ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಗುಜರಾತ್‌ನ ಜಾಫ್ರಾಬಾದಿ ತಳಿಯ 1250 ಕೆ.ಜಿ ತೂಕದ 'ಪಂಚಕಲ್ಯಾಣಿ' ಎಮ್ಮೆ ಎಲ್ಲರ ಗಮನ ಸೆಳೆಯುತ್ತಿದೆ. ದಿನಕ್ಕೆ 25 ಲೀಟರ್ ಹಾಲು ನೀಡುವ ಈ ಎಮ್ಮೆಯ ಜೊತೆಗೆ ಪುಂಗನೂರು ಗಿಡ್ಡ ತಳಿ ಹಾಗೂ ಗಿರ್ ಹಸುಗಳು ಮೇಳದ ಪ್ರಮುಖ ಆಕರ್ಷಣೆಯಾಗಿವೆ.

ಬೆಂಗಳೂರು (ನ.17): ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಹೆಬ್ಬಾಳದ ಜಿಕೆವಿಕೆಯಲ್ಲಿ ಆಯೋಜಿಸಿರುವ ‘ಕೃಷಿ ಮೇಳ’ದಲ್ಲಿ ಗುಜರಾತ್‌ನ ಜಾಫ್ರಾಬಾದಿ ತಳಿಯ ‘ಪಂಚಕಲ್ಯಾಣಿ’ ಎಮ್ಮೆ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಬರೋಬ್ಬರಿ 1250 ಕೆ.ಜಿ. ತೂಕವಿರುವ ‘ಪಂಚ ಕಲ್ಯಾಣಿ’ ಎಮ್ಮೆ 11 ಅಡಿ ಉದ್ದವಿದ್ದು, ಐದೂಮುಕ್ಕಾಲು ಎಡಿ ಎತ್ತರವಿದ್ದು, ದಿನಕ್ಕೆ 25 ಲೀಟರ್‌ ಹಾಲು ನೀಡುವುದು ವಿಶೇಷವಾಗಿದೆ. ಬೃಹತ್‌ ಗಾತ್ರದಿಂದಾಗಿ ಈ ಎಮ್ಮೆ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ. ನಾಲ್ಕು ಕಾಲು, ಬಾಯಿ, ಕಣ್ಣು, ಹಣೆ, ಬಾಲ ಮಾತ್ರ ಬಿಳಿ ಬಣ್ಣವಿದ್ದು ಉಳಿದಂತೆ ಕಪ್ಪು ಬಣ್ಣ ಹೊಂದಿದೆ. ಅದಕ್ಕಾಗಿಯೇ ಇದನ್ನು ‘ಪಂಚ ಕಲ್ಯಾಣಿ’ ಎಂದು ಕರೆಯಲಾಗುತ್ತದೆ.

ಈ ಬಗ್ಗೆ ಮಾಹಿತಿ ನೀಡಿದ ಎಮ್ಮೆಯ ಮಾಲೀಕರಾದ ಬೇಗೂರಿನ ಶ್ರೀ ಕೃಷ್ಣ ಗೋಶಾಲೆಯ ಸಿ.ಎನ್‌.ಕೃಷ್ಣಮೂರ್ತಿ, ‘ಕಾಲು, ಬಾಯಿ, ಕಣ್ಣು, ಹಣೆ, ಬಾಲ ಮಾತ್ರ ಬಿಳಿ ಇರುವುದರಿಂದ ಇದನ್ನು ಪಂಚ ಕಲ್ಯಾಣಿ ಎಂದು ಕರೆಯಲಾಗುತ್ತದೆ. ಜಾಫ್ರಾಬಾದಿಯ 10 ಸಾವಿರ ಎಮ್ಮೆಗಳಲ್ಲಿ ಒಂದಕ್ಕೆ ಮಾತ್ರ ಈ ರೀತಿಯ ಬಣ್ಣವಿರುವುದು ವಿಶೇಷವಾಗಿದೆ’ ಎಂದು ಸ್ಪಷ್ಟಪಡಿಸಿದರು.

ದಿನಕ್ಕೆ 25 ಲೀಟರ್‌ ಹಾಲು:

‘ನಾಲ್ಕೂವರೆ ವರ್ಷದ ಈ ಎಮ್ಮೆ ಬೆಳಗ್ಗೆ 13 ಲೀಟರ್‌, ಸಂಜೆ 12 ಲೀಟರ್‌ ಸೇರಿ ದಿನಕ್ಕೆ 25 ಲೀಟರ್‌ ಹಾಲು ನೀಡುತ್ತದೆ. ಶೇ.7 ರಿಂದ 9 ರಷ್ಟು ಫ್ಯಾಟ್‌ ಬರುತ್ತದೆ. ಗಾತ್ರದಲ್ಲಿ ಬೃಹತ್ತಾಗಿದ್ದರೂ ಸೌಮ್ಯ ಸ್ವಭಾವ ಹೊಂದಿದೆ. ದಿನಕ್ಕೆ 30 ಕೆ.ಜಿ. ಹುಲ್ಲು, 5 ಕೆ.ಜಿ. ಇಂಡಿ-ಭೂಸ ನೀಡಬೇಕಿದೆ. ಎರಡು ವರ್ಷದ ಹಿಂದೆ 4 ಲಕ್ಷ ರುಪಾಯಿಗೆ ಈ ಎಮ್ಮೆಯನ್ನು ಖರೀದಿಸಿದ್ದು ಈಗ 6 ಲಕ್ಷಕ್ಕೆ ಕೇಳುತ್ತಿದ್ದಾರೆ’ ಎಂದು ವಿವರಿಸಿದರು.

ಆಕರ್ಷಣೀಯ ಪುಂಗನೂರು ಮಿನೇಚರ್‌:

ಆಂಧ್ರಪ್ರದೇಶ ಮೂಲದ ಪುಂಗನೂರು ಮಿನೇಚರ್‌(ಗಿಡ್ಡ) ತಳಿಯೂ ಇಲ್ಲಿದ್ದು ಕೇವಲ ಒಂದೂವರೆಯಿಂದ ಎರಡು ಅಡಿ ಎತ್ತರ ಇರುವ ಎರಡು ಹಸುಗಳನ್ನು ಇಲ್ಲಿ ಕಾಣಬಹುದಾಗಿದೆ. ಇದರ ಉದ್ದ ಮೂರು ಅಡಿ ಮಾತ್ರ. ಒಂದು ಜೋಡಿಗೆ 8 ಲಕ್ಷ ರುಪಾಯಿ ಬೆಲೆ ಇದೆ. ನಾವೇ ಈ ತಳಿ ಅಭಿವೃದ್ಧಿಪಡಿಸಿದ್ದೇವೆ ಎಂದು ಕೃಷ್ಣಮೂರ್ತಿ ಮಾಹಿತಿ ನೀಡಿದರು.

ಐದು ಸಾವಿರ ವರ್ಷದ ಇತಿಹಾಸವಿರುವ ಗುಜರಾತ್‌ನ ಗಿರ್‌ ತಳಿಯ ಹಸುವನ್ನೂ ಇಲ್ಲಿ ವೀಕ್ಷಿಸಬಹುದಾಗಿದ್ದು, ಈ ಹಸು ದಿನಕ್ಕೆ 16 ಲೀಟರ್‌ ಹಾಲು ನೀಡುತ್ತದೆ. ಇದರ ಒಂದು ಕೆಜಿ ತುಪ್ಪಕ್ಕೆ 3 ಸಾವಿರ ರು. ಗುಜರಾತ್‌ನ ಬಾವನಗರ, ಜುನಾಘಡ್‌, ಪೋರ್‌ಬಂದರ್‌ ಪ್ರದೇಶದಲ್ಲಿ ಈ ತಳಿಯನ್ನು ಕಾಣಬಹುದು.