ಬೆಂಗಳೂರಿನಲ್ಲಿ ನಡೆದ 7.11 ಕೋಟಿ ರೂಪಾಯಿ ದರೋಡೆ ಪ್ರಕರಣವು ರೋಚಕ ತಿರುವು ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ಪೊಲೀಸರ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ದರೋಡೆಕೋರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್‌ ಅಣ್ಣಪ್ಪ ನಾಯಕರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು (ನ.20): ರಾಜಧಾನಿ ಬೆಂಗಳೂರಿನ ಅತ್ಯಂತ ಪ್ರಮುಖ ಪ್ರದೇಶದಲ್ಲಿ ನಡೆದ 7.11 ಕೋಟಿ ರೂಪಾಯಿ ದರೋಡೆ ಕೇಸ್‌ನಲ್ಲಿ ಪೊಲೀಸರ ಕೈವಾಡವಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ರಾಬರಿ ಪ್ರಕರಣದಲ್ಲಿ ತನಿಖೆ ತೀವ್ರಗೊಳಿಸುತ್ತಿದ್ಧಂತೆ ವಿವಿಧ ವಿಚಾರಗಳು ಬಹಿರಂಗವಾಗುತ್ತಿದೆ. ಹಲವು ಕೋನಗಳಲ್ಲಿ ನಡೆಸುತ್ತಿರುವ ತನಿಖೆಯಲ್ಲಿ ಪೊಲೀಸರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ದರೋಡೆಕೋರರ ಜೊತೆ ಬೆಂಗಳೂರಿನ ಪೊಲೀಸ್‌ ಕಾಬ್ಸ್‌ಸ್ಟೇಬಲ್‌ ನಿರಂತರ ಸಂಪರ್ಕದಲ್ಲಿದ್ದ ಎನ್ನುವ ವಿಚಾರ ಮೂಲಗಳಿಂದ ಬಹಿರಂಗವಾಗಿದೆ.

ಘಟನೆ ನಡೆಯುವ ಮುನ್ನ ದರೋಡೆಕೋರರ ಜೊತೆ ನಿರಂತರ ಸಂಪರ್ಕದಲ್ಲಿದ್ದ ಎನ್ನುವ ಕಾರಣಕ್ಕೆ ಬೆಂಗಳೂರಿನ ಗೋವಿಂದಪುರ ಪೊಲೀಸ್‌ ಠಾಣೆಯ ಕಾನ್ಸ್‌ಟೇಬಲ್‌ ಅಣ್ಣಪ್ಪ ನಾಯಕ ಎನ್ನುವವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಬೆಂಗಳೂರಿನ ದಕ್ಷಿಣ ವಿಭಾಗದ ಪೊಲೀಸರು ಅಣ್ಣಪ್ಪನನ್ನು ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆ ಇದ್ದು, ಯಾವ ಕಾರಣಕ್ಕಾಗಿ ದರೋಡೆಕೋರರ ಸಂಪರ್ಕದಲ್ಲಿದ್ದ ಎನ್ನುವ ಬಗ್ಗೆ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ಅನುಮಾನಗಳೇ ಹೆಚ್ಚು

ಅಷ್ಟು ಪರ್ಫೆಕ್ಟ್‌ ಆಗಿ ದರೋಡೆ ನಡೆದಿರುವ ಹಿನ್ನಲೆಯಲ್ಲಿ ಇಡೀ ಕೇಸ್‌ನಲ್ಲಿ ಪೊಲೀಸರ ಕೈವಾಡದ ಬಗ್ಗೆಯೂ ತನಿಖಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದರು. ಇದರ ಜಾಡು ಹಿಡಿದು ಹೋದಾಗ ಅಣ್ಣಪ್ಪ ನಾಯಕ ಸಂಪರ್ಕದಲ್ಲಿರುವ ವಿಚಾರ ಗೊತ್ತಾಗಿದೆ ಎನ್ನಲಾಗಿದೆ. ಬಾಣಸವಾಡಿಯ ಕಲ್ಯಾಣನಗರದ ಸ್ವಿಫ್ಟ್‌ ಕಾರು ಬಳಸಿ ದರೋಡೆ ನಡೆಸಲಾಗಿತ್ತು. ಅದರೊಂದಿಗೆ ಇಡೀ ಕೇಸ್‌ ಈಗ ರಣರೋಚಕ ಟ್ವಿಸ್ಟ್‌ ಪಡೆದುಕೊಂಡಿದೆ.

ದರೋಡೆಕೋರರ ಜೊತೆ ಸೇರಿ 7.11 ಕೋಟಿ ರೂಪಾಯಿ ಹಣವನ್ನು ದೋಚಲು ಪ್ಲ್ಯಾನ್‌ ಮಾಡಲಾಗಿತ್ತೇ ಎನ್ನುವ ಅನುಮಾನ ಬಂದಿದೆ. ಅಣ್ಣಪ್ಪ ನಾಯಕ ಗೋವಿಂದಪುರ ಪೊಲೀಸ್‌ ಠಾಣೆಯಲ್ಲಿ ಕ್ರೈಮ್‌ ಪಿಸಿಯಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.