ಪ್ರೀತಿಸಿ ಧರ್ಮಸ್ಥಳದಲ್ಲಿ ಮದುವೆಯಾಗಿದ್ದ ನವಜೋಡಿಯ ಬಾಳಲ್ಲಿ ದುರಂತ ಸಂಭವಿಸಿದೆ. ಪತಿ ಈಗ ಬರಲು ಸಾಧ್ಯವಿಲ್ಲ, ಬೆಳಿಗ್ಗೆ ಬರುತ್ತೇನೆ ಎಂದಿದ್ದಕ್ಕೆ ಮನನೊಂದ ನವವಿವಾಹಿತೆ ತನುಜಾ, ನೆಲಮಂಗಲದ ಬಸವನಹಳ್ಳಿಯಲ್ಲಿ ವಿಷ ಸೇವಿಸಿ ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಪೊಲೀಸರು ಪತಿಯ ವಿಚಾರಣೆ ನಡೆಸುತ್ತಿದ್ದಾರೆ.

ನೆಲಮಂಗಲ: ಪ್ರೀತಿಸಿ ಮದುವೆಯಾಗಿದ್ದ ನವಜೋಡಿಯ ಜೀವನದಲ್ಲಿ ಅರಿಷಿಣದ ಬಣ್ಣ ಮಾಸುವ ಮುನ್ನವೇ ದೊಡ್ಡ ದುರಂತವೊಂದು ಸಂಭವಿಸಿದೆ. ಈಗ ಬರಲಾಗಲ್ಲ, ಬೆಳಿಗ್ಗೆ ಬರ್ತೀನಿ ಎಂದು ಪತಿ ಹೇಳಿದ್ದಕ್ಕೆ ಮನನೊಂದ ನವವಿವಾಹಿತೆಯೊಬ್ಬರು ವಿಷ ಕುಡಿದು ದುರಂತ ಅಂತ್ಯಕಂಡ ಘಟನೆ ನೆಲಮಂಗಲದ ಬಸವನಹಳ್ಳಿಯಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗೌರಿಬಿದನೂರಿನ ಬೀರಮ್ಮನಹಳ್ಳಿ ನಿವಾಸಿ ತನುಜಾ (31) ಮೃತಪಟ್ಟ ದುರ್ದೈವಿ. ಈಕೆ ಯಲಹಂಕದ ಮಾಯಸಂದ್ರ ನಿವಾಸಿ ರವೀಂದ್ರ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದರು.

ಪರಿಚಯ ಪ್ರೀತಿಗೆ ತಿರುಗಿ ಧರ್ಮಸ್ಥಳದಲ್ಲಿ ಮದುವೆ

ಮೃತ ತನುಜಾ ಮತ್ತು ರವೀಂದ್ರ ಕೆಲಸಕ್ಕೆ ಹೋಗುವಾಗ ಪರಿಚಯವಾಗಿದ್ದರು. ಈ ಪರಿಚಯ ಪ್ರೀತಿಗೆ ತಿರುಗಿ, ಇಬ್ಬರೂ ಧರ್ಮಸ್ಥಳದಲ್ಲಿ ಮದುವೆಯಾಗಿದ್ದರು. ಮನೆಯಲ್ಲಿ ಮದುವೆ ವಿಷಯ ತಿಳಿಸಲು ಸ್ವಲ್ಪ ಸಮಯ ಬೇಕು ಎಂದು ಹೇಳಿದ್ದ ರವೀಂದ್ರ, ಪತ್ನಿ ತನುಜಾಳನ್ನು ಯಲಹಂಕದ ಸಿಂಗಾಪುರ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ಇರಿಸಿದ್ದರು.

ಘಟನೆಯ ದಿನದಂದು ತನುಜಾ ತನ್ನ ಪತಿ ರವೀಂದ್ರನಿಗೆ ಫೋನ್ ಮಾಡಿ ಕೂಡಲೇ ಮನೆಗೆ ಬರುವಂತೆ ಹೇಳಿದ್ದರು. ಆದರೆ ಕೆಲಸದ ನಿಮಿತ್ತ ರವೀಂದ್ರ, ಈಗ ಬರಲು ಸಾಧ್ಯವಿಲ್ಲ, ನಾಳೆ ಬೆಳಿಗ್ಗೆ ಬರುತ್ತೇನೆ ಎಂದು ಉತ್ತರಿಸಿದ್ದರು. ಪತಿಯ ಈ ಮಾತಿನಿಂದ ತೀವ್ರ ಆಕ್ರೋಶಗೊಂಡ ತನುಜಾ, ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು.

ಕೊನೆಯ ಮೆಸೇಜ್

ಪತಿಯ ಮೇಲೆ ಸಿಟ್ಟು ಮಾಡಿಕೊಂಡಿದ್ದ ತನುಜಾ ಅಂತಿಮವಾಗಿ ರಾತ್ರಿ 10 ಗಂಟೆ ಸುಮಾರಿಗೆ ರವೀಂದ್ರನಿಗೆ ಮೆಸೇಜ್ ಮಾಡಿದ್ದರು. ನಾನು ವಿಷ ಕುಡಿದಿದ್ದೇನೆ, ನೆಲಮಂಗಲದ ಬಸವನಹಳ್ಳಿಯಲ್ಲಿ ಕುಳಿತಿದ್ದೇನೆ ಎಂದು ತಿಳಿಸಿದ್ದರು. ಗಾಬರಿಗೊಂಡ ರವೀಂದ್ರ ಕೂಡಲೇ ಸ್ಥಳಕ್ಕೆ ಧಾವಿಸಿ ತನುಜಾಳನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ತನುಜಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ರವೀಂದ್ರನ ವಿಚಾರಣೆ ನಡೆಸುತ್ತಿದ್ದಾರೆ. ಪ್ರೀತಿಸಿ ಹಸೆಮಣೆ ಏರಿದ್ದ ಯುವತಿ ಹೀಗೆ ಕ್ಷಣಿಕ ಆವೇಶದಲ್ಲಿ ಪ್ರಾಣ ಕಳೆದುಕೊಂಡಿರುವುದು ಎರಡೂ ಕುಟುಂಬಗಳಲ್ಲಿ ಶೋಕವನ್ನುಂಟು ಮಾಡಿದೆ.