ಬೆಂಗಳೂರಿನ 'ನಮ್ಮ ಮೆಟ್ರೋ' ರೈಲಿನಲ್ಲಿ ಯುವ ಜೋಡಿಯೊಂದು ಸಾರ್ವಜನಿಕವಾಗಿ ಮುತ್ತಿಕ್ಕುತ್ತಿರುವ ದೃಶ್ಯ ವೈರಲ್ ಆಗಿದೆ. ಈ ಘಟನೆಯು ಸಹ-ಪ್ರಯಾಣಿಕರಲ್ಲಿ ಮುಜುಗರ ಉಂಟುಮಾಡಿದ್ದು, ಸಾರ್ವಜನಿಕ ಸ್ಥಳದಲ್ಲಿನ ಅಸಭ್ಯ ವರ್ತನೆ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ ನಿಯಮಗಳ ಪಾಲನೆ ಮತ್ತು ಕಠಿಣ ಕ್ರಮಗಳ ಅಗತ್ಯತೆಯ ಬಗ್ಗೆ ಚರ್ಚೆ ಶುರುವಾಗಿದೆ.

ಬೆಂಗಳೂರು: ಇಷ್ಟು ದಿನ ಕೇವಲ ದೆಹಲಿ ಮೆಟ್ರೋ ರೈಲುಗಳಲ್ಲಿ ನಡೆಯುತ್ತಿದೆ ಎಂಬ ಸುದ್ದಿಗಳಿತ್ತು. ಇದೀಗ ಪ್ರೇಮಿಗಳ ಸಾರ್ವಜನಿಕ ಸರಸ ಸಲ್ಲಾಪ ಹಾಗೂ ಅತಿರೇಕದ ವರ್ತನೆಗಳು ಬೆಂಗಳೂರಿನ ಹೆಮ್ಮೆಯ 'ನಮ್ಮ ಮೆಟ್ರೋ' ರೈಲಿಗೂ ಕಾಲಿಟ್ಟಿವೆ. ನಮ್ಮ ಮೆಟ್ರೋ ರೈಲಿನೊಳಗೆ ಯುವಕ-ಯುವತಿಯೊಬ್ಬರು ಸಾರ್ವಜನಿಕ ಸ್ಥಳವೆಂಬ ಕನಿಷ್ಠ ಜ್ಞಾನವೂ ಇಲ್ಲದೆ ಮುತ್ತಿಕ್ಕುತ್ತಾ ಮೈಮರೆತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದೆ.

ಕೆ.ಆರ್. ಪುರಂ ನಿಲ್ದಾಣಕ್ಕೆ ಬರುತ್ತಿದ್ದ ರೈಲಿನಲ್ಲಿ ನಡೆದ ಘಟನೆ

ನೇರಳೆ ಮಾರ್ಗದ ವೈಟ್‌ಫೀಲ್ಡ್ ಕಡೆಗೆ ಸಂಚರಿಸುವ ಮೆಟ್ರೋ ಮಾರ್ಗದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಕೆ.ಆರ್. ಪುರಂ (K.R. Puram) ಮೆಟ್ರೋ ನಿಲ್ದಾಣಕ್ಕೆ ರೈಲು ತಲುಪುವಷ್ಟರಲ್ಲಿ, ಬೋಗಿಯಲ್ಲಿದ್ದ ಯುವ ಜೋಡಿಯೊಂದು ಸಹ-ಪ್ರಯಾಣಿಕರ ಸಮ್ಮುಖದಲ್ಲೇ ಸಾರ್ವಜನಿಕವಾಗಿ ಪ್ರೇಮದಾಟದಲ್ಲಿ ಮುಳುಗಿದೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಕ ಮತ್ತು ಯುವತಿ ಪರಸ್ಪರ ತಬ್ಬಿಕೊಂಡು, ಗಾಢವಾಗಿ ಮುತ್ತಿಕ್ಕುತ್ತಾ (Kissing) ಪ್ರಣಯ ಸಲ್ಲಾಪದಲ್ಲಿ ಪ್ರಯಾಣ ಬೆಳೆಸಿದ್ದಾರೆ. ರೈಲು ಚಲಿಸುತ್ತಿರುವಾಗಲೇ ಈ ಜೋಡಿ ಸಾರ್ವಜನಿಕವಾಗಿ ಲಿಪ್ ಟು ಲಿಪ್ ಕಿಸ್ ಮಾಡಿಕೊಂಡಿದೆ.

ಪ್ರಯಾಣಿಕರ ಅಸಮಾಧಾನ

ಮೆಟ್ರೋ ರೈಲಿನಲ್ಲಿ ಮಹಿಳೆಯರು, ವೃದ್ಧರು ಹಾಗೂ ಶಾಲಾ-ಕಾಲೇಜು ಮಕ್ಕಳು ಪ್ರತಿದಿನ ಲಕ್ಷಾಂತರ ಸಂಖ್ಯೆಯಲ್ಲಿ ಪ್ರಯಾಣಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇವರ ಅಸಭ್ಯ ವರ್ತನೆಯನ್ನು ಕಂಡು ಅಲ್ಲೇ ಪ್ರಯಾಣಿಸುತ್ತಿದ್ದ ಸಹ-ಪ್ರಯಾಣಿಕರೊಬ್ಬರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಸಹ-ಪ್ರಯಾಣಿಕನಿಂದ ವಿಡಿಯೋ ಸೆರೆ, ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ

ಜೋಡಿಯ ಈ ವರ್ತನೆಯಿಂದ ಮುಜುಗರಕ್ಕೊಳಗಾದ ಪ್ರಯಾಣಿಕರೊಬ್ಬರು, ಸಾರ್ವಜನಿಕ ಸ್ಥಳದಲ್ಲಿ ಶಿಸ್ತು ಕಾಪಾಡಬೇಕೆಂಬ ಉದ್ದೇಶದಿಂದ ಹಾಗೂ ಇವರ ಅಸಭ್ಯ ವರ್ತನೆಯನ್ನು ಬಯಲಿಗೆಳೆಯಲು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಮೆಟ್ರೋದಲ್ಲಿ ಕುಟುಂಬಸ್ಥರು ಪ್ರಯಾಣಿಸುವಾಗ ಇಂತಹ ವರ್ತನೆಗಳು ಇತರರಿಗೆ ತೀವ್ರ ಮುಜುಗರ ಉಂಟುಮಾಡುತ್ತವೆ. ವೈಯಕ್ತಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಸಾರ್ವಜನಿಕ ನಿಯಮಗಳನ್ನು ಗಾಳಿಗೆ ತೂರುವುದು ಸರಿಯಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬಿಎಂಆರ್‌ಸಿಎಲ್ (BMRCL) ನಿಯಮಗಳು ಲೆಕ್ಕಕ್ಕೆ ಮಾತ್ರವೇ?

ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಕಠಿಣ ನಿಯಮಗಳ ಪ್ರಕಾರ, ಮೆಟ್ರೋ ಆವರಣ ಹಾಗೂ ರೈಲಿನ ಒಳಭಾಗದಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುವುದು ಅಥವಾ ಅಸಭ್ಯವಾಗಿ ವರ್ತಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಇತರೆ ಪ್ರಯಾಣಿಕರಿಗೆ ಮುಜುಗರ ಉಂಟುಮಾಡುವ ಯಾವುದೇ ಅಸಭ್ಯ ವರ್ತನೆ ಕಂಡುಬಂದರೆ ದಂಡ ವಿಧಿಸಲು ಅಥವಾ ಅವರನ್ನು ರೈಲಿನಿಂದ ಕೆಳಗಿಳಿಸಲು ಭದ್ರತಾ ಸಿಬ್ಬಂದಿಗೆ ಸಂಪೂರ್ಣ ಅಧಿಕಾರವಿದೆ. ಮೆಟ್ರೋ ರೈಲಿನೊಳಗೆ ಅನುಮತಿ ಇಲ್ಲದೆ ವಿಡಿಯೋಗಳನ್ನು ಚಿತ್ರೀಕರಿಸುವುದು ಹಾಗೂ ರೀಲ್ಸ್ ಮಾಡುವುದು ಕೂಡ ಮೆಟ್ರೋ ಕಾಯ್ದೆಯಡಿ ನಿಯಮಬಾಹಿರವಾಗಿದೆ.

ಈ ಹಿಂದೆ ದೆಹಲಿ ಮೆಟ್ರೋದಲ್ಲಿ ಇಂತಹ ಘಟನೆಗಳು ಮಿತಿಮೀರಿದಾಗ ಅಲ್ಲಿನ ಮೆಟ್ರೋ ಆಡಳಿತ ಮಂಡಳಿಯು ರೈಲಿನೊಳಗೆ ಫ್ಲೈಯಿಂಗ್ ಸ್ಕ್ವಾಡ್‌ಗಳು ಹಾಗೂ ಬಿಗಿ ಭದ್ರತೆಯನ್ನು ನಿಯೋಜಿಸಿತ್ತು. ಈಗ ಬೆಂಗಳೂರಿನಲ್ಲೂ ಇಂತಹ ಪ್ರವೃತ್ತಿ ಶುರುವಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಬಿಎಂಆರ್‌ಸಿಎಲ್ ಅಧಿಕಾರಿಗಳು ಇಂತಹ ಘಟನೆಗಳು ಮರುಕಳಿಸದಂತೆ ತಕ್ಷಣವೇ ಕಠಿಣ ಕ್ರಮ ಜರುಗಿಸಬೇಕೆಂದು ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ.