ಆಪರೇಶನ್ ಸಿಂದೂರ್ ಬಳಿಕ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಹಲವು ವಿಮಾನ ಸೇವೆಗಳು ರದ್ದಾಗಿದೆ. ಇದರ ಬೆನ್ನಲ್ಲೇ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಹತ್ವದ ಘಟನೆ ನಡೆದಿದೆ. ಪ್ರಯಾಣಿಕನೊಬ್ಬನನ್ನು ಭದ್ರತಾ ಕಾರಣದಿಂದ ವಿಮಾನದಿಂದ ಇಳಿಸಿದ ಘಟನೆ ನಡೆದಿದೆ.
ಬೆಂಗಳೂರು(ಮೇ.07) ಆಪರೇಶನ್ ಸಿಂದೂರ್ ಮೂಲಕ ಭಾರತೀಯ ಸೇನೆ ಪಾಕಿಸ್ತಾನ ಉಗ್ರರಿಗೆ ತಕ್ಕ ಉತ್ತರ ನೀಡಿದೆ. ಪೆಹಲ್ಗಾಂ ದಾಳಿ ನಡೆಸಿ ತೆರೆಯ ಹಿಂದೆ ಸರಿದ್ದ ಉಗ್ರರನ್ನು ಅವರ ತಾಣದಲ್ಲೇ ಹೊಡೆದುರುಳಿಸಲಾಗಿದೆ. ಪಾಕಿಸ್ತಾನಕ್ಕೆ ನುಗ್ಗಿದ ಭಾರತೀಯ ಸೇನೆ 70 ಉಗ್ರರ ಸದೆಬಡಿದಿದೆ. ಈ ದಾಳಿ ಬಳಿಕ ಪಾಕಿಸ್ತಾನ ಗಡಿಯಲ್ಲಿ ನಾಗರೀಕರ ಮೇಲೆ ಅಸ್ತ್ರ ಪ್ರಯೋಗಿಸಿದೆ. ಇತ್ತ ದೊಡ್ಡ ಪ್ರಮಾಣದಲ್ಲಿ ಪ್ರತಿ ದಾಳಿ ನಡೆಸುವುದಾಗಿ ಹೇಳಿದೆ.ಹೀಗಾಗಿ ಭಾರತದ ಬಹುತೇಕ ಕಡೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ಪೈಕಿ ವಿಮಾನ ನಿಲ್ದಾಣಗಳಲ್ಲೂ ಅಲರ್ಟ್ ಘೋಷಿಸಲಾಗಿದೆ. ಇದರ ಬೆನ್ನಲ್ಲೇ ಬೆಂಗಳೂರಿನ ಕೇಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಭದ್ರತಾ ಕಾರಣಗಳಿಂದ ಬೆಂಗಳೂರಿನಿಂದ ನವದೆಹಲಿಗೆ ಹೊರಟಿದ್ದ ಪ್ರಯಾಣಿಕನನ್ನು ವಿಮಾನದಿಂದ ಇಳಿಸಿದ ಘಟನೆ ನಡೆದಿದೆ.
ಭದ್ರತಾ ಕಾರಣದಿಂದ ಪ್ರಯಾಣಿಕನ ಇಳಿಸಿದ ಘಟನೆ
ಬೆಂಗಳೂರಿನಿಂದ ನವ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-2820ಯಲ್ಲಿ ಈ ಘಟನೆ ನಡೆದಿದೆ. ಮೇ.7ರ ಸಂಜೆ 6.05ಕ್ಕೆ ಬೆಂಗಳೂರಿನ ಕೇಂಪೇಗೌಡ ವಿಮಾನ ನಿಲ್ದಾಣದಿಂದ ವಿಮಾನ ಟೇಕ್ ಆಫ್ ನಿಗದಿಯಾಗಿತ್ತು. ಆದರೆ ಇನ್ನೇನು ಟೇಕ್ ಆಫ್ ಆಗಲು ಕೆಲ ಹೊತ್ತು ಮಾತ್ರ ಬಾಕಿ ಇತ್ತು. ಅಷ್ಟರಲ್ಲೇ ಭದ್ರತಾ ಕಾರಣಗಳಿಂದ ಬೆಂಗಳೂರು ಪ್ರಯಾಣಿಕನನ್ನು ಸಿಬ್ಬಂದಿಗಳು ವಿಮಾನದಿಂದ ಇಳಿಸಿದ್ದಾರೆ. ಇತ್ತ ಪ್ರಯಾಣಿಕ ವಿಚಾರಣೆಯನ್ನೂ ನಡೆಸಿದ್ದಾರೆ ಅನ್ನೋ ಮಾಹಿತಿಗಳು ಕೇಳಿಬರುತ್ತಿದೆ.
ಆಪರೇಶನ್ ಸಿಂದೂರ್‌ಗೆ ಐಪಿಎಲ್ ಪಂದ್ಯದಲ್ಲಿ ಟ್ರಿಬ್ಯೂಟ್, ಲೆ.ಕರ್ನಲ್ ಧೋನಿಗೆ ಗೆಲುವಿನ ಗೌರವ
ಪ್ರಯಾಣಿಕನ ಮಾಹಿತಿ ಗೌಪ್ಯವಾಗಿಡಲಾಗಿದೆ
ಏರ್ ಇಂಡಿಯಾ ವಿಮಾನದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಆದರೆ ವಿಮಾನದಿಂದ ಪ್ರಯಾಣಿಕನ ಇಳಿಸಿದ ಘಟನೆ ಕುರಿತು ಏರ್ ಇಂಡಿಯಾ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ. ಭದ್ರತಾ ಕಾರಣದಿಂದ ಪ್ರಯಾಣಿಕನ ಇಳಿಸಿದ ಘಟನೆ ನಡೆದಿದೆ. ಆದರೆ ಪ್ರಯಾಣಿಕನ ಮಾಹಿತಿಯನ್ನು ಭದ್ರತಾ ಕಾರಣಗಳಿಂದ ನೀಡಲು ಸಾಧ್ಯವಿಲ್ಲ. ಈ ಮಾಹಿತಿಯನ್ನು ಗೌಪ್ಯವಾಗಿಡಲಾಗಿದೆ ಎಂದು ಏರ್ ಇಂಡಿಯಾ ಮೂಲಗಳು ಹೇಳಿವೆ.
ಸಾಮಾನ್ಯವಾಗಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಭದ್ರತಾ ತಪಾಸಣೆ ಬಳಿಕ ಮತ್ತೊಂದು ತಪಾಸಣೆ ಇರುವುದಿಲ್ಲ. ಇಷ್ಟೇ ಅಲ್ಲ ವಿಮಾನ ಹತ್ತಿದ ಪ್ರಯಾಣಿಕನನ್ನು ಮತ್ತೆ ಇಳಿಸುವುದು ಸಾಮಾನ್ಯವಲ್ಲ. ಆದರೆ ಇಂದು ಈ ಘಟನೆ ನಡೆದಿದೆ. ಪ್ರಯಾಣಿಕನ ವಿಮಾನದಿಂದ ಇಳಿಸಿ ವಿಚಾರಣೆ ನಡೆಸಿರುವುದು ಸ್ಪಷ್ಟ ಕಾರಣಗಳಿವೆ. ಆದರೆ ಬಹಿರಂಗಪಡಿಸುವಂತಿಲ್ಲ ಎಂದು ಏರ್ ಇಂಡಿಯಾ ಹೇಳಿದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹದ್ದಿನ ಕಣ್ಣು
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಪಡೆ ಹದ್ದಿನ ಕಣ್ಣಿಟ್ಟಿದೆ.ಭದ್ರತಾ ತಪಾಸಣೆ ಮತ್ತಷ್ಟು ಕಠಿಣಗೊಳಿಸಲಾಗಿದೆ. ಎಲ್ಲೆಡೆ ಪೊಲೀಸ್ ಹಾಗೂ ಸೇನಾ ಭದ್ರತೆ ನಿಯೋಜಿಸಲಾಗಿದೆ. ಹಲವು ಹಂತದ ತಪಾಸಣೆ ನಡೆಸಲಾಗುತ್ತಿದೆ.
ಏರ್ ಇಂಡಿಯಾ, ಇಂಡಿಗೋ ಸೇರಿ ಹಲವು ವಿಮಾನ ಸೇವೆ ರದ್ದು
ಆಪರೇಶನ್ ಸಿಂದೂರ್‌ಗೆ ಪ್ರತಿಯಾಗಿ ಪಾಕಿಸ್ತಾನ ಸರ್ಕಾರ ಸೇನಾ ದಾಳಿ ಮಾಡುವುದಾಗಿ ಎಚ್ಚರಿಸಿದೆ. ಭಾರಿ ಪ್ರಮಾಣದಲ್ಲಿ ಭಾರತದ ಮೇಲೆ ದಾಳಿ ಮಾಡುವುದಾಗಿ ಹೇಳಿದೆ. ಹೀಗಾಗಿ ದೇಶದ ಗಡಿ ರಾಜ್ಯಗಳು ಸೇರಿದಂತೆ ಪ್ರಮುಖ ಭಾಗಗಳಲ್ಲಿ ಕೇಂದ್ರ ಸರ್ಕಾರ ಹೈ ಅಲರ್ಟ್ ಘೋಷಿಸಿದೆ. ಇತ್ತ ಇಂಡಿಗೋ, ಏರ್ ಇಂಡಿಯಾ ತನ್ನ ಹಲವು ವಿಮಾನ ಸೇವೆಗಳನ್ನು ರದ್ದುಗೊಳಿಸಿದೆ. ಪ್ರಯಾಣಿಕರ ಸುರಕ್ಷತಾ ಕಾರಣಗಳಿಂದ ಕೆಲ ನಗರಗಳ ವಿಮಾನ ಪ್ರಯಾಣ ರದ್ದಾಗಿದೆ. ಮೇ 10 ರ ವರೆಗೆ ವಿಮಾನ ಪ್ರಯಾಣ ರದ್ದುಗೊಳಿಸಲಾಗಿದೆ. ಶ್ರೀಗನರ, ಜಮ್ಮು, ಅಮೃತಸರ ಸೇರಿದಂತೆ ಹಲವು ನಗರಗಳ ವಿಮಾನ ಸೇವೆ ರದ್ದು ಮಾಡಲಾಗಿದೆ.


