ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ಗೆ ಚಳಿಯಿಂದಾಗಿ ಮತ್ತೆ ತೀವ್ರ ಬೆನ್ನುನೋವು ಕಾಣಿಸಿಕೊಂಡಿದೆ. ತಕ್ಷಣವೇ ಫಿಸಿಯೋಥೆರಪಿ ಚಿಕಿತ್ಸೆ ನೀಡುವಂತೆ ಅವರು ನ್ಯಾಯಾಧೀಶರಲ್ಲಿ ಖುದ್ದಾಗಿ ಮನವಿ ಮಾಡಿದ್ದಾರೆ. ಈ ಹಿಂದೆ 2 ಬಾರಿ ಬೆನ್ನು ನೋವು ಕಾಣಿಸಿಕೊಂಡಿತ್ತು. ಇದೇ ಕಾರಣಕ್ಕೆ ಜಾಮೀನು ಪಡೆದಿದ್ದರೂ ಶಸ್ತ್ರಚಿಕಿತ್ಸೆ ಮಾಡಿಕೊಳ್ಳದೆ ಹೊರಬಂದು ಚಿತ್ರೀಕರಣ ಪೂರ್ತಿಗೊಳಿಸಿದ್ದ ನಟ ಬಳಿಕ ಮತ್ತೆ ಜೈಲು ಸೇರಿದ್ದರು.
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣದ ಪ್ರಮುಖ ಆರೋಪಿಯಾಗಿ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ತೂಗುದೀಪ ಗೆ ಮತ್ತೆ ಬೆನ್ನು ನೋವಿನ ಸಮಸ್ಯೆ ತೀವ್ರವಾಗಿ ಕಾಣಿಸಿಕೊಂಡಿದೆ. ಜೈಲಿನಲ್ಲಿನ ವಿಪರೀತ ಚಳಿ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಆರೋಗ್ಯದಲ್ಲಿ ಏರುಪೇರಾಗಿದ್ದು, ತಮಗೆ ತಕ್ಷಣ ಫಿಸಿಯೋಥೆರಪಿ ಚಿಕಿತ್ಸೆ ಪಡೆಯಲು ಅವಕಾಶ ನೀಡಬೇಕೆಂದು ಅವರು ಪ್ರಕರಣದ ವಿಚಾರಣೆ ವೇಳೆ ನ್ಯಾಯಾಧೀಶರ ಮುಂದೆ ಖುದ್ದಾಗಿ ಮನವಿ ಮಾಡಿಕೊಂಡಿದ್ದಾರೆ.
ದರ್ಶನ್ ಮನವಿಗೆ ನ್ಯಾಯಾಲಯ ಹೇಳಿದ್ದೇನು?
ಇಂದು ಪ್ರಕರಣದ ವಿಚಾರಣೆ ವೇಳೆ ನ್ಯಾಯಾಧೀಶರ ಎದುರು ತಮ್ಮ ಅಳಲು ತೋಡಿಕೊಂಡ ನಟ ದರ್ಶನ್, "ನನಗೆ ಈ ಹಿಂದೆ ತೀವ್ರವಾದ ಬೆನ್ನು ನೋವಿನ ಸಮಸ್ಯೆಯಿತ್ತು. ಆ ವೇಳೆ ಜೈಲಿನಲ್ಲಿ ಕೆಲವು ದಿನಗಳ ಕಾಲ ಫಿಸಿಯೋಥೆರಪಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಈಗ ಜೈಲಿನ ವಾತಾವರಣ ಮತ್ತು ಚಳಿಯಿಂದಾಗಿ ಬೆನ್ನು ನೋವು ಮತ್ತೆ ಹೆಚ್ಚಾಗಿದೆ. ಹೀಗಾಗಿ ತಕ್ಷಣವೇ ಫಿಸಿಯೋಥೆರಪಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ತೋಡಿಕೊಂಡರು.
ಈ ವೇಳೆ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ, ಚಿಕಿತ್ಸೆಗೆ ಅವಕಾಶ ಕೋರಿ ನಾಳೆ ನ್ಯಾಯಾಲಯಕ್ಕೆ ಅಧಿಕೃತ ಅರ್ಜಿ ಸಲ್ಲಿಸುವುದಾಗಿ ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ನಾಳೆಯವರೆಗೆ ಕಾಯುವುದು ಬೇಡ, ಇಂದೇ ಅರ್ಜಿ ಸಲ್ಲಿಸುವುದಾದರೆ ತಕ್ಷಣವೇ ಸಲ್ಲಿಸಿ. ಅದನ್ನು ಪರಿಶೀಲಿಸಿ ಸೂಕ್ತ ಆದೇಶ ಹೊರಡಿಸಲಾಗುವುದು ಎಂದು ಸೂಚನೆ ನೀಡಿದರು.
ಹಿಂದೆಯೂ ಬಾಧಿಸಿದ್ದ ಬೆನ್ನು ನೋವಿನ ಸಮಸ್ಯೆ:
ನಟ ದರ್ಶನ್ಗೆ ಬೆನ್ನು ನೋವು ಬಾಧಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2024ರ ಅಕ್ಟೋಬರ್ ತಿಂಗಳಿನಲ್ಲಿ ಬಳ್ಳಾರಿ ಜೈಲಿನಲ್ಲಿದ್ದಾಗಲೂ ನಟನಿಗೆ ತೀವ್ರ ಬೆನ್ನು ನೋವು ಕಾಣಿಸಿಕೊಂಡಿತ್ತು. ಆಗ ಬಿಮ್ಸ್ ಆಸ್ಪತ್ರೆಯ ವೈದ್ಯರಾದ ಡಾ. ಸುಬ್ಬಾರೆಡ್ಡಿ ಅವರು ಜೈಲಿನ ಹೈ-ಸೆಕ್ಯುರಿಟಿ ಸೆಲ್ಗೆ ತೆರಳಿ ಫಿಸಿಯೋಥೆರಪಿ ಮಾಡಿದ್ದರು.
ಆ ಬಳಿಕ ಬೆನ್ನು ನೋವಿಗೆ ತುರ್ತು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕೆಂಬ ಕಾರಣ ನೀಡಿ ದರ್ಶನ್ ನ್ಯಾಯಾಲಯದಿಂದ ಷರತ್ತುಬದ್ಧ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದರು. ಆದರೆ ಜಾಮೀನಿನ ಅವಧಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೆ ಆರಾಮವಾಗಿದ್ದ ದರ್ಶನ್ 'ಡೆವಿಲ್' ಸಿನಿಮಾದ ಚಿತ್ರೀಕರಣದಲ್ಲಿ ಭಾಗವಹಿಸಿ ಸಿನೆಮಾವನ್ನು ಪೂರ್ತಿ ಮಾಡಿದ್ದರು. ಇದಾದ ನಂತರ ಸುಪ್ರೀಂ ಕೋರ್ಟ್ ಆರೋಪಿಗಳ ಜಾಮೀನನ್ನು ರದ್ದುಗೊಳಿಸಿದ್ದರಿಂದ ದರ್ಶನ್ ಮತ್ತೆ ಜೈಲು ಸೇರಬೇಕಾಯಿತು.
ಅಕ್ಟೋಬರ್ ತಿಂಗಳಲ್ಲೇ ನೋವು ಉಲ್ಬಣ ಯಾಕೆ?
ಕಳೆದ ವರ್ಷ ಅಂದರೆ 2025ರಲ್ಲಿ ಕೂಡ ಅಕ್ಟೋಬರ್ ತಿಂಗಳಿನಲ್ಲೇ ಬೆನ್ನು ನೋವು ಕಾಣಿಸಿಕೊಂಡಿತ್ತು. ಜೈಲಿನಲ್ಲಿ ಕುಂಟುತ್ತಾ ನಡೆಯುವಂತಾಗಿದೆ ಬೆನ್ನು ನೋವು ಹೆಚ್ಚಾಗಿದೆ ಎಂದು ದರ್ಶನ್ ಜೈಲಾಧಿಕಾರಿಗಳಿಗೆ ಪತ್ರ ಬರೆದು ಚಿಕಿತ್ಸೆಗೆ ಮನವಿ ಮಾಡಿದ್ದರು. ಈ ಪತ್ರಕ್ಕೆ ಸ್ಪಂದಿಸಿ ಖಾಸಗಿ ಆಸ್ಪತ್ರೆಯ ವೈದ್ಯರ ತಪಾಸಣೆ ಬಳಿಕ ವೈದ್ಯರ ಸಲಹೆಯಂತೆ ಜೈಲಿನಲ್ಲೇ ವಾರಕ್ಕೆ ಎರಡು ಬಾರಿ ದರ್ಶನ್ಗೆ ಫಿಸಿಯೋಥೆರಪಿ ಮಾಡಿಸಲಾಗುತ್ತಿತ್ತು. ಇದೀಗ ಮತ್ತೆ ಇದೇ ಅಕ್ಟೋಬರ್ ತಿಂಗಳಲ್ಲೇ ನೋವು ತೀವ್ರಗೊಂಡಿದ್ದು, ಈ ಹಿನ್ನೆಲೆಯಲ್ಲಿ ಕೋರ್ಟ್ ಮುಂದೆ ಚಿಕಿತ್ಸೆಗೆ ಮನವಿ ಮಾಡಲಾಗಿದೆ. ಈ ಸಂಬಂಧ ವಕೀಲರು ಕೋರ್ಟ್ ಗೆ ಮನವಿ ಮಾಡಲಿದ್ದು, ಅರ್ಜಿ ವಿಚಾರಣೆ ನಡೆಸಿ ನ್ಯಾಯಾಲಯ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.






