ಬೆಂಗಳೂರು ಸಂಚಾರ ಪೊಲೀಸರು ಖಾಸಗಿ ಬಸ್ ಚಾಲಕರ ವಿರುದ್ಧ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ, ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ 16 ಚಾಲಕರು ಪತ್ತೆಯಾಗಿದ್ದಾರೆ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಚಾಲನಾ ಪರವಾನಿಗೆಯನ್ನು ಅಮಾನತುಗೊಳಿಸಲು ಆರ್‌ಟಿಒಗೆ ಶಿಫಾರಸು ಮಾಡಲಾಗಿದೆ.

ದಿನಾಂಕ 28-11-2025 ರಂದು ರಾತ್ರಿ 8 ರಿಂದ 11.30 ರವರೆಗೆ ಮದ್ಯಪಾನ ಮಾಡಿ ಖಾಸಗಿ ಬಸ್ ಚಾಲನೆ ಮಾಡುವ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು ಮಾಡಲಾಗಿದೆ. ಒಟ್ಟು 2583 ಬಸ್ ಗಳನ್ನು ತಪಾಸಣೆ ಮಾಡಲಾಗಿದ್ದು 16 ಬಸ್ ಚಾಲಕರು ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಪತ್ತೆಯಾಗಿದೆ. ಅಂತಹ ಚಾಲಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದ್ದು ಚಾಲನಾ ಪರವಾನಿಗೆಯನ್ನು ಅಮಾನತುಗೊಳಿಸಲು RTO ಕಚೇರಿಗೆ ಕಳುಹಿಸಲಾಗಿದೆ, ಎಂದು ಬೆಂಗಳೂರು ಪೊಲೀಸರು ಹೇಳಿದ್ದಾರೆ.

Scroll to load tweet…

ಬೆಂಗಳೂರು ಪೊಲೀಸರ ಕ್ರಮ ಶ್ಲಾಘನಾರ್ಹ. ವರದಿಯೊಂದರ ಪ್ರಕಾರ 2022ರಲ್ಲಿ 26371 ಡ್ರಿಂಕ್ & ಡ್ರೈವ್ ಕೇಸ್‌ ದಾಖಲಾಗಿದ್ದರೆ, ಫಿಸಿಕಲ್ ಚೆಕ್ಕಿಂಗ್ ಕಡಿಮೆ ಮಾಡಿದ ಪರಿಣಾಮ 2023ರಲ್ಲಿ ಕೇವಲ 7053 ಕೇಸ್ ದಾಖಲಾಗಿದೆ. 2024ರಲ್ಲಿ ಬೆಂಗ್ಳೂರಲ್ಲಿ ಒಟ್ಟು 21940 ಡ್ರಿಂಕ್ & ಡ್ರೈವ್‌ ಪ್ರಕರಣಗಳು ದಾಖಲಾಗಿವೆ.

ಕಳೆದ ಸೆಪ್ಟೆಂಬರ್‌ನಲ್ಲಿ ಹಾಸನ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮೊಸಳೆ ಹೊಸಹಳ್ಳಿಯಲ್ಲಿ ಎಂದೂ ಕೇಳರಿಯದ ರೀತಿಯಲ್ಲಿ ಅಪಘಾತವಾಗಿತ್ತು. ಕುಡಿದ ಮತ್ತಿನಲ್ಲಿದ್ದ ಲಾರಿ ಚಾಲಕನ ಪ್ರಮಾದದಿಂದ, ಗಣೇಶ ಹಬ್ಬದ ಸಂಭ್ರಮದ ಕಾರ್ಯಕ್ರಮ ಸೂತಕಕ್ಕೆ ತಿರುಗಿತ್ತು. 10 ಮಂದಿ ಯುವಕರು ಪ್ರಾಣ ಕಳೆದುಕೊಂಡು, ಅವರನ್ನು ನಂಬಿದ್ದ ಕುಟುಂಬಗಳು ಬೀದಿಗೆ ಬಂದಿತ್ತು.

ರಸ್ತೆ ಸುರಕ್ಷತೆಗೆ ನಿರಂತರ ತಪಾಸಣೆ, ಕಟ್ಟುನಿಟ್ಟಿನ ಕ್ರಮಗಳು ಅತೀ ಮುಖ್ಯ. ತಪಾಸಣೆ ಇಲ್ಲದೇ ಇದ್ದರೆ 'ರಸ್ತೆ ಸುರಕ್ಷತೆ'ಗೆ ಅರ್ಥವೇ ಇಲ್ಲದಂತಾಗುತ್ತದೆ. ಡ್ರಿಂಕ್ & ಡ್ರೈವ್‌ನಂಥ ಉಲ್ಲಂಘನೆಗಳ ಬಗ್ಗೆ ಪೊಲೀಸರು ಝೀರೋ ಟಾಲರೆನ್ಸ್‌ ಹೊಂದಬೇಕಾದುದು ಅತೀ ಅವಶ್ಯ.

ಸಲಹೆ ಪರಿಗಣಿಸುತ್ತಾರಾ ಬೆಂಗಳೂರು ಪೊಲೀಸರು?

ಒಟ್ಟು 2583 ಬಸ್ ಗಳನ್ನು ತಪಾಸಣೆ ಮಾಡಲಾಗಿದ್ದು 16 ಬಸ್ ಚಾಲಕರು ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಪತ್ತೆಯಾಗಿದೆ. ಅಂತಹ ಚಾಲಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದ್ದು ಚಾಲನಾ ಪರವಾನಿಗೆಯನ್ನು ಅಮಾನತುಗೊಳಿಸಲು RTO ಕಚೇರಿಗೆ ಕಳುಹಿಸಲಾಗಿದೆ, ಎಂಬ ಬೆಂಗಳೂರು ಪೊಲೀಸರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ X ಬಳಕೆದಾರರೊಬ್ಬರು, ಸಮಂಜಸವಾದ ಸಲಹೆಯೊಂದನ್ನು ಕೊಟ್ಟಿದ್ದಾರೆ.

ಅದ್ಯಾವ 16 ಬಸ್ ಚಾಲಕರು ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಪತ್ತೆಯಾಗಿದ್ಯೋ, ಸುರಕ್ಷತೆ ದೃಷ್ಟಿಯಿಂದ ಆ ಬಸ್‌ ಕಂಪನಿಗಳ ಹೆಸರನ್ನು ಬಹಿರಂಗಪಡಿಸಿ, ಪ್ರಯಾಣಿಕರು ಆ ಬಸ್‌ಗಳಲ್ಲಿ ಪ್ರಯಾಣಿಸುವುದನ್ನು ಅವಾಯ್ಡ್‌ ಮಾಡಬಹುದು ಎಂದು ಹೇಳಿದ್ದಾರೆ.

ಪೊಲೀಸರು ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ, ಡ್ರಿಂಕ್ & ಡ್ರೈವ್‌ ಮಾಡೋ ಚಾಲಕರಿರೋ ಬಸ್‌ ಆಪರೇಟರ್‌ಗಳ ಹೆಸರನ್ನು ಬಹಿರಂಗಪಡಿಸುತ್ತಾರೋ ಎಂದು ಕಾದು ನೋಡಬೇಕು.