1905ರ ಆಗಸ್ಟ್ 5 ರಂದು ಬೆಂಗಳೂರು ಏಷ್ಯಾದಲ್ಲೇ ಮೊದಲ ಬಾರಿಗೆ ವಿದ್ಯುತ್ ಬೀದಿ ದೀಪಗಳನ್ನು ಅಳವಡಿಸಿಕೊಂಡ ನಗರವಾಗಿ ಹೊರಹೊಮ್ಮಿತು. ಕೆ.ಆರ್. ಮಾರುಕಟ್ಟೆಯ ಸುತ್ತಮುತ್ತ ಅಳವಡಿಸಲಾದ ಈ ದೀಪಗಳು ಉರಿದದ್ದೂ ಒಂದು ಆಕಸ್ಮಿಕ.
ನಿಮಗೆ ಗೊತ್ತಾ? ಏಷ್ಯಾದಲ್ಲೇ ಮೊತ್ತ ಮೊದಲ ಬೀದಿ ದೀಪ, ಅದರಲ್ಲೂ ಎಲೆಕ್ಟ್ರಿಕ್ ದೀಪ ಅಳವಡಿಸಿದ್ದು ನಮ್ಮ ರಾಜಧಾನಿ ಬೆಂಗಳೂರಿನಲ್ಲಿ! ನಮಗಿದು ಹೆಮ್ಮೆಯ ವಿಷಯವಾಗಬೇಕು. ಅಂದ ಹಾಗೆ ಈ ವರ್ಷದ ಆಗಸ್ಟ್‌ಗೆ ಆ ಮೊದಲ ವಿದ್ಯುತ್ ದೀಪ ಅಳವಡಿಸಿ 120 ವರ್ಷಗಳಾಗುತ್ತವೆ. ಅದನ್ನು ಅಳವಡಿಸಿದ್ದು ಆಗಸ್ಟ್ 5, 1905ರಂದು. ಕೆ.ಆರ್. ಮಾರುಕಟ್ಟೆಯ ಸುತ್ತಲೂ ಮೊದಲ ವಿದ್ಯುತ್ ಬೀದಿ ದೀಪಗಳು ಬೆಳಗಿದವು.
ವಿದ್ಯುತ್ ದೀಪ ಬರುವ ಮೊದಲು ಬೆಂಗಳೂರಿನ ರಸ್ತೆಗಳಲ್ಲಿ ಸೀಮೆಎಣ್ಣೆ ದೀಪಗಳು ಚುಕ್ಕೆಗಳಂತೆ ಮಿನುಗುತ್ತಿದ್ದವು. ಬೀದಿ ದೀಪಗಳನ್ನು ನಿರ್ವಹಿಸಲು ಮೂವರು ಜನರನ್ನು ನೇಮಿಸಲಾಗಿತ್ತು. ಒಬ್ಬರು ಹಿಂದಿನ ರಾತ್ರಿ ತೈಲದಿಂದ ಉರಿದು ಹೊಗೆ ಬಳಿದಿರುವ ದೀಪದ ಗಾಜಿನ ಕಪ್ಪು ಮಸಿಯನ್ನು ಸ್ವಚ್ಛಗೊಳಿಸುತ್ತಿದ್ದರು. ಇನ್ನೊಬ್ಬರು ಅದಕ್ಕೆ ಸೀಮೆಎಣ್ಣೆ ತುಂಬಿಸುತ್ತಿದ್ದರು. ಮತ್ತು ಮೂರನೆಯವರು ಜ್ವಾಲೆಯನ್ನು ಬೆಳಗಿಸುತ್ತಿದ್ದರು. ನಗರದಾದ್ಯಂತ ಬೆಳಕಿನ ಯೋಜನೆಯನ್ನು ನೋಡಿಕೊಳ್ಳಲು ಒಬ್ಬ ಇನ್ಸ್‌ಪೆಕ್ಟರ್ ಇದ್ದ. ಆಗಸ್ಟ್ 5, 1905ರಂದು ಸಂಜೆ 7 ಗಂಟೆಗೆ ಕೆ.ಆರ್. ಮಾರುಕಟ್ಟೆಯ ಸುತ್ತಲೂ ಝಗ್ ಎಂದು ವಿದ್ಯುತ್ ದೀಪಗಳು ಹೊತ್ತಿಕೊಂಡಾಗ ಅಲ್ಲಿದ ನೂರಾರು ಜನ ಆಶ್ಚರ್ಯಚಕಿತರಾದರು. ಆ ಸಂಜೆ, ಬೆಂಗಳೂರು ತನ್ನ ಬೀದಿಗಳಲ್ಲಿ ವಿದ್ಯುತ್ ದೀಪ ಬೆಳಗಿಸಿದ ಏಷ್ಯಾದ ಮೊದಲ ನಗರವೆನಿಸಿತು.
ಏಷ್ಯಾದಲ್ಲಿ ಮೊದಲ ಕರೆಂಟ್ ಬಳಕೆಯಾದದ್ದೂ ಕರ್ನಾಟಕದಲ್ಲೇ. ಶಿವನಸಮುದ್ರದ ಕಾವೇರಿ ಜಲಪಾತದ ಬಳಿ ಮೊದಲಿಗೆ ಜಲವಿದ್ಯುತ್ ಶಕ್ತಿಯನ್ನು ಉತ್ಪಾದಿಸಿ ಕೋಲಾರ ಚಿನ್ನದ ಗಣಿಗಳ (ಕೆಜಿಎಫ್) ಗಣಿಗಾರಿಕೆ ಕಾರ್ಯಾಚರಣೆಗಳಿಗೆ ಕಳಿಸಲಾಯಿತು. ಪ್ರಸರಣ ಮಾರ್ಗಗಳು ಬೆಂಗಳೂರಿನ ಮೂಲಕ ಹಾದುಹೋದವು. ನಂತರ, ಜಲವಿದ್ಯುತ್ ಕೇಂದ್ರವು ಹೆಚ್ಚುವರಿ ವಿದ್ಯುತ್ ಅನ್ನು ಉತ್ಪಾದಿಸಿದಾಗ, ಅದನ್ನು ನಗರದ ಬೀದಿ ದೀಪಗಳನ್ನು ಬೆಳಗಿಸಲು ಬಳಸಲಾಯಿತು ಎಂದು ನಗರದ ಇತಿಹಾಸಕಾರ್ತಿ ಯಶಸ್ವಿನಿ ಶರ್ಮಾ ಹೇಳುತ್ತಾರೆ.
ಶಿವನಸಮುದ್ರದಿಂದ ವಿದ್ಯುತ್ ಪಡೆಯುವ ಕಲ್ಪನೆಯನ್ನು ಶೇಷಾದ್ರಿ ಅಯ್ಯರ್ ಮೈಸೂರಿನ ದಿವಾನರಾಗಿದ್ದಾಗ ಮೇಜರ್ ಎಸಿಜೆ ಡಿ ಲೊಟ್ಬಿನಿಯರ್ ಅವರ ಮುಂದಿಟ್ಟರು. ಮೈಸೂರಿನ ಮುಖ್ಯ ವಿದ್ಯುತ್ ಎಂಜಿನಿಯರ್ ಹ್ಯಾರಿ ಪಾರ್ಕರ್ ಗಿಬ್ಸ್ ಈ ಯೋಜನೆಯ ಅನುಷ್ಠಾನವನ್ನು ನೋಡಿಕೊಂಡರು. ಕೆಜಿಎಫ್‌ನಲ್ಲಿ ಹೆಚ್ಚಿನ ಗಣಿಗಾರಿಕೆ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದ ಲಂಡನ್‌ನ ಜಾನ್ ಟೇಲರ್ & ಸನ್ಸ್ ಸಹ ಇದನ್ನು ಬೆಂಬಲಿಸಿತು. ಶಿವನಸಮುದ್ರದಿಂದ ಕೆಜಿಎಫ್‌ಗೆ 150 ಕಿ.ಮೀ. ದೂರ ವಿದ್ಯುತ್ ಅನ್ನು ರವಾನಿಸಲಾಯಿತು.
1905 ರಲ್ಲಿ, ಸುಮಾರು 2,000 ಎಚ್‌ಪಿ ಹೆಚ್ಚುವರಿ ವಿದ್ಯುತ್ ಉತ್ಪಾದಿಸಿದಾಗ, ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಚ್ಚುವರಿ ವಿದ್ಯುತ್ ಅನ್ನು ಬೆಂಗಳೂರಿಗೆ ತಿರುಗಿಸಲು ನಿರ್ಧರಿಸಿದರು. ಹಳೆಯ ನಗರದಲ್ಲಿ ವಿದ್ಯುದ್ದೀಕರಣವನ್ನು ಮೈಸೂರು ಮಹಾರಾಜರು ಮೇಲ್ವಿಚಾರಣೆ ಮಾಡುತ್ತಿದ್ದರು. ಆದರೆ ಕಂಟೋನ್ಮೆಂಟ್‌ನಲ್ಲಿ ಬ್ರಿಟಿಷರು ಅದನ್ನು ನಿಯಂತ್ರಿಸುತ್ತಿದ್ದರು. ಸಬ್‌ಸ್ಟೇಷನ್‌ಗಳು ಮತ್ತು ಸರ್ಕ್ಯೂಟ್‌ಗಳ ಯೋಜನೆಗಳನ್ನು ನಂತರದ ಭಾರತೀಯ ವಿದ್ಯುತ್ ಕಾಯ್ದೆಯನ್ನು ಗಮನದಲ್ಲಿಟ್ಟುಕೊಂಡು ರಚಿಸಬೇಕಾಗಿತ್ತು.
ಮೊದಲ ವಿದ್ಯುತ್ ಉಪಕೇಂದ್ರ 'ಎ' ಅನ್ನು ಕೆ.ಆರ್. ಮಾರುಕಟ್ಟೆಯಲ್ಲಿ ಸ್ಥಾಪಿಸಲಾಯಿತು. ಅದು ಆಗ ಪ್ರಮುಖ ನಗರ ಚೌಕವಾಗಿತ್ತು. ವೈಸ್‌ರಾಯ್ ಕೌನ್ಸಿಲ್ ಸದಸ್ಯ ಸರ್ ಜಾನ್ ಹೆವೆಟ್ ಬೀದಿ ದೀಪಗಳನ್ನು ಉದ್ಘಾಟಿಸಿದರು. ದಿವಾನ್ ಪಿ.ಎನ್. ಕೃಷ್ಣಮೂರ್ತಿ ಉಪಸ್ಥಿತರಿದ್ದರು. ಆರಂಭದಲ್ಲಿ 800ಕ್ಕೂ ಹೆಚ್ಚು ದೀಪಗಳನ್ನು - ಎತ್ತರದ ಕ್ಯಾಸ್ಟರನ್ ಕಂಬದ ಮೇಲೆ ನಾಲ್ಕು ದೀಪಗಳ ಸಮೂಹ - ನಗರದಾದ್ಯಂತ ಪ್ರಮುಖ ಸ್ಥಳಗಳಲ್ಲಿ ಬೆಳಗಿಸಲಾಯಿತು. ಶರ್ಮಾ ಅವರ ಪ್ರಕಾರ, ಕೆ.ಆರ್. ಮಾರುಕಟ್ಟೆಯಲ್ಲಿನ ವಿದ್ಯುತ್ ಕೇಂದ್ರವನ್ನು 1920 ರ ದಶಕದಲ್ಲಿ ಆನಂದ್ ರಾವ್ ವೃತ್ತಕ್ಕೆ ಸ್ಥಳಾಂತರಿಸಲಾಯಿತು. ಎಂ.ಜಿ. ರಸ್ತೆ ಮತ್ತು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ಇನ್ನೂ ಎರಡು ಉಪಕೇಂದ್ರಗಳನ್ನು ರಚಿಸಲಾಯಿತು. ಎಂ.ಜಿ. ರಸ್ತೆಯಲ್ಲಿರುವ ಬಿ-ನಿಲ್ದಾಣವು ಮೊದಲು ಪೂರ್ವ ಪೆರೇಡ್ ಚರ್ಚ್ ಅನ್ನು ಬೆಳಗಿಸಿತು.
ಗೋವಾ ಪ್ರವಾಸಕ್ಕೆ ಹೋಗೋರಿಗೆ ಹೊಸ ನಿಯಮ ಜಾರಿ; ರೂಲ್ಸ್ ಮೀರಿದರೆ ವಾಹನ ಸೀಜ್, ಜೈಲೂಟ ಫಿಕ್ಸ್!
ನಗರದ ವಿದ್ಯುದ್ದೀಕರಣಕ್ಕೆ ಆಗ ಒಟ್ಟು 6 ಲಕ್ಷ ರೂ. ವೆಚ್ಚವಾಗಿತ್ತು. ಆರಂಭಿಕ ವಾರ್ಷಿಕ ನಿರ್ವಹಣಾ ವೆಚ್ಚ ರೂ. 50,000 ಎಂದು ದಾಖಲೆಗಳು ತೋರಿಸುತ್ತವೆ. ಒಂದು ವರ್ಷದ ಅವಧಿಯಲ್ಲಿ, 1,630 ಕ್ಕೂ ಹೆಚ್ಚು ಮನೆ ಸಂಪರ್ಕಗಳು ಇದ್ದವು. ಪ್ರತಿ ವಿದ್ಯುತ್ ಬಲ್ಬ್‌ಗೆ ಮಾಸಿಕ 1 ರೂ. ಶುಲ್ಕ. ಈ ಯೋಜನೆಯು ಆಡಳಿತಕ್ಕೆ ವಾರ್ಷಿಕ 1 ಲಕ್ಷ ರೂ.ಗೂ ಹೆಚ್ಚು ಆದಾಯವನ್ನು ತಂದುಕೊಟ್ಟಿತು. ಆಗ ಮೆದು ಕಬ್ಬಿಣದ ದೀಪದ ಕಂಬಗಳು ಬಳಕೆಯಲ್ಲಿದ್ದವು. ಅವುಗಳಲ್ಲಿ ಎರಡನ್ನು ಕೆಲವು ವರ್ಷಗಳ ಹಿಂದೆ ಬಿಬಿಎಂಪಿ ಕಚೇರಿ ಆವರಣಕ್ಕೆ ಸ್ಥಳಾಂತರಿಸಲಾಯಿತು.
ರೈಲಿನಲ್ಲೆ ಇಡೀ ಪ್ರಪಂಚ ಸುತ್ತುವ ಅವಕಾಶ, ಕೈನಲ್ಲಿ ಕಾಸಿದ್ರೆ ಇಂದೇ ಬುಕ್ ಮಾಡಿ
