ಬೆಂಗಳೂರಿನ ಎಂಜಿನಿಯರ್ ಗೌರವ್ ಸೇನ್ ಅವರು ರಸ್ತೆ ಗುಂಡಿಗಳನ್ನು ಪತ್ತೆಹಚ್ಚಲು ಮತ್ತು ಅವುಗಳ ಗಾತ್ರವನ್ನು ವಿಶ್ಲೇಷಿಸಲು ಎಐ (AI) ಚಾಲಿತ ಹೊಸ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ತಂತ್ರಜ್ಞಾನವು ಗುಂಡಿಗಳಿಗೆ ಕಾರಣರಾದ ಗುತ್ತಿಗೆದಾರರನ್ನು ಗುರುತಿಸಿ, ಅವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಲು ಸಿದ್ಧವಿರುವ ದೂರನ್ನು ಸ್ವಯಂಚಾಲಿತವಾಗಿ ಸಿದ್ಧಪಡಿಸುತ್ತದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆ ಜಗಜ್ಜಾಹೀರು. ಈ ಸಮಸ್ಯೆಗೆ ಕೃತಕ ಬುದ್ಧಿಮತ್ತೆ (AI) ಮೂಲಕ ಪರಿಹಾರ ಕಂಡುಕೊಳ್ಳುವಲ್ಲಿ ಸ್ಥಳೀಯ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಯಶಸ್ವಿಯಾಗಿದ್ದಾರೆ. 'ಇಂಟರ್‌ವ್ಯೂ ರೆಡಿ' (InterviewReady) ಸಂಸ್ಥೆಯ ಸ್ಥಾಪಕ ಗೌರವ್ ಸೇನ್, ರಸ್ತೆ ಗುಂಡಿಗಳನ್ನು ಪತ್ತೆಹಚ್ಚಿ ಅವುಗಳಿಗೆ ಕಾರಣರಾದ ಗುತ್ತಿಗೆದಾರರ ವಿರುದ್ಧ ದೂರು ಸಿದ್ಧಪಡಿಸುವ ಎಐ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ.

ಈ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ?

ಗೌರವ್ ಸೇನ್ ಅಭಿವೃದ್ಧಿಪಡಿಸಿರುವ ಈ ವ್ಯವಸ್ಥೆಯು ಕಾರಿನಲ್ಲಿರುವ 'ಡ್ಯಾಶ್‌ಕ್ಯಾಮ್' (Dashcam), ಜಿಪಿಎಸ್ (GPS) ಮತ್ತು ಆಕ್ಸಿಲರೋಮೀಟರ್‌ಗಳನ್ನು ಬಳಸುತ್ತದೆ. ಕಾರು ಚಲಿಸುವಾಗ ರಸ್ತೆಯಲ್ಲಿರುವ ಗುಂಡಿಗಳನ್ನು ಎಐ ವಿಷನ್ ಮೂಲಕ ಗುರುತಿಸಿ, ಅವುಗಳ ಗಾತ್ರ ಮತ್ತು ನಿಖರವಾದ ಸ್ಥಳವನ್ನು ದಾಖಲಿಸುತ್ತದೆ. ಈ ವ್ಯವಸ್ಥೆಯು ಸ್ಪೀಡ್ ಬ್ರೇಕರ್‌ಗಳು ಮತ್ತು ಗುಂಡಿಗಳ ನಡುವಿನ ವ್ಯತ್ಯಾಸವನ್ನೂ ಗುರುತಿಸುವ ಸಾಮರ್ಥ್ಯ ಹೊಂದಿದೆ.

ಈ ತಂತ್ರಜ್ಞಾನದ ಅತ್ಯಂತ ಗಮನಾರ್ಹ ಅಂಶವೆಂದರೆ ಹೊಣೆಗಾರಿಕೆ. ರಸ್ತೆ ಗುಂಡಿ ಪತ್ತೆಯಾದ ನಂತರ ಈ ವ್ಯವಸ್ಥೆಯು ಸರ್ಕಾರದ ಸುಮಾರು 2,900 ಗುತ್ತಿಗೆ ದಾಖಲೆಗಳನ್ನು ಜಾಲಾಡುತ್ತದೆ. ಆ ನಿರ್ದಿಷ್ಟ ರಸ್ತೆಯನ್ನು ನಿರ್ಮಿಸಿದ ಗುತ್ತಿಗೆದಾರ ಯಾರು? ಸಂಬಂಧಪಟ್ಟ ಸರ್ಕಾರಿ ಅಧಿಕಾರಿ ಯಾರು? ಎಂಬುದನ್ನು ಪತ್ತೆಹಚ್ಚುತ್ತದೆ. ಬಳಿಕ ಗುಂಡಿಯ ಫೋಟೋ ಮತ್ತು ಜಿಯೋ-ಟ್ಯಾಗ್ ಮಾಡಿದ ಸ್ಥಳದ ಮಾಹಿತಿಯೊಂದಿಗೆ ದೂರಿನ ಪತ್ರವನ್ನು ಸಿದ್ಧಪಡಿಸುತ್ತದೆ. ಗೌರವ್ ಸೇನ್ ಹಂಚಿಕೊಂಡಿರುವ ಪ್ರಾತ್ಯಕ್ಷಿಕೆಯ ಪ್ರಕಾರ ಕೇವಲ ಒಂದು ಬಾರಿ ಕಾರು ಚಲಾಯಿಸಿದಾಗ ಈ ವ್ಯವಸ್ಥೆಯು 12 ಗುಂಡಿಗಳನ್ನು ಪತ್ತೆಹಚ್ಚಿ ತಕ್ಷಣವೇ ಸಲ್ಲಿಸಲು ಸಿದ್ಧವಿರುವ 12 ದೂರುಗಳನ್ನು ಸಿದ್ಧಪಡಿಸಿದೆ.

ಬೆಂಗಳೂರಿಗೆ ಇದು ಯಾಕೆ ಮುಖ್ಯ?

ಬಿಬಿಎಂಪಿಯ 'ಫಿಕ್ಸ್ ಮೈ ಸ್ಟ್ರೀಟ್' (Fix My Street) ಅಪ್ಲಿಕೇಶನ್ ಈಗಾಗಲೇ ಬಳಕೆಯಲ್ಲಿದ್ದರೂ ಗುಂಡಿಗಳ ಹೊಣೆಗಾರಿಕೆಯನ್ನು ನೇರವಾಗಿ ಗುತ್ತಿಗೆದಾರರೊಂದಿಗೆ ಜೋಡಿಸುವ ವ್ಯವಸ್ಥೆ ಇಲ್ಲಿದೆ. ಈ ಎಐ ವ್ಯವಸ್ಥೆಯು ನಾಗರಿಕರು ಮತ್ತು ಸರ್ಕಾರದ ನಡುವಿನ ಕೊಂಡಿಯಾಗಿ ಕೆಲಸ ಮಾಡುವುದಲ್ಲದೆ, ಭ್ರಷ್ಟಾಚಾರ ಮತ್ತು ಕೆಲಸದ ನಿರ್ಲಕ್ಷ್ಯಕ್ಕೆ ಕಡಿವಾಣ ಹಾಕಲು ಸಹಾಯ ಮಾಡುತ್ತದೆ.

ಗೌರವ್ ಸೇನ್ ಅವರ ಈ ಹೊಸ ಆವಿಷ್ಕಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಎಐ ಕೇವಲ ಚಾಟ್‌ಬಾಟ್‌ಗಳಿಗಷ್ಟೇ ಸೀಮಿತವಾಗದೆ, ದೈನಂದಿನ ನಾಗರಿಕ ಸಮಸ್ಯೆಗಳನ್ನು ಪರಿಹರಿಸಲು ಹೇಗೆ ಬಳಕೆಯಾಗಬಹುದು ಎಂಬುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಉಬರ್ (Uber) ಮತ್ತು ಮೋರ್ಗನ್ ಸ್ಟಾನ್ಲಿಯಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಗೌರವ್ ಸೇನ್ ಅವರ ಈ ಪ್ರಯೋಗವು ಭಾರತದ ಇತರ ನಗರಗಳಿಗೂ ವಿಸ್ತರಣೆಯಾಗಲಿ ಎಂಬ ಆಶಯ ವ್ಯಕ್ತವಾಗಿದೆ.