ಬೆಂಗಳೂರಿನಲ್ಲಿ ಮನೆ ಬಳಿ ಆಟವಾಡುತ್ತಿದ್ದ ನೀವ್ ಜೈನ್ ಎಂಬ ಬಾಲಕನ ಮೇಲೆ ರಂಜನ್ ಎಂಬ ವ್ಯಕ್ತಿ ಅಮಾನುಷವಾಗಿ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಬೆಂಗಳೂರು (ಡಿ.19): ಮನೆ ಬಳಿ ತನ್ನ ಪಾಡಿಗೆ ತಾನು ಆಟವಾಡುತ್ತಿದ್ದ ಬಾಲಕನ ಮೇಲೆ ಏಕಾಏಕಿ ಎಗರಿದ ವ್ಯಕ್ತಿಯೊಬ್ಬ ಅಮಾನುಷವಾಗಿ ಕಾಲಿನಿಂದ ಒದ್ದ ಹಲ್ಲೆ ಮಾಡಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ. ಮನೆ ಬಳಿ ಆಟವಾಡುತ್ತಿದ್ದ ಬಾಲಕನಿಗೆ ಕಾಲಿಂದ ಒದ್ದ ಧುರುಳನ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾಲಿನಿಂದ ಒದ್ದು ಅಮಾನವೀಯ ಕೃತ್ಯವೆಸಗಿದ ವ್ಯಕ್ತಿಯನ್ನು ದೂರು ಕೊಟ್ಟ ಬೆನ್ನಲ್ಲಿಯೇ ಪೊಲೀಸರು ಬಂಧಿಸಿದ್ದರು.

ರಂಜನ್ ಎಂಬಾತನಿಂದ ಇದೇ ತಿಂಗಳ 14 ರಂದು ಈ ಕೃತ್ಯ ನಡೆದಿದೆ. ಅಜ್ಜಿ ಮನೆಗೆ ಆಗಮಿಸಿದ್ದ ನೀವ್ ಜೈನ್ ಎಂಬ ಬಾಲಕನ ಮೇಲೆ ಈ ಕೃತ್ಯ ಎಸಗಿದ್ದಾನೆ.

ರಂಜನ್‌ ಕಾಲಿನಿಂದ ಒದ್ದ ರಭಸಕ್ಕೆ ಬಾಲಕ ನೀವ್‌ ಜೈನ್‌ ಕೆಲ ಮೀಟರ್‌ ದೂರ ಹೋಗಿ ಬಿದ್ದಿದ್ದಾನೆ. ತನ್ನ ಪಾಡಿಗೆ ತಾನು ಆಟವಾಡುತ್ತಿದ್ದ ಬಾಲಕನನ್ನು ಫುಟ್ಬಾಲ್ ರೀತಿ ಒದ್ದಿರುವ ಆರೋಪಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಂಜನ್ ಒದ್ದಿದ್ದರಿಂದ ಬಾಲಕನ ಮೈಕೆಗೆ ಗಾಯವಾಗಿದ್ದು, ಬೆನ್ನಿನಲ್ಲಿ ನೋವು ಕಾಣಿಸಿಕೊಂಡಿದೆ.

ರಸ್ತೆಯಲ್ಲಿ ಹಲವರಿಗೆ ಹೊಡೆದು, ಬೈಯೋ ಕೆಲಸವನ್ನು ರಂಜನ್‌ ಮಾಡುತ್ತಿದ್ದ ಎಂದು ಆರೋಪಿಸಲಾಗಿದ್ದು, ಆರೋಪಿ ರಂಜನ್ ವಿರುದ್ಧ ಬಾಲಕನ ತಾಯಿ ದೂರು ದಾಖಲಿಸಿದ್ದಾರೆ. ಇದರ ಬೆನ್ನಲ್ಲಿಯೇ ಆರೋಪಿಯನ್ನು ಬನಶಂಕರಿ ಪೊಲೀಸರು ಬಂಧಿಸಿದ್ದರು. ಸದ್ಯ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.