ಬೆಂಗಳೂರಿನ ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಡಿಸೆಂಬರ್ 21 ರಿಂದ 24 ರವರೆಗೆ ನಾಲ್ಕು ದಿನಗಳ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 5 ವರ್ಷದೊಳಗಿನ 2,76,693 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.

ಬೆಂಗಳೂರು (ಡಿ.18): ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ 4 ದಿನಗಳ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲು ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ತೆಗೆದುಕೊಳ್ಳಬೇಕಿರುವ ಅಗತ್ಯ ಕ್ರಮಗಳ ಕುರಿತು ಚರ್ಚಿಸಲು ಗುರುವಾರ ಮಲ್ಲೇಶ್ವರಂ ಐಪಿಪಿ ಕೇಂದ್ರದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 4 ದಿನಗಳ ಕಾಲ ನಡೆಯುವ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಯಾವುದೇ ಲೋಪದೋಷಗಳಾಗದಂತೆ ಯಶಸ್ವಿಯಾಗಿ ನಡೆಸಲು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲು ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಡಿಸೆಂಬರ್ 21 ರಿಂದ 24 ರವರೆಗೆ ನಡೆಯುವ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮದ ಭಾಗವಾಗಿ, ಪಶ್ಚಿಮ ನಗರ ಪಾಲಿಕೆಯಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಒಟ್ಟು 2,76,693 ಮಕ್ಕಳಿಗೆ ಪೋಲಿಯೊ ಲಿಸಿಕೆ ಹಾಕುವ ಗುರಿ ಹೊಂದಲಾಗಿದೆ. ಈ ಪೈಕಿ ಎಲ್ಲಾ ಮಕ್ಕಳಿಗೂ ತಪ್ಪದೆ ಲಸಿಕೆ ಹಾಕುವ ಕಾರ್ಯವಾಗಬೇಕೆಂದು ತಿಳಿಸಿದರು. ಪಾಲಿಕೆ ವ್ಯಾಪ್ತಿಯಲ್ಲಿ ಪ್ರಮುಖವಾಗಿ ಜನನಿಬಿಡ ಸ್ಥಳಗಳು, ರೈಲ್ವೆ ನಿಲ್ದಾಣಗಳು, ಬಸ್ ಡಿಪೋ, ಮಾಲ್ ಗಳು, ಸಿನಿಮಾ ಹಾಲ್ ಗಳು, ಧಾರ್ಮಿಕ ಸ್ಥಳಗಳು, ಕೊಳಗೇರಿ ಪ್ರದೇಶಗಳು, ವಲಸಿಗರ ತಾಣಗಳು ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿನ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

995 ಲಸಿಕಾ ಬೂತ್‌ಗಳ ಸ್ಥಾಪನೆ:

ಆರೋಗ್ಯಾಧಿಕಾರಿಯಾದ ಡಾ. ಮನೋರಂಜನ್ ಹೆಗ್ಡೆ ಅವರು ಮಾತನಾಡಿ, ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ 44 ನಾಗರಿಕ ಪ್ರಾಥಮಿಕ ಕೇಂದ್ರಗಳು, 75 ನಮ್ಮ ಕ್ಲಿನಿಕ್ ಗಳು ಬರಲಿದ್ದು, ಪಶ್ಚಿಮ ನಗರ ಪಾಲಿಕೆಯಾದ್ಯಂದ 995 ಬೂತ್ ಗಳನ್ನು ಸ್ಥಾಪಿಸಲಾಗಿದೆ. ಲಸಿಕಾ ಕಾರ್ಯಕ್ರಮದ ಕುರಿತು ಆಟೋ ಟಿಪ್ಪರ್ ಗಳಲ್ಲಿ ಧ್ವನಿವರ್ಧಕಗಳ ಮೂಲಕ, ಬ್ಯಾನರ್ ಹಾಗೂ ಕರಪತ್ರಗಳನ್ನು ಅಂಟಿಸುವ ಮೂಲಕ ನಾಗರಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಬೂತ್ ಗಳ ಜೊತೆಗೆ 127 ಮೊಬೈಲ್ ತಂಡ ಹಾಗೂ 147 ಟ್ರಾನ್ಸಿಟ್ ತಂಡಗಳು ಕಾರ್ಯನಿರ್ವಹಿಸಲಿದ್ದು, 5,076 ಸ್ವಯಂಸೇವಕರು ಪಲ್ಸ್ ಪೋಲಿಯೊ ಲಸಿಕೆ ಹಾಕುವ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದನ್ನು ಮೇಲ್ವಿಚಾರಣೆ ಮಾಡಲು 251 ಮೇಲ್ವಿಚಾರಕರು ಕೆಲಸ ಮಾಡಲಿದ್ದಾರೆ. ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ 438 ಖಾಸಗಿ ಶಿಕ್ಷಣ ಸಂಸ್ಥೆಗಳು, 480 ಅಪಾರ್ಟಮೆಂಟ್ ಗಳು, 2 ರೈಲ್ವೇ ಸ್ಟೇಷನ್, 8 ಬಸ್ ಡಿಪೋ, 6 ಮಾಲ್ಸ್ ಗಳು, 209 ಶಿಶುವಿಹಾರ, 13 ಹೆರಿಗೆ ಆಸ್ಪತ್ರೆಗಳು ಬರಲಿವೆ. ಈ ಸಂಬಂಧ ಎಲ್ಲಾ ಕಡೆ ಸಕ್ರಿಯವಾಗಿ ಲಸಿಕೆ ಹಾಕುವ ಸಿಬ್ಬಂದಿಗಳನ್ನು ನಿಯೋಜಿಸಿ ಲಸಿಕೆ ಹಾಕುವ ಕಾರ್ಯವನ್ನು ಸಮಪರ್ಕವಾಗಿ ಮಾಡಲಾಗುವುದೆಂದು ಹೇಳಿದರು.

ಸಭೆಯಲ್ಲಿ ಅಪರ ಆಯುಕ್ತರಾದ ಮಂಜುನಾಥ ಸ್ವಾಮಿ, ಜಂಟಿ ಆಯುಕ್ತರಾದ ಸಂಗಪ್ಪ, ಆರೋಗ್ಯ ಅಧಿಕಾರಿ ಮನೋರಂಜನ್ ಹೆಗಡೆ, ಆರೋಗ್ಯ ವಿಭಾಗದ ಸಿಬ್ಬಂದಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.