ಬೆಂಗಳೂರಿನಲ್ಲಿ ವಿವಾಹಿತ ಗರ್ಭಿಣಿ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಮೂರು ದಿನಗಳ ಹಿಂದೆ ಮನೆಯಲ್ಲಿಯೇ ಸಾವನ್ನಪ್ಪಿದ ಮಹಿಳೆಯ ಮೃತದೇಹದೊಂದಿಗೆ ಪತಿ ಎರಡು ದಿನ ಕಳೆದಿದ್ದಾನೆ. ಸ್ಥಳೀಯರು ಗಮನಿಸಿದ ನಂತರ ಪತಿ ಪರಾರಿಯಾಗಿದ್ದಾನೆ.

ಬೆಂಗಳೂರು (ಜು.24):ರಾಜಧಾನಿಯಲ್ಲಿ ವಿವಾಹಿತ ಗರ್ಭಿಣಿ ಮಹಿಳೆ ಅನುಮಾನಸ್ಪದ ಸಾವು ಕಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಥಣಿಸಂದ್ರದಲ್ಲಿ ಘಟನೆ ನಡೆದಿದೆ. 22 ವರ್ಷದ ಸುಮನಾ ಮೃತ ದುರ್ದೈವಿ. ಮೂಲತಃ ಉತ್ತರಪ್ರದೇಶ ಮೂಲದ ಮೃತ ಸುಮನ, ಪತಿ ಶಿವಂ ಜೊತೆ ಧಣಿಸಂದ್ರದ ಬಾಡಿಗೆ ಮನೆಯಲ್ಲಿ ವಾಸವಿದ್ದರು.

ಮೂರು ದಿನಗಳ ಹಿಂದೆ ಮನೆಯಲ್ಲಿಯೇ ಸುಮನ ಮೃತಪಟ್ಟಿದ್ದಾರೆ. ಮೃತದೇಹ ವಾಸನೆ ಬಂದು ಸ್ಥಳಿಯರು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಹೆಣ್ಣೂರು ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದು, ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ.

ಹಲವು ಅನುಮಾನಕ್ಕೆ ಕಾರಣ: ಇನ್ನು ಸುಮನಾ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮಹಿಳೆ ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಆದರೆ, ಮೂಗಿನಲ್ಲಿ ರಕ್ತ ಬಂದು ಸಾವನ್ನಪ್ಪಿರೋ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮೂರು ದಿನಗಳ ಹಿಂದೆ ಮನೆಯಲ್ಲಿಯೇ ಮಹಿಳೆ ಮೃತಪಟ್ಟಿದ್ದಾಳೆ. ಪತ್ನಿಯ ಮೃತದೇಹದ ಜೊತೆ ಪತಿ ಶಿವಂ ಎರಡು ದಿನ ಕಾಲ ಕಳೆದಿದ್ದಾನೆ. ನಿನ್ನೆ ಮಧ್ಯಾಹ್ನದ ವೇಳೆ ಸ್ಥಳೀಯರು ಗಮನಿಸಿದ ನಂತರ ಪತ್ನಿಯ ಮೃತದೇಹ ಬಿಟ್ಟು ಎಸ್ಕೇಪ್ ಆಗಿದ್ದಾನೆ.

ಇನ್ನು ಶಿವಂ ವೃತ್ತಿಯಲ್ಲಿ ಪೇಂಟರ್‌ ಆಗಿದ್ದಾನೆ. ಪತ್ನಿ ನಿಧನದ ನಂತರ ಮೊದಲ ದಿನ ಶಿವಂ ಪೇಂಟಿಂಗ್ ಕೆಲಸಕ್ಕೆ ಹೋಗಿದ್ದ ನಂತರ ಎರಡನೇ ದಿನ ರಾತ್ರಿ ಪತ್ನಿ ಮೃತದೇಹದ ಮುಂದೆಯೇ ಮದ್ಯಪಾನ ಮಾಡಿ ಊಟ ಮಾಡಿದ್ದಾನೆ. ಮನೆಯಲ್ಲಿಯೇ ಎಗ್ ಬುರ್ಜಿ ಮಾಡ್ಕೊಂಡು ಮೃತದೇಹ ಮುಂದೆ ಊಟ ಮಾಡಿ ನಿದ್ರೆಗೆ ಜಾರಿದ್ದಾನೆ. ಬುಧವಾರ ಬೆಳಗ್ಗೆ ಪತ್ನಿಯ ಮೃತದೇಹ ವಾಸನೆ ಬರಲಿಕ್ಕೆ ಶುರು ಮಾಡಿದೆ. ಈ ವೇಳೆ ಅಕ್ಕಪಕ್ಕದ ಮನೆಯವರು ಬಂದು ನೋಡುವ ವೇಳೆಗೆ ಶಿವಂ ಎಸ್ಕೇಪ್‌ ಆಗಿದ್ದಾನೆ.

ಮಹಿಳೆ ಸುಮನ ಅನುಮಾನಾಸ್ಪದ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ನಾಪತ್ತೆಯಾಗಿರೋ ಪತಿ ಶಿವಂ ಗಾಗಿ ಹೆಣ್ಣೂರು ಪೊಲೀಸರಿಂದ ಹುಡುಕಾಟ ನಡೆಯುತ್ತಿದೆ.