ಫುಟ್‌ಪಾತ್ ಮತ್ತು ಅನಾಥ ವಾಹನಗಳ ತೆರವು ಕಾರ್ಯಾಚರಣೆಯ ಯಶಸ್ಸಿನ ನಂತರ, ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿ ನಿಭಾಯಿಸಲು ರಾಜಕಾಲುವೆ ಒತ್ತುವರಿ ತೆರವಿಗೆ ಸರ್ಕಾರ ಚಿಂತನೆ ನಡೆಸಿದೆ. ಈ ಕಾರ್ಯಾಚರಣೆಯು ವಸತಿ ಮತ್ತು ವಾಣಿಜ್ಯ ಕಟ್ಟಡಗಳ ಮೇಲೆ ಪರಿಣಾಮ ಬೀರುವುದರಿಂದ, ರಾಜಕೀಯ ಒತ್ತಡ ಹಾಗೂ ಸಾರ್ವಜನಿಕ ವಿರೋಧ ಎದುರಾಗುವ ಸಾಧ್ಯತೆಯಿದೆ.

ಬೆಂಗಳೂರು: ಫುಟ್‌ಪಾತ್ ಒತ್ತುವರಿ ತೆರವು, ರಸ್ತೆ ಬದಿ ಫುಟ್‌ಪಾತ್‌ ಮೇಲೆ ನಿಲ್ಲಿಸಿರುವ ಅನಾಥ ವಾಹನಗಳ ತೆರವು ಕಾರ್ಯಾಚರಣೆ ಬಳಿಕ ನಗರದಲ್ಲಿನ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಚಿಂತನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದ 4 ದಿಕ್ಕುಗಳಲ್ಲಿ 800 ಕಿ.ಮೀ.ಗಿಂತ ಹೆಚ್ಚು ಉದ್ದದ ರಾಜಕಾಲುವೆಗಳು ಇವೆ. ಇವುಗಳಲ್ಲಿ ಅನೇಕ ಕಡೆ ಕಾಲುವೆ ಒತ್ತುವರಿಯಾಗಿವೆ. ಕೆಲವೆಡೆ ಕಾಲುವೆ ಜಾಗ ಒತ್ತುವರಿಯಾಗಿದ್ದರೆ, ಮತ್ತೆ ಕೆಲವೆಡೆ ಬಫರ್ ವಲಯ ಒತ್ತುವರಿಯಾಗಿದೆ. ಇದರಲ್ಲಿ ಖಾಸಗಿ ಸಂಸ್ಥೆ ಮತ್ತು ಸರ್ಕಾರದ ಸಂಸ್ಥೆಗಳು ಕೂಡ ಒತ್ತುವರಿ ಮಾಡಿಕೊಂಡಿವೆ. ಆದರೆ, ಖಾಸಗಿ ವ್ಯಕ್ತಿಗಳಿಂದ ಒತ್ತುವರಿ ಪ್ರಮಾಣ ಹೆಚ್ಚಾಗಿದೆ. ಒತ್ತುವರಿ ತೆರವು ಕುರಿತು ಅಧಿಕಾರಿಗಳೊಂದಿಗೆ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಚರ್ಚಿಸಿದ್ದಾರೆಂದು ತಿಳಿದು ಬಂದಿದೆ.

ಒತ್ತುವರಿ ಆಗಿರುವ ರಾಜಕಾಲುವೆ ಜಾಗಗಳಲ್ಲಿ ಅನೇಕ ಕಡೆ ಆರ್‌ಸಿಸಿ ಕಟ್ಟಡಗಳನ್ನೇ ನಿರ್ಮಿಸಲಾಗಿದೆ. ಮತ್ತೆ ಕೆಲವೆಡೆ ತಾತ್ಕಾಲಿಕ ಶೆಡ್, ಸಿಮೆಂಟ್ ಗೋಡೆಗಳನ್ನು ನಿರ್ಮಿಸಲಾಗಿದೆ. ವಸತಿ ಮತ್ತು ವಾಣಿಜ್ಯ ಕಟ್ಟಡಗಳು ನಿರ್ಮಾಣವಾಗಿವೆ. ಈ ಒತ್ತುವರಿಯಿಂದಾಗಿ ಕಾಲುವೆ ಗಾತ್ರ, ಅಗಲ ಕಡಿಮೆಯಾಗಿದೆ. ಇದರಿಂದಾಗಿ ಭಾರಿ ಮಳೆ ಬಂದಾಗ ಮಳೆ ನೀರು ಹರಿದು ಹೋಗಲು ತೊಡಕಾಗಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದೆ. ಕಾಲುವೆ ನೀರು ರಸ್ತೆಗೆ ಹಾಗೂ ಸಮೀಪದ ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿದೆ.

ವಿರೋಧ ವ್ಯಕ್ತವಾಗುವ ಸಾಧ್ಯತೆ

ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯು ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯಂತಲ್ಲ. ಅನೇಕ ಕಡೆಗಳಲ್ಲಿ ಬಡವರು ಸಣ್ಣ ಪುಟ್ಟ ಮನೆಗಳನ್ನು ಕಟ್ಟಿಸಿಕೊಂಡಿದ್ದಾರೆ. ಕೆಲವು ಕಡೆ ಪ್ರಭಾವಿಗಳು, ಸರ್ಕಾರಿ ಸಂಸ್ಥೆಗಳಿಂದಲೂ ಒತ್ತುವರಿಯಾಗಿದೆ. ಯಾವುದೇ ಒಂದು ಕಡೆ ಕಾರ್ಯಾಚರಣೆ ನಡೆಸಿದರೆ, ಉಳಿದ ಎಲ್ಲಾ ಕಡೆಗಳಲ್ಲೂ ಅದೇ ರೀತಿಯ ತೆರವು ಕಾರ್ಯಾಚರಣೆ ನಡೆಸಬೇಕು ಎನ್ನುವ ಆಗ್ರಹಗಳು ಕೇಳಿ ಬರುತ್ತವೆ. ರಾಜಕೀಯ ಒತ್ತಡವು ಇರುತ್ತದೆ ಎಂದು ಜಿಬಿಎ ಮೂಲಗಳು ತಿಳಿಸಿವೆ.