ಬೆಂಗಳೂರಿನ ಬನಶಂಕರಿ ಬಳಿ ಬೈಕ್‌ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ 34 ವರ್ಷದ ವ್ಯಕ್ತಿಗೆ ಹೃದಯಾಘಾತವಾಗಿದೆ. ಪತ್ನಿ ಸಹಾಯಕ್ಕಾಗಿ ಅಂಗಲಾಚಿದರೂ ಯಾರೂ ಮುಂದೆ ಬಾರದ ಕಾರಣ, ಅವರು ರಸ್ತೆಯಲ್ಲಿಯೇ ಪ್ರಾಣ ಬಿಟ್ಟ ದಾರುಣ ಘಟನೆ ನಡೆದಿದೆ.
ಬೆಂಗಳೂರು (ಡಿ.16): ದಿನಗಳು ಕಳೆದ ಹಾಗೆ ಬೆಂಗಳೂರು ನಿರೀಕ್ಷೆಗೂ ಮೀರಿ ದೊಡ್ಡದಾಗಿ ಬೆಳೆಯುತ್ತಿದೆ. ಆದರೆ, ಬೆಂಗಳೂರಿಗರ ಮನಸ್ಸುಗಳು ದಿನ ಕಳೆದ ಹಾಗೆ ಸಣ್ಣದಾಗುತ್ತಿರುವ ಬಗ್ಗೆ ಸಾಕ್ಷಿ ಎನ್ನುವಂತೆ ಸಾಕಷ್ಟು ಘಟನೆಗಳು ನಡೆಯುತ್ತಿವೆ. ಅಮಾನವೀಯ ವರ್ತನೆಗಳು ದಂಡಿಯಾಗಿ ಕಾಣಸಿಗುತ್ತಿವೆ. ಇತ್ತೀಚೆಗೆ ಬೆಂಗಳೂರಿನ ಹೃದಯಭಾಗದಲ್ಲಿ ವ್ಯಕ್ತಿಯೊಬ್ಬ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ. ಆತನ ಪತ್ನಿ ತನ್ನ ಗಂಡನ ಕಾಪಾಡುವಂತೆ ಗೋಳಾಟ ನಡೆಸಿದರೂ ಯಾರೊಬ್ಬರೂ ಸಹಾಯಕ್ಕೆ ಬಾರದ ಹಿನ್ನಲೆಯಲ್ಲಿ ಆತ ಅಲ್ಲಿಯೇ ಸಾವು ಕಂಡಿರುವ ದಾರುಣ ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ಅದರಲ್ಲೂ ರಾತ್ರಿಯ ವೇಳೆ ಇಂಥ ಘಟನೆಗಳು ಆದಾಗ ಸಹಾಯಕ್ಕೆ ಬರುವ ಸಂಖ್ಯೆ ಕಡಿಮೆ. ಅದಕ್ಕೆ ಕಾರಣ ನಗರದ ಕ್ರೈಂ ರೇಟ್. ಯಾವ ಕ್ಷಣದಲ್ಲಿ ಹೇಗೆ ಕ್ರೈಂ ಆಗುತ್ತದೆ ಅನ್ನೋ ಸೂಚನೆಗಳೇ ಇರೋದಿಲ್ಲ. ಹೀಗಿರುವಾಗ ರಾತ್ರಿಯ ವೇಳೆ ಯಾರೂ ಕೂಡ ಸಹಾಯಕ್ಕೆ ಬರೋದಿಲ್ಲ.
ಡಿ.13 ರಂದು ಬನಶಂಕರಿ ಬಳಿಯ ಕದಿರೇನಹಳ್ಳಿಯ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದ್ದು, 34 ವರ್ಷದ ವ್ಯಕ್ತಿ ಹೃದಯಾಘಾತದಿಂದ ರಸ್ತೆಯಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ಚಲಿಸುತ್ತಿದ್ದ ಬೈಕ್‌ನಲ್ಲಿಯೇ ವ್ಯಕ್ತಿಗೆ ಹೃದಯಾಘಾತವಾಗಿದೆ. ರಸ್ತೆಯಲ್ಲಿ ಬಿದ್ದು ಆತ ಒದ್ದಾಟ ನಡೆಸುತ್ತಿದ್ದರೆ, ಗಂಡನನ್ನು ಉಳಿಸಿಕೊಡಿ ಎಂದು ಪತ್ನಿ ರಸ್ತೆಗೆ ಹೋಗುವ ಕಾರು, ಬೈಕ್, ಗೂಡ್ಸ್ ವಾಹನ ಎಲ್ಲದಕ್ಕೂ ಕೈಹಾಕಿದ್ದಾರೆ. ಆದರೆ, ಯಾರೂ ಕೂಡ ತಮ್ಮ ವಾಹನ ನಿಲ್ಲಿಸಲಿಲ್ಲ.
ಇದರಿಂದಾಗಿ 34 ವರ್ಷದ ಯುವ ಸಾವಿನ ಕೊನೆಯ ಕ್ಷಣದಲ್ಲಿ ಒದ್ದಾಟ ಅನುಭವಿಸಿ ರಸ್ತೆಯಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ವ್ಯಕ್ತಿಗೆ ಮನೆಯಲ್ಲಿಯೇ ಸಣ್ಣ ಪ್ರಮಾಣದಲ್ಲಿ ಹಾರ್ಟ್ ಅಟ್ಯಾಕ್ ಆದ ಸೂಚನೆ ಸಿಕ್ಕಿತ್ತು. ಆಂಬ್ಯುಲೆನ್ಸ್ ಸಿಗದ ಹಿನ್ನಲೆಯಲ್ಲಿ ಬೈಕ್ ನಲ್ಲೇ ದಂಪತಿ ಆಸ್ಪತ್ರೆಗೆ ಹೋಗುತ್ತಿದ್ದರು. ಈ ವೇಳೆ ಚಲಿಸುತ್ತಿದ್ದ ಬೈಕ್‌ನಲ್ಲೇ ಮತ್ತೊಮ್ಮೆ ದೊಡ್ಡ ಹಾರ್ಟ್ ಅಟ್ಯಾಕ್ ಆಗಿದೆ.
ಈ ವೇಳೆ ಆತ ಬೈಕ್‌ನಿಂದ ಕೆಳಗೆ ಬಿದ್ದು ರಸ್ತೆಯಲ್ಲಿಯೇ ಒದ್ದಾಟ ನಡೆಸಿದ್ದಾರೆ. ಪತ್ನಿ ಜನರ ಸಹಾಯ ಕೇಳಲು ಮುಂದಾದರೆ ಯಾರೂ ಕೂಡ ಸಹಾಯಕ್ಕೆ ಧಾವಿಸಲಿಲ್ಲ. ಇದರಿಂದಾಗಿಯೇ ಅಲ್ಲಿಯೇ ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ.


