Asianet Suvarna News Asianet Suvarna News

Sringeri: ಕಾಶ್ಮೀರಕ್ಕೆ ಹೊರಟ ಶೃಂಗೇರಿ ಶಾರದಾ ವಿಗ್ರಹ

 ಕಾಶ್ಮೀರದ ತೀತ್ವಾಲ್‌ನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶಾರದಾದೇವಿ ದೇಗುಲಕ್ಕೆ ಶೃಂಗೇರಿಯಲ್ಲಿ ನಿರ್ಮಾಣಗೊಂಡಿದ್ದ ಶಾರದಾ ದೇವಿಯ ಶಿಲಾಮಯ ಪಂಚಲೋಹದ ವಿಗ್ರಹವನ್ನು ಮಂಗಳವಾರ ರಥಯಾತ್ರೆಯ ಮೂಲಕ ಕೊಂಡೊಯ್ಯಲಾಯಿತು.

Sringeri Sharada idol left for Kashmir today rav
Author
First Published Jan 25, 2023, 1:21 AM IST

ಶೃಂಗೇರಿ (ಜ.25) : ಕಾಶ್ಮೀರದ ತೀತ್ವಾಲ್‌ನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶಾರದಾದೇವಿ ದೇಗುಲಕ್ಕೆ ಶೃಂಗೇರಿಯಲ್ಲಿ ನಿರ್ಮಾಣಗೊಂಡಿದ್ದ ಶಾರದಾ ದೇವಿಯ ಶಿಲಾಮಯ ಪಂಚಲೋಹದ ವಿಗ್ರಹವನ್ನು ಮಂಗಳವಾರ ರಥಯಾತ್ರೆಯ ಮೂಲಕ ಕೊಂಡೊಯ್ಯಲಾಯಿತು.

ಬೆಳಗ್ಗೆ ಜಗದ್ಗುರು ವಿಧುಶೇಖರ ಭಾರತೀ ತೀರ್ಥರು ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ, ರಥಯಾತ್ರೆಯ ವಾಹನದಲ್ಲಿದ್ದ ಶಾರದಾ ದೇವಿಯ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿ, ರಥಯಾತ್ರೆಗೆ ಚಾಲನೆ ನೀಡಿದರು. ಮಠದ ಆಡಳಿತಾಧಿಕಾರಿ ಡಾ.ವಿ.ಆರ್‌.ಗೌರೀಶಂಕರ್‌, ಕಾಶ್ಮೀರದ ಶಾರದಾ ಸೇವಾ ಸಮಿತಿ ಅಧ್ಯಕ್ಷ ರವೀಂದ್ರ ಪಂಡಿತ್‌, ಕಾಶ್ಮೀರದಿಂದ ಆಗಮಿಸಿದ್ದ ಪಂಡಿತರು, ಭಕ್ತರು ಈ ವೇಳೆ ಹಾಜರಿದ್ದರು.

ಜ.24ರಂದು ಕಾಶ್ಮೀರಕ್ಕೆ ರಥಯಾತ್ರೆ ಮೂಲಕ ಶಾರದೆ ವಿಗ್ರಹ ರವಾನೆ

ಮಠದ ಆವರಣದಿಂದ ರಥಯಾತ್ರೆ ಮೂಲಕ ಹೊರಟ ಶಾರದಾ ವಿಗ್ರಹ ಹೊತ್ತ ವಾಹನ ಚಿಕ್ಕಮಗಳೂರು, ಹಾಸನ ಮಾರ್ಗವಾಗಿ ಬೆಂಗಳೂರು ತಲುಪಲಿದೆ. ಬೆಂಗಳೂರಿನ ಕಾಶ್ಮೀರ ಭವನದಲ್ಲಿ ಭಕ್ತರ ದರ್ಶನಕ್ಕೆ ಈ ವಿಗ್ರಹವನ್ನು ಒಂದು ದಿನ ಇಡಲಾಗುವುದು. 25ರಂದು ಬೆಂಗಳೂರಿನಿಂದ ಹೊರಟು, 28ರಂದು ಮುಂಬೈ ತಲುಪಲಿದೆ. ನಂತರ, ಪುಣೆ, ಚಂಡೀಗಢ, ದೆಹಲಿ, ಅಮೃತಸರ, ಜೈಪುರ, ಜಮ್ಮು, ಶ್ರೀನಗರ ಮಾರ್ಗವಾಗಿ ಮಾ.16ರಂದು ತೀತ್ವಾಲ್‌ ತಲುಪಲಿದೆ. ಮಾ.22ರ ಯುಗಾದಿಯಂದು ಶಾರದಾ ದೇವಿಯ ಶಿಲಾಮಯ ದೇವಾಲಯದಲ್ಲಿ ಪ್ರತಿಮೆ ಪ್ರತಿಷ್ಠಾಪನೆಗೊಳ್ಳಲಿದೆ.

1 ಕೋಟಿ ರು.ನಲ್ಲಿ ನಿರ್ಮಾಣವಾಗಿರುವ ದೇವಾಲಯ:

ಕಾಶ್ಮೀರದ ತೀತ್ವಾಲ್‌ನಲ್ಲಿ ಅಂದಾಜು 1 ಕೋಟಿ ರು.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ದೇವಾಲಯದ ಕಾಮಗಾರಿಗೆ 2021ರ ಡಿ.2ರಂದು ಭೂಮಿಪೂಜೆ ನೆರವೇರಿಸಲಾಗಿತ್ತು. ಇದೇ ವೇಳೆ, ಶೃಂಗೇರಿ ಪೀಠದಲ್ಲಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಶಾರದಾಂಬೆ​ಯ ಪಂಚಲೋಹ ವಿಗ್ರಹದ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು. ಸುಮಾರು 12ನೇ ಶತಮಾನದಿಂದಲೂ ಶೃಂಗೇರಿ ಪೀಠಕ್ಕೆ, ಕಾಶ್ಮೀರಕ್ಕೆ ಅವಿನಾಭವ ಸಂಬಂಧವಿದೆ. ಮೂಲ ಸರ್ವಜ್ಞ ಪೀಠವನ್ನೇ ಹೋಲುವ ತೀತ್ವಾಲ್‌ನ ಶಿಲಾಮಯ ನೂತನ ಶಾರದಾ ದೇಗುಲ, ನಾಲ್ಕು ಕಡೆ ನಾಲ್ಕು ಬಾಗಿಲುಗಳನ್ನು ಹೊಂದಿದೆ. ನೂತನವಾಗಿ ನಿರ್ಮಿಸಿರುವ ಶಾರದೆಯ ವಿಗ್ರಹ ಶೃಂಗೇರಿಯ ಶಾರದಾಂಬೆಯನ್ನೇ ಹೋಲುವಂತಿದೆ. ಬೆಂಗಳೂರಿನ ಬಿಡದಿಯಿಂದ ಒಯ್ದ ಕಲ್ಲುಗಳನ್ನು ಬಳಸಿ, ಬಿಡದಿಯ ಶಿಲ್ಪಿಗಳು ದೇವಾಲಯ ನಿರ್ಮಿಸಿದ್ದಾರೆ.

Follow Us:
Download App:
  • android
  • ios