ಅಡುಗೆ ಮನೆಯಲ್ಲಿ ಅಳವಡಿಸಿರುವ ಕುಡಿಯುವ ನೀರಿನ ನಲ್ಲಿಯಲ್ಲಿ ಕೆಸರು ನೀರು. ಬೆಂಗಳೂರಿನ ಅಪಾರ್ಟ್‌ಮೆಂಟ್ ಒಂದರ ನಿವಾಸಿಗಳು ಕೆಸರು ನೀರು ಪೂರೈಕೆ ವಿರುದ್ದ ಭಾರಿ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ವಿಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಶುದ್ಧ ಕಾವೇರಿ ನೀರಿಗೆ ಆಗ್ರಹಿಸಿದ್ದಾರೆ.
ಬೆಂಗಳೂರು(ಫೆ.08) ಶುದ್ಧ ಕುಡಿಯುವ ನೀರು ಎಲ್ಲರ ಹಕ್ಕು. ಇದಕ್ಕಾಗಿ ಪೂರಕ ವ್ಯವಸ್ಥೆಗಳನ್ನು ಸರ್ಕಾರ ಹಾಗೂ ಖಾಸಗಿ ಅಪಾರ್ಟ್‌ಮೆಂಟ್‌ಗಳು ಮಾಡಿದೆ. ಆದರೆ ಅಡುಗೆ ಮನೆಯ ಕುಡಿಯುವ ನೀರಿನ ಟ್ಯಾಪ್‌ನಲ್ಲಿ ಕೆಸರು ನೀರು ಬಂದರೆ ಗತಿ ಏನು? ಇದೀಗ ಬೆಂಗಳೂರಿನ ಅಪಾರ್ಟ್‌ಮೆಂಟ್ ಒಂದರಲ್ಲಿ ಕುಡಿಯುವ ನೀರಿನ ನಲ್ಲಿಯಲ್ಲಿ ಕೆಸರು ನೀರು ಬರುತ್ತಿರುವುದು ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ನಿವಾಸಿಗಳು ವಿಡಿಯೋ, ಫೋಟೋ ಹಂಚಿಕೊಂಡು ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನ ತಲಘಟ್ಟಪುರದ ನ್ಯಾಯಾಂಗ ಬಡಾವಣೆಯ ಶೋಭಾ ಅರೆನಾ ಅಪಾರ್ಟ್‌ಮೆಂಟ್‌ನಲ್ಲಿ ಈ ರೀತಿಯ ಕಲುಷಿತ ಕೆಸರು ನೀರು ಬರುತ್ತಿದೆ. ಅಪಾರ್ಟ್‌ಮೆಂಟ್ ನಿವಾಸಿ ಧನಂಜಯ್ ಪದ್ಮನಾಭಾಚಾರ್ ಕೆಸರು ನೀರಿನ ಕುರಿತು ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿದೆ. ಅಧಿಕಾರಿಗಳು ತಕ್ಷವೇ ಕಾವೇರಿ ಶುದ್ಧ ಕುಡಿಯುವ ನೀರು ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೊಡಗಿನಲ್ಲೇ ವಿಷವಾಗುತ್ತಿದೆ ಜೀವಜಲ ಕಾವೇರಿ, ಒಡಲು ಸೇರುತ್ತಿದೆ ಶುಂಠಿ ಶುದ್ಧೀಕರಣದ ತ್ಯಾಜ್ಯ, ಶೌಚಾಲಯದ ನೀರು
ಧನಂಜಯ್ ಪದ್ಮನಾಭಾಚಾರ್ ತಮ್ಮ ಅಡುಗೆ ಕೋಣೆಯಲ್ಲಿ ತೆಗೆದಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅಡುಗೆ ಕೋಣೆಯಲ್ಲಿರುವ ಕುಡಿಯುವ ನೀರಿನ ನಲ್ಲಿಯಲ್ಲಿ ಕೆಂಪು ಕೆಸರು ಬಣ್ಣದ ನೀರು ಬರುತ್ತಿದೆ. ಟ್ಯಾಪ್ ಆನ್ ಮಾಡಿದರೆ ಈ ರೀತಿಯ ಕಲುಷಿತ ನೀರು ಬರುತ್ತಿದೆ. ಪಾತ್ರೆಗಳ ತಳಭಾಗದಲ್ಲಿ ಕೆಸರು ಅಂಟಿಕೊಳ್ಳುತ್ತಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಶುದ್ಧ ಕುಡಿಯು ನೀರಿನ ಬದಲು ಈ ರೀತಿ ಕಲುಷಿತ ಕೆಸರು ನೀಡಿದರೆ ಪರಿಸ್ಥಿತಿ ಎನು ಎಂದು ಹಲವರು ಪ್ರಶ್ನಿಸಿದ್ದಾರೆ.
ಶೋಭಾ ಅರೆನಾ ಅಪಾರ್ಟ್‌ಮೆಂಟ್‌ನಲ್ಲಿ ಕುಡಿಯಲು ನಾವು ಪಡೆಯುತ್ತಿರುವ ನೀರಿನ ಗುಣಮಟ್ಟವನ್ನು ದಯವಿಟ್ಟು ನೋಡಿ.ಕೆಸರು ನೀರು ಬರುತ್ತಿದೆ. ದಯವಿಟ್ಟು ನ್ಯಾಯಾಂಗ ಬಡಾವಣೆ, ತಲಘಟ್ಟಪುರ, ಕನಕಪುರ ಮುಖ್ಯರಸ್ತೆಗಳಲ್ಲಿ ನಮಗೆ ಕಾವೇರಿ ನೀರು ಕೊಡಿ ಎಂದು ಧನಂಜಯ್ ಪದ್ಮನಾಭಾಚಾರ ಮನವಿ ಮಾಡಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿರುವ ಧನಂಜಯ್ ಪದ್ಮನಾಭಾಚಾರ ಸಿಎಂ, ಡಿಸಿಎಂ ಮತ್ತು ಬೆಂಗಳೂರು ಪೊಲೀಸರು, ಜಲಮಂಡಳಿ ಸೇರಿ ಹಲವರಿಗೆ ಟ್ಯಾಗ್ ಮಾಡಿದ್ದಾರೆ.
ಅನಧಿಕೃತ ನೀರು ಪೂರೈಕೆ ವಿರುದ್ಧ ಪ್ರತಿಭಟನೆ; 595 ನೀರಿನ ಟ್ಯಾಂಕರ್‌ಗಳ ಮೇಲೆ ಕೇಸ್ !
ಕೆಸರು ನೀರಿನ ದೂರು ಇದೇ ಮೊದಲಲ್ಲ. ಜಲಮಂಡಳಿ ವಿರುದ್ಧ ಈಗಾಗಲೇ ಹಲವು ದೂರುಗಳು ದಾಖಲಾಗಿದೆ. ಇದಕ್ಕೆ ಜಲಮಂಡಳಿ ಕೆಲ ಸ್ಪಷ್ಟನೆಯನ್ನು ನೀಡಿತ್ತು. ಕೆಲ ಭಾಗದಲ್ಲಿ ಹೊಸ ಪೈಪ್ ಲೈನ್ ಅಳವಡಿಕೆಗಳಿಂದ ಕೆಸರು ನೀರು ಬರವು ಸಾಧ್ಯತೆ ಇದೆ. ಈ ನೀರನ್ನು ಬಳಸ ಬೇಡಿ, ಶುದ್ಧ ನೀರು ಬರಲಿದೆ ಎಂದು ಬೆಂಗಳೂರು ಜಲಮಂಡಳಿ ಮನವಿ ಮಾಡಿತ್ತು. ಆದರೆ ಈ ಸಮಸ್ಯೆ ಮಾತ್ರ ಮುಗಿದಿಲ್ಲ. ಒಂದಲ್ಲಾ ಒಂದು ವಲಯದಲ್ಲಿ ಕೆಸರು ನೀರು, ಕಲುಷಿತ ನೀರು ಬರುತ್ತಿರುವ ಕುರಿತು ನಿವಾಸಿಗಳು ದೂರು ಸಲ್ಲಿಸುತ್ತಿದ್ದಾರೆ.
