ಜಾಗತಿಕ ಮಟ್ಟದಲ್ಲಿ ನಿರ್ಮಾಣ ವೆಚ್ಚ ಹೆಚ್ಚಾಗುತ್ತಿದ್ದರೂ, ಏಷ್ಯಾ ಪೆಸಿಫಿಕ್ ವಲಯದಲ್ಲಿ ಹೊಸ ಕಚೇರಿ ಕಟ್ಟಡ ನಿರ್ಮಾಣಕ್ಕೆ ಬೆಂಗಳೂರು ಅತ್ಯಂತ ಲಾಭದಾಯಕ ಮಾರುಕಟ್ಟೆಯಾಗಿದೆ. ಐಟಿ ಕಂಪನಿಗಳು ಮತ್ತು ಜಿಸಿಸಿಗಳ ನಿರಂತರ ಬೇಡಿಕೆಯಿಂದಾಗಿ 2035ರವರೆಗೂ ಬೆಂಗಳೂರು ಈ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ ಎಂದು ಕುಶ್ಮನ್ ಆ್ಯಂಡ್ ವೇಕ್ಫೀಲ್ಡ್ ವರದಿ ತಿಳಿಸಿದೆ.
ಬೆಂಗಳೂರು: ಜಾಗತಿಕ ಮಟ್ಟದಲ್ಲಿ ನಿರ್ಮಾಣ ವೆಚ್ಚ ಮತ್ತು ಸಾಲದ ಬಡ್ಡಿದರಗಳು ಹೆಚ್ಚಾಗುತ್ತಿವೆ. ಇಂಥ ಸಂದರ್ಭದಲ್ಲೂ ಏಷ್ಯಾ ಪೆಸಿಫಿಕ್ (APAC) ವಲಯದಲ್ಲಿ ಹೊಸ ಕಚೇರಿ ಕಟ್ಟಡಗಳ ನಿರ್ಮಾಣಕ್ಕೆ ಬೆಂಗಳೂರು ಅತ್ಯಂತ ಆಕರ್ಷಕ ಮತ್ತು ಲಾಭದಾಯಕ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಪ್ರಮುಖ ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ Cushman & Wakefield ಬಿಡುಗಡೆ ಮಾಡಿರುವ ನೂತನ ವರದಿಯಲ್ಲಿ ಇದು ಬಹಿರಂಗವಾಗಿದೆ.
ಮಾಹಿತಿ ತಂತ್ರಜ್ಞಾನ ಕಂಪನಿಗಳು ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳಿಂದ (GCCs) ಕಚೇರಿ ಸ್ಥಳಾವಕಾಶಕ್ಕೆ ನಿರಂತರವಾಗಿ ಬೇಡಿಕೆ ಬರುತ್ತಿವೆ. ಇದು ಬೆಂಗಳೂರಿನ ಬೆಳವಣಿಗೆಗೆ ಮುಖ್ಯ ಕಾರಣವಾಗಿದೆ. 2035ರವರೆಗೂ ಬೆಂಗಳೂರಿನಲ್ಲಿ ಹೊಸ ಕಚೇರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ವಾಣಿಜ್ಯಿಕವಾಗಿ ಅತ್ಯಂತ ಲಾಭದಾಯಕವಾಗಿರಲಿದೆ ಎಂದು ವರದಿ ತಿಳಿಸಿದೆ.
ರೆಂಟ್ ಹೆಚ್ಚಳ
ಪ್ರಸ್ತುತ ಬೆಂಗಳೂರಿನ ಪ್ರಮುಖ ವಾಣಿಜ್ಯ ಪ್ರದೇಶಗಳ ಕಚೇರಿ ಬಾಡಿಗೆ ದರವು ಹೆಚ್ಚಾಗಿದೆ. ನಿರ್ಮಾಣ ವೆಚ್ಚಕ್ಕೆ ತಕ್ಕಂತೆ ಇರಬೇಕಾದ ಕನಿಷ್ಠ ಬಾಡಿಗೆಗಿಂತ ಶೇ. 16ರಷ್ಟು ಹೆಚ್ಚಾಗಿದೆ. ಇದು ಹೊಸ ಕಟ್ಟಡ ನಿರ್ಮಾಣಕಾರರಿಗೆ ಉತ್ತಮ ಲಾಭದ ಭರವಸೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಈ ಲಾಭದ ಅಂತರ ಮತ್ತಷ್ಟು ಹೆಚ್ಚಾಗಲಿದೆ. 2030ರ ವೇಳೆಗೆ ಶೇ. 29ಕ್ಕೆ ಮತ್ತು 2035ರ ವೇಳೆಗೆ ಶೇ. 44ಕ್ಕೆ ತಲುಪುವ ಅಂದಾಜಿದೆ. ವಾರ್ಷಿಕವಾಗಿ ಪ್ರಮುಖ ಮಾರುಕಟ್ಟೆ ಬಾಡಿಗೆಯು ಶೇ. 5ರಷ್ಟು ಬೆಳವಣಿಗೆ ಕಾಣಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕುಶ್ಮನ್ ಆ್ಯಂಡ್ ವೇಕ್ಫೀಲ್ಡ್ ಸಂಸ್ಥೆಯ ಬೆಂಗಳೂರು ಸಿಇಓ ರಮಿತಾ ಅರೋರಾ.. ತಂತ್ರಜ್ಞಾನ ಕಂಪನಿಗಳು ಮತ್ತು ಜಿಸಿಸಿಗಳ ನಿರಂತರ ಬೇಡಿಕೆಯಿಂದಾಗಿ ಏಷ್ಯಾ ಪೆಸಿಫಿಕ್ ವಲಯದಲ್ಲೇ ಬೆಂಗಳೂರು ಅತ್ಯಂತ ಬಲಿಷ್ಠ ಮಾರುಕಟ್ಟೆ. 2035ರ ವೇಳೆಗೆ ಬಾಡಿಗೆ ಲಾಭದ ಅಂತರ ಶೇ. 44ಕ್ಕೆ ತಲುಪಲಿರುವುದು ನಗರದ ದೀರ್ಘಕಾಲೀನ ಅಭಿವೃದ್ಧಿ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ ಎಂದಿದ್ದಾರೆ.
ಬೇರೆ ಬೇರೆ ನಗರಗಳ ಸ್ಥಿತಿ ಹೇಗಿದೆ?
- ವರದಿಯಲ್ಲಿ ವಿಶ್ಲೇಷಿಸಲಾದ ಐದು ಪ್ರಮುಖ ಮಾರುಕಟ್ಟೆಗಳ ಪೈಕಿ ದಕ್ಷಿಣ ಕೊರಿಯಾದ ಸಿಯೋಲ್ (Seoul) ಶೇ. 26ರಷ್ಟು ಲಾಭದ ಅಂತರದೊಂದಿಗೆ ಅಗ್ರಸ್ಥಾನದಲ್ಲಿದೆ.
- ಸಿಂಗಾಪುರ: ಹೊಸ ಯೋಜನೆಗಳಿಗಿಂತ ಹಳೆಯ ಕಚೇರಿ ಕಟ್ಟಡಗಳ ನವೀಕರಣದತ್ತ ಹೆಚ್ಚು ಅವಲಂಬಿತವಾಗಲಿದೆ.
- ಟೋಕಿಯೊ:ಖಾಲಿ ಇರುವ ಕಚೇರಿಗಳ ಪ್ರಮಾಣ ಕೇವಲ ಶೇ. 0.3ರಷ್ಟಿದ್ದರೂ, ಹೆಚ್ಚುತ್ತಿರುವ ಹಣಕಾಸು ವೆಚ್ಚದಿಂದಾಗಿ 2030ರ ನಂತರ
- ಹೊಸ ನಿರ್ಮಾಣಗಳು ಲಾಭದಾಯಕವಾಗಿ ಉಳಿಯುವುದಿಲ್ಲ.
- ಸಿಡ್ನಿ:ನಿರ್ಮಾಣ ವೆಚ್ಚಕ್ಕೆ ತಕ್ಕ ಬಾಡಿಗೆಯು ಮಾರುಕಟ್ಟೆ ಬಾಡಿಗೆಗಿಂತ ಶೇ. 24ರಷ್ಟು ಹೆಚ್ಚಿರುವುದರಿಂದ, 2035ರವರೆಗೂ ಹೊಸ ಯೋಜನೆಗಳಿಗೆ ತೀವ್ರ ಹಿನ್ನಡೆಯಾಗಲಿದೆ.
ಒಟ್ಟಾರೆ ಪ್ರತಿಭಾನ್ವಿತ ಮಾನವ ಸಂಪನ್ಮೂಲ ಮತ್ತು ಹೆಚ್ಚುತ್ತಿರುವ ಕಂಪನಿಗಳ ಬೇಡಿಕೆಯಿಂದಾಗಿ ಮುಂಬರುವ ವರ್ಷಗಳಲ್ಲಿ ಜಾಗತಿಕ ಹೂಡಿಕೆದಾರರು ಮತ್ತು ರಿಯಲ್ ಎಸ್ಟೇಟ್ ಡೆವಲಪರ್ಗಳ ನೆಚ್ಚಿನ ತಾಣವಾಗಿ ಬೆಂಗಳೂರು ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲಿದೆ.










