ಹೊಸ ವರ್ಷದಂದೇ ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ (BCU) ಬಿಕಾಂ 5ನೇ ಸೆಮಿಸ್ಟರ್‌ನ 'ಅಡ್ವಾನ್ಸ್ ಅಕೌಂಟಿಂಗ್' ಪ್ರಶ್ನೆಪತ್ರಿಕೆ ಪರೀಕ್ಷೆಗೂ ಮುನ್ನ ಸೋರಿಕೆಯಾಗಿದೆ. ಈ ಅಕ್ರಮದ ಹಿಂದೆ ಖಾಸಗಿ ಕಾಲೇಜುಗಳ ಕೈವಾಡವಿದೆ ಎಂದು NSUI ಆರೋಪಿಸಿದ್ದು, ವಿವಿ ಪರೀಕ್ಷಾ ವಿಭಾಗದ ಮೌನವು ಅನುಮಾನಕ್ಕೆ ಕಾರಣ.
ಬೆಂಗಳೂರು (ಜ.1): ಹೊಸ ವರ್ಷದ ಮೊದಲ ದಿನವೇ ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ (BCU) ಭಾರೀ ಅಕ್ರಮವೊಂದು ಬಯಲಾಗಿದೆ. ಬಿಕಾಂ ಐದನೇ ಸೆಮಿಸ್ಟರ್‌ನ ಪರೀಕ್ಷೆಯ ಪ್ರಶ್ನೆಪತ್ರಿಕೆ ಪರೀಕ್ಷೆಗಿಂತ ಮೊದಲೇ ಸೋರಿಕೆಯಾಗಿದ್ದು, ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಪರೀಕ್ಷೆಗೂ ಮೊದಲೇ 'ಅಡ್ವಾನ್ಸ್ ಅಕೌಂಟಿಂಗ್' ಪೇಪರ್ ಔಟ್!
ಇಂದು ಜರುಗಿದ ಬಿಕಾಂ ಐದನೇ ಸೆಮಿಸ್ಟರ್‌ನ 'ಅಡ್ವಾನ್ಸ್ ಅಕೌಂಟಿಂಗ್' ಪರೀಕ್ಷೆಯ ಪ್ರಶ್ನೆಪತ್ರಿಕೆ ನಿನ್ನೆ ಸಂಜೆಯೇ ಲೀಕ್ ಆಗಿದೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ನಿನ್ನೆ ಸಂಜೆಯಿಂದಲೇ ಪ್ರಶ್ನೆಪತ್ರಿಕೆಯ ಪ್ರತಿಗಳು ವಾಟ್ಸಾಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿದ್ದು, ಇಂದು ಪರೀಕ್ಷಾ ಕೇಂದ್ರದಲ್ಲಿ ನೀಡಲಾದ ಪ್ರಶ್ನೆಪತ್ರಿಕೆಗೂ ಲೀಕ್ ಆದ ಪೇಪರ್‌ಗೂ ಸಂಪೂರ್ಣ ಸಾಮ್ಯತೆ ಇರುವುದು ದೃಢಪಟ್ಟಿದೆ.
ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಯ ಮೇಲೆ ಅನುಮಾನ
ಈ ವ್ಯವಸ್ಥಿತ ನಕಲು ದಂಧೆಯ ಹಿಂದೆ ಕೆಲವು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ತಮ್ಮ ಕಾಲೇಜಿನ ಫಲಿತಾಂಶ ಉತ್ತಮವಾಗಿ ಬರಲಿ ಎಂಬ ಉದ್ದೇಶದಿಂದ ಪರೀಕ್ಷಾ ವಿಭಾಗದ ಸಿಬ್ಬಂದಿಯೊಂದಿಗೆ ಶಾಮೀಲಾಗಿ ಪ್ರಶ್ನೆಪತ್ರಿಕೆಯನ್ನು ಮೊದಲೇ ಪಡೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
NSUI ಸಂಘಟನೆಯಿಂದ ಗಂಭೀರ ಆರೋಪ
ವಿದ್ಯಾರ್ಥಿ ಸಂಘಟನೆ NSUI ಈ ವಿಚಾರದಲ್ಲಿ ವಿಶ್ವವಿದ್ಯಾಲಯದ ವಿರುದ್ಧ ಸಮರ ಸಾರಿದೆ. ಇಂದಿನ ಪ್ರಶ್ನೆಪತ್ರಿಕೆ ನಿನ್ನೆ ಸಂಜೆಯೇ ನಮಗೆ ಲಭ್ಯವಾಗಿತ್ತು. ಇದನ್ನು ದುರುಪಯೋಗಪಡಿಸಿಕೊಂಡು ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪ್ರಾಮಾಣಿಕವಾಗಿ ಓದಿದ ವಿದ್ಯಾರ್ಥಿಗಳಿಗೆ ಇದು ಮಾಡಿದ ದ್ರೋಹ ಎಂದು ಸಂಘಟನೆಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿವಿ ಪರೀಕ್ಷಾ ವಿಭಾಗದ ಮೌನ:
ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಮಾಹಿತಿ ಇದ್ದರೂ ಸಹ ಬೆಂಗಳೂರು ನಗರ ವಿವಿಯ ಪರೀಕ್ಷಾ ವಿಭಾಗ ಯಾವುದೇ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಹಗರಣದ ಬಗ್ಗೆ ವಿಶ್ವವಿದ್ಯಾಲಯವು ಮೌನಕ್ಕೆ ಶರಣಾಗಿರುವುದು ವಿದ್ಯಾರ್ಥಿಗಳ ಆಕ್ರೋಶವನ್ನು ಇನ್ನಷ್ಟು ಹೆಚ್ಚಿಸಿದೆ.
'ಬೆಂಗಳೂರು ನಗರ ವಿವಿ' ಈಗ 'ಮನಮೋಹನ್ ಸಿಂಗ್ ವಿವಿ'
ಇದೇ ವೇಳೆ ಸರ್ಕಾರವು ಬೆಂಗಳೂರು ನಗರ ವಿಶ್ವವಿದ್ಯಾಲಯವನ್ನು 'ಮನಮೋಹನ್ ಸಿಂಗ್ ವಿಶ್ವವಿದ್ಯಾಲಯ' ಎಂದು ಮರುನಾಮಕರಣ ಮಾಡಿದೆ. ಹೆಸರು ಬದಲಾದ ದಿನವೇ ಇಂತಹ ದೊಡ್ಡ ಮಟ್ಟದ ಪೇಪರ್ ಲೀಕ್ ಹಗರಣ ನಡೆದಿರುವುದು ವಿವಿಯ ಮರ್ಯಾದೆಯನ್ನು ಹರಾಜು ಹಾಕಿದಂತಾಗಿದೆ.
