ಬೆಂಗಳೂರು[ಜೂ. 17]  ಕಾಫಿ ಹೀರುತ್ತಾ ಕನ್ನಡದ ಹಳೆಯ ಚಿತ್ರಗೀತೆಗಳಿಗೆ ಕಿವಿಯಾಗುತ್ತಾ, ಕನ್ನಡದ ಸಾಧಕರ ಪೋಟೋಗಳನ್ನು ಕಣ್ಣ ಮುಂದೆ ಕಾಣುತ್ತಾ, ಅವರ ಸಾಧನೆಗಳ ಮೇಲೆ ಒಂದು ಮೆಲುಕು ಹಾಕುತ್ತ ಇದ್ದರೆ ಒಬ್ಬ ನಿಜ ಕನ್ನಡ ಪ್ರೇಮಿಗೆ ಇನ್ನೇನು ಬೇಕು?  ಬೆಂಗಳೂರು ಜಯನಗರದ ‘ಕನ್ನಡ ಕೆಫೆ’ ಯಲ್ಲಿ ಇಂಥದ್ದೊಂದು ಅವಕಾಶ ನಿಮಗಾಗಿ ತೆರೆದುಕೊಂಡಿದೆ.

ಇಂಥದ್ದೊಂದು ಹೊಸ ಅನುಭವ ನೀಡುವ, ಹೊಟ್ಟೆ ಜತೆಗೆ ಮನಸ್ಸಿಗೂ ಮುದ ನೀಡುವ ತಾಣ ಜಯನಗರದ 'ಕನ್ನಡ ಕೆಫೆ'.  ಹೋಟೆಲ್ ನ ಎಲ್ಲ ಭಾಗದಲ್ಲಿಯೂ ಕನ್ನಡದ ಘೋಷ ವಾಕ್ಯಗಳನ್ನು ಬರೆಯಲಾಗಿದ್ದು ನಮ್ಮಲ್ಲೇ ಹುದುಗಿರುವ ಕನ್ನಡ ಪ್ರೇಮ ಜಾಗೃತವಾಗುತ್ತದೆ.

ನಾಡಿನ ಸಂಸ್ಕೃತಿಯ ತಾಣ: ಗೋಡೆಗಳ ಮೇಲೆ ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ ಚಿತ್ರಗಳು ಗಮನ ಸೆಳೆಯುತ್ತವೆ. ರಾಜಧಾನಿ ಬೆಂಗಳೂರಿನ ಸೊಬಗು, ಮೈಸೂರು ದಸರಾ, ಪಾರಂಪರಿಕ ತಾಣಗಳಾದ ಬಾದಾಮಿ-ಐಹೊಳೆ, ಪಟ್ಟದಕಲ್ಲು, ಹಂಪಿಯ ದೃಶ್ಯ ವೈಭವವನ್ನು ಕಣ್ಣು ತುಂಬಿಕೊಳ್ಳಬಹುದು.

ಸಂಸತ್ತಿನಲ್ಲಿ ಮೊಳಗಿದ ಕನ್ನಡ, ದೇಸೀ ಧಿರಿಸಿನಲ್ಲಿ ಮಿಂಚಿದ ಸಿಂಹ, ತೇಜಸ್ವಿ

ಸಾಧಕರ ಚಿತ್ರಪಟಗಳು: ಇನ್ನು ವರನಟ ಡಾ.ರಾಜ್‌ಕುಮಾರ್‌,  ಸಾಹಸಸಿಂಹ ವಿಷ್ಣುವರ್ಧನ್‌, ಅಂಬರೀಶ್, ಸಾಲು ಮರದ ತಿಮ್ಮಕ್ಕ ಅವರ ಚಿತ್ರಗಳು ಕನ್ನಡದ ಕತೆ ಹೇಳುತ್ತವೆ. ಕ್ರಿಕೆಟಿಗರಾದ ಅನಿಲ್‌ ಕುಂಬ್ಳೆ, ರಾಹುಲ್‌ ದ್ರಾವಿಡ್‌ ಅವರನ್ನು ಸಹ ಕಾಣಬಹುದು. ಇವರ ಜತೆಗೆ ಡಾ.ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿ, ಪೇಜಾವರ ಶ್ರೀ, ವೀರೇಂದ್ರ ಹೆಗ್ಗಡೆ, ಬಸವೇಶ್ವರರು ಆಶೀರ್ವಾದ ನೀಡುತ್ತಾರೆ.

ಸಾಹಿತ್ಯ ಲೋಕ ಅನಾವರಣ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು, ಬೇಂದ್ರೆ, ಮಾಸ್ತಿ, ಶಿವರಾಮ ಕಾರಂತ ಸಹಿತ ಎಂಟು ಮಂದಿ ಸಾಹಿತಿ ದಿಗ್ಗಜರ ಚಿತ್ರಪಟಗಳು ಸಾಹಿತ್ಯ ಲೋಕದಲ್ಲಿ ಸಂಚರಿಸಿದ ಅನುಭವ ನೀಡುತ್ತವೆ.

ಗ್ರಂಥಾಲಯ ವಿಶೇಷ:  ಹೋಟೆಲ್‌ಗೆ ಆಗಮಿಸುವ ಗ್ರಾಹಕರಲ್ಲಿ ಓದಿನ ಬಗೆಗೆ ಪ್ರೀತಿ ಮೂಡಿಸಲು ಸಣ್ಣ ಪುಸ್ತಕ ಭಂಡಾರ ಇದೆ. ಇಲ್ಲಿ ಹಿರಿಯ ಸಾಹಿತಿಗಳ ಪ್ರಮುಖ ಕೃತಿ, ಕಾದಂಬರಿಗಳು ಲಭ್ಯ. ತಿಂಡಿ ತಿಂದು ಪುಸ್ತಕವನ್ನು ಓದಿ ಹೊರಬಹುದು. ಕೆಲ ಪುಸ್ತಕಗಳನ್ನು ಮನೆಗೂ ಕೊಂಡೊಯ್ಯಲು ಅವಕಾಶ ಇದ್ದು, ಆ ಕೃತಿಯ ಬೆಲೆಯನ್ನು ಮುಂಗಡವಾಗಿ ನೀಡಬೇಕು ಎಂಬ ನಿಯಮ ಮಾಡಿಕೊಳ್ಳಲಾಗಿದೆ.

ಖಂಡಿತ ಭೇಟಿ ಕೊಡಿ:  ಕ್ಯೂಆರ್ ಕೋಡ್ ಮೂಲಕ ನಿಮ್ಮ ಪೋನ್ ನಲ್ಲಿ ಸ್ಕಾನ್ ಮಾಡಿದರೆ ಕನ್ನಡದ ಕಟ್ಟಾಳುಗಳ ಕುರಿತಾದ ಸಮಗ್ರ ಮಾಹಿತಿಯೂ ಸಿಗುತ್ತದೆ. ಭಾಷಾ ಪ್ರೇಮ ಉಳಿಸಿ ಬೆಳೆಸಲು ಇಂಥ ಆಲೋಚನೆ ಮಾಡಿದ್ದೇವೆ ಎಂದು ಕನ್ನಡ ಕೆಫೆ ಮುಖ್ಯಸ್ಥ ಸುರೇಶ್ ಗೌಡ ತಿಳಿಸುತ್ತಾರೆ. ಹಾಗಾದರೆ ಇನ್ನೇಕೆ ತಡ ನಾವು ಒಮ್ಮೆ ಹೋಗಿ ಕಾಫಿ ಹೀರಿ ಬರೋಣ ಅಲ್ಲವೆ?

"