ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಮತ್ತು ಬಿಎಂಟಿಸಿ ಜಂಟಿಯಾಗಿ ಸಿಹಿಸುದ್ದಿ ನೀಡಿವೆ. ಪಿಂಕ್ ಲೈನ್ ಮಾರ್ಗದಲ್ಲಿ ಹೊಸದಾಗಿ 28 ಫೀಡರ್ ಬಸ್‌ಗಳನ್ನು ರಸ್ತೆಗಿಳಿಸಲಾಗಿದೆ. ಇದು ಪ್ರಯಾಣಿಕರಿಗೆ ಟ್ರಾಫಿಕ್ ಕಿರಿಕಿರಿ ಇಲ್ಲದೆ ಸುಲಭವಾಗಿ ಗಮ್ಯಸ್ಥಾನ ತಲುಪಲು ಸಹಾಯ ಮಾಡಲಿದೆ.

ಬೆಂಗಳೂರು (ನ.16): ಸಿಲಿಕಾನ್ ಸಿಟಿ ಬೆಂಗಳುರಿನ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಮತ್ತು ಬಿಎಂಟಿಸಿ (BMTC) ಜಂಟಿಯಾಗಿ ಸಿಹಿಸುದ್ದಿ ನೀಡಿವೆ. ಪಿಂಕ್ ಲೈನ್ ಮಾರ್ಗದ ಕಾಳೇನ ಅಗ್ರಹಾರದಿಂದ ಎಸ್.ಜಿ. ಪಾಳ್ಯ (ಶುದ್ಧಗುಂಟೆಪಾಳ್ಯ) ವರೆಗಿನ ವಾಣಿಜ್ಯ ಸಂಚಾರ ಆರಂಭವಾದ ಬೆನ್ನಲ್ಲೇ, ಪ್ರಯಾಣಿಕರಿಗೆ ನಿಲ್ದಾಣ ತಲುಪಲು ಸುಲಭವಾಗುವಂತೆ 28 ಪ್ರತ್ಯೇಕ ಮೆಟ್ರೋ ಫೀಡರ್ ಬಸ್‌ಗಳನ್ನು ರಸ್ತೆಗಿಳಿಸಲಾಗಿದೆ.

ಪ್ರಯಾಣಿಕರು ತಮ್ಮ ಮನೆ ಅಥವಾ ಕಚೇರಿಗಳಿಂದ ಮೆಟ್ರೋ ನಿಲ್ದಾಣಗಳಿಗೆ ಹಾಗೂ ನಿಲ್ದಾಣಗಳಿಂದ ಗಮ್ಯಸ್ಥಾನಗಳಿಗೆ ಸುಲಭವಾಗಿ, ಟ್ರಾಫಿಕ್ ಕಿರಿಕಿರಿ ಇಲ್ಲದೆ ತಲುಪಲು ಈ 'ಮೊದಲ ಮತ್ತು ಕೊನೆಯ ಹಂತದ ಸಾರಿಗೆ ಸಂಪರ್ಕ' (First and Last-Mile Connectivity) ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಹೊಸದಾಗಿ ಆರಂಭವಾದ 5 ಫೀಡರ್ ಮಾರ್ಗಗಳು ಮತ್ತು ಟ್ರಿಪ್ ವಿವರ:

ಮಾರ್ಗ ಸಂಖ್ಯೆಎಲ್ಲಿಂದ – ಎಲ್ಲಿಗೆಸಂಚರಿಸುವ ಪ್ರಮುಖ ಸ್ಥಳಗಳುಬಸ್‌ಗಳು / ಟ್ರಿಪ್‌ಗಳು
MF-18Jಜಯದೇವ ಆಸ್ಪತ್ರೆ ಮೆಟ್ರೋ ನಿಲ್ದಾಣ – ಉತ್ತರಹಳ್ಳಿದಾಲ್ಮಿಯಾ ವೃತ್ತ, ಜೆ.ಪಿ. ನಗರ 6ನೇ ಹಂತ, ಕದಿರೇನಹಳ್ಳಿ ಕ್ರಾಸ್, ಚಿಕ್ಕಲ್ಲಸಂದ್ರ ಅರಳಿಮರ7 ಬಸ್‌ಗಳು / 126 ಟ್ರಿಪ್‌ಗಳು
MF-18JTಜಯದೇವ ಆಸ್ಪತ್ರೆ ಮೆಟ್ರೋ ನಿಲ್ದಾಣ – ಜಯದೇವ ಆಸ್ಪತ್ರೆ (ವೃತ್ತಾಕಾರದ ಮಾರ್ಗ)ಡೈರಿ ವೃತ್ತ, ಸಿದ್ದಗುಂಟೆಪಾಳ್ಯ, ತಾವರೆಕೆರೆ, ಬಿಟಿಎಂ 16ನೇ ಮುಖ್ಯರಸ್ತೆ3 ಬಸ್‌ಗಳು / 53 ಟ್ರಿಪ್‌ಗಳು
MF-18Tಎಸ್.ಜಿ. ಪಾಳ್ಯ ಮೆಟ್ರೋ ನಿಲ್ದಾಣ – ಎಸ್.ಜಿ. ಪಾಳ್ಯ (ವೃತ್ತಾಕಾರದ ಮಾರ್ಗ)ಕಾರ್ಮೆಲ್ ಕಾನ್ವೆಂಟ್, ಜಯನಗರ ಬಸ್ ನಿಲ್ದಾಣ, ಬನಶಂಕರಿ, ಜೆ.ಪಿ. ನಗರ 6ನೇ ಹಂತ, ದಾಲ್ಮಿಯಾ ವೃತ್ತ, ಜಯದೇವ ಆಸ್ಪತ್ರೆ, ಡೈರಿ ವೃತ್ತ6 ಬಸ್‌ಗಳು / 54 ಟ್ರಿಪ್‌ಗಳು
MF-18JPಎನ್.ಎಸ್. ಪಾಳ್ಯ ಜೆ.ಪಿ. ನಗರ 4ನೇ ಹಂತ – ಎನ್.ಎಸ್. ಪಾಳ್ಯ (ವೃತ್ತಾಕಾರದ ಮಾರ್ಗ)ಆರ್.ವಿ. ದಂತ ವೈದ್ಯಕೀಯ ಕಾಲೇಜು, ಪುಟ್ಟೇನಹಳ್ಳಿ, ಅರಕೆರೆ ಗೇಟ್, ಬಿಳೇಕಹಳ್ಳಿ6 ಬಸ್‌ಗಳು / 72 ಟ್ರಿಪ್‌ಗಳು
MF-22HSಹುಳಿಮಾವು ಮೆಟ್ರೋ ನಿಲ್ದಾಣ – ಸಿಂಗಸಂದ್ರ ಮೆಟ್ರೋ ನಿಲ್ದಾಣಜ್ಞಾನಪ್ಪನಹಳ್ಳಿ ಕ್ರಾಸ್, ಬೇಗೂರು ಕ್ರಾಸ್, ಚಿಕ್ಕ ಬೇಗೂರು6 ಬಸ್‌ಗಳು / 96 ಟ್ರಿಪ್‌ಗಳು

ಈಗಾಗಲೇ ಚಾಲ್ತಿಯಲ್ಲಿರುವ ಮುಂದುವರಿದ ಫೀಡರ್ ಬಸ್‌ಗಳು:

ಈ ಹೊಸ ಮಾರ್ಗಗಳ ಜತೆಗೆ, ಪಿಂಕ್ ಲೈನ್ ನಿಲ್ದಾಣಗಳನ್ನು ಸಂಪರ್ಕಿಸುವ ಕೆಳಗಿನ 3 ಪ್ರಮುಖ ಮಾರ್ಗಗಳ ಸೇವೆ ಎಂದಿನಂತೆ ಮುಂದುವರಿಯಲಿದೆ:

MF-22HC: ಹುಳಿಮಾವು ಗೇಟ್ – ಸೆಂಟ್ರಲ್ ಸಿಲ್ಕ್ ಬೋರ್ಡ್ (ವಿಜಯ ಬ್ಯಾಂಕ್ ಲೇಔಟ್, ಕೋಡಿಚಿಕ್ಕನಹಳ್ಳಿ, ಬೊಮ್ಮನಹಳ್ಳಿ ಮಾರ್ಗವಾಗಿ).

MF-18: ಬನಶಂಕರಿ – ಕೋಳಿ ಫಾರಂ ಗೇಟ್ (ಆರ್.ವಿ. ರಸ್ತೆ, ಜಯನಗರ, ಬಿಳೇಕಹಳ್ಳಿ, ಹುಳಿಮಾವು ಗೇಟ್, ಗೊಟ್ಟಿಗೆರೆ ಮಾರ್ಗವಾಗಿ ಜಯದೇವ, ಹುಳಿಮಾವು, ಕಾಳೇನ ಅಗ್ರಹಾರ ನಿಲ್ದಾಣಗಳ ಸಂಪರ್ಕ).

MF-45: ಅನುಗ್ರಹ ಬಡಾವಣೆ – ವಿಜಯನಗರ ಟಿಟಿಎಂಸಿ (ಜೆ.ಪಿ. ನಗರ, ಕತ್ರಿಗುಪ್ಪೆ, ಮೈಸೂರು ರಸ್ತೆ, ಅತ್ತಿಗುಪ್ಪೆ ಮಾರ್ಗವಾಗಿ ಎನ್.ಎಸ್. ಪಾಳ್ಯ ಸಂಪರ್ಕ).

ಸಾರ್ವಜನಿಕರಿಗೆ ಬಿಎಂಆರ್‌ಸಿಎಲ್ ಮನವಿ:

ಬನ್ನೇರುಘಟ್ಟ ರಸ್ತೆ, ಜೆ.ಪಿ. ನಗರ, ಬಿಟಿಎಂ ಲೇಔಟ್ ಮತ್ತು ಬೇಗೂರು ಭಾಗದ ನಿವಾಸಿಗಳು ಹಾಗೂ ಉದ್ಯೋಗಿಗಳಿಗೆ ಈ ಬಸ್‌ಗಳು ವರದಾನವಾಗಲಿವೆ. ರಸ್ತೆ ದಟ್ಟಣೆ ಕಡಿಮೆ ಮಾಡಲು ಹಾಗೂ ಸುರಕ್ಷಿತ, ಪರಿಸರಸ್ನೇಹಿ ಪ್ರಯಾಣಕ್ಕಾಗಿ ಸಾರ್ವಜನಿಕರು ಮೆಟ್ರೋ ಮತ್ತು ಫೀಡರ್ ಬಸ್ ಸೇವೆಗಳನ್ನು ಗರಿಷ್ಠ ಪ್ರಮಾಣದಲ್ಲಿ ಸದುಪಯೋಗ ಮಾಡಿಕೊಳ್ಳುವಂತೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಮನವಿ ಮಾಡಿದ್ದಾರೆ.