ಬೆಂಗಳೂರು 'ದೇಶದ ಟ್ರಾಫಿಕ್ ಕ್ಯಾಪಿಟಲ್..' ಕಾರ್ ಡ್ರೈವ್‌ಗಿಂತ ನಡೆದುಕೊಂಡು ಹೋದ್ರೆ ಬೇಗ ರೀಚ್ ಆಗ್ಬಹುದಂತೆ!
ಬೆಂಗಳೂರು ಬಗ್ಗೆ ಅದೇನೇ ಹೇಳಿ, ಇಲ್ಲಿನ ಟ್ರಾಫಿಕ್ ಮಾತ್ರ ಯಾರಿಗೂ ಇಷ್ಟವಾಗಲ್ಲ. ಇಲ್ಲಿನ ಜನ ಹೆಂಡ್ತಿಗಿಂತ ಹೆಚ್ಚಿನ ಸಮಯವನ್ನು ರೋಡ್ ಟ್ರಾಫಿಕ್ ಜೊತೆಯೇ ಕಳೆಯುತ್ತಾರೆ.
ಬೆಂಗಳೂರು (ಜು.26): ರಾಜ್ಯ ರಾಜಧಾನಿ ಬೆಂಗಳೂರು ದೇಶದ ಸಿಲಿಕಾನ್ ವ್ಯಾಲಿ ಏನೋ ಹೌದು. ಆದ್ರೆ ಇಲ್ಲಿನ ಟ್ರಾಫಿಕ್ ಮಾತ್ರ ದಟ್ಟ ದರಿದ್ರ. ಬೆಂಗಳೂರಿನ ಜನತೆ ಅಂದಾಜು ಮಾಡಿದ್ದ ಸತ್ಯವನ್ನು ಈಗ ಗೂಗಲ್ ಮ್ಯಾಪ್ಸ್ ಕೂಡ ದೃಢೀಕರಿಸಿದೆ. ಬೆಂಗಳೂರಿನಲ್ಲಿ ಕೆಲವೊಮ್ಮೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕಾರ್ ಡ್ರೈವ್ ಮಾಡಿಕೊಂಡು ಹೋಗೋದಕ್ಕಿಂತ ನಡೆದುಕೊಂಡು ಹೋದ್ರೆ ಬೇಗ ಮುಟ್ಟಬಹುದು. ಈ ಮಾತನ್ನೀಗ ಗೂಗಲ್ ಮ್ಯಾಪ್ಸ್ ಕೂಡ ದೃಢೀಕರಿಸಿದೆ. ಬೆಂಗಳೂರಿನ ಜನತೆಯ ಹೆಚ್ಚಿನ ಸಮಯ ಟ್ರಾಫಿಕ್ ಜಾಮ್‌ಗಳಲ್ಲೇ ಕಳೆದುಹೋಗುತ್ತದೆ. ಬೆಂಗಳೂರು ಭಾರತದ ಐಟಿ ರಾಜಧಾನಿಯಾಗಿ ವಿಕಸನಗೊಂಡಂತೆ, ಇದು ಸಾವಿರಾರು ವೃತ್ತಿಪರರನ್ನು ಆಕರ್ಷಣೆ ಮಾಡಿದೆ. ಆದರೆ, ಅದಕ್ಕೆ ಬೇಕಾದ ಅಗತ್ಯ ಮೂಲಸೌಕರ್ಯವನ್ನು ಅಧಿಕಾರಕ್ಕೆ ಬಂದ ಯಾವುದೇ ಸರ್ಕಾರಗಳು ಮಾಡಿಲ್ಲ. ಇಂದಿಗೂ ಬೆಂಗಳೂರಿನ ಬಹುತೇಕ ರಸ್ತೆಗಳಲ್ಲಿ ಒಂದು ಕಾರ್ ಸಲೀಸಾಗಿ ಸಾಗಲು ಸಾಧ್ಯವಾಗೋದಿಲ್ಲ. ಕ್ಷಿಪ್ರವಾಗಿ ನಗರೀಕರಣವಾಗಿದ್ದು, ಕಳಪೆ ಯೋಜನೆಗಳು ಸೀಮಿತ ಸಾರ್ವಜನಿಕ ಸಾರಿಗೆ ಆಯ್ಕೆಗಳಂತಹ ಅಂಶಗಳು ನಗರದ ದಟ್ಟಣೆಯ ರಸ್ತೆಗಳು ಮತ್ತು ಪೀಕ್-ಅವರ್ ಟ್ರಾಫಿಕ್‌ಗೆ ತಮ್ಮ ಕೊಡುಗೆಯನ್ನು ಅತಿಯಾಗಿ ನೀಡಿವೆ.
ಆಯುಷ್ ಸಿಂಗ್ ಎನ್ನುವ ವ್ಯಕ್ತಿ ಬೆಂಗಳೂರಿನ ಟ್ರಾಫಿಕ್‌ನ ಕುರಿತಾಗಿ ಗೂಗಲ್ ಮ್ಯಾಪ್‌ನ ಸ್ಕ್ರೀನ್ ಶಾಟ್‌ಅನ್ನು ಹಂಚಿಕೊಂಡಿದ್ದಾರೆ. ಬ್ರಿಗೇಡ್ ಮೆಟ್ರೋಪೊಲಿಸ್ ನಿಂದ ಕೆಆರ್ ಪುರಂವರೆಗೆ 6 ಕಿಲೋಮೀಟರ್ ದೂರವಿದೆ. ಇಷ್ಟು ದೂರವನ್ನು ಕಾರ್‌ನಲ್ಲಿ ಕ್ರಮಿಸಲು 44 ನಿಮಿಷ ಬೇಕಾಗಲಿದ್ದರೆ, ವಾಕಿಂಗ್ ಮಾಡಿಕೊಂಡು ಹೋದರೆ 42 ನಿಮಿಷದಲ್ಲಿ ತಲುಪಬಹುದು ಎಂದು ಗೂಗಲ್ ಮ್ಯಾಪ್ಸ್ ತಿಳಿಸಿದೆ. ಇದರ ಸ್ಕ್ರೀನ್ ಶಾಟ್‌ಅನ್ನು ಹಂಚಿಕೊಂಡಿರುವ ಆಯುಷ್ ಸಿಂಗ್, ಈ ರೀತಿ ಆಗಲು ಬೆಂಗಳೂರಿನಲ್ಲಿ ಮಾತ್ರ ಸಾಧ್ಯ ಎಂದು ಬರೆದುಕೊಂಡಿದ್ದಾರೆ.
ಅವರ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. 3 ಲಕ್ಷಕ್ಕೂ ಅಧಿಕ ಮಂದಿ ಈ ಪೋಸ್ಟ್‌ಅನ್ನು ಒಂದೇ ದಿನದಲ್ಲಿ ವೀಕ್ಷಣೆ ಮಾಡಿದ್ದಾರೆ. ಹೆಚ್ಚಿನವರು ಬೆಂಗಳೂರಿನ ಟ್ರಾಫಿಕ್ ಅತ್ಯಂತ ಕೆಟ್ಟದಾಗಿದೆ ಎಂದು ಕಾಮೆಂಟ್ ಮಾಡಿದ್ದರೆ, ಇನ್ನೂ ಕೆಲವರು 'ಇದು ಬೆಂಗಳೂರಿನಲ್ಲಿ ಮಾತ್ರ ಸಾಧ್ಯ..' ಎನ್ನುವ ಅವರ ಮಾತಿಗೆ ಸವಾಲ್ ಎಸೆದಿದ್ದಾರೆ. ದೇಶದ ಇತರ ನಗರಗಳಲ್ಲೂ ಇದೇ ರೀತಿ ಇದೆ ಎಂದಿದ್ದಾರೆ.
ಜಗತ್ತಿನ ಎಲ್ಲಾ ಮೆಟ್ರೋ ಸಿಟಿಗಳಲ್ಲೂ ಇದೇ ಪರಿಸ್ಥಿತಿ ಇದೆ. ಇದರಲ್ಲಿ ಭಿನ್ನವೇನಿಲ್ಲ ಎಂದು ಒಬ್ಬರು ಬರೆದುಕೊಂಡಿದ್ದಾರೆ. ಮುಂಬೈ ಹಾಗೂ ಹಾಗೂ ದೆಹಲಿಯಲ್ಲೂ ಪೀಕ್ ಅವರ್ ಟ್ರಾಫಿಕ್‌ನಲ್ಲಿ ಇದೇ ಸಮಸ್ಯೆ ಇರುತ್ತದೆ ಎಂದು ಬರೆದಿದ್ದಾರೆ. ಇನ್ನೊಬ್ಬರು ಬೆಂಗಳೂರು ದೇಶದ ಟ್ರಾಫಿಕ್‌ನ ರಾಜಧಾನಿ ಎಂದು ಲೇವಡಿ ಮಾಡಿದ್ದಾರೆ. ಇತರರು ಸಿಂಗ್ ಅವರು ದಟ್ಟಣೆಯ ರಸ್ತೆಗಳಿಂದ ದೂರವಿರಲು ಸಾರ್ವಜನಿಕ ಸಾರಿಗೆಯನ್ನು ಬಳಸಬೇಕೆಂದು ಸಲಹೆ ನೀಡಿದ್ದಾರೆ.
ಕೊಲಂಬಿಯಾದ ಡ್ರಗ್ ದೊರೆ ಪ್ಯಾಬ್ಲೋ ಎಸ್ಕೋಬಾರ್‌ಗೆ ಜಗನ್‌ರೆಡ್ಡಿ ಹೋಲಿಸಿದ ಚಂದ್ರಬಾಬು ನಾಯ್ಡು
ಬೆಂಗಳೂರಿನ ಸಿಇಒ ಒಬ್ಬರು ನಗರದ ಟ್ರಾಫಿಕ್ ಸಮಸ್ಯೆಗಳನ್ನು ನಿಭಾಯಿಸಲು ಹೊಸ ಮಾರ್ಗವನ್ನು ಪ್ರಸ್ತಾಪಿಸಿದರು. ಪರಾಸ್ ಚೋಪ್ರಾ ಹೆಸರಿನ ವ್ಯಕ್ತಿ, ಬೀಜಿಂಗ್‌ನಲ್ಲಿ ಬಳಸಿದ ಸಿಸ್ಟಮ್‌ನಿಂದ ಸ್ಫೂರ್ತಿ ಪಡೆದುಕೊಂಡಿದ್ದಾರೆ. ಅಲ್ಲಿ ಟ್ರಾಫಿಕ್‌ನಲ್ಲಿ ಸಿಲುಕಿರುವ ಚಾಲಕರು 60 ಡಾಲರ್‌ಗೆ ರೆಸ್ಕ್ಯೂ ಸರ್ವೀಸ್‌ಗೆ ಕರೆ ಮಾಡಬಹುದು. ಈ ಸೇವೆಯಲ್ಲಿ, ಮೋಟಾರುಬೈಕ್ ಸವಾರನೊಬ್ಬ ಸಿಕ್ಕಿಬಿದ್ದ ಪ್ರಯಾಣಿಕನನ್ನು ಡ್ರೈವ್ ಮಾಡಿಕೊಂಡು ಹೋದರೆ, ಇನ್ನೊಬ್ಬ ವ್ಯಕ್ತಿ ತನ್ನ ಕಾರನ್ನು ಅದರ ನಿಗದಿತ ಸ್ಥಳಕ್ಕೆ ತೆಗೆದುಕೊಂಡು ಹೋಗುತ್ತಾನೆ.
ಸಂಚಾರಿ ನಿಯಮ ಉಲ್ಲಂಘಿಸಿದ 20 ವರ್ಷದ ಸ್ಪೈ ಡರ್‌ಮ್ಯಾನ್‌ನ ಬಂಧಿಸಿದ ಪೊಲೀಸರು