ಕಚ್ಚಾವಸ್ತುಗಳ ಕೊರತೆ ನೆರೆಯ ಸರ್ಕಾರದ ನಿರ್ಬಂಧದಿಂದಾಗಿ ಬೆಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಮರಳು, ಸಿಮೆಂಟ್ ಮತ್ತು ಉಕ್ಕಿನ ಬೆಲೆ ಏರಿಕೆಯಿಂದ ನಿರ್ಮಾಣ ವೆಚ್ಚ ಶೇ.33ರಷ್ಟು ಹೆಚ್ಚಾಗಿದ್ದು, ಯೋಜನೆಗಳು ವಿಳಂಬವಾಗುತ್ತಿವೆ. ಬಿಕ್ಕಟ್ಟು ಪರಿಹರಿಸಲು ಸರ್ಕಾರದ ತುರ್ತು ಹಸ್ತಕ್ಷೇಪಕ್ಕೆ ಕ್ರೆಡೈ ಆಗ್ರಹಿಸಿದೆ. ರಿಯಲ್ ಎಸ್ಟೇಟ್ ಕ್ಷೇತ್ರ ತನ್ನ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿದೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರವು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕಚ್ಚಾವಸ್ತು ಅಭಾವ ಮತ್ತು ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿದೆ. ಮನೆಗಳ ಮಾರಾಟದಲ್ಲಿ ಮಂದಗತಿಯಾಗಿದೆ, ಇದರ ಬೆನ್ನಲ್ಲೇ ನಿರ್ಮಾಣ ವೆಚ್ಚವು ಸುಮಾರು ಶೇ.33 ರಷ್ಟು ಹೆಚ್ಚಳ ಕಂಡಿದ್ದು, ಕರ್ನಾಟಕದ ಬಿಲ್ಡರ್ಗಳು ಹಾಗೂ ಡೆವಲಪರ್ಗಳು ಭಾರಿ ನಷ್ಟದ ಭೀತಿ ಎದುರು ನೋಡುತ್ತಿದ್ದಾರೆ.
ತಮಿಳುನಾಡು ನಿರ್ಬಂಧದಿಂದ ಶೇ. 40 ರಷ್ಟು ಸಾಮಗ್ರಿಗಳೇ ಸಿಗುತ್ತಿಲ್ಲ
ಎಂ-ಸ್ಯಾಂಡ್, ಪಿ-ಸ್ಯಾಂಡ್, ಕಲ್ಲು, ಜೆಲ್ಲಿ ಹಾಗೂ ರೆಡಿ-ಮಿಕ್ಸ್ ಕಾಂಕ್ರೀಟ್ ಸಾಮಗ್ರಿಗಳನ್ನು ನೆರೆ ರಾಜ್ಯಗಳಿಗೆ ರಫ್ತು ಮಾಡದಂತೆ ತಮಿಳುನಾಡು ಸರ್ಕಾರವು ಜನವರಿ 2027 ರವರೆಗೆ ನಿಷೇಧ ಹೇರಿದೆ. ಇದರಿಂದಾಗಿ ಬೆಂಗಳೂರಿಗೆ ತಮಿಳುನಾಡಿನಿಂದ ಬರುತ್ತಿದ್ದ ಪೂರೈಕೆಯಲ್ಲಿ ಶೇಕಡಾ 40 ರಷ್ಟು ಕಡಿತ ಉಂಟಾಗಿದೆ. ಕರ್ನಾಟಕದ ಶೇ. 70 ಕ್ಕೂ ಹೆಚ್ಚು ಕಲ್ಲು ಕ್ರಷರ್ಗಳು ಹಾಗೂ ಗಡಿಭಾಗವಾದ ಕೃಷ್ಣಗಿರಿಯ ಶೇ. 20 ರಷ್ಟು ಘಟಕಗಳ ಕಾರ್ಯಾಚರಣೆ ಸ್ಥಗಿತಗೊಂಡಿರುವುದು ಈ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸಿದೆ.
ಮರಳು ದರ ಡಬಲ್, ಏರಿಕೆಯಾದ ಸಿಮೆಂಟ್, ಉಕ್ಕು ಬೆಲೆ
ಪ್ರತಿಯೊಂದು ಕಟ್ಟಡ ನಿರ್ಮಾಣಕ್ಕೂ ಅಗತ್ಯವಿರುವ ಮರಳಿನ ದರವು ಪ್ರತಿ ಟನ್ಗೆ ₹250-₹300 ಇರುತ್ತಿದ್ದುದು, ಈಗ ₹450 ರಿಂದ ₹800 ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ, ಸಿಮೆಂಟ್ ಹಾಗೂ ಉಕ್ಕಿನ ದರದಲ್ಲೂ ಶೇಕಡಾ 8 ರಿಂದ 10 ರಷ್ಟು ಹೆಚ್ಚಳ ಕಂಡಿತ್ತು. ಪ್ರಸ್ತುತ ಚದರ ಅಡಿಗೆ ₹250 ರಿಂದ ₹400 ರಷ್ಟು ಹೆಚ್ಚುವರಿ ನಿರ್ಮಾಣ ವೆಚ್ಚ ತಗುಲುತ್ತಿದ್ದು, ಬಿಲ್ಡರ್ಗಳು ಅನಿವಾರ್ಯವಾಗಿ ನೆರೆಯ ರಾಜ್ಯಗಳಿಂದ ಹೆಚ್ಚಿನ ದರ ನೀಡಿ ಸಾಮಗ್ರಿಗಳನ್ನು ತರಿಸಿಕೊಳ್ಳುತ್ತಿದ್ದಾರೆ.
ಯೋಜನೆಗಳು 6 ತಿಂಗಳು ವಿಳಂಬ, ಮನೆ ಖರೀದಿದಾರರಿಗೆ ಹೊರೆ ಹೆಚ್ಚಳ
ಈ ಬಗ್ಗೆ ಬೆಂಗಳೂರು ರಿಯಾಲ್ಟರ್ಸ್ ಅಸೋಸಿಯೇಷನ್ ಇಂಡಿಯಾದ ಮಾಜಿ ಅಧ್ಯಕ್ಷ ಫಾರೂಕ್ ಮಹಮೂದ್ ಮಾತನಾಡಿ, ರೇರಾ ನಾಲ್ಕು ತಿಂಗಳ ಕಾಲಾವಕಾಶ ನೀಡಿದ್ದರೂ, ಸಾಮಗ್ರಿಗಳ ಕೊರತೆಯಿಂದಾಗಿ ಹೆಚ್ಚಿನ ಯೋಜನೆಗಳು ಕನಿಷ್ಠ 6 ತಿಂಗಳು ವಿಳಂಬವಾಗಲಿವೆ. ಯೋಜನೆಗಳು ತಡವಾದಷ್ಟೂ ಮನೆ ಖರೀದಿದಾರರು ಒಂದು ಕಡೆ ಮನೆ ಬಾಡಿಗೆ, ಇನ್ನೊಂದೆಡೆ ಪ್ರಿ-ಇಎಮ್ಐ ಎರಡನ್ನೂ ಕಟ್ಟಬೇಕಾದ ಇಕ್ಕಟ್ಟಿಗೆ ಸಿಲುಕುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇದೇ ವಿಷಯವಾಗಿ ವಿಶಾಲ್ ಪ್ರಮೋಟರ್ಸ್ ಅಂಡ್ ಬಿಲ್ಡರ್ಸ್ನ ಪಾಲುದಾರ ಸುರೇಶ್ ಹರಿ ಪ್ರತಿಕ್ರಿಯಿಸಿ, ರೇರಾ ನಿಯಮಾವಳಿಗಳ ಪ್ರಕಾರ ಒಮ್ಮೆ ಒಪ್ಪಿಕೊಂಡ ಬೆಲೆಯನ್ನು ಮಧ್ಯದಲ್ಲಿ ಏರಿಸಲು ಬಿಲ್ಡರ್ಗಳಿಗೆ ಅವಕಾಶವಿಲ್ಲ. ಹೀಗಾಗಿ ಈ ಅನಿವಾರ್ಯ ನಷ್ಟವನ್ನು ಡೆವಲಪರ್ಗಳೇ ಭರಿಸಬೇಕಾಗಿದೆ ಎಂದಿದ್ದಾರೆ.
ಸರ್ಕಾರದ ತುರ್ತು ಹಸ್ತಕ್ಷೇಪಕ್ಕೆ ‘ಕ್ರೆಡೈ’ ಆಗ್ರಹ
ಕಚ್ಚಾವಸ್ತುಗಳ ಅಭಾವ ಹಾಗೂ ದರ ಏರಿಕೆಗೆ ತಡೆಹಿಡಿಯಲು ಬಿಲ್ಡರ್ಗಳು ಮತ್ತು ಕ್ರೆಡೈ (CREDAI) ಸಂಘಟನೆಯು ರಾಜ್ಯ ಸರ್ಕಾರದ ತಕ್ಷಣದ ಹಸ್ತಕ್ಷೇಪವನ್ನು ಕೋರಿದೆ. ಡಬಲ್ ರಾಯಲ್ಟಿ ಸಮಸ್ಯೆಯನ್ನು ತಕ್ಷಣ ಪರಿಹರಿಸುವುದು. ಗಡಿ ಜಿಲ್ಲೆಗಳಲ್ಲಿ ಇ-ಪರ್ಮಿಟ್ ಮೂಲಕ ಸಾಮಗ್ರಿ ಸಾಗಣೆಗೆ ತಮಿಳುನಾಡು ಸರ್ಕಾರದೊಂದಿಗೆ ಮಾತುಕತೆ ನಡೆಸಿ ಸಮನ್ವಯ ಸಾಧಿಸುವುದು. ಕಲ್ಲು ಕ್ರಷರ್ಗಳು ಹೆಚ್ಚಿನ ಸಮಯ ಕಾರ್ಯನಿರ್ವಹಿಸಲು ಅನುಮತಿ ನೀಡುವುದು. ಪ್ಲಾನ್ ಅನುಮೋದನೆ ಶುಲ್ಕಗಳನ್ನು ಮೂರು ತಿಂಗಳ ಕಾಲ ಮುಂದೂಡುವುದು ಮುಖ್ಯ ಬೇಡಿಕೆಯಾಗಿದೆ.
ಕ್ರೆಡೈ ಕರ್ನಾಟಕದ ಅಧ್ಯಕ್ಷ ಭಾಸ್ಕರ್ ಟಿ. ನಾಗೇಂದ್ರಪ್ಪ ಮಾತನಾಡಿ, ಆರಂಭದಲ್ಲಿ ಪಶ್ಚಿಮ ಏಷ್ಯಾ ಸಂಘರ್ಷದ ಕಾರಣದಿಂದಾಗಿ ವೆಚ್ಚ ಹೆಚ್ಚಾಗಿತ್ತು, ಆದರೆ ತಮಿಳುನಾಡಿನ ಇತ್ತೀಚಿನ ನಿಷೇಧವು ರಿಯಲ್ ಎಸ್ಟೇಟ್ ವಲಯದ ಬೆನ್ನೆಲುಬು ಮುರಿದಿದೆ. ಈ ಕುರಿತು ಶೀಘ್ರವೇ ಸರ್ಕಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಿದ್ದೇವೆ ಎಂದಿದ್ದಾರೆ.






