ಲೇಆಫ್ ಆದ ಬೆಂಗಳೂರಿನ ಉದ್ಯೋಗಿಯೊಬ್ಬರು, ಕಂಪನಿಯ ಲ್ಯಾಪ್‌ಟಾಪ್ ಹಿಂತಿರುಗಿಸಲು ತಮ್ಮ 2 ವರ್ಷದ ಮಗನೊಂದಿಗೆ ಕಚೇರಿಗೆ ಹೋದಾಗ ಅವಮಾನ ಎದುರಿಸಿದ್ದಾರೆ. ಮಗುವನ್ನು ಒಳಗೆ ಬಿಡದ ಈ ಘಟನೆಯು ಕಾರ್ಪೊರೇಟ್ ಜಗತ್ತಿನ ಸ್ವಾರ್ಥ ಸ್ವರೂಪವನ್ನು ಬಯಲು ಮಾಡಿದ್ದಾರೆ.
ಬೆಂಗಳೂರು (ಆ.12): ಇತ್ತೀಚೆಗಷ್ಟೇ ಕಂಪನಿಯಿಂದ ಲೇಆಫ್ ಆದ ಬೆಂಗಳೂರಿನ ಉದ್ಯೋಗಿಯೊಬ್ಬರು, ತಮಗೆ ಎದುರಾದ ಮುಜುಗರದ ಸನ್ನಿವೇಶ ಮತ್ತು ಕಾರ್ಪೊರೇಟ್ ಜಗತ್ತಿನಲ್ಲಿ ಕಂಪನಿ ಹಾಗೂ ಉದ್ಯೋಗಿ ನಡುವಿನ ಸಂಬಂಧ ಎಷ್ಟೊಂದು ಸ್ವಾರ್ಥಪೂರಿತವಾಗಿರುತ್ತದೆ ಎಂಬುದನ್ನು ತಮ್ಮ ಅನುಭವದ ಮೂಲಕ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ರೆಡ್ಡಿಟ್ (Reddit) ಜಾಲತಾಣದಲ್ಲಿ ಅವರು ಹಂಚಿಕೊಂಡಿರುವ ಈ ಪೋಸ್ಟ್ ಇದೀಗ ವೈರಲ್ ಆಗಿದೆ.
ಕೆಲಸದಿಂದ ವಜಾಗೊಂಡ ನಂತರ ತಮ್ಮ ಕೊನೆಯ ದಿನದ ಫಾರ್ಮಾಲಿಟೀಸ್ ಪೂರ್ಣಗೊಳಿಸಲು ಮತ್ತು ಕಂಪನಿಯ ಲ್ಯಾಪ್‌ಟಾಪ್ ಮರಳಿಸಲು ಅವರು ಆಫೀಸ್‌ಗೆ ತೆರಳಿದ್ದರು. ಪತ್ನಿಯೂ ಕೆಲಸದಲ್ಲಿದ್ದ ಕಾರಣ ಹಾಗೂ ಅಂದು ಮಗನನ್ನು ನೋಡಿಕೊಳ್ಳಲು ಬೇರೆ ಯಾವುದೇ ಚೈಲ್ಡ್‌ಕೇರ್ ವ್ಯವಸ್ಥೆ ಇಲ್ಲದ ಕಾರಣ, 2 ವರ್ಷದ ಮಗನನ್ನು ಜೊತೆಯಲ್ಲೇ ಕರೆದುಕೊಂಡು ಹೋಗಿದ್ದೆ. ಆದರೆ, ಆಫೀಸ್ ತಲುಪಿದ ತಕ್ಷಣ ಸೆಕ್ಯುರಿಟಿ ಹಾಗೂ ಸಿಬ್ಬಂದಿ ಮಗುವನ್ನು ಕಂಪನಿಯ ಕಟ್ಟಡದ ಒಳಗಡೆ ಕರೆದೊಯ್ಯಲು ಅನುಮತಿ ನೀಡಲಿಲ್ಲ!
ತಮ್ಮ ಪರಿಸ್ಥಿತಿಯನ್ನು ವಿವರಿಸಿ, 'ಲ್ಯಾಪ್‌ಟಾಪ್ ಕೊಟ್ಟು ಕೇವಲ 5 ನಿಮಿಷದಲ್ಲೇ ವಾಪಸ್ ಬರುತ್ತೇನೆ' ಎಂದು ಮನವಿ ಮಾಡಿದರೂ ಕಂಪನಿ ಸಿಬ್ಬಂದಿ ಒಪ್ಪಲಿಲ್ಲ. ಕೊನೆಗೆ ಬೇರೆ ದಾರಿಯಿಲ್ಲದೆ, ಅವರು ತಮ್ಮ ಸಹೋದ್ಯೋಗಿಯೊಬ್ಬರಿಗೆ ಕರೆ ಮಾಡಿ, 5 ನಿಮಿಷ ಮಗನನ್ನು ನೋಡಿಕೊಳ್ಳುವಂತೆ ವಿನಂತಿ ಮಾಡಿದ್ದರು. ಆದರೆ ಆ ಪ್ರಕ್ರಿಯೆ ಮುಗಿಯಲು ಸುಮಾರು 15 ನಿಮಿಷಗಳೇ ಬೇಕಾದವು.
ಬ್ಲ್ಯಾಕ್‌ರಾಕ್ (BlackRock) ಕಂಪನಿಯ ಅಂಗಸಂಸ್ಥೆಯಾದ ಪ್ರೀಕ್ವಿನ್ (Preqin) ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಈ ಮಾಜಿ ಉದ್ಯೋಗಿ, ತಾವು ಯಾವುದೇ ಕಂಪನಿ ನೀತಿ ಉಲ್ಲಂಘನೆಯ ಆರೋಪ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. "ಕಂಪನಿಗಳಲ್ಲಿ ವಿಸಿಟರ್ಸ್ ಮತ್ತು ಮಕ್ಕಳ ಪ್ರವೇಶಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮಗಳಿರುತ್ತವೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಲೇಆಫ್ ಆದ ತಕ್ಷಣವೇ ನನಗೆ ಎದುರಾದ ಈ ಅನುಭವ ಒಂದು ಮಹತ್ವದ ಸತ್ಯವನ್ನು ನೆನಪಿಸಿತು. ಅದೇನೆಂದರೆ, 'ಕಂಪನಿ ಎಂದರೆ ಕೇವಲ ಅದೊಂದು ಬಿಸಿನೆಸ್ ಸಂಸ್ಥೆಯಷ್ಟೇ' ಎನ್ನುವುದು.
ಕೆಲಸ ಮತ್ತು ಜೀವನದ ನಡುವಿನ ಅಂತರ ತಿಳಿಸಿದ ಪಾಠ
ಈ ಕಹಿ ಘಟನೆಯನ್ನು ಮೆಲುಕು ಹಾಕಿರುವ ಅವರು, "ಉದ್ಯೋಗಿಗಳು ತಮ್ಮ ವರ್ಷಗಟ್ಟಲೆ ಸಮಯ, ಶ್ರಮ, ನಂಬಿಕೆ ಮತ್ತು ಭಾವನಾತ್ಮಕ ಶಕ್ತಿಯನ್ನು ಕಂಪನಿಗೆ ಧಾರೆ ಎರೆಯುತ್ತಾರೆ. ಆದರೆ ಕೆಲಸ ಮುಗಿದ ಮೇಲೆ ಅದೊಂದು ಕೇವಲ 'ವ್ಯಾವಹಾರಿಕ ನಿರ್ಧಾರ' (Business Decision) ಎಂಬುದಷ್ಟೇ ಸತ್ಯ. ನಿಮ್ಮ ಕಚೇರಿಯ ಕೆಲಸವನ್ನು ನಿಮ್ಮ ಇಡೀ ಜೀವನದ ಗುರುತನ್ನಾಗಿ (Identity) ಮಾಡಿಕೊಳ್ಳಬೇಡಿ. ಕುಟುಂಬವನ್ನು ನೋಡಿಕೊಳ್ಳಿ, ಕೆಲಸದ ಆಚೆಗೂ ನಿಮಗೊಂದು ಸುಂದರ ಜೀವನವನ್ನು ಕಟ್ಟಿಕೊಳ್ಳಿ" ಎಂದು ಇತರ ಉದ್ಯೋಗಿಗಳಿಗೆ ಕಿವಿಮಾತು ಹೇಳಿದ್ದಾರೆ.
ಅಲ್ಲದೆ, ಹಿಂದೆ ತಮ್ಮದೇ ಕಂಪನಿಯ ಹೆಚ್‌ಆರ್ (HR) ಸಿಬ್ಬಂದಿಯೊಬ್ಬರು ಮಗುವನ್ನು ಆಫೀಸ್‌ಗೆ ಕರೆತಂದಿದ್ದನ್ನು ನೋಡಿದ್ದರಿಂದ, ಮಗುವನ್ನು ಕರೆದೊಯ್ಯುವುದು ನಿಯಮಬಾಹಿರವಲ್ಲ ಎಂದು ತಾವು ಭಾವಿಸಿದ್ದಾಗಿಯೂ ಅವರು ತಿಳಿಸಿದ್ದಾರೆ.
ರೆಡ್ಡಿಟ್‌ನಲ್ಲಿ ಉದ್ಯೋಗಿಗಳ ಆಕ್ರೋಶ
ಈ ವೈರಲ್ ಪೋಸ್ಟ್‌ಗೆ ನೆಟ್ಟಿಗರು ಹಾಗೂ ಇತರೆ ಉದ್ಯೋಗಿಗಳಿಂದ ಭಾರಿ ಬೆಂಬಲ ಮತ್ತು ಆಕ್ರೋಶ ವ್ಯಕ್ತವಾಗಿದೆ. ಕೆಲಸದಿಂದ ತೆಗೆದುಹಾಕಿದ ಉದ್ಯೋಗಿಗಳಿಗೆ ಲ್ಯಾಪ್‌ಟಾಪ್ ಮರಳಿಸಲು ಕಂಪನಿಗಳೇ ಸೂಕ್ತ ವ್ಯವಸ್ಥೆ ಮಾಡಬೇಕು ಎಂಬ ಅಭಿಪ್ರಾಯ ಕೇಳಿಬಂದಿದೆ. 'ಮುಂದಿನ ಬಾರಿ ಲೇಆಫ್ ಆದಾಗ ನೀವೇ ಆಫೀಸ್‌ಗೆ ಹೋಗಿ ಸಮಯ ವ್ಯರ್ಥ ಮಾಡಬೇಡಿ. ಕಂಪನಿಯವರೇ ಪ್ರೀ-ಲೇಬಲ್ಡ್ ಬಾಕ್ಸ್ ಕಳುಹಿಸಿ ಲ್ಯಾಪ್‌ಟಾಪ್ ತರಿಸಿಕೊಳ್ಳಲಿ, ಅವರಿಗೆ ಹಣ ಮತ್ತು ಸಮಯ ಉಳಿಸಲು ನೀವೇಕೆ ಕಷ್ಟಪಡುತ್ತೀರಿ?' ಎಂದು ಕಮೆಂಟ್ ಮಾಡಿದ್ದಾರೆ.
ನನಗೆ ಕಂಪನಿಯು ಕೊರಿಯರ್ ಮೂಲಕ ಲ್ಯಾಪ್‌ಟಾಪ್ ಕಳುಹಿಸಲು ಹೇಳಿದಾಗ, ನಾನು ಅತ್ಯಂತ ದುಬಾರಿಯಾದ ಎಕ್ಸ್‌ಪ್ರೆಸ್ ಓವರ್‌ನೈಟ್ ಏರ್ ಶಿಪ್ಪಿಂಗ್ ಆಯ್ಕೆ ಮಾಡಿಕೊಂಡೆ. ಪ್ರೀಮಿಯಂ ಪ್ಯಾಕಿಂಗ್‌ನೊಂದಿಗೆ ಸುಮಾರು 350 ಡಾಲರ್ (ಅಂದಾಜು ₹29,000) ಬಿಲ್ ಅನ್ನು ಕಂಪನಿಯ ಖಾತೆಗೇ ಹಾಕಿದೆ ಎಂದು ಬರೆದುಕೊಂಡಿದ್ದಾರೆ.
'ಕೆಲಸದಿಂದ ತೆಗೆದುಹಾಕಿದ ಮೇಲೆ ಉದ್ಯೋಗಿ ತನ್ನ ಸ್ವಂತ ಹಣ ಹಾಗೂ ಸಮಯ ವ್ಯರ್ಥ ಮಾಡಿ ಕಂಪನಿ ಆಸ್ತಿಯನ್ನು ವಾಪಸ್ ತಲುಪಿಸಬೇಕು ಎಂದು ನಿರೀಕ್ಷಿಸುವುದೇ ತಪ್ಪು. ಬಾಕ್ಸ್ ಕಳುಹಿಸಿ ಪಿಕ್‌ಅಪ್ ಮಾಡಿಕೊಳ್ಳಿ ಇಲ್ಲವೇ ನಷ್ಟವನ್ನು ತಾವೇ ಭರಿಸಿ' ಎಂದು ತಾರಾಟೆಗೆ ತೆಗೆದುಕೊಂಡಿದ್ದಾರೆ.
"ಹೆಲ್ತ್‌ಕೇರ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ನನ್ನ ಸಹೋದ್ಯೋಗಿಯೊಬ್ಬರು ವರ್ಕ್ ಕಾಲ್‌ನಲ್ಲಿದ್ದಾಗ ಮಗುವಿನ ಅಳುವಿನ ಶಬ್ದ ಕೇಳಿಸಿತು. ತಕ್ಷಣ ಸೂಪರ್‌ವೈಸರ್, ಮ್ಯಾನೇಜರ್ ಮತ್ತು ಹೆಚ್‌ಆರ್ ಪ್ರತಿನಿಧಿ ಸೇರಿ ಸಭೆ ಕರೆದು, ರೋಗಿಗಳ ಗೌಪ್ಯತೆ ಮತ್ತು ಕಚೇರಿಯ ಭದ್ರತೆಯ ನೆಪವೊಡ್ಡಿ ಆಕೆಗೆ ನೋಟಿಸ್ ನೀಡಿದ್ದರು" ಎಂದು ಕಾರ್ಪೊರೇಟ್ ಕಂಪನಿಗಳ ಅಮಾನವೀಯ ನಡೆಯನ್ನು ಬಯಲು ಮಾಡಿದ್ದಾರೆ.


