ತಮಿಳುನಾಡು ಸರ್ಕಾರವು ನಿರ್ಮಾಣ ಸಾಮಗ್ರಿಗಳ ರಫ್ತನ್ನು ನಿಷೇಧಿಸಿರುವುದರಿಂದ ಬೆಂಗಳೂರಿನ ನಮ್ಮ ಮೆಟ್ರೋ ಬ್ಲೂ ಲೈನ್ ಕಾಮಗಾರಿಗೆ ತೀವ್ರ ಹಿನ್ನಡೆಯಾಗಿದೆ. ಕಚ್ಚಾ ವಸ್ತುಗಳ ಕೊರತೆಯಿಂದಾಗಿ ಕಾಮಗಾರಿಗಳು ನಿಲ್ಲಿಸುವ ಹಂತಕ್ಕೆ ತಲುಪಿದ್ದು, ಕಲ್ಲಿನ ಬೆಲೆ ದ್ವಿಗುಣಗೊಂಡಿದೆ. ಇದರಿಂದಾಗಿ ಬೆಂಗಳೂರಿನ ಸಿಲ್ಕ್ ಬೋರ್ಡ್‌ನಿಂದ ವಿಮಾನ ನಿಲ್ದಾಣದವರೆಗಿನ ಬ್ಲೂ ಲೈನ್ ಮೆಟ್ರೋ ಕಾಮಗಾರಿ ತೀವ್ರವಾಗಿ ವಿಳಂಬವಾಗಿದೆ.

ಬೆಂಗಳೂರು: ಸಿಲಿಕಾನ್ ಸಿಟಿಯ ಬಹುನಿರೀಕ್ಷಿತ ನಮ್ಮ ಮೆಟ್ರೋ ಯೋಜನೆಗಳ ಉದ್ಘಾಟನೆಗೆ ಈಗಾಗಲೇ ಕಾಲಮಿತಿ ಮೀರಿದ್ದು, ಇದೀಗ ಮತ್ತೊಂದು ಹೊಸ ಸಂಕಷ್ಟ ಎದುರಾಗಿದೆ. ತಮಿಳುನಾಡು ಸರ್ಕಾರವು ನೆರೆ ರಾಜ್ಯಗಳಿಗೆ ಕಲ್ಲು, ಜೆಲ್ಲಿ ಹಾಗೂ ಕ್ವಾರಿ ಡಸ್ಟ್ ಸೇರಿದಂತೆ ಪ್ರಮುಖ ನಿರ್ಮಾಣ ಸಾಮಗ್ರಿಗಳ ರಫ್ತನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಇದರಿಂದಾಗಿ ಬೆಂಗಳೂರಿನ ಬ್ಲೂ ಲೈನ್ ಮೆಟ್ರೋ ಕಾಮಗಾರಿಗೆ ತೀವ್ರ ಹೊಡೆತ ಬಿದ್ದಿದ್ದು, ಮಂದಗತಿಯಲ್ಲಿ ಸಾಗುತ್ತಿದೆ. ಮೂಲಸೌಕರ್ಯ ವಸ್ತುಗಳ ಮುಕ್ಕಾಲು ಭಾಗ ತಮಿಳುನಾಡಿನಿಂದಲೇ ಬರುತ್ತಿತ್ತು.

ಸಿಲ್ಕ್ ಬೋರ್ಡ್‌ to ಬೆಂಗಳೂರು ವಿಮಾನ ನಿಲ್ದಾಣ ಸಂಪರ್ಕ ಕನಸಾಗೇ ಉಳಿಯುತ್ತಾ?

ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 58 ಕಿಲೋಮೀಟರ್ ಉದ್ದದ ಬ್ಲೂ ಲೈನ್ ಮಾರ್ಗವನ್ನು ನಿರ್ಮಿಸುತ್ತಿರುವ ಗುತ್ತಿಗೆದಾರರು ಕಚ್ಚಾ ಸಾಮಗ್ರಿಗಳ ಅಭಾವದಿಂದ ಪರದಾಡುತ್ತಿದ್ದಾರೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ಬಹಿರಂಗಪಡಿಸುತ್ತಿದ್ದಾರೆ. ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರಂವರೆಗಿನ ಎತ್ತರಿಸಿದ ಮಾರ್ಗದ ಕಾಮಗಾರಿ ಅಂತಿಮ ಹಂತ ತಲುಪಿದ್ದರೂ, ಕೆ.ಆರ್. ಪುರಂನಿಂದ ವಿಮಾನ ನಿಲ್ದಾಣದವರೆಗಿನ ಮಾರ್ಗದ ಕೆಲಸಗಳು ಮಂದಗತಿಯಲ್ಲೇ ಮುಂದುವರೆದಿದೆ.

ಈ ನಿಷೇಧ ಜಾರಿಯಾಗುವ ಮುನ್ನ ಗುತ್ತಿಗೆದಾರರು ಶೇಕಡಾ 30 ರಿಂದ 40 ರಷ್ಟು ಕಲ್ಲು ಮತ್ತು ಜೆಲ್ಲಿ ಸಾಮಗ್ರಿಗಳನ್ನು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕ್ರಷರ್‌ಗಳಿಂದ ತರಿಸಿಕೊಳ್ಳುತ್ತಿದ್ದರು. ಪ್ರಸ್ತುತ ಗಣಿ ಧೂಳು, ಪುಡಿಮಾಡಿದ ಕಲ್ಲು ಮತ್ತು ಕಾಂಕ್ರೀಟ್ ಮಿಶ್ರಣ ಸಾಮಗ್ರಿಗಳ ಅಭಾವದಿಂದಾಗಿ ಕಾಂಕ್ರೀಟಿಂಗ್, ಕಂಬಗಳ ವಿನ್ಯಾಸ ಮತ್ತು ಇತರೆ ಪ್ರಮುಖ ಸಿವಿಲ್ ಕೆಲಸಗಳು ಸ್ಥಗಿತಗೊಳ್ಳುವ ಹಂತಕ್ಕೆ ಬಂದು ನಿಂತಿದೆ ಎಂದು ಬಿಎಮ್‌ಆರ್‌ಸಿಎಲ್ ಅಧಿಕಾರಿ ಹೇಳಿದ್ದಾರೆ.

ತಮಿಳುನಾಡು ನಿರ್ಧಾರದಿಂದ ಸಮಸ್ಯೆ ಎಷ್ಟು?

ಸಾಮಗ್ರಿಗಳ ಈ ತೀವ್ರ ಕೊರತೆಯು ಮೆಟ್ರೋ ಡಿಪೋ ನಿರ್ಮಾಣ ಮತ್ತು ಹಳಿಗಳ ಕೆಳಗೆ ಜೋಡಿಸಲಾಗುವ 'ರೈಲ್ವೆ ಬ್ಯಾಲಸ್ಟ್' (ಕಲ್ಲುಗಳು) ಪೂರೈಕೆಯ ಮೇಲೆಯೂ ತೀವ್ರ ಪರಿಣಾಮ ಬೀರಿದೆ. ಪ್ರಸ್ತುತ ಔಟರ್ ರಿಂಗ್ ರೋಡ್ ಪ್ರವೇಶ ಮತ್ತು ನಿರ್ಗಮನ ದ್ವಾರಗಳ ನಿರ್ಮಾಣ, ಟ್ರಾವೆಲೇಟರ್‌ಗಳ ಅಳವಡಿಕೆ ಸೇರಿದಂತೆ ಹಲವು ಪ್ರಮುಖ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ.

ಹೊರ ವರ್ತುಲ ರಸ್ತೆಯ ಕಾಮಗಾರಿ ಉಸ್ತುವಾರಿ ವಹಿಸಿರುವ ನಿರ್ಮಾಣ ಸಂಸ್ಥೆಯ ಎಂಜಿನಿಯರ್ ಒಬ್ಬರು ಮಾತನಾಡಿ, "ಕಳೆದ ಮೂರು ತಿಂಗಳುಗಳಿಂದ ಈ ರಫ್ತು ನಿಷೇಧದಿಂದಾಗಿ ಕೆಲಸಗಳು ಸಂಪೂರ್ಣ ಅಸ್ತವ್ಯಸ್ತಗೊಂಡಿವೆ. ಹಿಂದೆ ನಾವು ಹೊಸೂರಿನ ಸುಮಾರು 14 ಕ್ವಾರಿ-ಕ್ರಷರ್ ಘಟಕಗಳಿಂದ ಕಚ್ಚಾ ವಸ್ತುಗಳನ್ನು ಸುಲಭವಾಗಿ ತರಿಸಿಕೊಳ್ಳುತ್ತಿದ್ದೆವು. ನಿಷೇಧದ ನಂತರ ಪೂರೈಕೆ ಸ್ಥಗಿತಗೊಂಡಿದ್ದು, ಈಗ ಬಿಡದಿಯಲ್ಲಿರುವ ಕೇವಲ 4-5 ಕ್ರಷರ್‌ಗಳನ್ನು ಮಾತ್ರ ನೆಚ್ಚಿಕೊಳ್ಳಬೇಕಾಗಿದೆ. ಇದರಿಂದಾಗಿ ಈ ಹಿಂದೆ ಪ್ರತಿ ಟನ್‌ಗೆ ₹800 ಇರುತ್ತಿದ್ದ ಕಲ್ಲಿನ ಬೆಲೆ ಈಗ ದ್ವಿಗುಣಗೊಂಡಿದೆ. ಈ ಅನಿರೀಕ್ಷಿತ ಬೆಳವಣಿಗೆ ಮತ್ತು ಬೆಲೆ ಏರಿಕೆಯು ಬೃಹತ್ ಯೋಜನೆ ಕೈಗೆತ್ತಿಕೊಂಡಿರುವ ಗುತ್ತಿಗೆದಾರರಿಗೆ ತೀವ್ರ ಆರ್ಥಿಕ ಸಂಕಷ್ಟ ತಂದಿಟ್ಟಿದೆ ಎಂದಿದ್ದಾರೆ.

ಕರ್ನಾಟಕ ಟ್ರಕ್ ಮಾಲೀಕರು ಮತ್ತು ಏಜೆಂಟ್‌ಗಳ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ ಅವರು ಪ್ರತಿಕ್ರಿಯಿಸಿ, ಈ ನಿರ್ಬಂಧಗಳು ಕೇವಲ ಮೆಟ್ರೋ ಯೋಜನೆಗೆ ಮಾತ್ರವಲ್ಲದೆ ಬೆಂಗಳೂರಿನಾದ್ಯಂತ ನಡೆಯುತ್ತಿರುವ ಅನೇಕ ಬೃಹತ್ ಮೂಲಸೌಕರ್ಯ ಯೋಜನೆಗಳ ಮೇಲೆಯೂ ಪ್ರಭಾವ ಬೀರಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ದಿನವೊಂದಕ್ಕೆ ತಮಿಳುನಾಡಿನಿಂದ 40,000 ಟನ್‌ಗೂ ಹೆಚ್ಚು ಕಲ್ಲು ಮತ್ತು ಜೆಲ್ಲಿಗಳು ಬೆಂಗಳೂರಿಗೆ ಬರುತ್ತಿತ್ತು. ಈಗ ನಿಷೇಧದಿಂದಾಗಿ ಪ್ರಸ್ತುತ 600 ರಿಂದ 700 ಟ್ರಕ್ ಮಾಲೀಕರು ಮತ್ತು ಚಾಲಕರು ಜೀವನೋಪಾಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವಾಸ್ತವ ಸ್ಥಿತಿಯ ಚಿತ್ರಣವನ್ನು ಬಿಚ್ಚಿಟ್ಟಿದ್ದಾರೆ.

ತಮಿಳುನಾಡು ಸರ್ಕಾರ ನಿರ್ಬಂಧ ಹೇರಿರುವುದೇಕೆ?

ತನ್ನ ಸ್ವಂತ ರಾಜ್ಯದ ಆಂತರಿಕ ಅಭಿವೃದ್ಧಿ ಬೇಡಿಕೆ ಹೆಚ್ಚಿರುವುದರಿಂದ ಮತ್ತು ಸ್ಥಳೀಯವಾಗಿ ಸಾಮಗ್ರಿಗಳ ಅಭಾವ ಸೃಷ್ಟಿಯಾಗಿ ಬೆಲೆ ಏರಿಕೆಯಾಗುತ್ತಿರುವುದು ಮತ್ತು ಅನಧಿಕೃತ ಗಣಿಗಾರಿಕೆ ಹಾಗೂ ಅಕ್ರಮ ಕಲ್ಲು ಸಾಗಣೆಗೆಯನ್ನು ತಡೆ ಹಿಡಿಯುವ ಉದ್ದೇಶದಿಂದ ತಮಿಳುನಾಡು ಸರ್ಕಾರ ಈ ಕಟ್ಟುನಿಟ್ಟಿನ ಕ್ರಮ ಜಾರಿ ಮಾಡಿದೆ. ಜುಲೈ 27 ರಂದು ಆರಂಭದಲ್ಲಿ ಮೂರು ತಿಂಗಳ ಅವಧಿಗೆ ಜಾರಿಗೆ ತರಲಾಗಿದ್ದ ಈ ನಿಷೇಧವನ್ನು ಈಗ ಮುಂದುವರೆಸಲಾಗಿದ್ದು, ಬೆಂಗಳೂರಿನ ಪ್ರಮುಖ ಯೋಜನೆಗಳಿಗೆ ಇದು ಸಂಕಷ್ಟ ತಂದಿಟ್ಟಿದೆ. ತಕ್ಷಣವೇ ಈ ಬಗ್ಗೆ ಸರ್ಕಾರ ಚಿತ್ತ ಹರಿಸುವುದು ಮುಖ್ಯವಾಗಿದೆ.