿ ಮತ್ತೊಮ್ಮೆ ದೊಡ್ಡ ಜಗಳ ನಡೆದಿದೆ. ಗಲಾಟೆ ಬಿಡಿಸಲು ಹಾಗೂ ಅಳಿಯನಿಗೆ ಬುದ್ಧಿ ಹೇಳಲು ಸಂತ್ರಸ್ತೆಯ ತಂದೆ (ಮಾವ) ಮನೆಗೆ ಆಗಮಿಸಿದ್ದರು. ಆದರೆ, ಮದಾಂದನಾಗಿದ್ದ ಪಿಎಸ್‌ಐ ಭೈರಪ್ಪ, ಮಾವನ ಮೇಲೆಯೇ ಮಚ್ಚು ಹಿಡಿದು ಕೊಲೆ ಮಾಡಲು ಯತ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಪತ್ನಿಯನ್ನು ಹೆದರಿಸಲು ರೌಡಿಶೀಟರ್‌ಗಳನ್ನು ಕರೆಸಿ ಮನೆ ಮುಂದೆ ನಿಲ್ಲಿಸುತ್ತಿದ್ದ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಈ ಸಂಬಂಧ ವಿಡಿಯೋ ಕೂಡ ಇದ್ದು, ಕೈನಲ್ಲಿ ಮಚ್ಚು ಹಿಡಿದಿರುವುದು ಕಾಣಿಸಿದೆ.
ಇನ್‌ಸ್ಟಾಗ್ರಾಮ್ ಯುವತಿಯರಿಗೆ ಗಾಳ, ಪತ್ನಿ ಇದ್ದರೂ ಮತ್ತೊಂದು ಮದುವೆಗೆ ಬೇಡಿಕೆ!
ಪತ್ನಿಯ ಆರೋಪಗಳ ಪ್ರಕಾರ, ಪಿಎಸ್‌ಐ ಭೈರಪ್ಪನ ಕಾಟ ಕೇವಲ ವರದಕ್ಷಿಣೆಗೆ ಸೀಮಿತವಾಗಿಲ್ಲ. ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗುವ ಅಪರಿಚಿತ ಯುವತಿಯರಿಗೆ ಮೆಸೇಜ್ ಕಳುಹಿಸಿ, ಅವರೊಂದಿಗೆ ಸುತ್ತಾಡಿ ಮದುವೆಯಾಗುವುದಾಗಿ ನಂಬಿಸುತ್ತಿದ್ದ. ಪತ್ನಿ ಮತ್ತು ಮಗು ಮನೆಯಲ್ಲಿದ್ದರೂ, ಬೇರೆ ಯುವತಿಯರನ್ನು ಮನೆಗೆ ಕರೆತರುತ್ತಿದ್ದ. ಇದನ್ನು ಪತ್ನಿ ಪ್ರಶ್ನಿಸಿದಾಗ ಕುಡಿದು ಬಂದು ನಿತ್ಯ ಗಲಾಟೆ ಮಾಡಿ ಪತ್ನಿ ಮತ್ತು ಮಗುವನ್ನು ಥಳಿಸುತ್ತಿದ್ದ. ಮದುವೆಗೆ ಒಪ್ಪದ ಯುವತಿಯರಿಗೂ ತನ್ನ ಪೊಲೀಸ್ ಅಧಿಕಾರ ಬಳಸಿ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ ಎಂದು ಪತ್ನಿ ಕಣ್ಣೀರು ಹಾಕಿದ್ದಾರೆ.
ಕೆಂಗೇರಿ ಪೊಲೀಸರ ವಿರುದ್ಧವೇ ಪತ್ನಿ ಆಕ್ರೋಶ: ಕಮಿಷನರ್ ಮೊರೆ ಹೋಗಲು ಸಿದ್ಧತೆ
ಈ ಇಡೀ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆ ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.
'ನನ್ನ ಪತಿ ಪೊಲೀಸ್ ಅಧಿಕಾರಿಯಾಗಿರುವುದರಿಂದ ಕೆಂಗೇರಿ ಠಾಣೆಯ ಪೊಲೀಸರು ಆತನ ವಿರುದ್ಧ ಎಫ್‌ಐಆರ್ (FIR) ದಾಖಲಿಸಿಕೊಳ್ಳುತ್ತಿಲ್ಲ. ಕೇವಲ ಎನ್‌ಸಿಆರ್ (Non-Cognizable Report) ದಾಖಲಿಸಿ ಕೈತೊಳೆದುಕೊಂಡು ನನ್ನನ್ನು ವಾಪಸ್ ಕಳುಹಿಸಿದ್ದಾರೆ' ಎಂದು ಆರೋಪಿಸಿದ್ದಾರೆ. ತಮಗೆ ನ್ಯಾಯ ಸಿಗದ ಹಿನ್ನೆಲೆಯಲ್ಲಿ, ಸಂತ್ರಸ್ತೆ ಇದೀಗ ನಗರ ಪೊಲೀಸ್ ಆಯುಕ್ತರು (City Police Commissioner) ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ (DGP) ಖುದ್ದಾಗಿ ಭೇಟಿ ನೀಡಿ ಪತಿಯ ವಿರುದ್ಧ ಲಿಖಿತ ದೂರು ನೀಡಲು ನಿರ್ಧರಿಸಿದ್ದಾರೆ. ಖಾಕಿ ಪಡೆಯೊಳಗಿನ ಈ ಕೃತ್ಯ ಇಲಾಖೆಗೆ ದೊಡ್ಡ ಮಟ್ಟದ ಮುಜುಗರ ತಂದಿಟ್ಟಿದೆ.

