ಕಾಶ್ಮೀರಕ್ಕೆ ಹೊರಟ ಶಾರದಾಂಬೆಯ ದರ್ಶನ ಪಡೆದ ಬೆಂಗಳೂರಿಗರು
ಶೃಂಗೇರಿಯ ಶಾರದಾಪೀಠದಿಂದ ಕಾಶ್ಮೀರಕ್ಕೆ ಹೊರಟ ಶಾರದಾಂಬೆಯ ವಿಗ್ರಹ ಹಾಸನ ಮಾರ್ಗವಾಗಿ ಇಂದು ಬೆಂಗಳೂರಿನ ಶಂಕರಮಠಕ್ಕೆ ಆಗಮಿಸಿದ್ದು, ಇಲ್ಲಿ ಭಕ್ತರು ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಬೆಂಗಳೂರು: ಶೃಂಗೇರಿಯ ಶಾರದಾಪೀಠದಿಂದ ಕಾಶ್ಮೀರಕ್ಕೆ ಹೊರಟ ಶಾರದಾಂಬೆಯ ವಿಗ್ರಹ ಹಾಸನ ಮಾರ್ಗವಾಗಿ ಇಂದು ಬೆಂಗಳೂರಿನ ಶಂಕರಮಠಕ್ಕೆ ಆಗಮಿಸಿದ್ದು, ಇಲ್ಲಿ ಭಕ್ತರು ದರ್ಶನ ಪಡೆದು ಪೂಜೆ ಸಲ್ಲಿಸಿದರು. ಕಾಶ್ಮೀರಕ್ಕೆ ಸಾಗುವ ಮಾರ್ಗಮಧ್ಯೆ ನಾಳೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸುವ ದೇವಿ ವಿಗ್ರಹಕ್ಕೆ ಭಕ್ತರು ಅಲ್ಲಲ್ಲಿ ಪೂಜೆ ಸಲ್ಲಿಸಿ ದರ್ಶನ ಪಡೆಯಲಿದ್ದಾರೆ. ಎರಡು ತಿಂಗಳ ಕಾಲ ವಿವಿಧ ರಾಜ್ಯಗಳ ವಿವಿಧ ಜಿಲ್ಲೆಗಳಲ್ಲಿ ಸಂಚರಿಸುತ್ತಾ ಸಾಗಿ ದೇಶದ ಮುಕುಟ ಕಾಶ್ಮೀರವನ್ನು ಶಾರದಾಂಬೆ ತಲುಪಲಿದ್ದಾಳೆ.
200 ಕೆಜಿಯುಳ್ಳ ಈ ಪಂಚಲೋಹದ ವಿಗ್ರಹವನ್ನು ಮಾರ್ಚ್ 14 ಕಾಶ್ಮೀರದ ತೀತ್ವಾಲ್‌ನಲ್ಲಿರುವ ಶಾರದಾಂಬೆಯ ಮೂಲ ಪೀಠದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಜನವರಿ 25 ರಂದು ಈ ಶಾರದಾ ದೇವಿ ಪ್ರತಿಮೆ ಶೃಂಗೇರಿ ಶಾರದಾ ಪೀಠದಿಂದ ಹೊರಟಿದ್ದು, ಚಿಕ್ಕಮಗಳೂರು, ಹಾಸನ ಶಂಕರ ಮಠದಲ್ಲಿ ಪೂಜೆ ಮುಗಿಸಿ ನಗರದ ಶಂಕರಮಠಕ್ಕೆ ಇಂದು ಆಗಮಿಸಿತ್ತು. ನಾಳೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಗುವ ತಾಯಿ ಶಾರದಾಂಬೆಯ ವಿಗ್ರಹವನ್ನು ದಾರಿ ಮಧ್ಯೆ ಭಕ್ತರು ಕಣ್ತುಂಬಿಕೊಳ್ಳಲಿದ್ದಾರೆ.
Sringeri: ಕಾಶ್ಮೀರಕ್ಕೆ ಹೊರಟ ಶೃಂಗೇರಿ ಶಾರದಾ ವಿಗ್ರಹ
ಭಾರತ-ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿ ಗಲಭೆಗಳಿಂದಾಗಿ ಕಾಶ್ಮೀರದ ತೀತ್ವಾಲ್‌ನಲ್ಲಿದ್ದ ಶಾರದಾ ಪೀಠವು (Sringeri Peetha) ನಾಶವಾಗಿತ್ತು. ಇದೀಗ ಶೃಂಗೇರಿ ಪೀಠದ ವತಿಯಿಂದ ಇಲ್ಲಿ ಹೊಸದಾಗಿ ದೇಗುಲ ನಿರ್ಮಿಸಲಾಗುತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರದ ಭಾಗದಲ್ಲಿ ಈ ದೇವಾಲಯ ನಿರ್ಮಾಣವಾಗುತ್ತಿದ್ದು ಶೃಂಗೇರಿ ಪೀಠದಿಂದ ಶಾರದಾಂಬಾ ಪ್ರತಿಮೆ ರವಾನಿಸಲಾಗ್ತಿದೆ.
ಇದಕ್ಕೂ ಮೊದಲು ಶೃಂಗೇರಿಯಿಂದ ಜನವರಿ 25ರಂದು ಬೆಳಗ್ಗೆ ಹೊರಟ ಶಾರದಾಂಬೆಗೆ ಜಗದ್ಗುರು ವಿಧುಶೇಖರ ಭಾರತೀ ತೀರ್ಥರು ವಿಶೇಷ ಪೂಜೆ ಸಲ್ಲಿಸಿದರು. ನಂತರ, ರಥಯಾತ್ರೆಯ ವಾಹನದಲ್ಲಿದ್ದ ಶಾರದಾ ದೇವಿಯ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿ, ರಥಯಾತ್ರೆಗೆ ಚಾಲನೆ ನೀಡಿದರು. ಮಠದ ಆಡಳಿತಾಧಿಕಾರಿ ಡಾ.ವಿ.ಆರ್.ಗೌರೀಶಂಕರ್, ಕಾಶ್ಮೀರದ ಶಾರದಾ ಸೇವಾ ಸಮಿತಿ ಅಧ್ಯಕ್ಷ ರವೀಂದ್ರ ಪಂಡಿತ್, ಕಾಶ್ಮೀರದಿಂದ ಆಗಮಿಸಿದ್ದ ಪಂಡಿತರು, ಭಕ್ತರು ಈ ವೇಳೆ ಹಾಜರಿದ್ದರು.
ಮಠದ ಆವರಣದಿಂದ ರಥಯಾತ್ರೆ ಮೂಲಕ ಹೊರಟ ಶಾರದಾ ವಿಗ್ರಹ ಹೊತ್ತ ವಾಹನ ಚಿಕ್ಕಮಗಳೂರು, ಹಾಸನ ಮಾರ್ಗವಾಗಿ ಬೆಂಗಳೂರು ತಲುಪಿದ್ದು,ಬೆಂಗಳೂರಿನಿಂದ ಹೊರಟ ಈ ಪ್ರತಿಮೆ, 28ರಂದು ಮುಂಬೈ ತಲುಪಲಿದೆ. ನಂತರ, ಪುಣೆ, ಚಂಡೀಗಢ, ದೆಹಲಿ, ಅಮೃತಸರ, ಜೈಪುರ, ಜಮ್ಮು, ಶ್ರೀನಗರ ಮಾರ್ಗವಾಗಿ ಮಾ.16ರಂದು ತೀತ್ವಾಲ್ ತಲುಪಲಿದೆ. ಮಾ.22ರ ಯುಗಾದಿಯಂದು ಶಾರದಾ ದೇವಿಯ ಶಿಲಾಮಯ ದೇವಾಲಯದಲ್ಲಿ ಪ್ರತಿಮೆ ಪ್ರತಿಷ್ಠಾಪನೆಗೊಳ್ಳಲಿದೆ.